ಪದ್ಯ ೩೬: ಅಶ್ವತ್ಥಾಮನು ಕೌರವನಿಗೆ ಏನನ್ನು ಹೇಳಿದನು?

ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಮಾತನಾಡುತ್ತಾ, ಇಗೋ ಅಸ್ತ್ರಗಳೆಂಬ ಮಹಾ ಮಂತ್ರಗಳಿವೆ. ಮಹಾಧನಸ್ಸುಗಳೆಂಬ ತುಪ್ಪವಿದೆ. ಸವನಗಳು ಮೂವರಲ್ಲಿ ಒಬ್ಬೊಬ್ಬರಲ್ಲೂ ಇವೆ. ರಾಜ, ನೀನು ದೀಕ್ಷಿತನಾಗು. ಉಳಿದ ಪಾಂಡವರಿಗೂ ಅವರ ಸೇನೆಗೂ ಭೂಮಿವಶವಾಗುವುದೋ, ಸ್ವರ್ಗವೋ ನೋಡಬಹುದು ಎಂದು ನುಡಿದನು.

ಅರ್ಥ:
ಮಹಾ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಸ್ತ್ರ: ಶಸ್ತ್ರ; ಸಂತತಿ: ವಂಶ, ಪೀಳಿಗೆ; ಧನು: ಬಿಲ್ಲು; ಸತ್ಕೃತಿ: ಒಳ್ಳೆಯ ಕಾರ್ಯ; ಸವನ: ಯಜ್ಞ, ಯಾಗ, ಮಂಗಳ ಸ್ನಾನ; ಅಪೇಕ್ಷೆ: ಇಚ್ಛೆ, ಬಯಕೆ; ತ್ರೈ: ಮೂರು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಅವನಿಪತಿ: ರಾಜ; ಸೇಸೆದಳಿ: ದೀಕ್ಷಿತನಾಗು; ಸೇಸೆ: ಮಂಗಳಾಕ್ಷತೆ; ಮಿಕ್ಕ: ಉಳಿದ; ವಿರೋಧಿ: ವೈರಿ; ವರ್ಗ: ಗುಂಪು; ದಿವ: ಸ್ವರ್ಗ; ಧರೆ: ಭೂಮಿ; ನೋಡು: ವೀಕ್ಷಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಇವೆ +ಮಹಾಮಂತ್ರ+ಅಸ್ತ್ರ+ಸಂತತಿ
ಇವೆ +ಮಹಾಧನು+ರಾಜ್ಯ+ಸತ್ಕೃತಿ
ಸವನ+ ಸಾಪೇಕ್ಷಂಗಳಿವೆ +ತ್ರೈರಥಿಕರ್+ಒಬ್ಬರಲಿ
ಅವನಿಪತಿ +ನೀ +ಸೇಸೆದಳಿ+ ಮಿ
ಕ್ಕವರು +ಸೇನೆ +ವಿರೋಧಿ+ವರ್ಗಕೆ
ದಿವವೊ +ಧರೆಯೋ +ನೋಡಲಹುದ್+ಏಳೆಂದನಾ +ದ್ರೌಣಿ

ಅಚ್ಚರಿ:
(೧) ದಿವವೊ, ಧರೆಯೋ – ಪದಗಳ ಬಳಕೆ

ಪದ್ಯ ೨೬: ಕೃಷ್ಣನು ಅರ್ಜುನನನ್ನು ಹೇಗೆ ಉತ್ತೇಜಿಸಿದನು?

ಆಳ ಮಯವಖಿಳೋರ್ವಿ ಪದಹತ
ಧೂಳಿಮಯವಾಕಾಶ ರಥ ತುರ
ಗಾಳಿಮಯ ದಿಗುಜಾಲವೇನೆಂಬೆನು ಮಹಾದ್ಭುತವ
ಕಾಳೆಗಕೆ ನೀನಲ್ಲದವನಿಯೊ
ಳಾಳ ಕಾಣೆನು ಪಾರ್ಥ ಸಾಕಿ
ನ್ನೇಳು ಬಾಣವ ತೂಗು ಮಾತಾಡಿಸು ಮಹಾಧನುವ (ಭೀಷ್ಮ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೂಮಿಯ ತುಂಬಾ ಸೈನಿಕರು, ಆಕಾಶದ ತುಂಬಾ ಕಾಲಧೂಳು, ದಿಕ್ಕುಗಳೆಲ್ಲದರಲ್ಲೂ ರಥಗಳು, ಇಂತಹ ಶತ್ರು ಸೈನ್ಯವನ್ನು ಮರ್ದಿಸಲು, ಈ ಭೂಮಿಯಲ್ಲಿ ನಿನ್ನನ್ನು ಬಿಟ್ಟರೆ ಯಾವ ವೀರನೂ ಇಲ್ಲ. ಅರ್ಜುನಾ ಬಿಲ್ಲಿನ ಹೆದೆಯನ್ನು ಮಿಡಿ, ಬಾಣವನ್ನು ಹೂಡು.

ಅರ್ಥ:
ಆಳ: ಗಾಢತೆ; ಅಖಿಳ: ಎಲ್ಲಾ; ಊರ್ವಿ: ಭೂಮಿ; ಪದಹತ: ಕಾಲಾಳು; ಧೂಳು: ಮಣ್ಣಿನ ಕಣ; ಅವಕಾಶ: ಸಂದರ್ಭ ಒದಗು; ರಥ: ಬಂಡಿ; ತುರಗಾಳಿ: ಕುದುರೆಯ ಗುಂಪು; ದಿಗುಜಾಲ: ದಿಕ್ಕುಗಳು; ಅದ್ಭುತ: ಆಶ್ಚರ್ಯ; ಕಾಳೆಗ: ಯುದ್ಧ; ಅವನಿ: ಭೂಮಿ; ಕಾಣು: ತೋರು; ಬಾಣ: ಅಂಬು; ತೂಗು: ಇಳಿಬಿಡು; ಮಾತು: ನುಡಿ; ಧನು: ಚಾಪ, ಬಿಲ್ಲು;

ಪದವಿಂಗಡಣೆ:
ಆಳಮಯವ್+ ಅಖಿಳ+ಊರ್ವಿ+ ಪದಹತ
ಧೂಳಿಮಯವ್+ಆಕಾಶ+ ರಥ +ತುರ
ಗಾಳಿಮಯ +ದಿಗುಜಾಲವ್+ಏನೆಂಬೆನು +ಮಹಾದ್ಭುತವ
ಕಾಳೆಗಕೆ +ನೀನಲ್ಲದ್+ಅವನಿಯೊಳ್
ಆಳ+ ಕಾಣೆನು+ ಪಾರ್ಥ +ಸಾಕಿನ್
ಏಳು +ಬಾಣವ +ತೂಗು +ಮಾತಾಡಿಸು+ ಮಹಾಧನುವ

ಅಚ್ಚರಿ:
(೧) ಸಿದ್ಧನಾಗು ಎಂದು ಹೇಳುವ ಪರಿ – ಏಳು ಬಾಣವ ತೂಗು ಮಾತಾಡಿಸು ಮಹಾಧನುವ
(೨) ಆಳಮಯ, ಧೂಳಿಮಯ, ತುರಗಾಳಿಮಯ – ಮಯ ಪದದ ಬಳಕೆ