ಪದ್ಯ ೪೨: ಸುಪ್ರತೀಕಗಜವು ಹೇಗೆ ಮುನ್ನಡೆಯಿತು?

ಮಿಗೆ ತಿಮಿಂಗಿಲನೊಡನೆ ಹುಲು ಮೀ
ನುಗಳು ಮಾಡುವುದೇನು ಹೊರ ಕಾ
ಲುಗಳ ಹೋರಟೆ ಕಾಣಲಾದುದು ಪರರ ಥಟ್ಟಿನಲಿ
ತೆಗೆಯೆ ರಿಪುಬಲ ಕೊಲುತ ಬಂದುದು
ದಿಗಿಭವಿದರೊಡನೈದಿ ದ್ರೋಣಾ
ದಿಗಳು ಹೊಕ್ಕುದು ಧರ್ಮಪುತ್ರನ ಹಿಡಿವ ತವಕದಲಿ (ದ್ರೋಣ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ತಿಮಿಂಗಿಲದೊಡನೆ ಸಣ್ಣಮೀನುಗಳು ಏನು ಮಾಡಬಲ್ಲವು? ಶತ್ರುಗಳು ಓಡಲಾರಂಭಿಸಿದರು ದಿಗ್ಗಜವು ಅವರನ್ನು ಕೊಲ್ಲುತ್ತಾ ಬಂದಿತು. ಅದರೊಡನೆ ದ್ರೋಣನೇ ಮೊದಲಾದವರು ಧರ್ಮಜನನ್ನು ಹಿಡಿಯಲು ಬಂದರು.

ಅರ್ಥ:
ಮಿಗೆ: ಅಧಿಕ; ತಿಮಿಂಗಿಲ: ಸಮುದ್ರದ ದೈತ್ಯ ಪ್ರಾಣಿ; ಹುಲು: ಅಲ್ಪ; ಮೀನು: ಮತ್ಸ್ಯ; ಹೊರ: ಆಚೆ; ಕಾಲು: ಪಾದ; ಹೋರಟೆ: ಕಾಳಗ, ಯುದ್ಧ; ಕಾಣು: ತೋರು; ಪರರ: ಅನ್ಯ; ಥಟ್ಟು: ಗುಂಪು; ತೆಗೆ: ಹೊರತರು; ರಿಪುಬಲ: ವೈರಿ ಸೈನ್ಯ; ಕೊಲು: ಸಾಯಿಸು; ಬಂದುದು: ಆಗಮಿಸು; ದಿಗಿಭ: ದಿಕ್ಕಿನ ಆನೆ, ದಿಗ್ಗಜ; ಐದು: ಬಂದು ಸೇರು; ಆದಿ: ಮುಂತಾದ; ಹೊಕ್ಕು: ಸೇರು; ಹಿಡಿ: ಗ್ರಹಿಸು; ತವಕ: ಕಾತುರ;

ಪದವಿಂಗಡಣೆ:
ಮಿಗೆ +ತಿಮಿಂಗಿಲನೊಡನೆ +ಹುಲು +ಮೀ
ನುಗಳು +ಮಾಡುವುದೇನು +ಹೊರ +ಕಾ
ಲುಗಳ +ಹೋರಟೆ+ ಕಾಣಲಾದುದು+ ಪರರ+ ಥಟ್ಟಿನಲಿ
ತೆಗೆಯೆ +ರಿಪುಬಲ +ಕೊಲುತ +ಬಂದುದು
ದಿಗಿಭವ್+ಇದರೊಡನ್+ಐದಿ+ ದ್ರೋಣಾ
ದಿಗಳು +ಹೊಕ್ಕುದು +ಧರ್ಮಪುತ್ರನ +ಹಿಡಿವ +ತವಕದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಿಗೆ ತಿಮಿಂಗಿಲನೊಡನೆ ಹುಲು ಮೀನುಗಳು ಮಾಡುವುದೇನು

ಪದ್ಯ ೫೫: ದ್ರೌಪದಿಯನ್ನು ಕರ್ಣನು ಹೇಗೆ ಪ್ರಶಂಶಿಸಿದ?

ಹೊಕ್ಕಗೂಡಿನ ಹುಲಿಗಳನು ಹೊರ
ಗಿಕ್ಕಿದೆಯಲಾ ಇರುಬಿನಲಿ ಬಿ
ದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲಾ
ಸೊಕ್ಕಿದುರು ಮೀನುಗಳ ಗಂಟಲೊ
ಳಿಕ್ಕಿದವಲಾ ಗಾಣ ಗಂಟಲ
ಸಿಕ್ಕ ಬಿಡಿಸಿದೆ ಗರುವೆ ನೀನೆಂದುಲಿದನಾ ಕರ್ಣ (ಸಭಾ ಪರ್ವ, ೧೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಪಂಜರದಲ್ಲಿ ಸೇರಿದ ಹುಲಿಗಳನ್ನು ನೀನು ಬಿಡಿಸಿ ಹೊರಕ್ಕೆ ತಂದೆಯಲ್ಲವೇ! ತಗ್ಗಿನಲ್ಲಿ ಬಿದ್ದು ಸಿಕ್ಕಿಹಾಕಿಕೊಂಡಿದ್ದ ಬಲಿಷ್ಠರಾದವರನ್ನು (ಸಲಗ) ನೋವಾಗದಂತೆ ಹೊರಕ್ಕೆ ತ್ಗೆದೆಯಲ್ಲವೇ! ಗಂಟಲಿಗೆ ಗಾಣ ಸಿಕ್ಕಿ ಹಾಕಿಕೊಂಡಿದ್ದ ಸೊಕ್ಕಿದ ಮೀನುಗಳನ್ನು ಪಾರುಮಾಡಿದೆ, ನೀನು ನಿಜಕ್ಕೂ ಸ್ವಾಭಿಮಾನಿ, ಶ್ರೇಷ್ಠಳು ಎಂದು ಕರ್ಣನು ದ್ರೌಪದಿಯನ್ನು ಹೊಗಳಿದನು.

ಅರ್ಥ:
ಹೊಕ್ಕು: ಒಳಸೇರು; ಗೂಡು: ಆಲಯ, ಮನೆ; ಹುಲಿ: ವ್ಯಾಘ್ರ; ಹೊರಗಿಕ್ಕು: ಆಚೆಹಾಕು; ಇರುಬು: ತೊಡಕು; ಬಿದ್ದ: ಕೆಳಕ್ಕೆ ಬೀಳು; ಎಕ್ಕಲ: ಕಾಡುಹಂದಿ, ಬಲಿಷ್ಠ; ನೋವು: ಪೆಟ್ಟು; ಕೆಲ: ಹೊರಭಾಗ; ತೆಗೆ: ಹೊರತರು; ಸೊಕ್ಕು: ಗರ್ವ, ಅಹಂಕಾರ; ಉರು: ಅತಿದೊಡ್ಡ, ಶ್ರೇಷ್ಠ; ಮೀನು: ಮತ್ಸ್ಯ; ಗಂಟಲು: ಕಂಠ; ಗಾಣ: ಗಾಳ, ಬಲೆಯ ಕೊಕ್ಕು; ಬಿಡಿಸು: ಕಳಚು, ಸಡಿಲಿಸು; ಗರುವ: ಹಿರಿಯ, ಶ್ರೇಷ್ಠ; ಉಲಿ: ಹೇಳು;

ಪದವಿಂಗಡಣೆ:
ಹೊಕ್ಕ+ಗೂಡಿನ +ಹುಲಿಗಳನು +ಹೊರ
ಗಿಕ್ಕಿದೆಯಲಾ +ಇರುಬಿನಲಿ +ಬಿದ್ದ್
ಎಕ್ಕಲಂಗಳ+ ನೋಯಲೀಯದೆ +ಕೆಲಕೆ +ತೆಗೆದೆಯಲಾ
ಸೊಕ್ಕಿದ್+ಉರು+ ಮೀನುಗಳ+ ಗಂಟಲೊಳ್
ಇಕ್ಕಿದವಲಾ+ ಗಾಣ+ ಗಂಟಲ
ಸಿಕ್ಕ+ ಬಿಡಿಸಿದೆ+ ಗರುವೆ+ ನೀನೆಂದ್+ಉಲಿದನಾ+ ಕರ್ಣ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊಕ್ಕಗೂಡಿನ ಹುಲಿಗಳನು ಹೊರ
ಗಿಕ್ಕಿದೆಯಲಾ; ಇರುಬಿನಲಿ ಬಿದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲಾ; ಸೊಕ್ಕಿದುರು ಮೀನುಗಳ ಗಂಟಲೊಳಿಕ್ಕಿದವಲಾ ಗಾಣ ಗಂಟಲಸಿಕ್ಕ ಬಿಡಿಸಿದೆ