ಪದ್ಯ ೫೦: ದುರ್ಯೋಧನನು ಕೌರವ ಸೇನೆಗೆ ಏನು ಹೇಳಿದ?

ಕಂಡನೀ ಶಲ್ಯಾರ್ಜುನರ ಕೋ
ದಂಡಸಾರಶ್ರುತಿರಹಸ್ಯದ
ದಂಡಿಯನು ಕುರುರಾಯ ಕೈವೀಸಿದನು ತನ್ನವರ
ಗಂಡುಗಲಿಗಳೊ ವೀರಸಿರಿಯುಳಿ
ಮಿಂಡರೋ ತನಿನಗೆಯ ಬಿರುದಿನ
ಭಂಡರೋ ನೀವಾರೆನುತ ಮೂದಲಿಸಿದನು ಭಟರ (ಶಲ್ಯ ಪರ್ವ, ೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಶಲ್ಯಾರ್ಜುನರ ಧನುರ್ವೇದ ರಹಸ್ಯದ ಘನತೆಯನ್ನು ಕಂಡು ಕೌರವನು ತನ್ನ ಸೇನೆಯ ವೀರರನ್ನು ಕರೆದು ನೀವೇನು ಗಂಡುಗಲಿಗಳೋ? ಪರಾಕ್ರಮ ಲಕ್ಷ್ಮಿಯು ಸಿಕ್ಕುವಳೆಂದು ಸುಮ್ಮನೆ ಕಾದು ನಿಮ್ತ ಜಾರರೋ? ಬಿರುದಗಳಿಂದ ಹೊಗಳಿಸಿಕೊಂಡು ನಕ್ಕು ಹಿಗ್ಗುವ ಭಂಡರೋ? ನೀವಾರು ಎಂದು ಮೂದಲಿಸಿದನು.

ಅರ್ಥ:
ಕಂಡು: ನೋಡು; ಕೋದಂಡ: ಬಿಲ್ಲು; ಸಾರ: ಸತ್ವ; ರಹಸ್ಯ: ಗುಟ್ಟು; ದಂಡಿ: ಘನತೆ, ಹಿರಿಮೆ; ಶ್ರುತಿ: ವೇದ; ಕೈವೀಸು: ಹಸ್ತವನ್ನು ಅಲ್ಲಾಡಿಸು; ಗಂಡುಗಲಿ: ಪರಾಕ್ರಮಿ; ವೀರ: ಶೂರ; ಸಿರಿ: ಐಶ್ವರ್ಯ; ಮಿಂಡ: ವೀರ, ಶೂರ; ತನಿ: ಚೆನ್ನಾಗಿ ಬೆಳೆದುದು; ನಗೆ: ಹರ್ಷ; ಬಿರುದು: ಗೌರವ ಸೂಚಕ ಪದ; ಭಂಡ: ನಾಚಿಕೆ, ಲಜ್ಜೆ; ಮೂದಲಿಸು: ಹಂಗಿಸು; ಭಟ: ಸೈನಿಕ;

ಪದವಿಂಗಡಣೆ:
ಕಂಡನ್+ಈ+ ಶಲ್ಯ+ಅರ್ಜುನರ +ಕೋ
ದಂಡ+ಸಾರ+ಶ್ರುತಿ+ರಹಸ್ಯದ
ದಂಡಿಯನು +ಕುರುರಾಯ +ಕೈವೀಸಿದನು +ತನ್ನವರ
ಗಂಡುಗಲಿಗಳೊ+ ವೀರಸಿರಿ+ಉಳಿ
ಮಿಂಡರೋ +ತನಿ+ನಗೆಯ +ಬಿರುದಿನ
ಭಂಡರೋ +ನೀವಾರೆನುತ+ ಮೂದಲಿಸಿದನು +ಭಟರ

ಅಚ್ಚರಿ:
(೧) ಕೋದಂಡ, ಮಿಂಡ, ಭಂಡ, ಕಂಡ – ಪ್ರಾಸ ಪದಗಳು

ಪದ್ಯ ೪೦: ಊರ್ವಶಿಯು ಅರ್ಜುನನ್ನು ಏಕೆ ಶಪಿಸಿದಳು?

ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ (ಅರಣ್ಯ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಾವು ನಿನಗೆ ಒಲಿದು ಬಂದಿರುವವಳು, ಸೌಂದರ್ಯದಿಂದ ಆಕರ್ಷಿಸಿ ನಮ್ಮನ್ನು ಮರುಗಿಸುವ ಶೂರ ನೀನು, ಇಂದ್ರನ ಪರಿವಾರದಲ್ಲಿ ಬಹಳ ಶ್ರೇಷ್ಠಳಾದವಳು ನಾನು ಸುಲಭದಲ್ಲಿ ಸಿಗುವವಳೇ? ನೀನು ದುರ್ಲಭನಲ್ಲವೇ? ಎಲೈ ನಪುಂಸಕ, ಈ ಗಂಡು ವೇಷ ನಿನಗೇಕೆ? ಇದೋ ನಿನಗೆ ಶಾಪಕೊಡುತ್ತೇನೆ ಹಿಡಿ ಎಂದು ಊರ್ವಶಿಯು ತನ್ನ ಹಸ್ತವನ್ನೆತ್ತಿದಳು.

ಅರ್ಥ:
ಒಲಿದು: ಪ್ರೀತಿಸಿ; ಬಂದು: ಆಗಮಿಸು; ಸೊಬಗು: ಅಂದ; ಮರುಗು: ಕರುಣೆತೋರು; ಮಿಂಡ: ವೀರ, ಶೂರ; ಸುಲಭ: ನಿರಾಯಾಸ; ದುರ್ಲಭ: ಪಡೆಯಲಸಾಧ್ಯ; ದೇವೇಂದ್ರ: ಇಂದ್ರ; ಕಟಕ: ಗುಂಪು; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಗಂಡು: ಪುರುಷ; ವೇಷ: ತೋರಿಕೆಯ ರೂಪ, ಸೋಗು; ಸುಳಿವು: ಗುರುತು, ಕುರುಹು; ಸತಿ: ಹೆಣ್ಣು; ಕಳವಳ: ಗೊಂದಲ, ಭ್ರಾಂತಿ; ಕರ: ಹಸ್ತ; ಎತ್ತು: ಮೇಲಕ್ಕೆ ಮಾಡು; ಹಿಡಿ: ಗ್ರಹಿಸು; ಶಾಪ: ನಿಷ್ಠುರದ ನುಡಿ;

ಪದವಿಂಗಡಣೆ:
ಒಲಿದು+ ಬಂದವರ್+ಆವು +ಸೊಬಗಿನೊಳ್
ಒಲಿಸಿ +ಮರುಗಿಪ +ಮಿಂಡ +ನೀನ್+ಅತಿ
ಸುಲಭರಾವ್+ ದುರ್ಲಭನು+ ನೀ +ದೇವೇಂದ್ರ+ ಕಟಕದಲಿ
ಎಲೆ +ನಪುಂಸಕ+ ಗಂಡು +ವೇಷದ
ಸುಳಿವು+ ನಿನಗೇಕ್+ಎನುತ +ಸತಿ +ಕಳ
ವಳಿಸಿ +ಕರವೆತ್ತಿದಳು +ಹಿಡಿ+ ಹಿಡಿ+ ಶಾಪವಿದೆ+ಎನುತ

ಅಚ್ಚರಿ:
(೧) ಸುಲಭ, ದುರ್ಲಭ – ವಿರುದ್ಧ ಪದ/ಪ್ರಾಸ ಪದ
(೨) ಅರ್ಜುನನನ್ನು ಬಯ್ಯುವ ಪರಿ – ಎಲೆ ನಪುಂಸಕ ಗಂಡು ವೇಷದ ಸುಳಿವು ನಿನಗೇಕೆ