ಪದ್ಯ ೧೮: ಅರ್ಜುನನು ಏನು ಯೋಚಿಸಿ ಮಂಚದಿಂದ ಕೆಳಗಿಳಿದ?

ಹಾ ಮಹಾದೇವಿ ಯಿವಳಾ ಸು
ತ್ರಾಮನೋಲಗದೊಳಗೆ ನರ್ತನ
ರಾಮಣೀಯಕ ರಚನೆಯಲಿ ರಂಜಿಸಿದಳಾ ಸಭೆಯ
ಈ ಮಹಿಳೆಯಭಿವಂದನೀಯೆ ನಿ
ರಾಮಯದ ಶಶಿವಂಶ ಜನನಿ ಸ
ನಾಮೆಯಲ್ಲಾ ಶಿವಯೆನುತ ಮಣಿಮಂಚದಿಂದಿಳಿದ (ಅರಣ್ಯ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಓಹೋ! ಈ ದೇವಿಯು ಇಂದ್ರನ ಸಭೆಯಲ್ಲಿ ರಮಣೀಯವಾಗಿ ನೃತ್ಯವನ್ನು ಮಾಡಿ ರಂಜಿಸಿದಳಲ್ಲವೇ! ಇವಳು ಚಂದ್ರವಂಶಕ್ಕೆ ತಾಯಿಯಲ್ಲವೇ! ಇವಳು ಅಭಿವಂದನೆಗೆ ಯೋಗ್ಯಳು, ಶಿವ ಶಿವಾ ಇಲ್ಲಿವೆ ಬಂದಿದ್ದಾಳೆ ಎಂದು ಯೋಚಿಸುತ್ತಾ ಅರ್ಜುನನು ಮಣಿಮಂಚದಿಂದ ಕೆಳಗಿಳಿದನು.

ಅರ್ಥ:
ಸುತ್ರಾಮ: ಇಂದ್ರ; ಓಲಗ: ದರ್ಬಾರು; ನರ್ತನ: ನೃತ್ಯ; ರಾಮಣೀಯಕ: ಚೆಲುವು; ರಚನೆ: ನಿರ್ಮಿಸು; ರಂಜಿಸು: ಶೋಭಿಸು; ಸಭೆ: ದರ್ಬಾರು; ಮಹಿಳೆ: ಸ್ತ್ರೀ; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ನಿರಾಮಯ: ನೆಮ್ಮದಿ, ಸಂತೋಷ; ಶಶಿ: ಚಂದ್ರ; ವಂಶ: ಕುಲ; ಜನನಿ: ತಾಯಿ; ಸನಾಮ: ಶ್ರೇಷ್ಠವಾದ ಹೆಸರು; ಮಣಿ: ರತ್ನ; ಮಂಚ: ಪಲ್ಲಂಗ; ಇಳಿ: ಕೆಳಕ್ಕೆ ಬಾ;

ಪದವಿಂಗಡಣೆ:
ಹಾ +ಮಹಾದೇವಿ +ಇವಳಾ +ಸು
ತ್ರಾಮನ್+ಓಲಗದೊಳಗೆ +ನರ್ತನ
ರಾಮಣೀಯಕ+ ರಚನೆಯಲಿ+ ರಂಜಿಸಿದಳ್+ಆ +ಸಭೆಯ
ಈ+ ಮಹಿಳೆ+ಅಭಿವಂದನೀಯೆ +ನಿ
ರಾಮಯದ +ಶಶಿವಂಶ +ಜನನಿ +ಸ
ನಾಮೆಯಲ್ಲಾ+ ಶಿವ+ಎನುತ +ಮಣಿ+ಮಂಚದಿಂದ್+ಇಳಿದ

ಅಚ್ಚರಿ:
(೧) ರ ಕಾರದ ತ್ರಿವಳಿ ಪದ – ರಾಮಣೀಯಕ ರಚನೆಯಲಿ ರಂಜಿಸಿದಳಾ
(೨) ಊರ್ವಶಿಯನ್ನು ಹೊಗಳುವ ಪರಿ – ಈ ಮಹಿಳೆಯಭಿವಂದನೀಯೆ ನಿರಾಮಯದ ಶಶಿವಂಶ ಜನನಿ ಸನಾಮೆಯಲ್ಲಾ