ಪದ್ಯ ೧೨: ಊರ್ವಶಿಯ ಪರಿವಾರವು ಹೇಗಿತ್ತು?

ಅಲರ್ದ ಪೊಂದಾವರೆಯ ಹಂತಿಯೊ
ತಳಿತ ಮಾವಿನ ಬನವೊ ಮಿಗೆ ಕ
ತ್ತಲಿಪ ಬಹಳ ತಮಾಲ ಕಾನನವೋ ದಿಗಂತದಲಿ
ಹೊಳೆವ ವಿದ್ರುಮವನವೊ ಕುಸುಮೋ
ಚ್ಚಳಿತ ಕೇತಕಿದಳವೊ ರಂಭಾ
ವಳಿಯೊ ಕಾಂತಾಜನವೊ ಕಮಲಾನನೆಯ ಮುಂಗುಡಿಯೋ (ಅರಣ್ಯ ಪರ್ವ, ೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರಳಿದ ಕೆಂಪು ತಾವರೆಯ ಸಮೂಹವೋ, ಚಿಗುರಿದ ಮಾವಿನ ತೋಪೋ, ಕತ್ತಲು ಕವಿಸುವ ಹೊಂಗೆಯ ಕಾಡೋ, ದೂರದಲ್ಲಿ ಹೊಳೆಯುವ ಚಿಗುರಿದ ವನವೋ, ಕೇದಗೆಯ ಹೂವಿನ ದಳವೋ, ಅಪ್ಸರೆಯರೋ, ಸುಂದರವಾದ ವನಿತೆಯರೋ, ಕಮಲದಂತ ಮುಖವುಳ್ಳ ಊರ್ವಶಿಯ ಪರಿವಾರವೋ!

ಅರ್ಥ:
ಅಲರ್ದ: ಅರಳಿದ; ಪೊಂದಾವರೆ: ಕೆಂಪಾದ ಕಮಲ; ಹಂತಿ: ಪಂಕ್ತಿ, ಸಾಲು; ತಳಿತ: ಚಿಗುರಿದ; ಮಾವು: ಚೂತಫಲ; ಬನ: ಕಾಡು; ಮಿಗೆ: ಅಧಿಕ; ಕತ್ತಲು: ಅಂಧಕಾರ; ಬಹಳ: ಹೆಚ್ಚು; ತಮಾಲ: ಹೊಂಗೆ; ಕಾನನ: ಕಾಡು; ದಿಗಂತ: ದಿಕ್ಕಿನ ತುದಿ; ಹೊಳೆ: ಪ್ರಕಾಶ; ವಿದ್ರುಮ: ಹವಳ; ವನ: ಕಾಡು; ಕುಸುಮ: ಪುಷ್ಪ; ಉಚ್ಚಳಿಸು: ಮೇಲಕ್ಕೆ ಹಾರು; ದಳ: ಎಲೆ, ಎಸಳು; ಆವಳಿ: ಸಾಲು; ಕಾಂತ:ಸುಂದರವಾದ; ಕಮಲಾನನೆ: ಕಮಲದಂತ ಮುಖ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ;

ಪದವಿಂಗಡಣೆ:
ಅಲರ್ದ +ಪೊಂದಾವರೆಯ +ಹಂತಿಯೊ
ತಳಿತ+ ಮಾವಿನ +ಬನವೊ +ಮಿಗೆ +ಕ
ತ್ತಲಿಪ +ಬಹಳ +ತಮಾಲ +ಕಾನನವೋ +ದಿಗಂತದಲಿ
ಹೊಳೆವ +ವಿದ್ರುಮ+ವನವೊ +ಕುಸುಮೋ
ಚ್ಚಳಿತ+ ಕೇತಕಿದಳವೊ +ರಂಭಾ
ವಳಿಯೊ +ಕಾಂತಾಜನವೊ +ಕಮಲಾನನೆಯ +ಮುಂಗುಡಿಯೋ

ಅಚ್ಚರಿ:
(೧) ಬನ, ಕಾನನ, ವನ – ಸಮನಾರ್ಥಕ ಪದ
(೨) ಪೊಂದಾವರೆ, ಮಾವಿನಬನ, ತಮಾಲ ಕಾನನ, ವಿದ್ರುಮ ವನ, ಕೇತಕಿದಳ – ಊರ್ವಶಿಯ ಪರಿವಾರವನ್ನು ವಿವರಿಸುವ ಪದಗಳು