ಪದ್ಯ ೪೮: ಧೃತರಾಷ್ಟ್ರ ತನ್ನ ಮಗನ ಬಗ್ಗೆ ಏನು ಹೇಳಿದ?

ಸತಿಯರಲಿ ನಿಮ್ಮವ್ವೆ ಸುಪತಿ
ವ್ರತೆ ಮಹಾಖಳ ನೀನು ಬೀಜ
ಸ್ಥಿತಿಯಲೂಣಯವಿಲ್ಲ ನಿನ್ನಯ ಬುದ್ಧಿ ದೊಷವಿದು
ಕೃತಕವೋ ಸಹಜವೊ ನವೀನ
ಸ್ಥಿತಿಯ ಕಂಡೆನು ಶಿವ ಶಿವಾ ದು
ರ್ಮತಿಗಳಾವುದ ನೆನೆಯರೆಂದನು ಸುಯ್ದು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೪೮
ಪದ್ಯ)

ತಾತ್ಪರ್ಯ:
ಸ್ತ್ರೀಯರಲ್ಲಿ ನಿನ್ನ ತಾಯಿ ಅತ್ಯಂತ ಪತಿವ್ರತೆ, ನೀನೋ ಮಹಾದುಷ್ಟ ಅಸುರ ಬುದ್ಧಿಯುಳ್ಳವನು. ಮೂಲದಲ್ಲೇನೂ ದೋಷವಿಲ್ಲ ಆದರೆ ಇದು ನಿನ್ನ ಬುದ್ಧಿಯ ದೋಷ. ಇದೇನು ಕೃತಕವಾಗು ಉಂಟಾಯಿತೋ ಅಥವ ಇರುವುದೇ ಹೀಗೆಯೋ ತಿಳಿಯದಾಗಿದೆ. ಶಿವ ಶಿವಾ ದುರ್ಮತಿಯುಳ್ಳವರು ಎಂತಹ ಹೀನವಿಚಾರವನ್ನೂ ನೆನೆಯದೆ ಬಿಟ್ಟಾರು ಎಂದು ಧೃತರಾಷ್ಟ್ರ ನಿಟ್ಟುಸಿರು ಬಿಟ್ಟನು.

ಅರ್ಥ:
ಸತಿ: ಪತ್ನಿ; ಅವ್ವೆ: ಅಮ್ಮ; ಪತಿವ್ರತೆ: ಸಾಧ್ವಿ, ಗರತಿ; ಖಳ: ದುಷ್ಟ; ಮಹಾ: ದೊಡ್ಡ; ಬೀಜ: ಮೂಲ; ಸ್ಥಿತಿ: ಇರವು, ಅಸ್ತಿತ್ವ; ಊಣ:ತೊಂದರೆ; ಬುದ್ಧಿ: ಮತಿ; ದೋಷ: ಕುಂದು, ಕಳಂಕ; ಕೃತಕ: ಕಪಟ; ಸಹಜ: ಸ್ವಾಭಾವಿಕವಾದುದು; ನವೀನ: ಹೊಸ; ಸ್ಥಿತಿ: ಇರವು, ಅಸ್ತಿತ್ವ; ಕಂಡೆ: ನೋಡು; ದುರ್ಮತಿ: ಕೆಟ್ಟಬುದ್ಧಿ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಸುಯ್ದು: ನಿಟ್ಟುಸಿರು;

ಪದವಿಂಗಡಣೆ:
ಸತಿಯರಲಿ+ ನಿಮ್ಮವ್ವೆ+ ಸುಪತಿ
ವ್ರತೆ+ ಮಹಾಖಳ+ ನೀನು +ಬೀಜ
ಸ್ಥಿತಿಯಲ್+ಊಣಯವಿಲ್ಲ+ ನಿನ್ನಯ +ಬುದ್ಧಿ +ದೊಷವಿದು
ಕೃತಕವೋ +ಸಹಜವೊ+ ನವೀನ
ಸ್ಥಿತಿಯ +ಕಂಡೆನು +ಶಿವ +ಶಿವಾ+ ದು
ರ್ಮತಿಗಳ್+ಆವುದ+ ನೆನೆಯರ್+ಎಂದನು +ಸುಯ್ದು +ಧೃತರಾಷ್ಟ್ರ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಮಹಾಖಳ ನೀನು; ನಿನ್ನಯ ಬುದ್ಧಿ ದೊಷವಿದು
(೨) ಕೃತಕ, ಸಹಜ – ವಿರುದ್ಧ ಪದ

ಪದ್ಯ ೭: ಕೃಷ್ಣನ ಮಾತು ಕೇಳಿ ಆಸ್ಥಾನವು ಹೇಗಾಯಿತು?

ವಿದುರನುತ್ಸವ ಕೃಪನ ಸಮ್ಮುದ
ನದಿಯ ಮಗನೊಲವಂಧನೃಪನ
ಭ್ಯುದಯ ಕೇಳೆಂದಸುರರಿಪು ನಯ ನುಡಿಯ ಗಡಣಿಸಲು
ಮದದ ಮೈಗಾಣಿಕೆಯ ಮನ ಲೇ
ಪದ ಮಹಾಖಳನಡ್ಡ ಮೊಗವಿಡ
ಲುದಧಿಯೊಳಗದ್ದಂತೆ ಮೌನದೊಳಿದ್ದುದಾಸ್ಥಾನ (ಉದ್ಯೋಗ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಪಾಂಡವರಿಗೆ ರಾಜ್ಯವನ್ನು ನೀಡಿದರೆ ವಿದುರನಿಗೆ ಸಂಭ್ರಮ, ಕೃಪಾಚಾರ್ಯರಿಗೆ ಸಂತೋಷ, ಭೀಷ್ಮರಿಗೆ ಪ್ರೀತಿ, ಧೃತರಾಷ್ಟ್ರನ ಅಭ್ಯುದಯದ ಮಾರ್ಗ ಎಂದು ನೀತಿಸಮ್ಮತವಾದ ಮಾತುಗಳನ್ನು ಕೃಷ್ಣನು ಹೇಳಲು, ಅಹಂಕಾರವನ್ನೇ ತನ್ನೊಳು ಪ್ರದರ್ಶಿಸುತ್ತಾ, ಮನಸ್ಸಿನಲ್ಲೂ ಅದನ್ನೇ ಲೇಪಿಸಿಕೊಂಡಿದ್ದ ದುಷ್ಟಬುದ್ಧಿಯುಳ್ಳ ದುರ್ಯೋಧನನು ಈ ಮಾತಿಗೆ ತನ್ನ ಅಸಮ್ಮತಿಯನ್ನು ಸೂಚಿಸುವಂತೆ ಮುಖವನ್ನು ತಿರುಗಿಸಿದನು. ಆಸ್ಥಾನವು ನಿಶ್ಯಬ್ದವಾಗಿ ಸಾಗರದಲ್ಲಿ ಮುಳುಗಿದಂತೆ ತೋರಿತು.

ಅರ್ಥ:
ಉತ್ಸವ: ಸಂಭ್ರಮ, ಸಡಗರ; ಸಮ್ಮುದ:ಅತಿಯಾದ ಆನಂದ; ಒಲವು: ಪ್ರೀತಿ; ಅಭ್ಯುದಯ: ಅಭಿವೃದ್ಧಿ, ಗೌರವ; ಅಸುರರಿಪು: ಕೃಷ್ಣ; ನಯ: ನೀತಿ; ನುಡಿ: ಮಾತು; ಗಡಣ: ಕೂಟ, ಸಹವಾಸ; ಮದ: ಅಹಂಕಾರ; ಮೈ: ತನು; ಗಾಣಿಕೆ:ತೋರಿಕೆ; ಮನ: ಮನಸ್ಸು; ಲೇಪ: ಹಚ್ಚು; ಮಹಾ: ಅತಿ; ಖಳ: ದುಷ್ಟ; ಅಡ್ಡ: ಚಿಕ್ಕದು; ಮೊಗ: ಮುಖ; ಉದಧಿ: ಸಮುದ್ರ; ಅದ್ದು: ಮಿಂದು; ಮೌನ: ನಿಶ್ಯಬ್ದತೆ; ಆಸ್ಥಾನ: ದರ್ಬಾರು;

ಪದವಿಂಗಡಣೆ:
ವಿದುರನ್+ಉತ್ಸವ +ಕೃಪನ +ಸಮ್ಮುದ
ನದಿಯ +ಮಗನ್+ಒಲವ್+ಅಂಧ+ನೃಪನ್
ಅಭ್ಯುದಯ +ಕೇಳ್+ಎಂದ್+ಅಸುರರಿಪು+ ನಯ +ನುಡಿಯ +ಗಡಣಿಸಲು
ಮದದ+ ಮೈಗಾಣಿಕೆಯ +ಮನ +ಲೇ
ಪದ +ಮಹಾಖಳನ್+ಅಡ್ಡ +ಮೊಗವಿಡಲ್
ಉದಧಿಯೊಳಗ್+ಅದ್ದಂತೆ +ಮೌನದೊಳಿದ್ದುದ್+ಆಸ್ಥಾನ

ಅಚ್ಚರಿ:
(೧) ದುರ್ಯೋಧನನ ಚಿತ್ರಣ (‘ಮ’ಕಾರದ ಸಾಲು ಪದಗಳು) – ಮದದ ಮೈಗಾಣಿಕೆಯ ಮನ ಲೇಪದ ಮಹಾಖಳನಡ್ಡ ಮೊಗವಿಡಲ್
(೨) ಉಪಮಾನದ ಪ್ರಯೋಗ – ಉದಧಿಯೊಳಗದ್ದಂತೆ ಮೌನದೊಳಿದ್ದುದಾಸ್ಥಾನ