ಪದ್ಯ ೮೫: ವಿದುರನು ಪಾಂಡವರಿಗೆ ಏನು ಹೇಳಿದನು?

ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳದ್ಯೂತದಲಿ ರಮಿಸುವುದು ನೀವೆಂದ (ಸಭಾ ಪರ್ವ, ೧೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ನೀವೈವರು ರಾಜಸೂಯ ಮಹಾಯಾಗದ ಕಾಲದಲ್ಲಿ ದಿನಕ್ಕೊಂದು ಊಟ ಮುಂತಾದ ಕಠಿಣ ಕ್ರಮಗಳನ್ನು ಆಚರಿಸಿ ದಣಿದಿದ್ದೀರಿ, ಕೌರವರು ಹೊಸದೊಂದು ಸಭಾಸ್ಥಾನವನ್ನು ಕಟ್ಟಿಸಿದ್ದಾರೆ, ನೀವು ಹಸ್ತಿನಾಪುರಕ್ಕೆ ಬಂದು, ವೈಭವದಿಂದ ಸುಖದ್ಯೂತದಲ್ಲಿ ಆನಂದಿಸಿರಿ ಎಂದು ಧೃತರಾಷ್ಟ್ರ ಭೂಪತಿ ಹೇಳಿಕಳಿಸಿದ್ದಾನೆ.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ಬೆಸಸು: ಕೇಳು; ಕುಮಾರ: ಮಕ್ಕಳು; ಅಧ್ವರ: ಯಾಗ; ವ್ರತ: ನಿಯಮ; ಮಹಾ: ಶ್ರೇಷ್ಠ; ಭುಕ್ತ: ಅನುಭವಿಸಿದ; ಆದಿ: ಮುಂತಾದ; ಬಳಲು: ಆಯಾಸ; ವರ: ಶ್ರೇಷ್ಠ; ಸಭೆ: ಓಲಗ; ರಚಿಸಿ: ನಿರ್ಮಿಸಿ; ಬಿಜಯಂಗೈದು: ಬಂದು; ವಿಭವ: ಸಿರಿ, ಸಂಪತ್ತು; ಉತ್ಕರ: ಸಮೂಹ; ವಿಮಳ: ನಿರ್ಮಲ; ದ್ಯೂತ: ಪಗಡೆ, ಜೂಜು; ರಮಿಸು: ಆನಂದಿಸು;

ಪದವಿಂಗಡಣೆ:
ಧರಣಿಪತಿ +ಬೆಸಸಿದನು +ನೀವೈ
ವರು+ ಕುಮಾರರು+ ರಾಜಸೂಯ
ಅಧ್ವರ +ಮಹಾವ್ರತದ್+ಏಕ ಭುಕ್ತ +ಆದಿಯಲಿ +ಬಳಲಿದಿರಿ
ವರಸಭೆಯ +ರಚಿಸಿದರು +ಹಸ್ತಿನ
ಪುರಿಗೆ+ ಬಿಜಯಂಗೈದು +ವಿಭವ
ಉತ್ಕರದ +ವಿಮಳ+ದ್ಯೂತದಲಿ +ರಮಿಸುವುದು +ನೀವೆಂದ

ಅಚ್ಚರಿ:
(೧) ಒಂದು ಹೊತ್ತು ಊಟ ಎಂದು ಹೇಳಲು – ಏಕಭುಕ್ತ ಪದ ಪ್ರಯೋಗ