ಪದ್ಯ ೧೬: ಸಂಶಪ್ತಕರು ಅರ್ಜುನನನ್ನು ಹೇಗೆ ಕರೆದರು?

ಏಳು ಫಲುಗುಣ ಕೃಷ್ಣನೇ ಗೋ
ಪಾಲನೇಸರ ಮಾನಿಸನು ಬರ
ಹೇಳಲಾಪರೆ ಕರೆ ಸಹಾಯಕೆ ಭಾಳಲೋಚನನ
ಏಳು ಜಂಜಡವೇನು ಜೊತ್ತಿನ
ಕಾಳೆಗಕೆ ಕಲಿಯಾಗು ನಡೆಯೆನೆ
ಕೇಳುತರ್ಜುನನಿತ್ತನವರಿಗೆ ನಗುತ ವೀಳೆಯವ (ದ್ರೋಣ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಸಂಶಪ್ತಕರು ಅರ್ಜುನನನ್ನು ಯುದ್ಧಕ್ಕೆ ಬಾ ಎಂದು ಪ್ರೇರೇಪಿಸಿದರು. ಏಳು ಅರ್ಜುನ, ಕೃಷ್ಣನು ದನಕಾಯುವವ, ಅವನೆಂತಹ ಮನುಷ್ಯ, ಅವನೊಡನೆ ನೀನು ಬಂದರೆ ಪ್ರಯೋಜನವಿಲ್ಲ. ಸಹಾಯಕ್ಕೆ ಶಿವನನ್ನೇ ಕರೆದುಕೊಂಡು ಬಾ, ಏಕೆ ತಡ ಸಂಶಪ್ತಕರೊಡನೆ ಯುದ್ಧಕ್ಕಾಗಿ ವೀರನಾಗಿ ಬಾ ಎಂದು ಸಂಶಪ್ತಕರು ಹೇಳಲು, ಅರ್ಜುನನು ನಸುನಕ್ಕು ಅವರಿಗೆ ಹೀಗೆ ಉತ್ತರಿಸಿದನು.

ಅರ್ಥ:
ಏಳು: ಎಚ್ಚರಗೊಳ್ಳು; ಫಲುಗುಣ: ಅರ್ಜುನ; ಗೋಪಾಲ: ದನ ಕಾಯುವವ; ಏಸರ: ಏಷ್ಟು; ಮಾನಿಸ: ಮನುಷ್ಯ; ಬರ: ಕ್ಷಾಮ; ಹೇಳು: ತಿಳಿಸು; ಕರೆ: ಬರೆಮಾಡು; ಸಹಾಯ: ಆಸರೆ; ಭಾಳ: ಹಣೆ; ಲೋಚನ: ಕಣ್ಣು; ಭಾಳಲೋಚನ: ಶಿವ; ಜಂಜಡ: ತೊಂದರೆ, ಕ್ಲೇಶ; ಜೊತ್ತು: ಆಸರೆ, ನೆಲೆ; ಕಾಳೆಗ: ಯುದ್ಧ; ಕಲಿ: ಶೂರ; ನಡೆ: ಬಾ, ಚಲಿಸು; ಕೇಳು: ಆಲಿಸು; ನಗು: ಹಸನ್ಮುಖ; ವೀಳೆ: ತಾಂಬೂಲ;

ಪದವಿಂಗಡಣೆ:
ಏಳು +ಫಲುಗುಣ +ಕೃಷ್ಣನೇ +ಗೋ
ಪಾಲನ್+ಏಸರ+ ಮಾನಿಸನು +ಬರ
ಹೇಳಲಾಪರೆ +ಕರೆ +ಸಹಾಯಕೆ +ಭಾಳಲೋಚನನ
ಏಳು+ ಜಂಜಡವೇನು+ ಜೊತ್ತಿನ
ಕಾಳೆಗಕೆ +ಕಲಿಯಾಗು+ ನಡೆ+ಎನೆ
ಕೇಳುತ್+ಅರ್ಜುನನ್+ಇತ್ತನ್+ಅವರಿಗೆ+ ನಗುತ+ ವೀಳೆಯವ

ಅಚ್ಚರಿ:
(೧) ಕೃಷ್ಣನನ್ನು ಹಂಗಿಸುವ ಪರಿ – ಕೃಷ್ಣನೇ ಗೋಪಾಲನೇಸರ ಮಾನಿಸನು
(೨) ಅರ್ಜುನನನ್ನು ಹಂಗಿಸುಅ ಪರಿ – ಕರೆ ಸಹಾಯಕೆ ಭಾಳಲೋಚನನ

ಪದ್ಯ ೩೭: ದ್ರೋಣರು ಏನು ಹೇಳಿದರು?

ಹಾ ನುಡಿಯದಿರು ನಿನ್ನ ಹವಣಿನ
ಮಾನಿಸನೆ ಸುರಸಿಂಧುಜನು ತಾ
ನೀನು ಮಿಗೆ ಮೇಲರಿಯೆ ಜವ್ವನದುಬ್ಬುಗೊಬ್ಬಿನಲಿ
ನೀನು ಸರಿಯೇ ರಾಮಕಟಕದ
ಹಾನಿಯನು ತಲೆಗಾಯ್ದ ಜಾಂಬವ
ಗೇನು ಕೊರತೆಯೆನುತ್ತ ಜರೆದನು ಗರುಡಿಯಾಚಾರ್ಯ (ಭೀಷ್ಮ ಪರ್ವ, ೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ದ್ರೋಣನು ಕರ್ಣನ ಮಾತುಗಳನ್ನು ಕೇಳಿ, ಕರ್ಣ ಮಾತನಾಡಬೇಡ, ಭೀಷ್ಮನು ನಿನಗೆ ದಕ್ಕುವವನೇ ಹರೆಯದ ಉಬ್ಬು ಕೊಬ್ಬುಗಳಿಂದ ನಿನಗೆ ಮುಂದಿನದೇನೂ ತಿಳಿಯುತ್ತಿಲ್ಲ. ನೀನು ಭೀಷ್ಮನಿಗೆ ಸರಿಸಾಟಿಯೇ! ಶ್ರೀರಾಮನ ಸೈನ್ಯದ ಹಾನಿಯನ್ನು ತಡೆದ ಜಾಂಬವಂತನಿಗೆ ಏನು ಕೊರತೆ ಎಂದು ಕರ್ಣನನ್ನು ಜರೆದನು.

ಅರ್ಥ:
ನುಡಿ: ಮಾತು; ಹವಣಿನವ: ತೂಗುವವ; ಮಾನಿಸ: ಮನುಷ್ಯನಿಗೆ ಸಂಬಂಧಿಸಿದ; ಸುರಸಿಂಧುಜ: ಭೀಷ್ಮ; ಮಿಗೆ: ಮತ್ತು, ಅಧಿಕವಾಗಿ; ಅರಿ: ತಿಳಿ; ಜವ್ವನ: ಯೌವನ; ಉಬ್ಬು: ಹಿಗ್ಗು; ಕೊಬ್ಬು: ಹೆಚ್ಚಾಗು, ಅಧಿಕವಾಗು; ಸರಿ: ಸಮಾನ; ಕಟಕ: ಯುದ್ಧ; ಹಾನಿ: ನಾಶ; ತಲೆ: ಶಿರ; ಕಾಯ್ದು: ರಕ್ಷಿಸು; ಕೊರತೆ: ಕಡಮೆ, ನ್ಯೂನತೆ; ಜರೆ: ಬಯ್ಯು; ಗರುಡಿ: ವ್ಯಾಯಾಮಶಾಲೆ; ಆಚಾರ್ಯ: ಗುರು;

ಪದವಿಂಗಡಣೆ:
ಹಾ +ನುಡಿಯದಿರು +ನಿನ್ನ +ಹವಣಿನ
ಮಾನಿಸನೆ +ಸುರಸಿಂಧುಜನು +ತಾ
ನೀನು +ಮಿಗೆ +ಮೇಲರಿಯೆ +ಜವ್ವನದ್+ಉಬ್ಬು+ಕೊಬ್ಬಿನಲಿ
ನೀನು +ಸರಿಯೇ +ರಾಮ+ಕಟಕದ
ಹಾನಿಯನು +ತಲೆಗಾಯ್ದ +ಜಾಂಬವಗ್
ಏನು +ಕೊರತೆಯೆನುತ್ತ +ಜರೆದನು +ಗರುಡಿ+ಆಚಾರ್ಯ

ಅಚ್ಚರಿ:
(೧) ದ್ರೋಣನನ್ನು ಗರುಡಿಯಾಚಾರ್ಯ, ಭೀಷ್ಮನನ್ನು ಸುರಸಿಂಧುಜ ಎಂದು ಕರೆದಿರುವುದು

ಪದ್ಯ ೨೫: ದ್ರೌಪದಿಯು ಕಾಡಿನಲ್ಲಿ ಹೇಗೆ ನಡೆದು ಬರುತ್ತಿದ್ದಳು?

ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿಂಚಿನ ಘಲ್ಲಣೆಯ ಘೋರಾಂಧಕಾರದಲಿ
ಒಡನೆ ಮಾನಿಸರಿಲ್ಲ ಕರೆದಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ (ಅರಣ್ಯ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕಾಲ್ಬೆರಳುಗಳು ಎಡವಿ ನೊಮ್ದವು. ಅಂಗಾಲಿಗೆ ಮುಳ್ಳುಗಳು ನೆಟ್ಟವು. ಬಿರುಗಾಳಿಯೇ ಬಿರುಮಳೆಯನ್ನು ತಂದು ಮುಖಕ್ಕೆ ಅಪ್ಪಳಿಸುತ್ತಿತ್ತು. ಸಿಡಿಲು ಮಿಂಚುಗಳು ಘೋರವಾದ ಕತ್ತಲಿನಲ್ಲಿ ಬೆದರಿಸುತ್ತಿದ್ದವು. ದ್ರೌಪದಿಯ ಜೊತೆಗೆ ಯಾರೂ ಇರಲಿಲ್ಲ, ಕೂಗಿದರೆ ಉತ್ತರಿಸುವವರಿಲ್ಲ, ಕೈಗಳನ್ನೆತ್ತಿ ದೇಹವನ್ನು ಸಂಬಾಳಿಸುತ್ತಾ ಬರುದ್ದವಳು ಜಾರಿದಳು.

ಅರ್ಥ:
ಎಡಹು: ಎಡವು; ಬೆರಳು: ಅಂಗುಲಿ; ಕಾಲು: ಪಾದ; ಮುಳು: ಮುಳ್ಳು; ಕಡುವಳೆ: ಜೋರಾದ ಮಳೆ; ಅಳಿಪು: ಹಾಳು ಮಾಡು; ಗಾಳಿ: ವಾಯು; ಸಿಡಿಲು: ಚಿಮ್ಮು, ಸಿಡಿ; ಮಿಂಚು: ಹೊಳಪು, ಕಾಂತಿ; ಘಲ್ಲಣೆ: ಘಲ್ ಎನ್ನುವ ಶಬ್ದ; ಘೋರ: ಉಗ್ರ, ಭಯಂಕರ; ಅಂಧಕಾರ: ಕತ್ತಲೆ; ಒಡನೆ: ಕೂಡಲೆ; ಮಾನಿಸ: ಮನುಷ್ಯ; ಕರೆ: ಕೂಗು; ನುಡಿ: ಮಾತಾಡು; ಕರ: ಹಸ್ತ; ಧ್ವಯ: ಎರಡು; ತಡವು: ನೇವರಿಸು, ವಿಳಂಬ; ಪೈಸರ: ಇಳಿಜಾರಾದ ಪ್ರದೇಶ; ಸೂಸು: ಎಸೆ, ಬಿಸುಡು; ಮೈ: ತನು; ಮಹಾಸತಿ: ಶ್ರೇಷ್ಠವಾದ ಗರತಿ (ದ್ರೌಪದಿ);

ಪದವಿಂಗಡಣೆ:
ಎಡಹು +ಬೆರಳಿನ +ಕಾಲ +ಮುಳುಗಳ
ಕಡುವಳೆಯ +ಘಾಟಳಿಪ +ಗಾಳಿಯ
ಸಿಡಿಲು +ಮಿಂಚಿನ +ಘಲ್ಲಣೆಯ +ಘೋರ+ಅಂಧಕಾರದಲಿ
ಒಡನೆ+ ಮಾನಿಸರಿಲ್ಲ+ ಕರೆದಡೆ
ನುಡಿವರಿಲ್ಲ+ ಕರ+ದ್ವಯದಿ +ತಡ
ವಿಡುತ +ಪೈಸರದೊಳಗೆ+ ಸೂಸಿತು +ಮೈ +ಮಹಾಸತಿಯ

ಅಚ್ಚರಿ:
(೧) ಜಾರಿಬಿದ್ದಳು ಎಂದು ಹೇಳಲು – ಪೈಸರದೊಳಗೆ ಸೂಸಿತು ಮೈ ಮಹಾಸತಿಯ

ಪದ್ಯ ೮: ಒಂದು ದಿನ ಕೌರವರು ಯಾವ ಮರವನ್ನು ಹತ್ತಿದರು?

ಒಂದು ದಿನ ನೂರಾರು ಮಾನಿಸ
ರೊಂದು ಗೆಳೆಯಲಿ ಪುರದ ಹೊರಗಿಹು
ದೊಂದು ಠಾವು ಪ್ರಮಾಣವೃಕ್ಷವ ಕಂಡು ನಡೆತರಲು
ಬಂದು ನಿಂದರು ಕೋಲ ಬಿಸುಟೀ
ವೃಂದಹತ್ತಿತು ಮರನನಿವನೈ
ತಂದು ತಂದೆಡೆಯಾಡಿ ಬಳಲಿದು ನೋಡಿದನು ಭೀಮ (ಆದಿ ಪರ್ವ,೬ ಸಂಧಿ,೮ ಪದ್ಯ)

ತಾತ್ಪರ್ಯ:
ಪಾಂಡವರು ಮತ್ತು ಕೌರವರು ಹೀಗೆ ಆಟವಾಡುತ್ತಾ, ಭೀಮನ ಮೇಲೆ ಕೌರವರ ವೈಮನಸ್ಯ ಏರುತ್ತಿರುವಾಗ, ಒಮ್ಮೆ ಎಲ್ಲರು ಗೆಳೆತನದಿಂದ ಊರ ಹೊರಗಿನ ಒಂದು ಪ್ರದೇಶಕ್ಕೆ ಬಂದು ಅಲ್ಲಿರುವ ಒಂದು ಆಲದ ಮರವನ್ನು ನೋಡಿದರು. ಕೌರವರು ಅಲ್ಲಿಗೆ ಬಂದು ಅದರ ಸುತ್ತ ನಿಂತು, ಕೋಲನ್ನೆಸೆದು ಮರವನ್ನು ಹತ್ತಿದರು. ಈ ಗುಂಪಿನಿಂದ ಸ್ವಲ್ಪ ಹಿಂದೆ ಉಳಿದಿದ್ದ ಭೀಮನು ಅಲ್ಲಿ ಇಲ್ಲಿ ತಿರುಗಾಡಿ, ಬಳಲಿ ಕೌರವರು ಮರದ ಮೇಲಿರುವುದನ್ನು ನೋಡಿದನು.

ಅರ್ಥ:
ದಿನ: ತಿಥಿ, ದಿವಸ; ಮಾನಿಸ: ಮನುಷ್ಯ; ಗೆಳೆಯಲಿ:ಸ್ನೇಹದಲಿ; ಪುರ: ಊರು;ಠಾವು:ಸ್ಥಳ, ತಾಣ; ಪ್ರಮಾಣವೃಕ್ಷ: ಆಲದ ಮರ; ವೃಕ್ಶ: ಮರ; ಕಂಡು: ನೋಡಿ; ನಡೆತರು: ಬರು, ಆಗಮಿಸು
ಬಿಸುಟು: ಎಸೆ; ವೃಂದ: ಗುಂಪು; ಹತ್ತು: ಏರು; ಬಳಲು: ಆಯಾಸ; ನೋಡು: ವೀಕ್ಷಿಸು

ಪದವಿಂಗಡನೆ:
ಮಾನಿಸರ್+ಒಂದು;ಹೊರಗಿಹುದ್+ಒಂದು; ಬಿಸುಟ್+ಈ+ವೃಂದ;ಮರನನ್+ಇವನ್+ಐ+ತಂದು; ತಂದ್+ಎಡೆಯಾಡಿ

ಅಚ್ಚರಿ:
(೧) ಮೊದಲು ಮೂರು ಸಾಲಿನ ಮೊದಲ ಪದಗಳು – ಒಂದು ಪದದಿಂದ ಪ್ರಾರಂಭ
(೨) ಮರ, ವೃಕ್ಷ – ಸಮಾನಾರ್ಥಕ ಪಡಗಳು (೩,೫ ಸಾಲು)
(೩)ಕಂಡು, ನೋಡು – ಸಮಾನಾರ್ಥಕ ಪಡಗಳು (೩,೬ ಸಾಲು)
(೪) “ತ” ಕಾರದ ಜೋಡಿ ಪದಗಳು – ತಂದು ತಂದೆಡೆಯಾಡಿ
(೫) ಯಾವುದಾದರು ವಸ್ತು ವನ್ನು ಕಂಡರೆ ಮೊದಲ ಕ್ರಿಯೆ ನೋಡುವುದು, ನಂತರ ಅಲ್ಲಿಗೆ ಹೋಗುವುದು, ಅದರ ಹತ್ತಿರ ಬಂದು ನಿಂತು ಅದನ್ನು ಪರೀಕ್ಷಿಸುವುಡು, ಇದನ್ನು ೪ ಪದಗಳಲ್ಲಿ ವರ್ಣಿಸಲಾಗಿದೆ: ಕಂಡು ನಡೆತರಲು ಬಂದು ನಿಂದರು (೩,೪ ಸಾಲು)
(೬) ಅನುಸ್ವಾರದ ಪದಗಳು: ಒಂದು, ಕಂಡು, ಬಂದು, ನಿಂದು, ತಂದು , ವೃಂದ