ಪದ್ಯ ೫೬: ಕರ್ಣನು ಅಭಿಮನ್ಯುವಿಗೆ ಹೇಗೆ ಉತ್ತರವನ್ನು ನೀಡಿದನು?

ಮಳೆಗೆ ಮೊಗದಿರುಹುವುದೆ ಬಡಬಾ
ನಳನೆಲವೊ ನಿನ್ನಂಬು ತಾಕಿದ
ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ
ಹಿಳುಕು ಕವಿದವು ಭಟನ ಕೈ ಮೈ
ಗಳಲಿ ಮಿನುಗಿದವಿರುಳು ಮರನಲಿ
ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ (ದ್ರೋಣ ಪರ್ವ, ೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಸಮುದ್ರದ ಜಲದಲ್ಲೇ ಇರುವ ಬಡಬಾಗ್ನಿಯು ಮಳೆಗೆ ಹೆದರೀತೇ? ನಿನ್ನ ಬಾಣಗಳು ನೆಟ್ಟರೆ ನಾನು ಅಳುಕುವೆನೇ ಎನ್ನುತ್ತಾ ಕರ್ಣನು ಅಭಿಮನ್ಯುವನ್ನು ಬಾಣಗಳಿಂದ ಕವಿಯಲು ಅವಉ ರಾತ್ರಿಯಹೊತ್ತು ಮಿಂಚುಹುಳುಗಳು ಮರವನ್ನು ಮುತ್ತುವಂತೆ ಅಭಿಮನ್ಯುವಿನ ಮೈಯನ್ನು ಮುತ್ತಿದವು.

ಅರ್ಥ:
ಮಳೆ: ವರ್ಷ; ಮೊಗ: ಮುಖ; ಬಡಬಾನಳ: ಸಮುದ್ರದಲ್ಲಿರುವ ಬೆಂಕಿ; ಅಂಬು: ಬಾಣ; ತಾಗು: ಮುಟ್ಟು; ಅಳುಕು: ಹೆದರು; ರವಿ: ಸೂರ್ಯ; ಸುತ: ಮಗ; ಎಚ್ಚು: ಬಾಣ ಪ್ರಯೋಗ ಮಾಡು; ಅತಿರಥ: ಪರಾಕ್ರಮಿ; ಹಿಳುಕು: ಬಾಣದ ಗರಿ; ಕವಿ: ಆವರಿಸು; ಭಟ: ಸೈನಿಕ; ಮೈ: ತನು; ಮಿನುಗು: ಹೊಳಪು; ಇರುಳು: ರಾತ್ರಿ; ಮರ: ತರು; ಹೊಳೆ: ಪ್ರಕಾಶಿಸು; ಮುತ್ತು: ಆವರಿಸು; ಮಿಂಚುಬುಳು: ಮಿಂಚಿನ ಹುಳು; ಮಿನುಗು: ಹೊಳಪು;

ಪದವಿಂಗಡಣೆ:
ಮಳೆಗೆ +ಮೊಗದಿರುಹುವುದೆ +ಬಡಬಾ
ನಳನ್+ಎಲವೊ +ನಿನ್ನಂಬು +ತಾಕಿದರ್
ಅಳುಕುವೆನೆ +ತಾನೆನುತ +ರವಿಸುತನ್+ಎಚ್ಚನ್+ಅತಿರಥನ
ಹಿಳುಕು +ಕವಿದವು +ಭಟನ +ಕೈ +ಮೈ
ಗಳಲಿ+ ಮಿನುಗಿದವ್+ಇರುಳು +ಮರನಲಿ
ಹೊಳೆದು+ ಮುತ್ತಿದ+ ಮಿಂಚುಬುಳುವಿನ +ಮಿನುಗಿನಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಳೆಗೆ ಮೊಗದಿರುಹುವುದೆ ಬಡಬಾನಳ; ಮಿನುಗಿದವಿರುಳು ಮರನಲಿ
ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ

ಪದ್ಯ ೨೬: ಸುಪ್ರದೀಪ ಗಜದ ಮೇಲೆ ಯಾವ ರೀತಿ ಬಾಣವನ್ನು ಸುರಿಸಿದರು?

ಮರಳಿ ಮತ್ತೆ ಮಹಾರಥರು ಸಂ
ವರಿಸಿಕೊಂಡುದು ಸರಳ ಮಳೆಗಳ
ಸುರಿದರಾನೆಯ ಮೇಲೆ ಜೋದರ ಕೋಲ ಮನ್ನಿಸದೆ
ಗಿರಿಯ ಮುತ್ತಿದ ಮಿಂಚುಬುಳುವಿನ
ಹೊರಳಿಯಂತಿರೆ ಹೊನ್ನ ಬರಹದ
ಸರಳು ಮೆರೆದವು ಕರೆದರದುಭುತ ಕಣೆಯ ಸರಿವಳೆಯ (ದ್ರೋಣ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಮಹಾರಥರೆಲ್ಲರೂ ಸಾವರಿಸಿಕೊಂಡು ಅದರ ಮೇಲೆ ಬಾಣಗಳ ಮಳೆಯನ್ನೇ ಕರೆದರು. ಬಂಗಾರದ ರೇಖೆಯುಳ್ಳ ಆ ಬಾಣಗಳು ಬೆಟ್ಟವನ್ನು ಮುತ್ತಿದ ಮಿಂಚುಹುಳುಗಳಂತೆ ಕಂಡವು. ಅದ್ಭುತವಾದ ಶರವರ್ಷವನ್ನು ಸುಪ್ರತೀಕ ಗಜದ ಮೇಲೆ ಸುರಿದರು.

ಅರ್ಥ:
ಮರಳು: ಹಿಂದಿರುಗು; ಮತ್ತೆ: ಪುನಃ; ಮಹಾರಥ: ಪರಾಕ್ರಮಿ; ಸಂವರಿಸು: ಗುಂಪುಗೂಡು, ಸಜ್ಜುಮಾಡು; ಸರಳ: ಬಾಣ; ಮಳೆ: ವರ್ಶ; ಸುರಿ: ವರ್ಷಿಸು; ಆನೆ: ಗಜ; ಜೋದ: ಯೋಧ; ಕೋಲ: ಬಾಣ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಗಿರಿ: ಬೆಟ್ಟ; ಮುತ್ತು: ಆವರಿಸು; ಮಿಂಚುಬುಳು: ಮಿಂಚುಹುಳು; ಹೊರಳು: ತಿರುವು, ಬಾಗು; ಹೊನ್ನ: ಚಿನ್ನ; ಬರಹ: ಬರವಣಿಗೆ; ಸರಳು: ಬಾಣ; ಮೆರೆ: ಹೊಳೆ, ಪ್ರಕಾಶಿಸು; ಅದುಭುತ: ಆಶ್ಚರ್ಯ; ಕಣೆ: ಬಾಣ; ಸರಿವಳೆ: ವರ್ಷ;

ಪದವಿಂಗಡಣೆ:
ಮರಳಿ+ ಮತ್ತೆ +ಮಹಾರಥರು +ಸಂ
ವರಿಸಿಕೊಂಡುದು+ ಸರಳ +ಮಳೆಗಳ
ಸುರಿದರ್+ಆನೆಯ+ ಮೇಲೆ +ಜೋದರ +ಕೋಲ +ಮನ್ನಿಸದೆ
ಗಿರಿಯ +ಮುತ್ತಿದ+ ಮಿಂಚುಬುಳುವಿನ
ಹೊರಳಿಯಂತಿರೆ+ ಹೊನ್ನ +ಬರಹದ
ಸರಳು +ಮೆರೆದವು +ಕರೆದರ್+ಅದುಭುತ+ ಕಣೆಯ+ ಸರಿವಳೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿರಿಯ ಮುತ್ತಿದ ಮಿಂಚುಬುಳುವಿನ ಹೊರಳಿಯಂತಿರೆ ಹೊನ್ನ ಬರಹದ
ಸರಳು ಮೆರೆದವು
(೨) ಕೋಲ, ಕಣೆ, ಸರಳು – ಸಮಾನಾರ್ಥಕ ಪದ

ಪದ್ಯ ೨೯: ಕರ್ಣನು ಕೌರವರ ಸ್ಥಿತಿಯನ್ನು ಹೇಗೆ ವರ್ಣಿಸಿದನು?

ಆಲವಟ್ಟದ ಗಾಳಿಯಲಿ ಮೇ
ಘಾಳಿ ಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ (ದ್ರೋಣ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬಟ್ಟೆಯ ಬೀಸಣಿಕೆಯಿಂದ ಬೀಸಿದರೆ ಕಾರ್ಮೋಡಗಳು ಹಾರಿ ಹೋದಾವೇ? ಮಿಂಚುಹುಳದ ಬೆಳಕಿಗೆ ಕತ್ತಲೆ ಸೋತೀತೇ? ಸೀಸದ ಉಳಿಯಿಂದ ಬೆಟ್ಟವನ್ನು ಕತ್ತರಿಸಲು ಸಾಧ್ಯವೇ ಶ್ರೀಕೃಷ್ಣನು ಒಲಿದ ಮನುಷ್ಯರ ಮೇಲೆ ಉಳಿದವರು ಸಿಟ್ಟಾಗಿ ಏನು ಮಾಡಲು ಸಾಧ್ಯ? ಭೀಷ್ಮ ಇದ್ ನಾವಿರುವ ಸ್ಥಿತಿ ಎಂದು ಕರ್ಣನು ಹೇಳಿದನು.

ಅರ್ಥ:
ಆಲವಟ್ಟ: ಬಟ್ಟೆಯಿಂದ ಮಾಡಿದ ಬೀಸಣಿಕೆ; ಗಾಳಿ: ವಾಯು; ಮೇಘಾಳಿ: ಮೋಡಗಳ ಸಮೂಹ; ಮುರಿ: ಸೀಳು; ಮಿಂಚು: ಹೊಳಪು, ಕಾಂತಿ; ಬುಳು: ಹುಳು; ಸೋಲು: ಪರಾಭವ; ಕತ್ತಲೆ: ಅಂಧಕಾರ; ಕಟಕ: ಗುಂಪು; ಜೀಯ: ಒಡೆಯ; ಚಿತ್ತೈಸು: ಗಮನವಿಡು; ಸೀಳು: ಚೂರು, ತುಂಡು; ಸೀಸ: ತಲೆ, ಶಿರ; ಉಳಿ: ಲೋಹವನ್ನು ಕತ್ತರಿಸಲು ಉಪಯೋಗಿಸುವ ಒಂದು ಉಪಕರಣ; ಶೈಲ: ಬೆಟ್ಟ; ಹರಿ: ಸೀಳು; ಒಲಿ: ಒಪ್ಪು; ಮನುಜ: ಮನುಷ್ಯ; ಮುನಿ: ಕೋಪ; ಏಗು: ಸಾಗಿಸು, ನಿಭಾಯಿಸು; ಕೆಲ: ಸ್ವಲ್ಪ; ಹೇಳು: ತಿಳಿಸು;

ಪದವಿಂಗಡಣೆ:
ಆಲವಟ್ಟದ+ ಗಾಳಿಯಲಿ +ಮೇ
ಘಾಳಿ +ಮುರಿವುದೆ +ಮಿಂಚುಬುಳುವಿಗೆ
ಸೋಲುವುದೆ +ಕತ್ತಲೆಯ +ಕಟಕವು +ಜೀಯ +ಚಿತ್ತೈಸು
ಸೀಳಬಹುದೇ +ಸೀಸದ್+ಉಳಿಯಲಿ
ಶೈಲವನು +ಹರಿಯೊಲಿದ+ ಮನುಜರ
ಮೇಲೆ +ಮುನಿದ್+ಏಗುವರು +ಕೆಲಬರು +ಭೀಷ್ಮ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಲವಟ್ಟದ ಗಾಳಿಯಲಿ ಮೇಘಾಳಿ ಮುರಿವುದೆ; ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು; ಸೀಳಬಹುದೇ ಸೀಸದುಳಿಯಲಿ ಶೈಲವನು

ಪದ್ಯ ೭೨: ಕೃಷ್ಣನ ಸ್ಥಾನ ಎಂತಹುದು?

ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವಾದಾವುದ ಕಡೆಗೆ ಹಲುಬುವೆನು (ಭೀಷ್ಮ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ನಾನೋ ಸಣ್ಣ ಕೀಟ, ಕೃಷ್ಣನೋ ಮೇರು ಪರ್ವತ, ನಾನೋ ಮಿಂಚುಹುಳ, ಕೃಷ್ಣನೋ ಕೋಟಿ ಸೂರ್ಯರ ಪ್ರಕಾಶವುಳ್ಳವನು. ನರಮೃಗಾಧಮನಾದ ನಾನೆಲ್ಲಿ, ಪರಮತತ್ವವಾದ ಅವನೆಲ್ಲಿ? ಹುಚ್ಚನಾದ ನನ್ನ ಅವಗುಣವನ್ನು ಹೇಗೆ ಹಳಿದುಕೊಳ್ಳಲಿ, ಏನೆಂದು ಬೇಡಲಿ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ನೊರಜು: ಸಣ್ಣ ಕೀಟ; ಮಹತ್ವ: ಮುಖ್ಯವಾದ; ಗಿರಿ: ಬೆಟ್ಟ; ಮಿಂಚುಬುಳು: ಮಿಂಚುಹುಳ; ಕಿರಣ: ಪ್ರಕಾಶ; ಹೊಳಹು: ಕಾಂತಿ; ಸೂರಿಯರು: ಸೂರ್ಯ, ರವಿ; ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು; ಉನ್ನತ: ಎತ್ತರದ; ಪರಮ: ಶ್ರೇಷ್ಠ; ತತ್ವ: ಸಿದ್ಧಾಂತ; ಅಕಟ: ಅಯ್ಯೋ; ಮರುಳು: ಮೂಢ; ಅವಗುಣ: ದುರ್ಗುಣ, ದೋಷ; ಕಡೆಗೆ: ಕೊನೆಗೆ; ಹಲುಬು: ಬೇಡಿಕೋ, ದುಃಖಪಡು;

ಪದವಿಂಗಡಣೆ:
ನೊರಜು +ತಾನೆತ್ತಲು +ಮಹತ್ವದ
ಗಿರಿಯದೆತ್ತಲು +ಮಿಂಚುಬುಳುವಿನ
ಕಿರಣವೆತ್ತಲು +ಹೊಳಹಿದೆತ್ತಲು +ಕೋಟಿಸೂರಿಯರ
ನರ+ಮೃಗ+ಅಧಮನ್+ಎತ್ತಲ್+ಉನ್ನತ
ಪರಮತತ್ವವಿದ್+ಎತ್ತಲ್+ಅಕಟಾ
ಮರುಳು+ ನನ್ನ್+ಅವಗುಣವ್+ಅದಾವುದ +ಕಡೆಗೆ +ಹಲುಬುವೆನು

ಅಚ್ಚರಿ:
(೧) ಉಪಮಾನಗಳ ಬಳಕೆ – ನೊರಜು ತಾನೆತ್ತಲು ಮಹತ್ವದ ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ