ಪದ್ಯ ೮೨: ಅರ್ಜುನನು ಕೃಷ್ಣನನ್ನು ಹೇಗೆ ವರ್ಣಿಸಿದನು?

ಪರಮಪುಣ್ಯ ಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟಭುವನಶತ
ನಿರವಯವ ನಿರ್ದ್ವಂದ್ವ ನಿಸ್ಪೃಹ
ನಿರುಪಮಿತ ನಿರ್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ (ಭೀಷ್ಮ ಪರ್ವ, ೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ನೆನೆದ ಮಾತ್ರದಿಂದ ಪರಮಪುಣ್ಯವನ್ನು ಕೊಡುವವನೇ, ಪಾವನ ಚರಿತ್ರನೇ, ಸುಂದರವಾದ ವಿಲಾಸವುಳ್ಲವನೇ, ನಿರ್ಮಲನೇ, ಲೀಲೆಗಾಗಿ ಅನೇಕ ಭುವನಗಳನ್ನು ಪ್ರಕಟಿಸಿದವನೇ, ಅವಯವಗಳಿಲ್ಲದವನೇ, ದ್ವಂದ್ವಗಳಿಲ್ಲದವನೇ, ನಿಸ್ಪೃಹನೇ, ಸಾಟಿಯಿಲ್ಲದವನೇ, ಮಾಯೆಯನ್ನು ಗೆದ್ದವನೇ, ಕರುಣಾಸಾಗರನೇ, ಶ್ರೇಷ್ಠನೇ, ಸುಂದರ ರೂಪವುಳ್ಳವನೇ ನನ್ನನ್ನು ಕರುಣಿಸು ತಂದೆ ಎಂದು ಅರ್ಜುನನು ಬೇಡಿದನು.

ಅರ್ಥ:
ಪರಮ: ಶ್ರೇಷ್ಠ; ಪುಣ್ಯ: ಶುಭವಾದ; ಶ್ಲೋಕ: ದೇವತಾ ಸ್ತುತಿ; ಪಾವನ: ಮಂಗಳ; ಚರಿತ: ಕಥೆ; ಚಾರು: ಸುಂದರ; ವಿಲಾಸ: ಅಂದ, ಸೊಬಗು; ನಿರ್ಮಲ: ಶುದ್ಧ; ವರ: ಶ್ರೇಷ್ಠ; ಕಥನ: ಹೊಗಳುವುದು; ಪ್ರಯುಕ್ತ: ನಿಮಿತ್ತ; ಪ್ರಕಟ: ತೋರು; ಭುವನ: ಜಗತ್ತು; ಶತ: ನೂರು; ನಿರವಯವ: ಅವಯವಗಳಿಲ್ಲದಿರುವವ; ನಿರ್ದ್ವಂದ್ವ: ದ್ವಂದ್ವಗಳಿಲ್ಲದಿರುವವ; ನಿಸ್ಪೃಹ:ಮುಟ್ಟಲಾಗದ; ನಿರ್ಮಾಯ: ಮಾಯೆಯನ್ನು ಮೀರಿದವನು; ಕರುಣಾಕರ: ದಯಾಸಾಗರ; ಮಹಾತ್ಮ: ಶ್ರೇಷ್ಠ; ಮನೋಜ: ಮನ್ಮಥ; ವಿಗ್ರಹ: ರೂಪ; ಕರುಣಿಸು: ದಯೆತೋರು;

ಪದವಿಂಗಡಣೆ:
ಪರಮಪುಣ್ಯ+ ಶ್ಲೋಕ +ಪಾವನ
ಚರಿತ +ಚಾರುವಿಲಾಸ +ನಿರ್ಮಲ
ವರ +ಕಥನ +ಲೀಲಾ +ಪ್ರಯುಕ್ತ +ಪ್ರಕಟ+ಭುವನ+ಶತ
ನಿರವಯವ +ನಿರ್ದ್ವಂದ್ವ +ನಿಸ್ಪೃಹ
ನಿರುಪಮಿತ +ನಿರ್ಮಾಯ +ಕರುಣಾ
ಕರ+ ಮಹಾತ್ಮ +ಮನೋಜ+ವಿಗ್ರಹ +ಕರುಣಿಸೆನಗೆಂದ

ಅಚ್ಚರಿ:
(೧) ನಿ ಕಾರದ ಪದಗಳು – ನಿರವಯವ ನಿರ್ದ್ವಂದ್ವ ನಿಸ್ಪೃಹ ನಿರುಪಮಿತ ನಿರ್ಮಾಯ

ಪದ್ಯ ೧೮: ಧರ್ಮಜನು ವಿರಾಟ ರಾಜನಿಗೆ ಏನು ಬೇಡಿದನು?

ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು
ಇತ್ತಪೆವು ಬೇಡಿದುದ ನಾವೆನೆ
ಸುತ್ತ ಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ (ವಿರಾಟ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ವಿರಾಟನು ಧರ್ಮಜನನ್ನು ನೋಡಿ, ಅತ್ಯುತ್ತಮವಾದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ಮಹಾತ್ಮರನ್ನು ಕಂಡು ನಾವು ಬದುಕಿದುದು ಸಾರ್ಥಕವಯಿತು. ಎಲ್ಲಿಂದ ಬಂದಿರಿ? ಇತ್ತ ಬನ್ನಿ, ನೀವು ಬೇಡಿದುದನ್ನು ನಾವು ಕೊಡುತ್ತೇವೆ ಎಂದು ಉಪಚರಿಸಿದನು. ಧರ್ಮಜನು ನಾವು ಇದ್ದ ರಾಜನ ಓಲಗವು ಇಲ್ಲದಂತಾಯಿತು. ಆದುದರಿಂದ ರಾಜಾಶ್ರಯವನ್ನು ಬೇಡುತ್ತಿದ್ದೇವೆ, ಸುತ್ತ ಬಳಸಿ ಮಾತಾಡುವವರು ನಾವಲ್ಲ ಎಂದು ಧರ್ಮಜನು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡು; ಹಿರಿಯ: ದೊಡ್ಡವ; ಎತ್ತಣ: ಎಲ್ಲಿಂದ; ಐತಂದು: ಬಂದು ಸೇರು; ಅತ್ಯುತ್ತಮ: ಶ್ರೇಷ್ಠ; ವೇಷ: ರೂಪ; ಮಹಾತ್ಮ: ಶ್ರೇಷ್ಠ; ಕಂಡು: ನೋಡು; ಬದುಕು: ಜೀವಿಸು; ಬೇಡು: ಕೇಳು; ಸುತ್ತ: ಎಲ್ಲಾ ಕಡೆ; ಬಳಸು: ಆವರಿಸುವಿಕೆ; ರಾಜಸೇವೆ: ರಾಜ ಕಾರ್ಯ; ನಿಮಿತ್ತ: ಕಾರಣ; ಬಂದು: ಆಗಮಿಸು; ಮುನ್ನ: ಮುಂಚೆ; ಓಲಗ: ದರ್ಬಾರು; ಇತ್ತು: ನೀಡು;

ಪದವಿಂಗಡಣೆ:
ಇತ್ತ +ಬಿಜಯಂಗೈಯಿ+ ಹಿರಿಯರಿದ್
ಎತ್ತಣಿಂದ್+ಐತಂದಿರೈ+ ಅ
ತ್ಯುತ್ತಮದ +ವೇಷದ +ಮಹಾತ್ಮರ+ ಕಂಡು +ಬದುಕಿದೆವು
ಇತ್ತಪೆವು+ ಬೇಡಿದುದ+ ನಾವೆನೆ
ಸುತ್ತ +ಬಳಸೆವು+ ರಾಜಸೇವೆ +ನಿ
ಮಿತ್ತ +ಬಂದೆವು+ ಮುನ್ನಿನ್+ಓಲಗವ್+ಅಂತರಿಸಿತಾಗಿ

ಅಚ್ಚರಿ:
(೧) ಇಲ್ಲದಂತಾಗು ಎಂದು ಹೇಳಲು – ಅಂತರಿಸಿತಾಗು ಪದದ ಬಳಕೆ

ಪದ್ಯ ೨೬: ಭೀಮನು ಹನುಮನಿಗೇಕೆ ನಮಸ್ಕರಿಸಿದ?

ಬಳಿಕ ಸೌಗಂಧಿಕದ ಪವನನ
ಬಳಿವಿಡಿದು ನಾ ಬಂದೆನೆಮ್ಮಯ
ಲಲನೆ ಕಾಮಿಸಿದಳು ಸಹಸ್ರದಳಾಬ್ಜದರ್ಶನವ
ತಿಳಿಯಲಿದು ವೃತ್ತಾಂತ ನೀನ
ಸ್ಖಲಿತ ಬಲ ನೀನಾರು ನಿನ್ನನು
ತಿಳುಹಬೇಕು ಮಹಾತ್ಮ ಕಪಿ ನೀನೆನುತ ಕೈಮುಗಿದ (ಅರಣ್ಯ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನು ತನ್ನ ಪರಿಚಯವನ್ನು ಮುಂದುವರಿಸುತ್ತಾ, ಈ ಸಹಸ್ರದಳ ಪದ್ಮದ ಸುಗಂಧವು ಗಾಳಿಯೊಡನೆ ಕೂಡಿ ನಮ್ಮಬಳಿ ಬರಲು, ನಮ್ಮ ಪತ್ನಿ ದ್ರೌಪದಿ ಇದನ್ನು ಆಘ್ರಣಿಸಿ ಮೋಹಿತಳಾಗಿ ಇದನ್ನು ನೋಡಲು ಬಯಸಿದಳು. ಆ ಸುಗಂಧದ ಗಾಳಿಯ ಜಾಡಿನಲ್ಲಿ ನಾನು ಬಂದಿದ್ದೇನೆ. ಇದು ನನ್ನ ವಿಚಾರ. ಎಲೈ ಮಹಾ ಪರಾಕ್ರಮಶಾಲಿಯಾದ ಮಹಾತ್ಮನಾದ ಕಪಿಯೇ, ನೀವು ಯಾರೆಂದು ತಿಳಿಸಿ ಎಂದು ಭೀಮನು ನಮಸ್ಕರಿಸುತ್ತಾ ಹನುಮನನ್ನು ಕೇಳಿದನು.

ಅರ್ಥ:
ಬಳಿಕ: ನಂತರ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪವನ: ಗಾಳಿ, ವಾಯು; ಬಳಿ: ಹತ್ತಿರ; ಹಿಡಿ: ಗ್ರಹಿಸು; ಬಂದೆ: ಆಗಮಿಸು; ಲಲನೆ: ಹೆಣ್ಣು, ಸ್ತ್ರೀ; ಕಾಮಿಸು: ಇಚ್ಛಿಸು; ಸಹಸ್ರ: ಸಾವಿರ; ದಳ: ಎಸಳು; ಅಬ್ಜ: ತಾವರೆ; ದರ್ಶನ: ನೋಟ; ತಿಳಿ: ಅರಿ; ವೃತ್ತಾಂತ: ವಾರ್ತೆ; ಅಸ್ಖಲಿತ: ಚಲನೆಯಿಲ್ಲದ; ಬಲ: ಶಕ್ತಿ; ತಿಳುಹ: ಅರಿತುಕೊಳ್ಳು; ಮಹಾತ್ಮ: ಶ್ರೇಷ್ಠ; ಕಪಿ: ಮಂಗ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಬಳಿಕ +ಸೌಗಂಧಿಕದ +ಪವನನ
ಬಳಿವಿಡಿದು +ನಾ +ಬಂದೆನ್+ಎಮ್ಮಯ
ಲಲನೆ +ಕಾಮಿಸಿದಳು +ಸಹಸ್ರ+ದಳ+ಅಬ್ಜ+ದರ್ಶನವ
ತಿಳಿಯಲಿದು +ವೃತ್ತಾಂತ +ನೀನ್
ಅಸ್ಖಲಿತ +ಬಲ+ ನೀನಾರು+ ನಿನ್ನನು
ತಿಳುಹಬೇಕು +ಮಹಾತ್ಮ +ಕಪಿ+ ನೀನ್+ಎನುತ +ಕೈಮುಗಿದ

ಅಚ್ಚರಿ:
(೧) ಭೀಮನು ನಡೆದು ಬಂದ ಪರಿ – ಸೌಗಂಧಿಕದ ಪವನನ ಬಳಿವಿಡಿದು ನಾ ಬಂದೆನ್

ಪದ್ಯ ೨೧: ಧೌಮ್ಯರು ಯಾರನ್ನು ಭಜಿಸಲು ಹೇಳಿದರು?

ಹೇಳಿರೈ ಭೂಸುರರು ಋಷಿಗಳು
ಮೇಲೆ ಹತ್ತುವುಪಾಯವನು ಋಷಿ
ಜಾಲದೊಳಗೆಂದೆನಲು ನುಡಿದನು ಧೌಮ್ಯ ನಸುನಗುತ
ಹೇಳಲರಿದಿದ ನಿಮ್ಮ ಸಲಹುವ
ಬಾಲಕೇಳಿಯ ಕೃಷ್ಣ ಬಲ್ಲನು
ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ (ಅರಣ್ಯ ಪರ್ವ, ೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧರ್ಮಜನಿಗೆ ಯಾವ ಮಾರ್ಗವು ತೋರದೆ ತನ್ನ ಜೊತೆಯಲ್ಲಿದ್ದ ಬ್ರಾಹ್ಮಣರ ಕಡೆ ಮುಖಮಾಡಿ, ಈ ಹಣ್ಣನ್ನು ಮತ್ತೆ ಮರದ ಮೇಲಿರಿಸುವ ಉಪಾಯವನ್ನು ಋಷಿಗಳಲೊಬ್ಬರು ತಿಳಿಸಿರಿ ಎಂದು ಕೇಳಲು, ಆಗ ಧೌಮ್ಯನು ಇದರ ಉಪಾಯವನ್ನು ಹೇಳಿಕೊಡಲು ನಮ್ಮಿಂದ ಸಾಧ್ಯವಿಲ್ಲ, ನಿಮ್ಮ ರಕ್ಷಕನೂ, ಬಾಲ ಲೀಲೆಗಳಿಂದ ಪ್ರಸಿದ್ಧನಾದ ಶ್ರೀಕೃಷ್ಣನೇ ಇದಕ್ಕೆ ಉಪಾಯವನ್ನು ಸೂಚಿಸಬೇಕು, ನೀವು ಕಾಲಹರಣ ಮಾಡದೆ ಅವನನ್ನು ಭಜಿಸಿರಿ ಎಂದು ಹೇಳಿದರು.

ಅರ್ಥ:
ಹೇಳು: ತಿಳಿಸು; ಭೂಸುರ: ಬ್ರಾಹ್ಮಣ; ಋಷಿ: ಮುನಿ; ಹತ್ತು: ಮೇಲೇರು; ಉಪಾಯ: ಸಲಹೆ, ಯುಕ್ತಿ; ಜಾಲ: ಬಲೆ; ನುಡಿ: ಮಾತಾಡು; ನಗು: ಸಂತಸ; ಅರಿ: ತಿಳಿ; ಸಲಹು: ಕಾಪಾಡು; ಬಾಲ: ಚಿಕ್ಕವ; ಕೇಳಿ: ಕ್ರೀಡೆ; ಬಲ್ಲನು: ತಿಳಿದವ; ಕಾಲ: ಸಮಯ; ನೂಕು: ತಳ್ಳು; ಮಹಾತ್ಮ: ಶ್ರೇಷ್ಠ; ಭಜಿಸು: ಆರಾಧಿಸು;

ಪದವಿಂಗಡಣೆ:
ಹೇಳಿರೈ +ಭೂಸುರರು +ಋಷಿಗಳು
ಮೇಲೆ+ ಹತ್ತುವ್+ಉಪಾಯವನು+ ಋಷಿ
ಜಾಲದೊಳಗೆಂದ್+ಎನಲು +ನುಡಿದನು+ ಧೌಮ್ಯ +ನಸುನಗುತ
ಹೇಳಲ್+ಅರಿದಿದ+ ನಿಮ್ಮ +ಸಲಹುವ
ಬಾಲ+ಕೇಳಿಯ +ಕೃಷ್ಣ +ಬಲ್ಲನು
ಕಾಲವನು +ನೂಕದೆ +ಮಹಾತ್ಮನ +ಭಜಿಸು +ನೀನೆಂದ

ಅಚ್ಚರಿ:
(೧) ಕೃಷ್ಣನ ಗುಣಗಾನ – ನಿಮ್ಮ ಸಲಹುವ ಬಾಲಕೇಳಿಯ ಕೃಷ್ಣ ಬಲ್ಲನು

ಪದ್ಯ ೬೨: ಶಿಶುಪಾಲನನ್ನು ಜಡಾತ್ಮನೆಂದು ಭೀಷ್ಮರು ಏಕೆ ಕರೆದರು?

ಇಂಗಿತಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣಪ
ಥಂಗಳಲಿ ಗೋಚರಿಸಲರಿವುದು ಲೋಕವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯನೃಪನೆಂದ (ಸಭಾ ಪರ್ವ, ೧೦ ಸಂಧಿ, ೬೨ ಪದ್ಯ)

ತಾತ್ಪರ್ಯ:
ಉತ್ತಮರಾದವರು ಆಶಯವನ್ನು ತಿಳಿದೇ ಕಾರ್ಯಪ್ರವೃತ್ತರಾಗುತ್ತಾರೆ, ಮಧ್ಯಮರು ಕೇಳಿ ತಿಳಿಯುತ್ತಾರೆ, ಅಧಮರು ಕಣ್ಣಿನಲ್ಲಿ ನೋಡಿ ತಿಳಿಯುತ್ತಾರೆ. ಈ ಶಿಶುಪಾಲನಾದರೋ ಕಣ್ಣಿನಿಂದ ನೋಡಿ, ಕಿವಿಯಿಂದ ಕೇಳಿ ಶ್ರೀಕೃಷ್ಣನ ಇಂಗಿತವನ್ನು ಅರಿಯದ ಜಡಾತ್ಮ ಎಂದು ಭೀಷ್ಮರು ಶಿಶುಪಾಲನನ್ನು ನಿಂದಿಸಿದರು.

ಅರ್ಥ:
ಇಂಗಿತ: ಆಶಯ, ಅಭಿಪ್ರಾಯ; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಮಧ್ಯಮ: ತಾಮಸ ಜೀವಿ, ಸಾಧಾರಣವಾದ; ಕರ್ಣ: ಕಿವಿ; ಪಥ: ದಾರಿ; ಗೋಚರಿಸು: ತೋರು; ಲೋಕ: ಜಗತ್ತು; ವೃತ್ತಿ: ಸ್ಥಿತಿ, ನಡವಳಿಕೆ; ಕಂಗಳು: ನೇತ್ರ; ಕಂಡು: ನೋಡಿ; ಅರಿ: ತಿಳಿ; ಅಧಮ: ಕೀಳು, ನೀಚ; ಕಿವಿ: ಕರ್ಣ; ಮೇಣ್: ಅಥವ; ಹರಿ: ವಿಷ್ಣು; ಜಡ: ಅಚೇತನವಾದುದು, ಚಟುವಟಿಕೆಯಿಲ್ಲದ; ಚೈದ್ಯ: ಶಿಶುಪಾಲ; ನೃಪ: ರಾಜ;

ಪದವಿಂಗಡಣೆ:
ಇಂಗಿತಲ್+ಅರಿವುದು +ಮಹಾತ್ಮರಿಗ್
ಅಂಗವಿದು+ ಮಧ್ಯಮರು +ಕರ್ಣಪ
ಥಂಗಳಲಿ +ಗೋಚರಿಸಲ್+ಅರಿವುದು +ಲೋಕ+ವೃತ್ತಿಯಿದು
ಕಂಗಳಲಿ +ಕಂಡ್+ಅರಿವರ್+ಅಧಮರು
ಕಂಗಳಲಿ +ಕಿವಿಗಳಲಿ +ಮೇಣ್ +ಹರಿ
ಯಿಂಗಿತವನ್+ಅರಿಯದ +ಜಡಾತ್ಮನು +ಚೈದ್ಯ+ನೃಪನೆಂದ

ಅಚ್ಚರಿ:
(೧) ಉತ್ತಮ, ಮಧ್ಯಮ ಮತ್ತು ಅಧಮರ ಗುಣವಿಶೇಷಗಳನ್ನು ತಿಳಿಸುವ ಪದ್ಯ
(೨) ಪಥಂಗಳಲಿ, ಕಂಗಳಲಿ, ಕಿವಿಗಳಲಿ – ಪ್ರಾಸಪದಗಳ ಪ್ರಯೋಗ

ಪದ್ಯ ೩: ಯಾರು ಜಗತ್ತಿನಲ್ಲಿ ಶ್ರೇಷ್ಠರು?

ಘನ ರಜೋಗುಣದಲ್ಲಿ ಚತುರಾ
ನನ ತಮೋಗುಣದಲ್ಲಿ ಶಂಕರ
ನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ
ಘನ ಜಗನ್ಮಯನಾಗಿ ಸರ್ವಾ
ತ್ಮನು ಮಹೇಶ್ವರನೆನಿಪನೀತನ
ನೆನಹನೀತನ ನಿಜವನರಿವ ಮಹಾತ್ಮರಾರೆಂದ (ಸಭಾ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ರಜೋಗುಣದಲ್ಲಿ ಹಿರಣ್ಯಗರ್ಭ ಬ್ರಹ್ಮನು, ತಮೋ ಗುಣದಲ್ಲಿ ಶಂಕರನು, ಸತ್ವಗುಣದಲ್ಲಿ ಶ್ರೀಮನ್ನಾರಾಯಣನು, ಇವನೇ ಜಗತ್ತಾಗಿದ್ದಾನೆ, ಎಲ್ಲರ ಜೀವ ಉಸಿರಲ್ಲೂ ಇವನೇ ಇರುವವನು, ಇವನೇ ಮಹೇಶ್ವರನು, ಇವನ ಇಚ್ಛೆಯೇನು, ಇವನ ಸ್ವರೂಪವೇನು ಎನ್ನುವುದನ್ನು ತಿಳಿದವರು ಮಹಾತ್ಮರು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಘನ: ಶ್ರೇಷ್ಠ; ರಜ: ರಜಸ್ಸು, ಮೂರು ಗುಣಗಳಲ್ಲಿ ಒಂದು; ಚತುರ: ನಾಲ್ಕು; ಆನನ: ಮುಖ; ಚತುರಾನನ: ಬ್ರಹ್ಮ; ತಮ: ಕತ್ತಲೆ, ಅಂಧಕಾರ, ಗುಣಗಳಲ್ಲಿ ಒಂದು; ಶಂಕರ: ಶಿವ; ಸತ್ವ: ಒಳ್ಳೆಯ; ಗುಣ: ನಡತೆ, ಸ್ವಭಾವ; ಗತಿ: ಚಲನೆ; ವಿಷ್ಣು: ನಾರಾಯಣ; ಜಗ: ಜಗತ್ತು, ವಿಶ್ವ; ಮಯ: ಆವರಿಸು; ಸರ್ವಾತ್ಮ: ಎಲ್ಲರ ಜೀವ, ಉಸಿರು; ಮಹೇಶ್ವರ: ದೇವರ ದೇವ; ನೆನಹು: ಜ್ಞಾಪಿಸಿ, ಮನನ; ನಿಜ: ದಿಟ, ಸತ್ಯ; ಅರಿ: ತಿಳಿ; ಮಹಾತ್ಮ: ಶ್ರೇಷ್ಠ;

ಪದವಿಂಗಡಣೆ:
ಘನ +ರಜೋಗುಣದಲ್ಲಿ+ ಚತುರಾ
ನನ +ತಮೋಗುಣದಲ್ಲಿ+ ಶಂಕರನ್
ಎನಿಸಿ +ಸತ್ವಗುಣಾನು+ಗತಿಯಲಿ+ ವಿಷ್ಣುವೆಂದೆನಿಸಿ
ಘನ +ಜಗನ್ಮಯನಾಗಿ+ ಸರ್ವಾ
ತ್ಮನು +ಮಹೇಶ್ವರನ್+ಎನಿಪನ್+ಈತನ
ನೆನಹನ್+ಈತನ +ನಿಜವನರಿವ+ ಮಹಾತ್ಮರಾರೆಂದ

ಅಚ್ಚರಿ:
(೧) ಮೂರು ಗುಣಗಳ ವಿವರಣೆ
(೨) ಕೃಷ್ಣನ ಗುಣಗಾನ – ಜಗನ್ಮಯ, ಸರ್ವಾತ್ಮ, ಮಹೇಶ್ವರ

ಪದ್ಯ ೩೬: ದುರ್ಯೋಧನನು ಕೃಷ್ಣನಿಗೆ ಯಾವ ರೀತಿ ವ್ಯಂಗ್ಯ ಮಾತುಗಳನಾಡಿದನು?

ಬೇಡಿದೊಂದೊಂದೂರು ನಮ್ಮಯ
ನಾಡ ತಲೆಮಂಡೆಗಳು ರಾಜ್ಯದ
ರೂಢಿ ಐದೂರುಗಳ ಬಳವಿಗೆ ಹಸ್ತಿನಾನಗರ
ಬೇಡಲರಿವನು ಮಾನನಿಧಿ ಕೊಂ
ಡಾಡಲೇತಕೆ ಧರೆಯ ನೀರಡಿ
ಮಾಡಿಕೊಂಡು ಮಹಾತ್ಮ ನಿನಗಂಜುವೆನು ನಾನೆಂದ (ಉದ್ಯೋಗ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೃಷ್ಣನಿಗೆ ವ್ಯಂಗ್ಯರೀತಿಯಲ್ಲಿ ದುರ್ಯೋಧನನು ಮಾತನಾಡಿಸುತ್ತಾ, ನೀನು ಬೇಡಿದ ಒಂದೊಂದು ಊರು ನಮ್ಮ ದೇಶದ ಕಳಶವಿದ್ದಂತೆ, ನಮ್ಮ ದೇಶದ ಅಭಿವೃದ್ಧಿಯು ಈ ಐದು ಊರುಗಳ ಬೆಳವಣಿಗೆಗಳಿಂದವಾಗುತ್ತದೆ ಅದರಿಂದಲೇ ಹಸ್ತಿನಾಪುರಕ್ಕೆ ಹಿರಿಮೆ. ಈ ಗೌರವಾನ್ವಿತ ದೊಡ್ಡಮನುಷ್ಯ (ಮಾನನಿಧಿ) ಇದನ್ನು ತಿಳಿದೂ ಕೇಳುತ್ತಿದ್ದಾನೆ. ಹಿಂದೆ ವಾಮನರೂಪದಲ್ಲಿ ಇವನು ಎರಡೇ ಹೆಜ್ಜೆಗೆ ಭೂಮಿಯನ್ನು ಅಳೆದವನೆಂದು ನೀವೆಲ್ಲ ಹೇಳುತ್ತೀರಿ, ಅಯ್ಯಾ ಮಹಾತ್ಮ ಕೃಷ್ಣ ನಿನಗೆ ನಾನು ಹೆದರುತ್ತೇನೆ ಎಂದು ದುರ್ಯೋಧನನು ನುಡಿದನು.

ಅರ್ಥ:
ಬೇಡು: ಕೇಳು, ಯಾಚಿಸು; ಊರು: ಪ್ರದೇಶ, ರಾಜ್ಯ; ನಾಡು: ರಾಷ್ಟ್ರ; ತಲೆ: ಶಿರ; ಮಂಡೆ: ತಲೆ; ರಾಜ್ಯ: ದೇಶ; ರೂಢಿ:ಭೂಮಿ, ಧರೆ; ಬಳವಿ:ಬೆಳವಣಿಗೆ; ನಗರ: ಪಟ್ಟಣ; ಅರಿ: ತಿಳಿ; ಮಾನ:ಮರ್ಯಾದೆ, ಗೌರವ; ಕೊಂಡಾಡು: ಹೊಗಳು; ಧರೆ: ಭೂಮಿ; ನೀರಡಿ: ಪಾತಾಳ; ಮಾಡು: ಆಚರಿಸು; ಮಹಾತ್ಮ: ದೊಡ್ಡಮನುಷ್ಯ, ಶ್ರೇಷ್ಠ; ಅಂಜು: ಹೆದರು;

ಪದವಿಂಗಡಣೆ:
ಬೇಡಿದ್+ಒಂದೊಂದ್+ಊರು +ನಮ್ಮಯ
ನಾಡ +ತಲೆಮಂಡೆಗಳು +ರಾಜ್ಯದ
ರೂಢಿ +ಐದೂರುಗಳ +ಬಳವಿಗೆ +ಹಸ್ತಿನಾನಗರ
ಬೇಡಲ್+ಅರಿವನು +ಮಾನನಿಧಿ+ ಕೊಂ
ಡಾಡಲ್+ಏತಕೆ +ಧರೆಯ +ನೀರಡಿ
ಮಾಡಿಕೊಂಡು+ ಮಹಾತ್ಮ +ನಿನಗ್+ಅಂಜುವೆನು +ನಾನೆಂದ

ಅಚ್ಚರಿ:
(೧) ಗುಣವಾಚಕಗಳ ಬಳಕೆ: ಮಾನನಿಧಿ, ಧರೆಯ ನೀರಡಿ ಮಾಡಿಕೊಂಡ ಮಹಾತ್ಮ
(೨) ಊರು, ರಾಜ್ಯ, ನಗರ, ನಾಡು – ಭೂಮಿಯನ್ನು ಸೂಚಿಸುವ ಸಮನಾರ್ಥಕ ಪದಗಳು

ಪದ್ಯ ೩೯: ಸಿರಿಯುಳ್ಳವನನ್ನು ಲೋಕ ಹೇಗೆ ಭಾವಿಸುತ್ತದೆ?

ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲ ಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐಶ್ವರ್ಯವನ್ನು ಸಮಾಜ ಹೇಗೆ ನೋಡುತ್ತದೆಂದು ವಿದುರ ಈ ಪದ್ಯದಲ್ಲಿ ತಿಳಿಸಿದ್ದಾನೆ. ಐಶ್ವರ್ಯವಿದ್ದವನೇ ಒಳ್ಳೆಯ ಕುಲದಲ್ಲಿ ಜನಿಸಿದವನು, ಐಶ್ವರ್ಯವಿದ್ದವನೇ ಪಂಡಿತನು, ಅವನೆ ಮಹಾತ್ಮನು, ಅವನಲ್ಲಿ ಸಕಲ ಸದ್ಗುಣಗಳೂ ಇವೆ, ಅವನೇ ಒಳ್ಳೆಯ ಶೀಲವಂತ ಎಂದು ಲೋಕ ಭಾವಿಸುತ್ತದೆ. ಐಶ್ವರ್ಯವಿಲ್ಲದವನು ಸ್ವಯಂ ಶಿವನೇ ಆಗಿದ್ದರೂ ಅವನನ್ನು ಲಕ್ಷಿಸುವುದಿಲ್ಲ.

ಅರ್ಥ:
ಸಿರಿ: ಐಶ್ವರ್ಯ; ಉಳ್ಳವ: ಇರುವ; ಕುಲಜ: ಒಳ್ಳೆಕುಲದಲ್ಲಿ ಹುಟ್ಟಿದ; ವಿದಗ್ಧ: ವಿದ್ವಾಂಸ; ಮಹಾತ್ಮ: ಶ್ರೇಷ್ಠ; ಸಕಲ: ಎಲ್ಲಾ; ಗುಣ: ನಡತೆ, ಸ್ವಭಾವ; ಸುಶೀಲ: ಒಳ್ಳೆಯ ನಡತೆ, ಸದಾಚಾರ; ರಹಿತ: ಇಲ್ಲದ ಸ್ಥಿತಿ; ಶಿವ: ಈಶ್ವರ; ಸರಕು:ಲಕ್ಷ್ಯ; ಲೋಕ: ಜಗತ್ತು; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸಿರಿಯನ್+ಉಳ್ಳವನವನೆ+ ಕುಲಜನು
ಸಿರಿಯನ್+ಉಳ್ಳವನೇ +ವಿದಗ್ಧನು
ಸಿರಿಯನ್+ಉಳ್ಳವನೇ +ಮಹಾತ್ಮನು +ಸಕಲ +ಗುಣಯುತನು
ಸಿರಿಯನ್+ಉಳ್ಳವನೇ +ಸುಶೀಲನು
ಸಿರಿರಹಿತ+ ಶಿವನಾದೊಡ್+ಆಗಲಿ
ಸರಕು +ಮಾಡದು +ಲೋಕವ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಸಿರಿ – ೫ ಸಾಲಿನ ಮೊದಲ ಪದ
(೨) ಸಿರಿಯಿದ್ದವರನ್ನು ೫ ರೀತಿ ಸಮಾಜ ಗುರುತಿಸುತ್ತದೆ, ಕುಲಜ, ವಿದಗ್ಧ, ಮಹಾತ್ಮ, ಗುಣಯುತ, ಸುಶೀಲ