ಪದ್ಯ ೧೦: ಧರ್ಮಜನು ಹೇಗೆ ದುಃಖಿಸಿದನು?

ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾದೇ
ವೆಂದು ಪುತ್ರಸ್ನೇಹಸೌರಂಭದಲಿ ಹಲುಬಿದನು (ದ್ರೋಣ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮಜನು ಅತಿಶಯ ಪುತ್ರಸ್ನೇಹದಿಂದ ಅರ್ಜುನನು ಬಂದು ನನ್ನ ಪ್ರೀತಿಯ ಪುತ್ರನೆಲ್ಲಿ ಎಂದು ಕೇಳಿದರೆ ನಾನೇನು ಉತ್ತರ ಕೊಡಲಿ, ವೈರಿನಾಯಕರು ಕೊಂದರು ಎನ್ನಲೇ ಅಥವಾ ನಾನೇ ಅವನನ್ನು ಯುದ್ಧಕ್ಕೆ ಕಳಿಸಿ ಕೊಲ್ಲಿಸಿದೆ ಎನ್ನಲೇ ಶಿವ ಶಿವಾ ಎಂದು ಪುತ್ರ ಪ್ರೇಮದಿಂದ ದುಃಖಿಸಿದನು.

ಅರ್ಥ:
ಬಂದು: ಆಗಮಿಸು; ಮೊಹ: ಇಚ್ಛೆ; ಕಂದ: ಮಗ; ಆವೆಡೆ: ಯಾವ ಕಡೆ; ಉತ್ತರ: ಬಿನ್ನಹ; ಕೊಡು: ನೀಡು; ವೈರಿ: ಶತ್ರು; ನಾಯಕ: ಒಡೆಯ; ಕೊಂದು: ಸಾಯಿಸು; ಮೇಣ್: ಅಥವ; ಶಿವ: ಶಂಕರ; ಪುತ್ರ: ಮಗ; ಸ್ನೇಹ: ಮಿತ್ರ; ಸೌರಂಭ: ಸಂಭ್ರಮ; ಹಲುಬು: ದುಃಖಪಡು;

ಪದವಿಂಗಡಣೆ:
ಬಂದು +ಫಲುಗುಣನ್+ಎನ್ನ +ಮೋಹದ
ಕಂದನ್+ಆವೆಡೆ+ಎಂದಡ್+ಆನ್
ಏನೆಂದು +ಮಾರುತ್ತರವ+ ಕೊಡುವೆನು +ವೈರಿನಾಯಕರು
ಕೊಂದರೆಂಬೆನೊ +ಮೇಣು +ನಾನೇ
ಕೊಂದೆನೆಂಬೆನೊ +ಶಿವ +ಮಹಾದೇ
ವೆಂದು +ಪುತ್ರ+ಸ್ನೇಹ+ಸೌರಂಭದಲಿ +ಹಲುಬಿದನು

ಅಚ್ಚರಿ:
(೧) ಧರ್ಮಜನ ದುಃಖದ ಕಾರಣ – ಪುತ್ರಸ್ನೇಹಸೌರಂಭದಲಿ ಹಲುಬಿದನು

ಪದ್ಯ ೩೨: ಆಗಸವಾಣಿಯು ಏನು ಹೇಳಿತು?

ಅನುಜರವಿವೇಕಿಗಳು ಪರಿಣತ
ಜನದಲಧಿಕನು ನೀ ನಿಧಾನಿಸಿ
ನನಗೆ ಮಾರುತ್ತರವನಿತ್ತು ನಿರಂತರಾಯದಲಿ
ತನುವಿಗಾಪ್ಯಾಯನವ ಮಾಡುವು
ದೆನಲು ಕೇಳಿದು ಢಗೆಯ ಸೈರಿಸಿ
ಘನಪಥದ ನುಡಿ ಯಾರದೆಂದವನೀಶನಾಲಿಸಿದ (ಅರಣ್ಯ ಪರ್ವ, ೨೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆಕಾಶವಾಣಿಯು ಮುಂದುವರೆಸುತ್ತಾ, ನಿನ್ನ ತಮ್ಮಂದಿರು ಅವಿವೇಕಿದಗಳು, ತಿಳಿದವರಲ್ಲಿ ನೀನು ಹೆಚ್ಚಿನವನು. ನನ್ನ ಮಾತಿಗುತ್ತರವನ್ನಿತ್ತು ಬಳಿಕ ನಿನ್ನ ದೇಹದ ಬಾಯಾರಿಕೆಯನ್ನು ನಂದಿಸು ಎಂದು ಹೇಳಲು, ಧರ್ಮಜನು ಈ ವಾಣಿಯನ್ನು ಕೇಳಿ, ತನ್ನ ಬಾಯಾರಿಕೆಯನ್ನು ಸಹಿಸಿ ಯಾರು ಈ ವಾಣಿಯನ್ನಾಡಿದವರು ಎಂದು ಯೋಚಿಸಿದನು.

ಅರ್ಥ:
ಅನುಜ: ತಮ್ಮ; ಅವಿವೇಕ: ವಿವೇಚನೆ ಇಲ್ಲದ; ಪರಿಣತ: ಪ್ರೌಢನಾದ; ಅಧಿಕ: ಹೆಚ್ಚು; ನಿಧಾನಿಸು: ತಡೆ, ಸಾವಕಾಶ; ಮಾರುತ್ತರ: ಪ್ರತ್ಯುತ್ತರ; ನಿರಂತರ: ಯಾವಾಗಲು; ಆಯ: ಉದ್ದೇಶ; ತನು: ದೇಹ; ಆಪ್ಯಾಯನ: ಸುಖ, ಹಿತ; ಕೇಳು: ಆಲಿಸು; ಢಗೆ: ಬಾಯಾರಿಕೆ; ಸೈರಿಸು: ತಾಳು, ಸಹನೆ; ಘನ: ಮೋಡ, ಮುಗಿಲು; ಪಥ: ದಾರಿ; ನುಡಿ: ಮಾತು; ಅವನೀಶ: ರಾಜ; ಆಲಿಸು: ಕೇಳು;

ಪದವಿಂಗಡಣೆ:
ಅನುಜರ್+ಅವಿವೇಕಿಗಳು +ಪರಿಣತ
ಜನದಲ್+ಅಧಿಕನು+ ನೀ +ನಿಧಾನಿಸಿ
ನನಗೆ +ಮಾರುತ್ತರವನಿತ್ತು+ ನಿರಂತರಾಯದಲಿ
ತನುವಿಗ್+ಆಪ್ಯಾಯನವ +ಮಾಡುವುದ್
ಎನಲು +ಕೇಳಿದು +ಢಗೆಯ +ಸೈರಿಸಿ
ಘನಪಥದ +ನುಡಿ +ಯಾರದೆಂದ್+ಅವನೀಶನ್+ಆಲಿಸಿದ

ಅಚ್ಚರಿ:
(೧) ಆಗಸವನ್ನು ಘನಪಥ ಎಂದು ಕರೆದಿರುವುದು

ಪದ್ಯ ೧೮: ಸಹದೇವನ ಸ್ಥಿತಿ ಏನಾಯಿತು?

ಬಿಡು ಬಿಡೆಲೆ ಸಹದೇವಯೆನ್ನಯ
ನುಡಿಗೆ ಮಾರುತ್ತರವ ಕೊಡು ಮುಂ
ಗೆಡದೆ ಮುಂದಣ ನಿನ್ನವನ ಕಂಡಿಂತು ಮರುಳಹರೆ
ಮಡಿಯಲೆಳಸದಿರೆನಲು ಢಗೆಯವ
ಗಡಿಸೆ ಸೈರಿಸಲರಿಯದುತ್ತರ
ಗುಡದೆ ಜಲವೀಂಟಿದನು ದಾಟಿದುದಸು ಕಳೇಬರವ (ಅರಣ್ಯ ಪರ್ವ, ೨೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಯಕ್ಷನು, ಸಹದೇವ ನೀರನ್ನು ಕೆಳಕ್ಕೆ ಬಿಡು, ನನ್ನ ಮಾತಿಗೆ ಉತ್ತರ ಕೊಡು. ನಿನ್ನಣ್ಣನಿಗೆ ಆದ ಗತಿಯನ್ನು ಕಂಡೂ ಕಂಡೂ ಮುಂಗೆಡಬೇಡ. ಹುಚ್ಚನಂತೆ ಸಾಯಲು ಬಯಸಬೇಡ ಎಂದನು, ಸಹದೇವನಿಗೆ ಬಾಯಾರಿಕೆ ಹೆಚ್ಚಿ ಉತ್ತರವನ್ನು ಕೊಡದೆ ನೀರು ಕುಡಿದನು. ಅವನ ಪ್ರಾಣವು ದೇಹವನ್ನು ಬಿಟ್ಟುಹೋಯಿತು.

ಅರ್ಥ:
ಬಿಡು: ತೊರೆ; ನುಡಿ: ಮಾತು; ಮಾರುತ್ತರ: ಎದುರುಮಾತು, ಪ್ರತ್ಯುತ್ತರ; ಕೊಡು: ನೀಡು; ಮುಂಗೆಡು: ದಿಕ್ಕು ತೋಚದಂತಾಗು; ಮುಂದಣ: ಎದುರು; ಕಂಡು: ನೋಡು; ಮರುಳು: ಬುದ್ಧಿಭ್ರಮೆ; ಮಡಿ: ಸಾವು; ಎಳಸು: ಬಯಸು, ಅಪೇಕ್ಷಿಸು; ಢಗೆ: ಬಾಯಾರಿಕೆ; ಅವಗಡಿಸು: ಕಡೆಗಣಿಸು; ಸೈರಿಸು: ತಾಳು, ಸಹಿಸು; ಅರಿ: ತಿಳಿ; ಜಲ: ನೀರು; ಈಂಟು: ಪಾನಮಾಡು; ದಾಟು: ಹಾಯ್ದುಹೋಗು; ಕಳೇಬರ: ಮೃತದೇಹ;

ಪದವಿಂಗಡಣೆ:
ಬಿಡು +ಬಿಡೆಲೆ +ಸಹದೇವ+ಎನ್ನಯ
ನುಡಿಗೆ +ಮಾರುತ್ತರವ +ಕೊಡು +ಮುಂ
ಗೆಡದೆ +ಮುಂದಣ +ನಿನ್ನವನ +ಕಂಡಿಂತು +ಮರುಳಹರೆ
ಮಡಿಯಲ್+ಎಳಸದಿರ್+ಎನಲು +ಢಗೆ+ಅವ
ಗಡಿಸೆ +ಸೈರಿಸಲ್+ಅರಿಯದ್+ಉತ್ತರ
ಕುಡದೆ+ ಜಲವ್+ಈಂಟಿದನು +ದಾಟಿದುದ್+ಅಸು +ಕಳೇಬರವ

ಅಚ್ಚರಿ:
(೧) ಮಾರುತ್ತರ, ಮುಂಗೆಡದೆ, ಮುಂದಣ, ಮರುಳಹರೆ, ಮಡಿ – ಮ ಕಾರದ ಪದಗಳು

ಪದ್ಯ ೮೪: ಶಿಷ್ಯನ ಲಕ್ಷಣಗಳೇನು?

ಒಡಲೊಡವೆ ಮೊದಲಾದುವೆಲ್ಲವ
ಅಡೆಯದೊಪ್ಪಿಸಿ ಗುರುವಿನಂಘ್ರಿಯ
ಹಿಡಿದು ಭಜಿಸುತ ಕೊಟ್ಟ ಕೆಲಸಂಗಳೊಳನಿತುವನು
ಬಿಡದೆ ಮಾರುತ್ತರವನವರಿಗೆ
ಕೊಡದೆ ಭಯ ಭಕ್ತಿಯಲಿ ತಪ್ಪದೆ
ನಡೆಯ ಬಲ್ಲವನವನೆ ಶಿಷ್ಯನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೮೪ ಪದ್ಯ)

ತಾತ್ಪರ್ಯ:
ತನ್ನ ದೇಹ, ಐಶ್ವರ್ಯ ಮೊದಲಾದ ತನ್ನದೆಲ್ಲವನ್ನೂ ಗುರುವಿಗೆ ಒಪ್ಪಿಸಿ, ಅವನ ಪಾದಕಮಲಗಳನ್ನು ಹಿಡಿದು ಸೇವೆ ಮಾಡುತ್ತಾ ಅವನು ಕೊಟ್ಟ ಕೆಲಸಗಳೆಲ್ಲವನ್ನೂ ಎದುರುನುಡಿಯದೆ ಭಯ ಭಕ್ತಿಯಿಂದ ನಡೆಯಬಲ್ಲವನೇ ಶಿಷ್ಯ ಎಂದು ವಿದುರ ತಿಳಿಸಿದ್ದಾರೆ.

ಅರ್ಥ:
ಒಡಲು: ದೇಹ; ಒಡವೆ: ಆಭರಣ, ಐಶ್ವರ್ಯ; ಮೊದಲಾದು: ಮುಂತಾದ; ಎಲ್ಲ: ಸರ್ವ; ಅಡೆ: ಆಶ್ರಯ, ಭರ್ತಿ ಮಾಡು; ಒಪ್ಪಿಸು: ನೀಡು; ಗುರು: ಆಚಾರ್ಯ; ಅಂಘ್ರಿ: ಪಾದ; ಹಿಡಿ: ಬಂಧನ, ಗ್ರಹಿಸು; ಭಜಿಸು: ಆರಾಧಿಸು; ಕೊಟ್ಟ: ನೀಡಿದ; ಕೆಲಸ: ಕಾರ್ಯ; ಅನಿತು: ಅಷ್ಟು; ಬಿಡದೆ: ತೊರೆ, ತ್ಯಜಿಸು; ಮಾರು: ದೊಡ್ಡ; ಉತ್ತರ: ಪ್ರಶ್ನೆಗೆ ಕೊಡುವ ಮರುನುಡಿ, ಜವಾಬು; ಮಾರುತ್ತರ: ಎದುರುತ್ತರ; ಭಯ: ಹೆದರಿಕೆ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ತಪ್ಪದೆ: ಬಿಡದೆ; ನಡೆ: ಮುನ್ನಡೆಯುವ; ಬಲ್ಲವ: ತಿಳಿದವ; ಶಿಷ್ಯ: ವಿದ್ಯಾರ್ಥಿ; ರಾಯ: ರಾಜ;

ಪದವಿಂಗಡಣೆ:
ಒಡಳ್+ಒಡವೆ +ಮೊದಲಾದುವೆಲ್ಲವ
ಅಡೆಯದ್+ಒಪ್ಪಿಸಿ+ ಗುರುವಿನ್+ಅಂಘ್ರಿಯ
ಹಿಡಿದು +ಭಜಿಸುತ +ಕೊಟ್ಟ+ ಕೆಲಸಂಗಳೊಳ್+ಅನಿತುವನು
ಬಿಡದೆ +ಮಾರುತ್ತರವನ್+ಅವರಿಗೆ
ಕೊಡದೆ +ಭಯ+ ಭಕ್ತಿಯಲಿ +ತಪ್ಪದೆ
ನಡೆಯ +ಬಲ್ಲವನ್+ಅವನೆ +ಶಿಷ್ಯನು +ರಾಯ +ಕೇಳೆಂದ

ಅಚ್ಚರಿ:
(೧) ಶಿಷ್ಯನ ೫ ಲಕ್ಷಣಗಳನ್ನು ತಿಳಿಸುವ ಪದ್ಯ