ಪದ್ಯ ೨೮: ಸಹದೇವನು ಶಕುನಿಗೆ ಏನೆಂದು ಉತ್ತರಿಸಿದನು?

ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವೆನೇ ಭವದೀಯ ರಚಿತ ವಿಕಾರ ವಿಭ್ರಮವ
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ (ಗದಾ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸಹದೇವನು ಮಾತನಾಡುತ್ತಾ, ದುಃಖಿಸಬೇಡ, ನಿನ್ನ ಎಅರ್ಡು ರೆಕ್ಕೆಗಳನ್ನು ತರಿದು ಕೊಕ್ಕನ್ನು ಸೀಳುತ್ತೇನೆ. ನೀನು ಮಾಡಿದ ವಿಕಾರ ಪರಂಪರೆಯನ್ನು ಮರೆಯಲಾದೀತೇ? ನನ್ನ ಬಳಿ ಬಾಣಗಳಿವೆ, ನೀನೂ ಪತತ್ರಿ. ನನ್ನ ಬಾಣಗಳು ನಿನ್ನನ್ನು ಗುತ್ತಿಗೆ ಪಡೆಯಲು ಅವಕಾಶಕೊಡು ಎಂದು ಇದಿರಾಗಿ ಬಾಣ ಪ್ರಯೋಗ ಮಾಡಿದನು.

ಅರ್ಥ:
ಮರುಗು: ತಳಮಳ, ಸಂಕಟ; ಉಭಯ: ಎರಡು; ಪಕ್ಷ: ಗುಂಪು; ತರಿ: ಸೀಳು; ತುಂಡು: ಚೂರು, ಭಾಗ; ಸೀಳು: ಕತ್ತರಿಸು; ಮರೆ: ಗುಟ್ಟು, ರಹಸ್ಯ; ಭವದೀಯ: ನಿನ್ನ; ರಚಿತ: ನಿರ್ಮಿತ; ವಿಕಾರ: ಬದಲಾವಣೆ, ಮಾರ್ಪಾಟು; ವಿಭ್ರಮ: ಅಲೆದಾಟ, ಸುತ್ತಾಟ; ನೆರೆ: ಗುಂಪು; ಪತತ್ರಿ: ರೆಕ್ಕೆಗಳಿರುವ ಬಾಣ, ಪಕ್ಷಿ; ಮರು: ಎರಡನೆಯ, ದ್ವಿತೀಯ; ಎಸು: ಬಾಣ ಪ್ರಯೋಗ ಮಾಡು; ಕೇಣಿ: ಗುತ್ತಿಗೆ, ಗೇಣಿ; ತೆರಹು: ಬಿಚ್ಚು, ತೆರೆ; ತನುಜ: ಮಗ; ಮಗುಳು: ಪುನಃ, ಮತ್ತೆ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಮರುಗದಿರು+ ನಿನ್ನ್+ಉಭಯ +ಪಕ್ಷವ
ತರಿದು +ತುಂಡವ +ಸೀಳುವೆನು+ ತಾ
ಮರೆವೆನೇ+ ಭವದೀಯ+ ರಚಿತ +ವಿಕಾರ +ವಿಭ್ರಮವ
ನೆರೆ +ಪತತ್ರಿಗಳಿವೆ+ ಪತತ್ರಿಯ
ಮರುವೆಸರು +ನಿನಗಿವರ +ಕೇಣಿಗೆ
ತೆರಹುಗೊಡು +ನೀನೆಂದು +ಮಾದ್ರೀ+ತನುಜ +ಮಗುಳೆಚ್ಚ

ಅಚ್ಚರಿ:
(೧) ಶಕುನಿಯನ್ನು ಜರೆದ ಪರಿ – ತಾ ಮರೆವೆನೇ ಭವದೀಯ ರಚಿತ ವಿಕಾರ ವಿಭ್ರಮವ
(೨) ಪತತ್ರಿ ಪದದ ಬಳಕೆ – ನೆರೆ ಪತತ್ರಿಗಳಿವೆ ಪತತ್ರಿಯ ಮರುವೆಸರು

ಪದ್ಯ ೩೯: ನಾರಾಯಣಾಸ್ತ್ರವು ಯಾರನ್ನು ಹುಡುಕಿಕೊಂಡು ಹೋಯಿತು?

ಭೀತ ಕೈದುಗಳಖಿಳದಳ ಸಂ
ಘಾತವನು ಬಾಣಾಗ್ನಿ ಬೆರಸಿತು
ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ
ಆತನಾವೆಡೆ ಧರ್ಮಜನು ವಿ
ಖ್ಯಾತನರ್ಜುನನನಿಲಸುತ ಮಾ
ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ (ದ್ರೋಣ ಪರ್ವ, ೧೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿ ಆಯುಧವನ್ನೆಸೆದು ನಿಮ್ತ ಎಲ್ಲರನ್ನೂ ಬಾಣಾಗ್ನಿ ಆವರಿಸಿ ಭಲೇ ಭಂಡರಿರಾ ಎನ್ನುತ್ತಾ ಅವರನ್ನು ಕೈ ಬಿಟ್ಟಿತು, ಆ ಧರ್ಮಜನೆಲ್ಲಿ, ಅರ್ಜುನನೆಲ್ಲಿ, ಭೀಮನೆಲ್ಲಿ, ಮಾದ್ರಿಯ ಮಕ್ಕಳೆಲ್ಲಿ ಎನ್ನುತ್ತಾ ನಾರಾಯಣಾಸ್ತ್ರವು ಅವರನ್ನು ಹುಡುಕಿಕೊಂಡು ಹೋಯಿತು.

ಅರ್ಥ:
ಭೀತ: ಭಯ; ಕೈದು: ಆಯುಧ; ಅಖಿಳ: ಎಲ್ಲಾ; ದಳ: ಸೈನ್ಯ; ಸಂಘಾತ: ಗುಂಪು, ಸಮೂಹ; ಬಾಣ: ಸರಳು; ಅಗ್ನಿ: ಬೆಂಕಿ; ಬೆರಸು: ಕಲಸು; ಪೂತು: ಭಲೇ; ಭಂಡ: ನಾಚಿಕೆ, ಲಜ್ಜೆ; ಬಿಟ್ಟು: ತೊರೆ; ಬಾಣ: ಸರಳು; ಅರಿ: ವೈರಿ; ಭಟ: ಸೈನ್ಯ; ವಿಖ್ಯಾತ: ಪ್ರಸಿದ್ಧ; ಅನಿಲಸುತ: ಭೀಮ; ಸುತ: ಪುತ್ರ; ತನುಜ: ಮಗ; ಹೊಕ್ಕು: ಸೇರು; ಮೋಹರ: ಯುದ್ಧ;

ಪದವಿಂಗಡಣೆ:
ಭೀತ +ಕೈದುಗಳ್+ಅಖಿಳ+ದಳ +ಸಂ
ಘಾತವನು +ಬಾಣಾಗ್ನಿ +ಬೆರಸಿತು
ಪೂತು+ ಭಂಡರಿರ್+ಎನುತ +ಬಿಟ್ಟುದು +ಬಾಣವ್+ಅರಿ+ಭಟರ
ಆತನಾವೆಡೆ +ಧರ್ಮಜನು +ವಿ
ಖ್ಯಾತನ್+ಅರ್ಜುನನ್+ಅನಿಲಸುತ +ಮಾ
ದ್ರೀತನುಜರ್+ಎಂದೆನುತ +ಹೊಕ್ಕುದು +ರಾಜ +ಮೋಹರವ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಾಣಾಗ್ನಿ ಬೆರಸಿತು ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ

ಪದ್ಯ ೬: ಕರ್ಣನು ಶತ್ರುಗಳೊಡನೆ ಹೇಗೆ ಕಾದಿದನು?

ಧನುವಿನಲಿ ಸಾತ್ಯಕಿಯ ಮಾದ್ರೀ
ತನುಜರನು ತೇರಿನಲಿ ದ್ರುಪದನ
ತನಯನನು ಸಾರಥಿಗಳಲಿ ಜೋಡಿನಲಿ ಪವನಜನ
ಬಿನುಗರವರವರಂಗದಲಿ ಕೈ
ಮನವ ಖಂಡಿಸಿ ಸಕಲ ರಿಪು ಸಾ
ಧನವನೊಬ್ಬನೆ ಕರ್ಣ ಗೆಲಿದನು ನೃಪತಿ ಕೇಳೆಂದ (ಕರ್ಣ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಕರ್ಣನನ್ನು ಎಲ್ಲಾ ಕಡೆಯಿಂದ ಆವರಿಸಲು, ಕರ್ಣನು ಧನುವಿನಲ್ಲಿ ಸಾತ್ಯಕಿಯನ್ನು, ನಕುಲ ಸಹದೇವರ ತೇರನ್ನೂ, ಧೃಷ್ಟದ್ಯುಮ್ನನ ಸಾರಥಿಯನ್ನೂ, ಭೀಮನ ಕವಚವನ್ನೂ ಖಂಡಿಸಿ, ಅವರ ಕೈಚಳಕವನ್ನೂ ಉತ್ಸಾಹವನ್ನೂ ಮುರಿದು ಕರ್ಣನೊಬ್ಬನೇ ಶತ್ರುಗಳನ್ನು ಗೆದ್ದನು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಧನು: ಧನಸ್ಸು, ಬಿಲ್ಲು; ತನುಜ: ಮಕ್ಕಳು; ತೇರು: ರಥ; ತನಯ: ಮಗ; ಸಾರಥಿ: ರಥವನ್ನು ಓಡಿಸುವವ; ಜೋಡು: ಜೊತೆ, ಕವಚ; ಪವನಜ: ಭೀಮ; ಬಿನುಗು: ಅಲ್ಪವ್ಯಕ್ತಿ, ಕ್ಷುದ್ರವ್ಯಕ್ತಿ; ಅಂಗ: ದೇಹ, ಶರೀರ, ಅವಯವ; ಕೈ: ಕರ; ಮನ: ಮನಸ್ಸು; ಖಂಡಿಸು: ಕಡಿ, ಕತ್ತರಿಸು; ಸಕಲ: ಎಲ್ಲಾ; ರಿಪು: ವೈರಿ; ಸಾಧನ: ಗುರಿಮುಟ್ಟುವ ಪ್ರಯತ್ನ; ಗೆಲುವು: ಜಯ; ನೃಪತಿ: ರಾಜ;

ಪದವಿಂಗಡಣೆ:
ಧನುವಿನಲಿ +ಸಾತ್ಯಕಿಯ +ಮಾದ್ರೀ
ತನುಜರನು +ತೇರಿನಲಿ +ದ್ರುಪದನ
ತನಯನನು +ಸಾರಥಿಗಳಲಿ +ಜೋಡಿನಲಿ +ಪವನಜನ
ಬಿನುಗರ್+ಅವರವರ್+ಅಂಗದಲಿ +ಕೈ
ಮನವ +ಖಂಡಿಸಿ+ ಸಕಲ+ ರಿಪು+ ಸಾ
ಧನವನ್+ಒಬ್ಬನೆ +ಕರ್ಣ +ಗೆಲಿದನು +ನೃಪತಿ +ಕೇಳೆಂದ