ಪದ್ಯ ೩೧: ಯಾವುದರಲ್ಲಿ ಯಾವುದು ಲೀನವಾಯಿತು?

ಆ ಮಹಾಜಲಕಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾಮರುತ್ತಿನಲಾ ಬಹಳ ಬಹಿರಾವರಣದಲಿ ಪವನ
ವ್ಯೋಮಕಾ ತದಹಂ ಮಹತ್ತು ವಿ
ರಾಮ ವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಂತರ ಆ ಮಹಾ ಜಲರಾಶಿಯು ಅಗ್ನಿಯಲ್ಲಿ ಹೋಮವಾಯಿತು, ಅಗ್ನಿಯು ವಾಯುವಿನಲ್ಲಿ, ವಾಯುವ ಆಕಾಶದಲ್ಲಿ, ಆಗಸವು ಅಹಂತತ್ತ್ವದಲ್ಲಿ, ಅಹಂ ತತ್ತ್ವವು ಮಹತತ್ತ್ವದಲ್ಲಿ ಮತ್ತು ಮಹತ್ತು ಮಾಯೆಯಲ್ಲಿ ಅಡಗಿತು, ಮಾಯೆಯು ಪರಮಾತ್ಮನಲ್ಲಿ ಲಯವಾಯಿತು ಎಂದು ಮಾರ್ಕಂಡೇಯ ಮುನಿಯು ವಿವರಿಸಿದನು.

ಅರ್ಥ:
ಮಹಾ: ದೊಡ್ಡ; ಜಲ: ನೀರು; ಅಗ್ನಿ: ಬೆಂಕಿ; ಮುಖ: ಆನನ; ಹೋಮ: ಯಜ್ಞ; ಅಡಗು: ಮರೆಯಾಗು, ಮುಚ್ಚು; ಮರುತ: ಗಾಳಿ; ಬಹಳ: ತುಂಬ; ಬಹಿರ: ಹೊರಗೆ; ಆವರಣ: ಮುಸುಕು, ಹೊದಿಕೆ; ಪವನ: ವಾಯು; ವ್ಯೋಮ: ಆಗಸ; ಅಹಂ: ಅಹಂಕಾರ; ಮಹತ್ತು: ಹಿರಿದು, ಶ್ರೇಷ್ಠವಾದುದು; ವಿರಾಮ: ಬಿಡುವು, ವಿಶ್ರಾಂತಿ; ಪ್ರಕೃತಿ: ನೈಜವಾದುದು; ಮಾಯ: ಗಾರುಡಿ, ಇಂದ್ರಜಾಲ;ಕಾಮಿನಿ: ಹೆಣ್ಣು; ಪರಮಾತ್ಮ: ಭಗವಮ್ತ; ಲಯ: ನಾಶ, ಲೀನ; ಮುನಿಪ: ಋಷಿ;

ಪದವಿಂಗಡಣೆ:
ಆ +ಮಹಾಜಲಕ್+ಅಗ್ನಿ+ ಮುಖದಲಿ
ಹೋಮವಾಯ್ತು +ತದಗ್ನಿ+ಅಡಗಿದುದ್
ಆ+ಮರುತ್ತಿನಲ್+ಆ+ಬಹಳ+ ಬಹಿರಾವರಣದಲಿ +ಪವನ
ವ್ಯೋಮಕ+ಆ+ ತದ್+ಅಹಂ+ ಮಹತ್ತು+ ವಿ
ರಾಮ+ ವಾ +ಪ್ರಕೃತಿಯಲಿ+ ಮಾಯಾ
ಕಾಮಿನಿಗೆ +ಪರಮಾತ್ಮನಲಿ+ ಲಯವೆಂದನಾ+ ಮುನಿಪ

ಅಚ್ಚರಿ:
(೧) ಮಾಯಯು ಅಡಗಿದ ಪರಿ – ಮಾಯಾಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ

ಪದ್ಯ ೭: ಯಾರನ್ನು ಮರೆತು ಜನರು ಮಾಯೆಯಲ್ಲಿ ಮುಳುಗುತ್ತಾರೆ?

ಭ್ರಾಮಕದೊಳೀ ವಿಷಯ ಸೌಖ್ಯದ
ರಾಮಣೀಯಕದೊಳಗೆ ಮುಳುಗಿ ನಿ
ರಾಮಯನು ಪರತತ್ವಮಯನಚ್ಯುತನು ತಾನಾದ
ಈ ಮುಕುಂದನ ಮರೆದು ಕರ್ಮವಿ
ರಾಮದಲಿ ಕುದಿದವರು ಮಾಯಾ
ಕಾಮಿನಿಯ ಕೈಮಸಕದಲಿ ಮರುಳಾಗದಿರರೆಂದ (ಸಭಾ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಷಯಸೌಖ್ಯದ ರಮಣೀಯ ಭ್ರಮೆಯಲ್ಲಿ ಮುಳುಗಿ ನಿರಾಮಯನೂ ದೋಷ ಹಾಗೂ ರೋಗಗಳಿಲ್ಲದವನೂ ಪರತತ್ತ್ವಮಯನೂ, ಅಚ್ಯುತನೂ ಆದ ಶ್ರೀಕೃಷ್ಣನನ್ನು ಮರೆತು ಕರ್ಮದಲ್ಲಿ ಕುದಿಯುವವರು, ಮಾಯಾದೇವಿಯ ಕೈಮದ್ದಿನಿಂದ ಹುಚ್ಚು ಹಿಡಿಯದೆ ಇರುವವರಲ್ಲ.

ಅರ್ಥ:
ಭಾಮಕ: ಭ್ರಮೆ, ಭ್ರಾಂತಿ, ಉನ್ಮಾದ; ವಿಷಯ:ಇಂದ್ರಿಯ ಗೋಚರವಾಗುವ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಜ್ಞಾನೇಂದ್ರಿಯಗಳು; ಸೌಖ್ಯ: ಸಂತೋಷ; ರಾಮಣೀಯ: ಸುಂದರ; ಮುಳುಗು: ತೋಯು, ಮುಚ್ಚಿಹೋಗು; ನಿರಾಮಯ: ರೋಗವಿಲ್ಲದ, ಕ್ಷೇಮಕರವಾದ; ತತ್ವ: ಸಿದ್ಧಾಂತ, ನಿಯಮ; ಅಚ್ಯುತ: ಚ್ಯುತಿಯಿಲ್ಲದ, ನಾಶವಿಲ್ಲದ; ಮುಕುಂದ: ಕೃಷ್ಣ; ಮರೆ: ನೆನಪಿನಿಂದ ದೂರ ಮಾಡು; ಕರ್ಮ: ಕಾರ್ಯದ ಫಲ; ಧರ್ಮ; ವಿರಾಮ: ಬಿಡುವು, ವಿಶ್ರಾಂತಿ; ಕುದಿ: ಕೋಪಗೊಳ್ಳು; ಮಾಯಾ: ಗಾರುಡಿ, ಇಂದ್ರಜಾಲ, ಭ್ರಾಂತಿ; ಕಾಮಿನಿ: ಹೆಣ್ಣು; ಮಸಕ: ಆಹಾರದೊಡನೆ ಬೆರೆಸಿಕೊಡುವ ಒಂದು ಬಗೆಯ ಮಂದವಿಷ; ಮರುಳು: ಬುದ್ಧಿಭ್ರಮೆ, ಹುಚ್ಚು;

ಪದವಿಂಗಡಣೆ:
ಭ್ರಾಮಕದೊಳ್+ಈ+ ವಿಷಯ +ಸೌಖ್ಯದ
ರಾಮಣೀಯಕದೊಳಗೆ +ಮುಳುಗಿ +ನಿ
ರಾಮಯನು +ಪರತತ್ವಮಯನ್+ಅಚ್ಯುತನು +ತಾನಾದ
ಈ +ಮುಕುಂದನ+ ಮರೆದು+ ಕರ್ಮ+ವಿ
ರಾಮದಲಿ +ಕುದಿದವರು +ಮಾಯಾ
ಕಾಮಿನಿಯ +ಕೈಮಸಕದಲಿ +ಮರುಳಾಗದಿರರೆಂದ

ಅಚ್ಚರಿ:
(೧) ಕೃಷ್ಣನ ಗುಣಗಾನ – ನಿರಾಮಯ, ಪರತತ್ವಮಯ, ಅಚ್ಯುತ
(೨) ಮಾಯೆಯಲ್ಲಿ ಮುಳುಗುವರು ಎಂದು ಹೇಳಲು – ಮಾಯಾಕಾಮಿನಿಯ ಕೈಮಸಕದಲಿ