ಪದ್ಯ ೫೦: ಅರ್ಜುನನು ಹೇಗೆ ಮಾಯಾಜಾಲವನ್ನು ಭೇದಿಸಿದನು?

ಘೋರತರವದು ಬಳಿಕ ದುಷ್ಪ್ರತಿ
ಕಾರವಿತರರಿಗಿಂದು ಮೌಳಿಯ
ಸಾರತರ ಕೃಪೆಯಾಯ್ತಲೇ ಸರಹಸ್ಯಸಾಂಗದಲಿ
ಬಾರಿಸಿದುದಾವಂಗದಲಿ ಮಾ
ಯಾರಚನೆಯಾ ವಿವಿಧ ವಿವರಣ
ದಾರುಭಟೆಯಲಿ ಸೀಳಿ ಬಿಸುಟೆನು ಶಿಲ್ಪದಲಿ ಖಳರ (ಅರಣ್ಯ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅದು ಘೋರತರವಾದ ಮಾಯೆ. ಇತರರಿಗೆ ಅದರ ಪ್ರತೀಕಾರ ತಿಳಿಯದು. ಶಿವನ ಮಹಾ ಕೃಪೆಯಿಂದ ನನಗೆ ಅದರ ರಹಸ್ಯವು ಸಂಪೂರ್ಣವಾಗಿ ತಿಳಿಯಿತು. ರಾಕ್ಷಸರು ಯಾವ ರೀತಿಯಿಂದ ಹೇಗೆ ಮಾಯೆಯನ್ನು ಮಾಡಿದ್ದರೋ, ಅದರ ವಿವರವನ್ನು ಭೇದಿಸಿ ಅವರ ಮಾಯಾ ಶಿಲ್ಪವನ್ನು ಸೀಳಿ ಹಾಕಿದೆನು.

ಅರ್ಥ:
ಘೋರ: ಉಗ್ರವಾದುದು; ಬಳಿಕ: ನಂತರ; ಪ್ರತಿಕಾರ: ಮಾಡಿದು ದಕ್ಕೆ ಪ್ರತಿಯಾಗಿ ಮಾಡುವುದು; ಇಂದುಮೌಳಿ: ಶಿವ; ಸಾರ: ಶ್ರೇಷ್ಠ, ತಿರುಳು; ಕೃಪೆ: ಕರುಣೆ; ರಹಸ್ಯ: ಗುಟ್ಟು; ಸಾಂಗ: ಸಮಗ್ರತೆ; ಬಾರಿಸು: ನಿವಾರಿಸು, ಹೊಡೆ; ಅಂಗ: ಶರೀರದ ಭಾಗ; ಮಾಯ: ಇಂದ್ರಜಾಲ; ರಚನೆ: ನಿರ್ಮಾಣ; ವಿವಿಧ: ಹಲವಾರು; ವಿವರಣ:ವರ್ಣಿಸುವುದು; ಆರುಭಟೆ: ಜೋರಾಗಿ ಕೂಗು; ಸೀಳು: ಕಡಿ; ಬಿಸುಟು: ಹೊರಹಾಕು; ಶಿಲ್ಪ: ಕುಶಲ ವಿದ್ಯೆ; ಖಳ: ದುಷ್ಟ;

ಪದವಿಂಗಡಣೆ:
ಘೋರತರವದು +ಬಳಿಕ +ದುಷ್ಪ್ರತಿ
ಕಾರವ್+ಇತರರಿಗ್+ಇಂದುಮೌಳಿಯ
ಸಾರತರ +ಕೃಪೆಯಾಯ್ತಲೇ +ಸರಹಸ್ಯ+ಸಾಂಗದಲಿ
ಬಾರಿಸಿದುದಾವ್+ಅಂಗದಲಿ +ಮಾ
ಯಾ+ರಚನೆ+ಆ +ವಿವಿಧ+ ವಿವರಣದ್
ಆರುಭಟೆಯಲಿ +ಸೀಳಿ +ಬಿಸುಟೆನು+ ಶಿಲ್ಪದಲಿ +ಖಳರ

ಅಚ್ಚರಿ:
(೧) ಶಿವನ ಕೃಪೆಯ ಬಗ್ಗೆ ತಿಳಿಸುವ ಪರಿ – ಇಂದುಮೌಳಿಯ ಸಾರತರ ಕೃಪೆಯಾಯ್ತಲೇ ಸರಹಸ್ಯಸಾಂಗದಲಿ

ಪದ್ಯ ೪೮: ಕಾಲಕೇಯರ ಬಲ ಎಂತಹುದು?

ಕೆರಳಿತಲ್ಲಿ ನಿವತಕವಚರ
ಮರಣ ವಾರ್ತೆಯ ಕೇಳಿದಸುರರು
ಪುರದ ಬಾಹೆಯೊಳಡ್ಡಹಾಯ್ದರು ತರುಬಿದರು ರಥವ
ಅರಸ ಚಿತ್ತೈಸವದಿರಲಿ ಪರಿ
ಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ (ಅರಣ್ಯ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಿವಾತ ಕವಚರ ಸಾವನ್ನು ಕೇಳಿದ ಕಾಲಕೇಯರು ಕೆರಳಿದರು. ನಾನು ಅವರ ಊರ ಬಳಿ ಬರುತ್ತಿದ್ದಂತೆ ನನ್ನನ್ನು ತಡೆಯಲು ನನ್ನ ರಥಕ್ಕೆ ಅಡ್ಡ ಬಂದರು. ಅಣ್ಣ ಕೇಳು, ಅವರು ಮಾಯಾ ಯುದ್ಧ ವಿಶಾರದರು. ನಿವಾತಕವಚರಿಗಿಂತ ಎರಡು ಸಾವಿರ ಪಟ್ಟು ಬಲ ಶಾಲಿಗಳು.

ಅರ್ಥ:
ಕೆರಳು: ರೇಗು, ಕನಲು; ಮರಣ: ಸಾವು; ವಾರ್ತೆ: ಸುದ್ದಿ; ಕೇಳಿ: ಆಲಿಸು; ಅಸುರ: ದಾನವ; ಪುರ: ಊರು; ಬಾಹೆ: ಹೊರಗೆ; ಹಾಯ್ದು: ಹೊಡೆ; ತರುಬು: ತಡೆ, ನಿಲ್ಲಿಸು; ರಥ: ಬಂಡಿ; ಅರಸ: ರಾಜ; ಚಿತ್ತೈಸು: ಆಲಿಸು; ಅವದಿರು: ಅವರು; ಪರಿ: ರೀತಿ, ಬಗೆ; ಮಾಯೆ: ಗಾರುಡಿ, ಇಂದ್ರಜಾಲ; ರಚನೆ: ನಿರ್ಮಾಣ, ಸೃಷ್ಟಿ; ರಂಜಿಸು: ಹೊಳೆ, ಪ್ರಕಾಶಿಸು; ಸಾವಿರ: ಸಹಸ್ರ; ಮಡಿ: ಪಟ್ಟು; ಮಿಗಿಲು: ಹೆಚ್ಚು;

ಪದವಿಂಗಡಣೆ:
ಕೆರಳಿತಲ್ಲಿ+ ನಿವಾತಕವಚರ
ಮರಣ +ವಾರ್ತೆಯ +ಕೇಳಿದ್+ಅಸುರರು
ಪುರದ +ಬಾಹೆಯೊಳ್+ಅಡ್ಡ+ಹಾಯ್ದರು+ ತರುಬಿದರು+ ರಥವ
ಅರಸ+ ಚಿತ್ತೈಸ್+ಅವದಿರಲಿ+ ಪರಿ
ಪರಿಯ +ಮಾಯಾರಚನೆ+ ರಂಜಿಸಿತ್
ಎರಡು+ ಸಾವಿರ+ ಮಡಿಗೆ +ಮಿಗಿಲು +ನಿವಾತ+ಕವಚರಿಗೆ

ಅಚ್ಚರಿ:
(೧) ನಿವಾತಕವಚ – ೧, ೬ ಸಾಲಿನ ಕೊನೆಯ ಪದ
(೨) ಕಾಲಕೇಯರ ಬಲದ ಸಾಮರ್ಥ್ಯ – ಪರಿಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ

ಪದ್ಯ ೨೬: ಕೃಷ್ಣನು ಸಾಲ್ವ ರಾಜನನ್ನು ಹೇಗೆ ಸಂಹಾರಮಾಡಿದನು?

ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ
ದಾನವನ ಮಾಯಾಪುರದ ಸಂ
ಸ್ಥಾನಮರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ (ಅರಣ್ಯ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ದ್ರೌಪದಿ ನಾನು ಏನೆಂದು ಹೇಳಲಿ, ಸಾಲ್ವ ನಗರದ ಮಾಯಾರಚನೆಯು ಅಮೋಘವಾಗಿತ್ತು, ನನಗೇ ಅದು ತಿಳಿಯಲಾಗಲಿಲ್ಲ, ಇನ್ನು ದೇವತೆಗಳಿಗೆ ಹೇಗೆ ತಿಳಿದೀತು? ನಾನು ಸಾಲ್ವನಗರದ ಮಾಯಾಮಯವಾದ ಹೊಂದಾಣಿಕೆಯ ಗುಟ್ಟನ್ನು ಕಂಡುಹಿಡಿದು ನಗರವನ್ನು ಗೆದ್ದು ಸಾಲ್ವನನ್ನು ಸಂಹರಿಸಿದೆನು.

ಅರ್ಥ:
ಪುರ: ಊರು; ನವೀನ: ಹೊಸ; ಮಾಯ: ಇಂದ್ರಜಾಲ; ರಚನೆ: ನಿರ್ಮಿಸು; ಅಸದಳ: ಅಸಾಧ್ಯ; ಉಳಿದ: ಮಿಕ್ಕ; ಗಿರ್ವಾಣ: ದೇವತೆ; ಗೋಚರ: ಕಾಣುವುದು; ದಾನವ: ರಾಕ್ಷಸ; ಸಂಸ್ಥಾನ: ರಾಜ್ಯ, ಪ್ರಾಂತ್ಯ; ಮರ್ಮ: ಒಳ ಅರ್ಥ, ಗುಟ್ಟು; ಸಂಹರಿಸು: ನಾಶಗೊಳಿಸು; ರಿಪು: ವೈರಿ; ಭಟ: ಸೈನ್ಯ; ಶರ: ಬಾಣ;

ಪದವಿಂಗಡಣೆ:
ಏನನೆಂಬೆನು +ಸಾಲ್ವ+ಪುರದ+ ನ
ವೀನ +ಮಾಯಾ+ರಚನೆಯನು +ನಮ
ಗಾನಲ್+ಅಸದಳವ್+ಉಳಿದ +ಗೀರ್ವಾಣರಿಗೆ+ ಗೋಚರವೆ
ದಾನವನ +ಮಾಯಾಪುರದ+ ಸಂ
ಸ್ಥಾನ+ಮರ್ಮವನ್+ಅರಿದು+ ಶರ+ ಸಂ
ಧಾನದಲಿ +ಸಂಹರಿಸಿದೆವು ಸಾಲ್ವಾದಿ ರಿಪುಭಟರ

ಅಚ್ಚರಿ:
(೧) ಸಾಲ್ವರಾಜನನ್ನು ಸಂಹರಿಸಿದ ಪರಿ – ಶರ ಸಂಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ