ಪದ್ಯ ೩೭: ಶಲ್ಯ ಧರ್ಮಜರ ಬಾಣ ಪ್ರಯೋಗ ಹೇಗಿತ್ತು?

ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ (ಶಲ್ಯ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಬಾಣಗಳನ್ನು ಶಲ್ಯನು ಕತ್ತರಿಸಿ, ಅವನ ಮೇಲೆ ಬಾಣಗಳನ್ನು ಬಿಟ್ಟನು. ಆ ಬಾಣಗಳ ಗಾಳಿಗೆ ಪರ್ವತವೂ ಹಿಂದಕ್ಕೆ ಸರಿಯಬೇಕೆನ್ನುವಷ್ಟು ಶಕ್ತಿಯಿತ್ತು. ಅವರಿಬ್ಬರ ಅಬ್ಬರದ ಬಾಣ ಪ್ರತಿಬಾಣಗಳು ಒಂದನ್ನೊಂದು ಕತ್ತರಿಸಿ ಹಾಕಿದವು. ಹಿಂದೆ ಮತ್ತೆ ಬಾಣಗಳು ಅದಕ್ಕೆದುರಾಗಿ ಬೇರೆಯ ಬಾಣಗಳು ಬಿಡುವುದನ್ನು ಕಂಡ ಎರಡು ಕಡೆಯ ಸೈನಿಕರು ಇಬ್ಬರನ್ನು ಮೆಚ್ಚಿದರು.

ಅರ್ಥ:
ಧರಣಿಪತಿ: ರಾಜ; ಅಂಬು: ಬಾಣ; ಎಡೆ: ಸುಲಿ, ತೆಗೆ; ತರಿ: ಕಡಿ, ಕತ್ತರಿಸು; ತುಳುಕು: ಹೊರಸೂಸುವಿಕೆ; ಉಬ್ಬು: ಹಿಗ್ಗು; ಗರಿ: ಬಾಣದ ಹಿಂಭಾಗ; ಗಾಳಿ: ವಯು; ದಾಳಿ: ಆಕ್ರಮಣ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಪರ್ವತ: ಬೆಟ್ಟ; ಮೊರೆ: ಗುಡುಗು,ಝೇಂಕರಿಸು; ಕಣೆ: ಬಾಣ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ; ಕತ್ತರಿಸು: ಚೂರು ಮಾಡು; ಬಳಿ: ಹತ್ತಿರ; ಪಡಿಸರಳ: ಸಮಾನವಾದುದು ಬಾಣ; ತೂಳು: ಆವೇಶ, ಹಿಂಬಾಲಿಸು; ಎಚ್ಚು: ಬಾಣ ಪ್ರಯೋಗ ಮಾಡು; ಮೆಚ್ಚು: ಪ್ರಶಂಶಿಸು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಧರಣಿಪತಿ+ಅಂಬುಗಳನ್+ಎಡೆಯಲಿ
ತರಿದು +ತುಳುಕಿದನ್+ಅಂಬಿನ್+ಉಬ್ಬಿನ
ಗರಿಯ +ಗಾಳಿಯ +ದಾಳಿ +ಪೈಸರಿಸಿದುದು +ಪರ್ವತವ
ಮೊರೆವ +ಕಣೆ +ಮಾರ್ಗಣೆಗಳನು+ ಕ
ತ್ತರಿಸಿದವು +ಬಳಿ+ಅಂಬುಗಳು+ ಪಡಿ
ಸರಳ +ತೂಳಿದಡ್+ಎಚ್ಚರ್+ಎಚ್ಚರು +ಮೆಚ್ಚಲ್+ಉಭಯಬಲ

ಅಚ್ಚರಿ:
(೧) ಎಚ್ಚರೆಚ್ಚರು ಮೆಚ್ಚಲುಭಯಬಲ – ಚ್ಚ ಕಾರದ ಪದಗಳ ಬಳಕೆ
(೨) ರೂಪಕದ ಪ್ರಯೋಗ – ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ

ಪದ್ಯ ೫೬: ಕೌರವನಿಗೆ ಘಟೋತ್ಕಚನ ಧೀರ ಉತ್ತರವೇನು?

ಬಯ್ಯಲರಿವೆ ದುರುಕ್ತಿ ಶರದಲಿ
ಮೆಯ್ಯನೆಸುವೆಯೊ ಮೇಣು ಮಾರ್ಗಣೆ
ಕಯ್ಯಲುಂಟೇ ನಿನಗೆ ಸಂಬಳವೇನು ಸಮರದಲಿ
ಅಯ್ಯನನು ಕರೆಯೆಂಬ ಬಾಯನು
ಕೊಯ್ಯ ಬೇಡಾ ಸಿಂಹ ಕೇಸರ
ದುಯ್ಯಲಾಡುವ ಗಜವ ನೋಡೆಂದುರುಬಿದನು ನೃಪನ (ದ್ರೋಣ ಪರ್ವ, ೧೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕೆಟ್ಟ ಮಾತುಗಳೆಂಬ ಬಾನಗಳಿಂದ ಬೈಯುವುದು ನಿನಗೆ ಗೊತ್ತಿದೆ. ಆದ್ದರಿಂದ ದೇಹವನ್ನು ಗಾಯಗೊಳಿಸುವೆಯೋ? ನಿನಗೆ ಕೈಯಲ್ಲಿ ಆಯುಧವಿದೆಯೇ? ಯುದ್ಧ ಮಾಡಲು ನಿನಗೆ ಎಷ್ಟು ಸಂಬಳ ಅಪ್ಪನನ್ನು ಕರೆಯಬೇಕಂತೆ! ಹಾಗೆಂದ ಬಾಯನ್ನು ಸೀಳಿಬಿಡುವೆ, ಸಿಂಹದ ಕೂದಲುಗಳನ್ನು ಹಿಡಿದು ಉಯ್ಯಾಲೆಯಾಡಲು ಬರುವ ಈ ಆನೆಯನ್ನು ನೋಡು ಎಂದು ಘಟೋತ್ಕಚನು ಬಾಣಗಳ ಮಳೆಗೆರೆದನು.

ಅರ್ಥ:
ಬಯ್ಯು: ಜರಿ; ಅರಿ: ತಿಳಿ; ದುರುಕ್ತಿ: ಕೆಟ್ಟ ನುಡಿ; ಶರ: ಬಾಣ; ಮೆಯ್ಯ: ಒಡಲು, ದೇಹ; ಎಸುವೆ: ತೋರು; ಮೇಣ್: ಅಥವ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ; ಸಂಬಳ: ವೇತನ; ಸಮರ: ಯುದ್ಧ; ಅಯ್ಯ: ತಂದೆ; ಕರೆ: ಬರೆಮಾಡು; ಕೊಯ್ಯು: ಸೀಳು; ಸಿಂಹ: ಕೇಸರಿ; ಕೇಸರ: ಕೂದಲು; ಉಯ್ಯಾಲೆ: ತೂಗಾಡುವ ಆಟ; ಗಜ: ಆನೆ; ನೋಡು: ವೀಕ್ಷಿಸು; ಉರುಬು: ಮೇಲೆ ಬೀಳು; ನೃಪ: ರಾಜ;

ಪದವಿಂಗಡಣೆ:
ಬಯ್ಯಲ್+ಅರಿವೆ +ದುರುಕ್ತಿ +ಶರದಲಿ
ಮೆಯ್ಯನ್+ಎಸುವೆಯೊ +ಮೇಣು +ಮಾರ್ಗಣೆ
ಕಯ್ಯಲುಂಟೇ +ನಿನಗೆ +ಸಂಬಳವೇನು +ಸಮರದಲಿ
ಅಯ್ಯನನು +ಕರೆಯೆಂಬ +ಬಾಯನು
ಕೊಯ್ಯ +ಬೇಡಾ +ಸಿಂಹ +ಕೇಸರದ್
ಉಯ್ಯಲಾಡುವ+ ಗಜವ+ ನೋಡೆಂದ್+ಉರುಬಿದನು +ನೃಪನ

ಅಚ್ಚರಿ:
(೧) ಘಟೋತ್ಕಚನು ತನ್ನ ಸಾಮರ್ಥ್ಯದ ಬಗ್ಗೆ ಹೇಳುವ ಪರಿ – ಸಿಂಹ ಕೇಸರ ದುಯ್ಯಲಾಡುವ ಗಜವ ನೋಡೆಂದುರುಬಿದನು

ಪದ್ಯ ೩೮: ಕರ್ಣನು ಯಾವ ಪ್ರತಿಜ್ಞೆ ಮಾಡಿದನು?

ರಣದೊಳೊಡ್ಡಿದರಾತಿಗಳನೀ
ಹಣೆಯ ಪಟ್ಟದ ವೀರ ಜಯಿಸಲು
ಹಣವಿಗಾನೋಲೈಸೆ ಮಾಡುವೆನಡವಿಯಲಿ ತಪವ
ರಣದೊಳಿವನಡೆಗೆಡೆದನಾದರೆ
ಮಣಿಯದಿರಿದಪೆನನ್ನೆಬರ ಮಾ
ರ್ಗಣೆಯನಾಹವದೊಳಗೆ ಸಂಧಿಸೆನೆಂದನಾ ಕರ್ಣ (ಭೀಷ್ಮ ಪರ್ವ, ೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸೇನೆಯ ಪಟ್ಟವನ್ನು ಹಣೆಗೆ ಕಟ್ಟುಕೊಂಡಿರುವ ಈ ವೀರನು ಶತ್ರುಗಳನ್ನು ಗೆದ್ದುದೇ ಆದರೆ ನಾನು ಹಣಕ್ಕಾಗಿ ಪರಸೇವೆಯನ್ನು ಮಾಡುವುದನ್ನೇ ಬಿಟ್ಟು ಕಾಡಿನಲ್ಲಿ ತಪಸ್ಸು ಮಾಡುತ್ತೇನೆ. ಯುದ್ಧದಲ್ಲಿ ಇವನು ಬಿದ್ದರೆ ಆಗ ನಾನು ಯುದ್ಧಕ್ಕೆ ಬರುತ್ತೇನೆ, ಅಲ್ಲಿಯವರೆಗೆ ನಾನು ಬಿಲ್ಲಿಗೆ ಬಾಣವನ್ನೇ ಹೂಡುವುದಿಲ್ಲ ಎಂದು ಕರ್ಣನು ಪ್ರತಿಜ್ಞೆ ಮಾಡಿದನು.

ಅರ್ಥ:
ರಣ: ಯುದ್ಧಭೂಮಿ; ಒಡ್ಡು: ಮುಂದಿಡು; ಅರಾತಿ: ಶತ್ರು; ಹಣೆ: ಲಲಾಟ; ಪಟ್ಟ: ಸ್ಥಾನ, ಅಧಿಕಾರ; ಜಯಿಸು: ಗೆಲುವು; ಹಣ: ಧನ; ಓಲೈಸು: ಸೇವೆಮಾಡು, ಉಪಚರಿಸು; ಅಡವಿ: ಕಾಡು; ತಪ: ಜಪ; ಅಡೆಗೆಡೆ: ಬೀಳು; ಮಣಿ: ಬಾಗು, ಬಗ್ಗು; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ; ಆಹವ: ಯಾಗ, ಯಜ್ಞ; ಸಂಧಿಸು: ಕೂಡು; ಆನ್ನೆಬರ: ಅಲ್ಲಿಯವರೆಗೆ;

ಪದವಿಂಗಡಣೆ:
ರಣದೊಳ್+ಒಡ್ಡಿದ್+ಅರಾತಿಗಳನ್
ಈ+ಹಣೆಯ +ಪಟ್ಟದ +ವೀರ +ಜಯಿಸಲು
ಹಣವಿಗಾನ್+ಓಲೈಸೆ +ಮಾಡುವೆನ್+ಅಡವಿಯಲಿ +ತಪವ
ರಣದೊಳ್+ಇವನ್+ಅಡೆಗೆಡೆದನಾದರೆ
ಮಣಿಯದಿರಿದಪೆನ್+ಅನ್ನೆಬರ +ಮಾ
ರ್ಗಣೆಯನ್+ಆಹವದೊಳಗೆ +ಸಂಧಿಸೆನೆಂದನಾ +ಕರ್ಣ

ಅಚ್ಚರಿ:
(೧) ಕರ್ಣನ ಪ್ರತಿಜ್ಞೆ – ರಣದೊಳಿವನಡೆಗೆಡೆದನಾದರೆ ಮಣಿಯದಿರಿದಪೆನನ್ನೆಬರ ಮಾರ್ಗಣೆಯನಾಹವದೊಳಗೆ ಸಂಧಿಸೆನೆಂದನಾ ಕರ್ಣ

ಪದ್ಯ ೭: ಬಾಣಗಳ ಯುದ್ಧವನ್ನು ಹೇಗೆ ಚಿತ್ರಿಸಬಹುದು?

ಕಣೆ ಕಣೆಯನಿಟ್ಟೊರಸಿದುವು ಕೂ
ರ್ಗಣೆಗೆ ಮಾರ್ಗಣೆ ಚಾಚಿದವು ಕಣೆ
ಕಣೆಗೆ ಮಲೆತುವು ತರುಬಿದವು ಕಣೆ ಕಣೆಯ ಪಡಿಮುಖವ
ಕಣೆ ಕಣೆಗೆ ತರಳಿದವು ಕಣೆ ಮಾ
ರ್ಗಣೆಯನಣೆದವು ಹಿಂಡುಗಣೆ ಸಂ
ದಣಿಗಣೆಯಲಕಾಡಿದವು ರಣಧೀರರೆಸುಗೆಗಳು (ಕರ್ಣ ಪರ್ವ, ೨೩ ಸಂಧಿ, ೭ ಪದ್ಯ)

ತಾತ್ಪರ್ಯ:
ಕರ್ಣಾರ್ಜುನರ ಯುದ್ಧದಲ್ಲಿ ಬಾಣಗಳು ಬಾಣಗಳನ್ನು ಮುರಿದವು. ಚೂಪಾದ ಬಾಣಗಳಿಗೆ ಎದುರಾದ ಬಾಣಗಳು ಬಂದವು. ಬಾಣಗಳೇ ಬಾಣಗಳಿಗೆ ಇದಿರಾದವು. ಬಾಣಕ್ಕೆ ಪ್ರತಿಬಾಣಗಳು ಬಂದವು. ಪ್ರತಿಯಾಗಿ ಬಂದ ಬಾಣಗಳನ್ನು ಬಾಣಗಳು ಹೊಡೆದವು. ಹಿಂಡು ಬಾಣಗಳು ಹಿಂಡು ಬಾಣಗಳನ್ನು ತೊಲಗಿಸಿದವು.

ಅರ್ಥ:
ಕಣೆ: ಬಾಣ; ಒರಸು: ನಾಶಮಾಡು; ಕೂರ್ಗಣೆ: ಹರಿತವಾದ ಬಾಣ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ; ಚಾಚು: ಹರಡು; ಮಲೆ:ಗರ್ವಿಸು, ಎದುರಿಸು; ತರುಬು: ತಡೆ, ನಿಲ್ಲಿಸು; ಪಡಿಮುಖ: ಎದುರು, ಅಭಿಮುಖ; ತೆರಳು: ಹೊರಡು; ಅಣೆ:ತಿವಿ, ಹೊಡೆ; ಹಿಂಡು: ಗುಂಪು; ಸಂದಣಿ: ದಟ್ಟ; ಆಡು: ಹೋರಾಡು; ರಣಧೀರ: ಪರಾಕ್ರಮಿ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಕಣೆ ಕಣೆಯನಿಟ್+ಒರಸಿದುವು +ಕೂ
ರ್ಗಣೆಗೆ +ಮಾರ್ಗಣೆ +ಚಾಚಿದವು+ ಕಣೆ
ಕಣೆಗೆ +ಮಲೆತುವು+ ತರುಬಿದವು +ಕಣೆ +ಕಣೆಯ +ಪಡಿಮುಖವ
ಕಣೆ +ಕಣೆಗೆ+ ತರಳಿದವು +ಕಣೆ+ ಮಾ
ರ್ಗಣೆಯನ್+ಅಣೆದವು +ಹಿಂಡು+ಕಣೆ+ ಸಂ
ದಣಿ+ಕಣೆಯಲಕ್+ಆಡಿದವು +ರಣಧೀರರ್+ಎಸುಗೆಗಳು

ಅಚ್ಚರಿ:
(೧) ಕಣೆ ಪದದ ಅಮೋಘ ಬಳಕೆ
(೨) ಕೂರ್ಗಣೆ, ಮಾರ್ಗಣೆ – ಪ್ರಾಸ ಪದಗಳು
(೩) ಒರಸು, ಚಾಚು, ತರುಬು, ತರಳು, ಅಣೆ, ಆಡು – ಪದ ಪ್ರಯೋಗ