ಪದ್ಯ ೩: ಯಾರು ಜಗತ್ತಿನಲ್ಲಿ ಶ್ರೇಷ್ಠರು?

ಘನ ರಜೋಗುಣದಲ್ಲಿ ಚತುರಾ
ನನ ತಮೋಗುಣದಲ್ಲಿ ಶಂಕರ
ನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ
ಘನ ಜಗನ್ಮಯನಾಗಿ ಸರ್ವಾ
ತ್ಮನು ಮಹೇಶ್ವರನೆನಿಪನೀತನ
ನೆನಹನೀತನ ನಿಜವನರಿವ ಮಹಾತ್ಮರಾರೆಂದ (ಸಭಾ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ರಜೋಗುಣದಲ್ಲಿ ಹಿರಣ್ಯಗರ್ಭ ಬ್ರಹ್ಮನು, ತಮೋ ಗುಣದಲ್ಲಿ ಶಂಕರನು, ಸತ್ವಗುಣದಲ್ಲಿ ಶ್ರೀಮನ್ನಾರಾಯಣನು, ಇವನೇ ಜಗತ್ತಾಗಿದ್ದಾನೆ, ಎಲ್ಲರ ಜೀವ ಉಸಿರಲ್ಲೂ ಇವನೇ ಇರುವವನು, ಇವನೇ ಮಹೇಶ್ವರನು, ಇವನ ಇಚ್ಛೆಯೇನು, ಇವನ ಸ್ವರೂಪವೇನು ಎನ್ನುವುದನ್ನು ತಿಳಿದವರು ಮಹಾತ್ಮರು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಘನ: ಶ್ರೇಷ್ಠ; ರಜ: ರಜಸ್ಸು, ಮೂರು ಗುಣಗಳಲ್ಲಿ ಒಂದು; ಚತುರ: ನಾಲ್ಕು; ಆನನ: ಮುಖ; ಚತುರಾನನ: ಬ್ರಹ್ಮ; ತಮ: ಕತ್ತಲೆ, ಅಂಧಕಾರ, ಗುಣಗಳಲ್ಲಿ ಒಂದು; ಶಂಕರ: ಶಿವ; ಸತ್ವ: ಒಳ್ಳೆಯ; ಗುಣ: ನಡತೆ, ಸ್ವಭಾವ; ಗತಿ: ಚಲನೆ; ವಿಷ್ಣು: ನಾರಾಯಣ; ಜಗ: ಜಗತ್ತು, ವಿಶ್ವ; ಮಯ: ಆವರಿಸು; ಸರ್ವಾತ್ಮ: ಎಲ್ಲರ ಜೀವ, ಉಸಿರು; ಮಹೇಶ್ವರ: ದೇವರ ದೇವ; ನೆನಹು: ಜ್ಞಾಪಿಸಿ, ಮನನ; ನಿಜ: ದಿಟ, ಸತ್ಯ; ಅರಿ: ತಿಳಿ; ಮಹಾತ್ಮ: ಶ್ರೇಷ್ಠ;

ಪದವಿಂಗಡಣೆ:
ಘನ +ರಜೋಗುಣದಲ್ಲಿ+ ಚತುರಾ
ನನ +ತಮೋಗುಣದಲ್ಲಿ+ ಶಂಕರನ್
ಎನಿಸಿ +ಸತ್ವಗುಣಾನು+ಗತಿಯಲಿ+ ವಿಷ್ಣುವೆಂದೆನಿಸಿ
ಘನ +ಜಗನ್ಮಯನಾಗಿ+ ಸರ್ವಾ
ತ್ಮನು +ಮಹೇಶ್ವರನ್+ಎನಿಪನ್+ಈತನ
ನೆನಹನ್+ಈತನ +ನಿಜವನರಿವ+ ಮಹಾತ್ಮರಾರೆಂದ

ಅಚ್ಚರಿ:
(೧) ಮೂರು ಗುಣಗಳ ವಿವರಣೆ
(೨) ಕೃಷ್ಣನ ಗುಣಗಾನ – ಜಗನ್ಮಯ, ಸರ್ವಾತ್ಮ, ಮಹೇಶ್ವರ