ಪದ್ಯ ೧೦೬: ದ್ರೌಪದಿ ಯಾರ ಕಡೆ ತಿರುಗಿ ಸಹಾಯವನ್ನು ಬೇಡಿದಳು?

ಮುರಿದುದನಿಬರ ಮೋರೆ ಮಹಿಪನ
ಕೊರಲ ಕೊಂಕಿನಲಿದ್ದರಾ
ಸೋದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ
ಮರಳಿ ನೋಡಿದಳಕಟ ಗಂಗಾ
ವರ ಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ದೈನ್ಯದ ಸ್ಥಿತಿಯಲ್ಲಿ ಪಾಂಡವರ ಕಡೆ ದ್ರೌಪದಿ ನೋಡಲು, ಪಾಂಡವರು ಆಕೆಯ ಮುಖವನ್ನು ನೋಡಲಾಗದೆ, ಅವರ ಮುಖವನ್ನು ಬೇರೆ ಕಡೆಗೆ ತಿರುಗಿಸಿದರು. ಯುಧಿಷ್ಠಿರನ ಸನ್ನೆಯಂತೆ ಉಳಿದ ನಾಲ್ವರು ಸುಮ್ಮನಿದ್ದರು. ಅವಳು ಮತ್ತೆ ಹಿರಿಯರಾದ ಭೀಷ್ಮಾದಿಗಳ ಬಳಿ ಹೋಗಿ, ಭೀಷ್ಮ, ದ್ರೋಣ, ಕೃಪಾಚಾರ್ಯರೆ, ನನ್ನ ತಂದೆಗಳಿರಾ ನನ್ನ ಸೆರಗನ್ನು ಬಿಡಿಸಿರಿ ಎಂದು ಕಣ್ಣೀರಿಟ್ಟಳು.

ಅರ್ಥ:
ಮುರಿ: ತಿರುಗು; ಅನಿಬರು: ಅಷ್ಟು ಜನ; ಮೋರೆ: ಮುಖ; ಮಹಿಷ: ರಾಜ; ಕೊರಲು: ದನಿ; ಕೊಂಕು: ಹಿಂಜರಿ; ಸೋದರ: ತಮ್ಮ; ಸಾರ: ರಸ; ಕಾಣು: ನೋಡು; ಮರಳಿ: ಮತ್ತೆ; ನೋಡು: ವೀಕ್ಷಿಸು; ಅಕಟ: ಅಯ್ಯೋ; ವರ: ಶ್ರೇಷ್ಠ; ಕುಮಾರ: ಮಗ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿಸು: ಕಳಚು, ಸಡಿಲಿಸು; ತಂದೆ: ಪಿತ, ತಾತ; ಒರಲು: ಗೋಳಿಡು; ತರಳೆ: ಬಾಲೆ, ಯುವತಿ;

ಪದವಿಂಗಡಣೆ:
ಮುರಿದುದ್+ಅನಿಬರ+ ಮೋರೆ+ ಮಹಿಪನ
ಕೊರಲ+ ಕೊಂಕಿನಲ್+ಇದ್ದರಾ
ಸೋದರರು+ ಸಾರವನಲ್ಲಿ+ ಕಾಣದೆ +ಭೀಷ್ಮ +ಗುರು +ಕೃಪರ
ಮರಳಿ +ನೋಡಿದಳ್+ಅಕಟ +ಗಂಗಾ
ವರ+ ಕುಮಾರ+ ದ್ರೋಣ +ಕೃಪರ್+ಈ
ಸೆರಗ+ ಬಿಡಿಸಿರೆ +ತಂದೆಗಳಿರ್+ಎಂದ್+ಒರಲಿದಳು +ತರಳೆ

ಅಚ್ಚರಿ:
(೧) ಭೀಷ್ಮರನ್ನು ಗಂಗಾವರ ಕುಮಾರ ಎಂದು ಕರೆದಿರುವುದು
(೨) ದೈನ್ಯದ ಸ್ಥಿತಿ – ಮರಳಿ ನೋಡಿದಳಕಟ ಗಂಗಾವರ ಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ

ಪದ್ಯ ೫೬: ಪ್ರಾತಿಕಾಮಿಕ ಮತ್ತು ದ್ರೌಪದಿಯ ನಡುವೆ ಯಾವ ಸಂಭಾಷಣೆಯಾಯಿತು?

ಅಹುದು ತನ್ನನು ಮುನ್ನ ಸೋತನು
ಮಹಿಳೆಗೊಡ್ಡಿದೆನೆಂದು ನಿಮ್ಮನು
ಮಹಿಪ ಸೋತನು ತಾಯೆ ಬಿಜಯಂಗೈಯಬೇಹುದೆನೆ
ವಿಹಿತವಿದು ಮಾನುಷವೆ ದೈವದ
ಕುಹಕವೈಸಲೆ ಮಗನೆ ತಾನೇ
ಬಹೆನು ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ (ಸಭಾ ಪರ್ವ, ೧೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಹೌದು ತಾಯೆ ರಾಜನು ಮೊದಲು ತನ್ನನ್ನು ಸೋತು ಆಮೇಲೆ ನಿಮ್ಮನ್ನು ಪಣವಾಗಿ ಜೂಜಿನಲ್ಲಿಟ್ಟು ಸೋತನು, ತಾಯೆ ನೀವು ಕೌರವನ ಆಸ್ಥಾನಕ್ಕೆ ಬೇಗನೇ ಬನ್ನಿ ಎಂದು ಪ್ರಾತಿಕಾಮಿಕನು ಹೇಳಲು, ದ್ರೌಪದಿಯು ಇದು ಮನುಷ್ಯರ ಕಾರ್ಯವಲ್ಲ, ಇದರಲ್ಲಿ ದೈವದ ಕುಹಕವಿದೆ ಎಂದು ತಿಳಿದು, ನಾನೇ ಸಭೆಗೆ ಬರುತ್ತೇನೆ ಅದಕ್ಕಿಂತ ಮುಂಚೆ ನೀನು ಹೋಗಿ ಈ ಮಾತನ್ನು ಸಭೆಗೆ ತಿಳಿಸು ಎಂದಳು.

ಅರ್ಥ:
ಅಹುದು: ಹೌದು; ಮುನ್ನ: ಮೊದಲು; ಸೋಲು: ಪರಾಭಾ; ಮಹಿಳೆ: ಹೆಣ್ಣು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಮಹಿಪ: ರಾಜ; ಬಿಜಯಂಗೈ: ದಯಮಾಡಿಸು, ಹೊರಡು; ವಿಹಿತ: ಯೋಗ್ಯ, ಔಚಿತ್ಯ; ಮಾನುಷ: ಮನುಷ್ಯ; ದೈವ: ಭಗವಂತ; ಕುಹಕ: ಮೋಸ, ವಂಚನೆ; ಮಗ: ಸುತ; ಬಹೆನು: ಬರುವೆ; ಹೋಗು: ತೆರಳು; ಹೇಳು: ತಿಳಿಸು; ಮಾತು: ವಾಣಿ; ಸಭೆ: ಓಲಗ;

ಪದವಿಂಗಡಣೆ:
ಅಹುದು +ತನ್ನನು +ಮುನ್ನ +ಸೋತನು
ಮಹಿಳೆಗ್+ಒಡ್ಡಿದೆನ್+ಎಂದು +ನಿಮ್ಮನು
ಮಹಿಪ+ ಸೋತನು+ ತಾಯೆ +ಬಿಜಯಂಗೈಯಬೇಹುದ್+ಎನೆ
ವಿಹಿತವಿದು +ಮಾನುಷವೆ +ದೈವದ
ಕುಹಕವ್+ಐಸಲೆ +ಮಗನೆ +ತಾನೇ
ಬಹೆನು+ ನೀ +ಹೋಗ್+ಒಮ್ಮೆ +ಹೇಳ್+ಈ+ ಮಾತನ್+ಆ+ ಸಭೆಗೆ

ಅಚ್ಚರಿ:
(೧) ದ್ರೌಪದಿಯ ತಿಳುವಳಿಕೆ – ವಿಹಿತವಿದು ಮಾನುಷವೆ ದೈವದ ಕುಹಕವೈಸಲೆ