ಪದ್ಯ ೧೭: ದ್ರೌಪದಿ ಏಕೆ ದುಃಖಿಸಿದಳು?

ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಮಗ್ಗುಲಾಗಿ ಎದ್ದು ತಲೆಗೂದಲಿನ ಮಣ್ಣನ್ನು ಕೊಡುವುತ್ತಾ, ಗಲ್ಲದ ಮೇಲಿನ ರಕ್ತವನ್ನು ಬೆರಳಿನಿಂದ ಮಿಡಿದು ಆ ದುಷ್ಟನು ಒಂದು ಹೆಣ್ಣನ್ನು ಬಡಿಯುತ್ತಿರುವಾಗ, ಆಸ್ಥಾನದಲ್ಲಿರುವ ಹಿರಿಯರಾದ ನೀವು ಒಂದಾದರೂ ಮಾತನಾಡಲಿಲ್ಲವಲ್ಲಾ! ಮೌನ ವ್ರತಕ್ಕೆ ನೀವು ಆರಿಸಿಕೊಂಡ ಹೊತ್ತು ಬಹಳ ಪ್ರಶಸ್ತವಾಗಿದೆ ಎಂದಳು.

ಅರ್ಥ:
ಹೊಡೆ: ಪೆಟ್ಟು; ಮರಳಿ: ಮತ್ತೆ; ಮುರಿ: ಸೀಳು; ಎದ್ದು: ಮೇಲೇಳು; ತುರುಬು: ತಲೆಗೂದಲು; ಹುಡಿ: ಮಣ್ಣು; ಕೊಡವು:ದೂಳನ್ನು ಹೊರಹಾಕು; ಮೊಲೆ: ಸ್ತನ; ಮೇಲುದು: ವಸ್ತ್ರ; ತೊಡಿಸು: ಹೊದ್ದು; ಗಲ್ಲ: ಕೆನ್ನೆ; ರಕುತ: ನೆತ್ತರು; ಬೆರಳು: ಅಂಗುಲಿ; ಮಿಡಿ: ಹೊಮ್ಮಿಸು; ನುಡಿ: ಮಾತು; ಖಳ: ದುಷ್ಟ; ಹೆಂಗುಸು: ಸ್ತ್ರೀ; ಬಡಿ: ಹೊಡೆ; ನೋಡು: ವೀಕ್ಷಿಸು; ಹಿರಿಯ: ದೊಡ್ಡವ; ಹಿಡಿ: ಗ್ರಹಿಸು; ಮೌನ: ಮಾತನಾಡದಿರುವ ಸ್ಥಿತಿ; ಹೊತ್ತು: ಉಂಟಾಗು, ಒದಗು; ಲೇಸು: ಒಳಿತು; ಹಲುಬು: ದುಃಖಪಡು, ಬೇಡು; ಅಬಲೆ: ಹೆಣ್ಣು;

ಪದವಿಂಗಡಣೆ:
ಹೊಡೆ +ಮರಳಿ +ಮುರಿದೆದ್ದು +ತುರುಬಿನ
ಹುಡಿಯ +ಕೊಡಹುತ +ಮೊಲೆಗೆ+ ಮೇಲುದು
ತೊಡಿಸಿ+ ಗಲ್ಲದ +ರಕುತವನು +ಬೆರಲಿಂದ +ಮಿಡಿಮಿಡಿದು
ನುಡಿಯಲಾಗದೆ+ ಖಳನು +ಹೆಂಗುಸ
ಬಡಿಯೆ+ ನೋಡುತ್ತಿಹರೆ+ ಹಿರಿಯರು
ಹಿಡಿದ +ಮೌನವ +ಹೊತ್ತು +ಲೇಸೆಂದ್+ಅಬಲೆ +ಹಲುಬಿದಳು

ಅಚ್ಚರಿ:
(೧) ದ್ರೌಪದಿಯು ಸಭೆಯನ್ನು ಬಯ್ದ ಪರಿ – ಹಿರಿಯರು ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು

ಪದ್ಯ ೨೫: ಧರ್ಮಜನೇಕೆ ದುಃಖಪಟ್ಟನು?

ಅನುಜ ತನುಜರು ಸಹಿತ ಕುಂತೀ
ತನಯ ದೂರಕೆ ಕಳುಹಿ ಮರಳಿದು
ಮನೆಗೆ ಬಂದನು ಕೃಷ್ಣವಿರಹ ವಿಶಾಲ ಖೇದದಲಿ
ಮುನಿಪ ವೇದವ್ಯಾಸ ಧೌಮ್ಯರ
ನನುಸರಿಸಿ ದಾಹಿಸುವ ದುಗುಡವ
ನನಿತುವನು ಬಿನ್ನವಿಸಿದನು ಮಿಡಿಮಿಡಿದು ಕಂಬನಿಯ (ಸಭಾ ಪರ್ವ, ೧೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ತನ್ನ ತಮ್ಮಂದಿರು, ಮಕ್ಕಳೊಡನೆ ಧರ್ಮಜನು ಶ್ರೀಕೃಷ್ನನನ್ನು ಬಹುದೂರದವರೆಗೆ ಕಳುಹಿಸಿ ಮನಗೆ ಬಂದನು. ಕೃಷ್ಣನ ಅಗಲಿಕೆಯ ಮಹಾದುಃಖವು ಅವನನ್ನು ಆವರಿಸಿತು. ವೇದವ್ಯಾಸ ಧೌಮ್ಯರೆದುರಿನಲ್ಲಿ ಮತ್ತೆ ಮತ್ತೆ ಕಣ್ಣಿರುಗರೆದು ತನ್ನ ದುಃಖವನ್ನು ಹೇಳಿಕೊಂಡನು.

ಅರ್ಥ:
ಅನುಜ: ತಮ್ಮ; ತನುಜ: ಮಗ; ಸಹಿತ: ಜೊತೆ; ತನಯ: ಮಗ; ದೂರ: ಬಹಳ ಅಂತರ; ಕಳುಹಿ: ಬೀಳ್ಕೊಟ್ಟು; ಮರಳು: ಹಿಂದಿರುಗು; ಮನೆ: ಆಲಯ; ಬಂದು: ಆಗಮಿಸು; ವಿರಹ: ವಿಯೋಗ; ವಿಶಾಲ: ತುಂಬ; ಖೇದ: ದುಃಖ; ಮುನಿ: ಋಷಿ; ಅನುಸರಿಸು: ಹಿಂಬಾಲಿಸು, ಕೂಡಿಸು; ದಾಹಿಸು: ಸುಡು; ದುಗುಡ: ದುಃಖ; ಅನಿತು: ಅಷ್ಟು; ಬಿನ್ನವಿಸು: ವಿಜ್ಞಾಪಿಸು; ಮಿಡಿಮಿಡಿ: ಕಣ್ಣೀರನ್ನು ಹೊಮ್ಮಿಸು; ಕಂಬನಿ: ಕಣ್ಣೀರು;

ಪದವಿಂಗಡಣೆ:
ಅನುಜ +ತನುಜರು +ಸಹಿತ +ಕುಂತೀ
ತನಯ+ ದೂರಕೆ+ ಕಳುಹಿ +ಮರಳಿದು
ಮನೆಗೆ +ಬಂದನು +ಕೃಷ್ಣ+ವಿರಹ+ ವಿಶಾಲ+ ಖೇದದಲಿ
ಮುನಿಪ +ವೇದವ್ಯಾಸ +ಧೌಮ್ಯರನ್
ಅನುಸರಿಸಿ+ ದಾಹಿಸುವ +ದುಗುಡವನ್
ಅನಿತುವನು+ ಬಿನ್ನವಿಸಿದನು +ಮಿಡಿಮಿಡಿದು +ಕಂಬನಿಯ

ಅಚ್ಚರಿ:
(೧) ಅನುಜ, ತನುಜ – ಪ್ರಾಸ ಪದ
(೨) ತನುಜ, ತನಯ – ಸಮನಾರ್ಥಕ ಪದ
(೩) ಅತೀವ ದುಃಖವನ್ನು ತಿಳಿಸುವ ಪರಿ – ವಿಶಾಲ ಖೇದ, ಮಿಡಿಮಿಡಿದು ಕಂಬನಿಯ

ಪದ್ಯ ೧೧: ಕರ್ಣನು ಯುದ್ಧಕ್ಕೆ ಹೇಗೆ ಸಿದ್ದತೆ ಮಾಡಿಕೊಂಡನು?

ಸರಳೊಳಾಯ್ದು ಮಹಾಸ್ತ್ರವನು ಸಂ
ವರಿಸಿದನು ಬತ್ತಳಿಕೆಯಲಿ ಮಾ
ರ್ತಿರುವ ಬೆರಳಲಿ ತೀಡಿ ಕೊಪ್ಪಿನ ಬಲುಹನಾರೈದು
ತಿರುವನೇರಿಸಿ ಮಿಡಿಮಿಡಿದು ಪೊಂ
ಬರಹದವನಿನ್ನೂರು ಚಾಪವ
ನಿರಿಸಿದನು ಕೆಲದವರ ತೊಲಗಿಸಿ ವಾಮಭಾಗದಲಿ (ಕರ್ಣ ಪರ್ವ, ೨೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಾಣಗಳಲ್ಲಿ ಮಹಾಸ್ತ್ರಗಳನ್ನು ಆಯ್ದು ತನ್ನ ಬತ್ತಳಿಕೆಯಲ್ಲಿಟ್ಟು ಕರ್ಣನು ಬಿಲ್ಲಿನ ಹಗ್ಗವನ್ನು ಬೆರಳಲ್ಲಿ ತೀಡಿ, ಬಿಲ್ಲಿನ ಕೊಪ್ಪಿನ ಬಲವನ್ನು ಪರೀಕ್ಷಿಸಿದನು. ಹೆದೆಯನ್ನೇರಿಸಿ ಅದರ ಬಲವನ್ನು ಮಿಡಿದುನೋಡಿ, ಚಿನ್ನದ ರೇಖೆಗಳನ್ನುಳ್ಳ ಇನ್ನೂರು ಬಿಲ್ಲುಗಳನ್ನು ಎಡಭಾಗದಲ್ಲಿಟ್ಟುಕೊಂಡನು.

ಅರ್ಥ:
ಸರಳ: ಬಾಣ; ಆಯ್ದು: ಆರಿಸಿ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಸಂವರಿಸು: ಸಜ್ಜು ಮಾಡು; ಬತ್ತಳಿಕೆ: ಬಾಣಗಳನ್ನು ಇಡುವ ಸ್ಥಳ; ಮಾರ್ತಿರುವು: ಮತ್ತೊಂದು ಬಿಲ್ಲಿನ ಹಗ್ಗ, ಮೌರ್ವಿ; ಬೆರಳು: ಅಂಗುಲಿ; ತೀಡಿ: ಉಜ್ಜು, ತಿಕ್ಕು, ಮಸೆ; ಕೊಪ್ಪು: ಬಿಲ್ಲಿನ ತುದಿ; ಬಲುಹು: ಬಲ, ಶಕ್ತಿ; ತಿರುವು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಏರಿಸು: ಕಟ್ಟು; ಮಿಡಿ:ತವಕಿಸು, ಆತುರಪಡು; ಪೊಂಬರಹ: ಚಿನ್ನದ ರೇಖೆ; ಚಾಪ: ಬಾಣ; ಇರಿಸು: ಇಡು; ಕೆಲ: ಪಕ್ಕ; ತೊಲಗು: ದೂರ ಸರಿ; ವಾಮ: ಎಡ;

ಪದವಿಂಗಡಣೆ:
ಸರಳೊಳ್+ಆಯ್ದು +ಮಹಾಸ್ತ್ರವನು +ಸಂ
ವರಿಸಿದನು +ಬತ್ತಳಿಕೆಯಲಿ +ಮಾ
ರ್ತಿರುವ +ಬೆರಳಲಿ +ತೀಡಿ +ಕೊಪ್ಪಿನ +ಬಲುಹನಾರೈದು
ತಿರುವನ್+ಏರಿಸಿ+ ಮಿಡಿಮಿಡಿದು +ಪೊಂ
ಬರಹದವನ್+ಇನ್ನೂರು +ಚಾಪವನ್
ಇರಿಸಿದನು +ಕೆಲದವರ +ತೊಲಗಿಸಿ +ವಾಮಭಾಗದಲಿ

ಅಚ್ಚರಿ:
(೧) ಮಾರ್ತಿರುವ, ತಿರುವ – ೩, ೪ ಸಾಲಿನ ಮೊದಲ ಪದ
(೨) ಕರ್ಣನ ತಯಾರಿ – ಪೊಂಬರಹದವನಿನ್ನೂರು ಚಾಪವ ನಿರಿಸಿದನು