ಪದ್ಯ ೪೪: ಭೀಷ್ಮನು ಧೃತರಾಷ್ಟ್ರನಿಗೆ ಯಾರನ್ನು ಸಂತೈಸಲು ಹೇಳಿದನು?

ಆಹಹ ಭೂತ ಕ್ಷೋಭವಿದು ನಿ
ರ್ದಹಿಸುವುದು ಕುರುಕುಲವ ನಕಟೀ
ಮಹಿಳೆಯೊರಲಿದಳಮರ ನಿಕರಕೆ ದೈವಕೃತವಿದೆಲೆ
ಕುಹಕಿ ಮಕ್ಕಳನಿಕ್ಕಿ ಮೌನದೊ
ಳಿಹರೆ ಬಾ ಧೃತರಾಷ್ಟ್ರ ಪಾಂಡವ
ಮಹಿಳೆಯನು ಸಂತೈಸು ನಡೆನಡೆಯೆಂದನಾ ಭೀಷ್ಮ (ಸಭಾ ಪರ್ವ, ೧೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಪಂಚಭೂತಗಳಲ್ಲಿ ಉಂಟಾದ ಈ ಕೋಲಾಹಲವು ಕುರುಕುಲವನ್ನೇ ಸುಟ್ಟು ಬೂದಿ ಮಾಡುತ್ತದೆ, ದ್ರೌಪದಿಯು ದೇವತೆಗಳಿಗೆ ಮೊರೆಯಿಟ್ಟುದುದರಿಂದ ದೇವತೆಗಳು ಈ ಉತ್ಪಾತಗಳನ್ನುಂಟುಮಾಡುತ್ತಿದ್ದಾರೆ. ನಿನ್ನ ದುಷ್ಟ ಮಕ್ಕಳನ್ನು ದುಷ್ಕೃತ್ಯಮಾಡಲು ಬಿಟ್ಟು ನೀನು ಮೌನದಿಂದಿರುವುದು ಸರಿಯಲ್ಲ. ದ್ರೌಪದಿಯನ್ನು ಸಂತೈಸು ಬಾ, ನಡೆ ಎಂದು ಭೀಷ್ಮನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಅಹಹ: ಓಹೋ!; ಭೂತ: ದೆವ್ವ, ಪಿಶಾಚಿ, ಪಂಚಭೂತ; ಕ್ಷೋಭೆ: ಉದ್ವೇಗ; ದಹಿಸು: ಸುಡು; ಅಕಟ: ಅಯ್ಯೋ; ಮಹಿಳೆ: ಹೆಣ್ಣು; ಒರಲು: ಗೋಳು, ಕೂಗು; ಅಮರ: ದೇವ, ಸುರರು; ನಿಕರ: ಗುಂಪು; ದೈವ: ಭಗವಂತ; ಕೃತ: ಮಾಡಿದ; ಕುಹಕಿ: ಕಪಟಿ; ಮಕ್ಕಳು: ಪುತ್ರರು; ಮೌನ: ಸದ್ದಿಲ್ಲದ ಸ್ಥಿತಿ; ಸಂತೈಸು: ಸಮಾಧಾನ ಪಡಿಸು; ನಡೆ: ಚಲಿಸು, ಮುಂದೆ ಹೋಗು;

ಪದವಿಂಗಡಣೆ:
ಆಹಹ +ಭೂತ +ಕ್ಷೋಭವಿದು +ನಿ
ರ್ದಹಿಸುವುದು +ಕುರುಕುಲವನ್ + ಅಕಟ
ಈ+ಮಹಿಳೆ+ಒರಲಿದಳ್+ಅಮರ+ ನಿಕರಕೆ +ದೈವ+ಕೃತವಿದ್+ಎಲೆ
ಕುಹಕಿ+ ಮಕ್ಕಳನಿಕ್ಕಿ+ ಮೌನದೊಳ್
ಇಹರೆ+ ಬಾ +ಧೃತರಾಷ್ಟ್ರ +ಪಾಂಡವ
ಮಹಿಳೆಯನು +ಸಂತೈಸು +ನಡೆನಡೆ+ಎಂದನಾ +ಭೀಷ್ಮ

ಅಚ್ಚರಿ:
(೧) ದ್ರೌಪದಿಯನ್ನು ಮಹಿಳೆ ಎಂದು ಕರೆದಿರುವುದು
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಕುಹಕಿ ಮಕ್ಕಳನಿಕ್ಕಿ ಮೌನದೊಳಿಹ