ಪದ್ಯ ೨೭: ಧರ್ಮಜನೇಕೆ ಭಯಗೊಂಡನು?

ಹಲಧರನ ಖತಿ ಬಲುಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು (ಗದಾ ಪರ್ವ, ೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮಜನು, ಬಲರಾಮನ ಕೋಪ ಹಿರಿದಾಗಿದೆ. ಇದಿರು ಬಿದ್ದರೆ ನಮಗೆ ಹಾನಿ ತಪ್ಪುವುದಿಲ್ಲ. ನಾವು ಹೆದ್ದು ಸೋತರೆ ಚೌಚಿತ್ಯವೇನು? ಇದು ಅಂತರಂಗದ ಪೆಟ್ಟು. ಶ್ರೀಕೃಷ್ಣನಿಗೆ ಇದು ತಿಳಿದಿದೆಯೇ? ಅವನೇಕೆ ಸುಮ್ಮನಿದ್ದಾನೆ, ನಾವು ನಾಶವಾಗುವ ಸ್ಥಿತಿಯಲ್ಲಿದ್ದೇವೆ ಎಂದು ಧರ್ಮಜನು ಭಯಗೊಂಡನು.

ಅರ್ಥ:
ಹಲಧರ: ನೇಗಿಲನ್ನು ಹಿಡಿದವ (ಬಲರಾಮ); ಖತಿ: ಕೋಪ; ಬಲುಹು: ಹೆಚ್ಚು, ಅಧಿಕ; ಕದನ: ಯುದ್ಧ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಹಾನಿ: ನಾಶ; ಗೆಲುವು: ಜಯ; ಸೋಲು: ಪರಾಭವ; ಔಚಿತ್ಯ: ಯೋಗ್ಯವಾದುದು; ಬಿದ್ದ: ಬೀಳು, ಎರಗು; ವಿಘಾತಿ: ಆಪತ್ತು; ಮುರರಿಪು: ಕೃಷ್ಣ; ತಿಳಿ: ಗೊತ್ತುಪಡಿಸು; ತವಕಿಸು: ಕಾತುರಿಸು, ಕುತೂಹಲ ಪಡು; ಅಳಿ: ನಾಶ; ನಡುಗು: ಕಂಪಿಸು, ಹೆದರು; ಸೂನು: ಮಗ;

ಪದವಿಂಗಡಣೆ:
ಹಲಧರನ +ಖತಿ +ಬಲುಹು +ಕದನಕೆ
ಮಲೆತನಾದಡೆ +ಹಾನಿ +ತಪ್ಪದು
ಗೆಲವಿನಲಿ +ಸೋಲದಲಿ +ತಾನ್+ಔಚಿತ್ಯವೇನ್+ಇದಕೆ
ಒಳಗೆ +ಬಿದ್ದ+ ವಿಘಾತಿ +ಮುರರಿಪು
ತಿಳಿವನೋ +ತವಕಿಸುವನೋ +ನಾವ್
ಅಳಿದೆವ್+ಇನ್ನೇನೆನುತ+ ನಡುಗಿದನ್+ಅಂದು +ಯಮಸೂನು

ಅಚ್ಚರಿ:
(೧) ಗೆಲುವು, ಸೋಲು – ವಿರುದ್ಧ ಪದಗಳು
(೨) ಧರ್ಮಜನು ಹೆದರಿದ ಪರಿ – ನಾವಳಿದೆವಿನ್ನೇನೆನುತ ನಡುಗಿದನಂದು ಯಮಸೂನು

ಪದ್ಯ ೪೫: ಘಟೋತ್ಕಚನು ಧರ್ಮಜನ ಬಳಿ ಏನು ಹೇಳಿದನು?

ಏನು ಧರ್ಮಜ ಕರಸಿದೈ ಕುರು
ಸೇನೆ ಮಲೆತುದೆ ಬಿಡು ಬಿಡಾ ತಡ
ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ
ದಾನವಾಮರರೊಳಗೆ ನಿನ್ನಯ
ಸೂನುವಿಗೆ ಸರಿಯಿಲ್ಲೆನಿಸಿ ನಿಲ
ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ (ದ್ರೋಣ ಪರ್ವ, ೧೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ನನ್ನನ್ನು ಏಕೆ ಕರೆಸಿದಿರಿ? ಕೌರವ ಸೈನ್ಯವು ಇದಿರಾಯಿತೇ? ತಡಮಾಡದೆ ನನ್ನನ್ನು ಬಿಡು, ದೇವ ದಾನವರಲ್ಲಿ ನಿನ್ನ ಮಗನಿಗೆ ಸರಿಯಾದವರೇ ಇಲ್ಲವೆನ್ನುವಮ್ತೆ ನಾನು ಯುದ್ಧಮಾಡಬಲ್ಲೆ. ನೋಡು, ತಡವೇಕೆ, ಮೊದಲು ವೀಳೆಯವನ್ನು ನೀಡು ಎಂದು ತನ್ನ ಕತ್ತಿಯನ್ನು ಹೊರತೆಗೆದು ಝಳಪಿಸುತ್ತಾ, ವೀಳೆಯನ್ನು ತೆಗೆದುಕೊಳ್ಳಲು ತನ್ನ ಎಡಗೈಯನ್ನು ಒಡ್ಡಿದನು.

ಅರ್ಥ:
ಕರಸು: ಬರೆಮಾಡು; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು, ಎದುರಿಸು; ಬಿಡು: ತೊರೆ; ತಡ: ನಿಧಾನ; ವೀಳೆ: ತಾಂಬೂಲ; ಕಯ್ಯ್: ಹಸ್ತ; ಅರಳಿಚು: ಬಿರಿಯುವಂತೆ ಮಾಡು; ದಾನವ: ರಾಕ್ಷಸ; ಅಮರ: ದೇವತೆ; ಸೂನು: ಮಗ; ನಿಲಲು: ಎದುರು ನಿಲ್ಲು; ಬಲ್ಲೆ: ತಿಳಿ; ನೋಡು: ವೀಕ್ಷಿಸು; ಬಿದಿರು: ಕೊಡಹು, ಒದರು; ಖಂಡೆಯ: ಕತ್ತಿ;

ಪದವಿಂಗಡಣೆ:
ಏನು+ ಧರ್ಮಜ+ ಕರಸಿದೈ+ ಕುರು
ಸೇನೆ +ಮಲೆತುದೆ+ ಬಿಡು +ಬಿಡಾ+ ತಡ
ವೇನು +ತಾ +ವೀಳೆಯವನ್+ಎನುತ್+ಎಡಗಯ್ಯನ್+ಅರಳಿಚುತ
ದಾನವ+ಅಮರರೊಳಗೆ +ನಿನ್ನಯ
ಸೂನುವಿಗೆ +ಸರಿಯಿಲ್ಲೆನಿಸಿ+ ನಿಲಲ್
ಆನು +ಬಲ್ಲೆನು +ನೋಡೆನುತ +ಬಿದಿರಿದನು +ಖಂಡೆಯವ

ಅಚ್ಚರಿ:
(೧) ಘಟೋತ್ಕಚನ ಧೈರ್ಯದ ನುಡಿ – ದಾನವಾಮರರೊಳಗೆ ನಿನ್ನಯಸೂನುವಿಗೆ ಸರಿಯಿಲ್ಲೆನಿಸಿ ನಿಲಲಾನು ಬಲ್ಲೆನು

ಪದ್ಯ ೧೪: ಧರ್ಮಜನು ಅರ್ಜುನನಿಗೆ ಏನೆಂದು ಹಂಗಿಸಿದನು?

ಎಲೆ ಧನಂಜಯ ಸೂತತನಯನ
ಗೆಲಿದು ಬಂದೆಯೊ ದಿವಿಜ ನಗರಿಗೆ
ಕಳುಹಿ ಬಂದೆಯೊ ಕಂಡು ಕೆಣಕದೆ ಬಂದೆಯೋ ಮೇಣು
ಉಳುಹಿ ಬಿಡುವನೆ ಸಮರ ಮುಖದಲಿ
ಮಲೆತನಾದರೆ ಕರ್ಣನೇನ
ಗ್ಗಳಿಕೆವಡೆದನೊ ಶಿವ ಶಿವಾ ಎಂದರಸ ಬಿಸುಸುಯ್ದ (ಕರ್ಣ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಅರ್ಜುನನನ್ನು ಪ್ರಶ್ನಿಸುತ್ತಾ, ಅರ್ಜುನ ನೀನು ಕರ್ಣನನ್ನು ಗೆದ್ದು ಬಂದೆಯೋ, ಕೊಂದು ಬಂದೆಯೋ, ನೋಡಿಯೂ ಕಾಣದಂತೆ ಬಂದೆಯೋ? ಯುದ್ಧದಲ್ಲಿ ಸಿಟ್ಟಿನಿಂದಿದಿರಾದರೆ ಕರ್ಣನು ನಿನ್ನನ್ನು ಉಳಿಸಿಯಾನೇ? ಕರ್ಣನು ಎಂತಹಾ ಪರಾಕ್ರಮಿಯೋ ಏನೋ ಶಿವ ಶಿವಾ ಎಂದು ಧರ್ಮಜನು ನಿಟ್ಟುಸಿರು ಬಿಟ್ಟನು.

ಅರ್ಥ:
ಸೂತ: ರಥ ಓಡಿಸುವವ; ತನಯ: ಮಗ; ಗೆಲಿದು: ವಿಜಯಿಸಿ; ಬಂದೆ: ಆಗಮಿಸು; ದಿವಿಜ: ದೇವತೆ; ನಗರಿ: ಊರು; ದಿವಿಜ ನಗರಿ: ಸ್ವರ್ಗ; ಕಳುಹಿ: ನಿರ್ಗಮ; ಕಂಡು: ನೋಡಿ; ಕೆಣಕು: ಪ್ರಚೋದಿಸು; ಮೇಣು: ಅಥವ, ಖಂಡಿತವಾಗಿಯೂ; ಉಳುಹಿ: ಉಳಿಸು; ಸಮರ; ಯುದ್ಧ; ಮುಖ: ಆನನ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು, ಎದುರಿಸು; ಅಗ್ಗಳಿಕೆ: ಶ್ರೇಷ್ಠ, ಹೆಚ್ಚುಗಾರಿಕೆ; ಅರಸ: ರಾಜ; ಬಿಸುಸುಯ್ದು: ನಿಟ್ಟುಸಿರುಬಿಡು;

ಪದವಿಂಗಡಣೆ:
ಎಲೆ +ಧನಂಜಯ +ಸೂತತನಯನ
ಗೆಲಿದು +ಬಂದೆಯೊ +ದಿವಿಜ +ನಗರಿಗೆ
ಕಳುಹಿ +ಬಂದೆಯೊ +ಕಂಡು +ಕೆಣಕದೆ+ ಬಂದೆಯೋ +ಮೇಣು
ಉಳುಹಿ +ಬಿಡುವನೆ +ಸಮರ +ಮುಖದಲಿ
ಮಲೆತನಾದರೆ +ಕರ್ಣನೇನ್
ಅಗ್ಗಳಿಕೆವಡೆದನೊ +ಶಿವ +ಶಿವಾ +ಎಂದರಸ +ಬಿಸುಸುಯ್ದ

ಅಚ್ಚರಿ:
(೧) ಸ್ವರ್ಗವನ್ನು ದಿವಿಜನಗರಿ ಎಂದು ಕರೆದಿರುವುದು
(೨) ಕರ್ಣನ ಹಿರಿಮೆಯನ್ನು ತಿಳಿಸುವ ಬಗೆ – ಕರ್ಣನೇನಗ್ಗಳಿಕೆವಡೆದನೊ ಶಿವ ಶಿವಾ

ಪದ್ಯ ೧೮: ಕರ್ಣನು ತನ್ನ ಪರಾಕ್ರಮದ ಬಗ್ಗೆ ಏನು ನುಡಿದನು?

ಮುನಿದೆನಾದರೆ ಕೋಟಿ ಕೃಷ್ಣಾ
ರ್ಜುನರ ಕೊಂಬೆನೆ ರಣಕೆ ದುರ್ಯೋ
ಧನಗೆ ಮಲೆವರ ಮಾರಿ ಪಾಂಡವಮೇಘ ಪವಮಾನ
ತನಗೆ ಸರಿ ಯಾರಿಲ್ಲ ನೆಣಗೊ
ಬ್ಬಿನಲಿ ನುಡಿದೈ ನಿನ್ನ ಬಾಂಧವ
ಜನ ಸಹಿತ ಹಿಂಡುವೆನು ಹಿಂದಿಕ್ಕುವನ ತೋರೆಂದ (ಕರ್ಣ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಲ್ಯಾ, ನನಗೆ ಕೋಪ ಬಂದರೆ ಕೋಟಿ ಕೃಷ್ಣಾರ್ಜುನರು ಯುದ್ಧಕ್ಕಿ ಬಂದರೂ ಲೆಕ್ಕಿಸುವವನೇ? ನಾನು ಎದುರಾಳಿಗಳಿಗೆ ಮಾರಿ, ಪಾಂಡವ ಮೇಘಕ್ಕೆ ಬಿರುಗಾಳಿ, ನನಗೆ ಸರಿಸಮನಾದವರು ಯಾರೂ ಇಲ್ಲ. ಆದರೆ ನೀನು ನೆಣಗೊಬ್ಬಿನಿಂದ ಸಲ್ಲದ ಮಾತನ್ನಾಡಿದರೆ, ಬಂಧು ಬಾಂಧವರೊಡನೆ ನಿನ್ನನ್ನು ಹಿಂಡಿಬಿಡುತ್ತೇನೆ ನಿನ್ನನ್ನು ಹಿಂದಿಟ್ಟುಕೊಂಡು ಉಳಿಸುವವರಾರು ತೋರಿಸು ಎಂದು ಜೋರಾಗಿ ಶಲ್ಯನನ್ನು ಪ್ರಶ್ನಿಸಿದ.

ಅರ್ಥ:
ಮುನಿ: ಸಿಟ್ಟಾಗು, ಕೋಪಗೊಳ್ಳು; ಕೋಟಿ: ಅಸಂಖ್ಯಾತ; ಕೊಂಬೆ: ಕೊಲ್ಲುವೆ; ರಣ: ಯುದ್ಧ; ಮಲೆ: ಎದುರಿಸು, ಪ್ರತಿಭಟಿಸು; ಮಾರಿ: ಒಂದು ಕ್ಷುದ್ರ ದೇವತೆ; ಮೇಘ: ಮೋಡ; ಪವಮಾನ: ಗಾಳಿ, ವಾಯು; ಸರಿ: ಸಮಾನರಾದ; ನೆಣಗೊಬ್ಬು: ಕೊಬ್ಬು, ಅಹಂಕಾರ; ನುಡಿ: ಮಾತಾಡು; ಬಾಂಧವ: ಬಂಧು; ಸಹಿತ: ಜೊತೆ; ಹಿಂಡು: ಕಿವುಚು; ಹಿಂದಿಕ್ಕು: ಹಿಂದಕ್ಕೆ ಸರಿಸು; ತೋ

ಪದವಿಂಗಡಣೆ:
ಮುನಿದೆನಾದರೆ +ಕೋಟಿ +ಕೃಷ್ಣಾ
ರ್ಜುನರ +ಕೊಂಬೆನೆ +ರಣಕೆ +ದುರ್ಯೋ
ಧನಗೆ +ಮಲೆವರ+ ಮಾರಿ +ಪಾಂಡವ+ಮೇಘ +ಪವಮಾನ
ತನಗೆ+ ಸರಿ +ಯಾರಿಲ್ಲ +ನೆಣಗೊ
ಬ್ಬಿನಲಿ +ನುಡಿದೈ +ನಿನ್ನ +ಬಾಂಧವ
ಜನ +ಸಹಿತ +ಹಿಂಡುವೆನು +ಹಿಂದಿಕ್ಕುವನ+ ತೋರೆಂದ

ಅಚ್ಚರಿ:
(೧) ಕರ್ಣನು ತನ್ನ ಪರಾಕ್ರಮವನ್ನು ಹೇಳಿದ ಬಗೆ – ಮುನಿದೆನಾದರೆ ಕೋಟಿ ಕೃಷ್ಣಾ
ರ್ಜುನರ ಕೊಂಬೆನೆ; ಮಲೆವರ ಮಾರಿ ಪಾಂಡವಮೇಘ ಪವಮಾನ
(೨) ಶಲ್ಯನಿಗೆ ನೀಡುವ ಎಚ್ಚರಿಕೆಯ ನುಡಿ: ನಿನ್ನ ಬಾಂಧವ ಜನ ಸಹಿತ ಹಿಂಡುವೆನು ಹಿಂದಿಕ್ಕುವನ ತೋರೆಂದ

ಪದ್ಯ ೬೮: ಯಾರು ನಿಜವಾದ ರಾಜ?

ಮಲೆವ ರಾಯನ ಬೆನ್ನ ಕಪ್ಪವ
ನಲಗಿನಲಿ ಕೊಂಡಾಂತ ಮನ್ನೆಯ
ಕುಲದ ತಲೆ ಚೆಂಡಾಡಿ ಗಡಿಗಳ ದುರ್ಗದಲಿ ತನ್ನ
ಬಲುಸಚಿವರನು ನಿಲಿಸಿ ತಾ ಪುರ
ದಲಿ ವಿನೋದದಲಿರುತ ಹರುಷದ
ಲಿಳೆಯ ಪಾಲಿಸುವವನರಸು ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೬೮ ಪದ್ಯ)

ತಾತ್ಪರ್ಯ:
ತನ್ನನ್ನು ವಿರೋಧಿಸುವ ರಾಜರನ್ನು ಹೊಡೆದೋಡಿಸಿ, ಕಪ್ಪವನ್ನು ಆಯುಧದ ಮೊನೆಯ ತುದಿಯಲ್ಲಿ ಸ್ವೀಕರಿಸಿ, ಯುದ್ಧಕ್ಕೆ ಬಂದ ಪಾಳೆಗಾರರ ತಲೆಗಳನ್ನು ಚೆಂಡಾಡಿ, ರಾಜ್ಯದ ಗಡಿಯಲ್ಲೂ ಕೋಟೆಗಳಲ್ಲೂ ತನ್ನ ಮಂತ್ರಿಗಳನ್ನು ಪ್ರತಿನಿಧಿಗಳನ್ನು ನಿಲ್ಲಿಸಿ ತಾನು ರಾಜಧಾನಿಯಲ್ಲಿ ವಿನೋದದಿಂದ ಇರುತ್ತಾ ಸಂತೋಷದಿಂದ ಭೂಮಿಯನ್ನು ಆಳುವವನೇ ರಾಜ ಎಂದು ನಾರದರು ಹೇಳಿದರು.

ಅರ್ಥ:
ಮಲೆವ:ಪ್ರತಿಭಟಿಸು, ಗರ್ವ ; ರಾಯ: ರಾಜ; ಬೆನ್ನ: ಹಿಂಬದಿ; ಕಪ್ಪ:ಕಾಣಿಕೆ; ಅಲಗು: ಖಡ್ಗ, ಕತ್ತಿ; ಕೊಂಡು: ತೆಗೆದುಕೊಂಡು; ಮನ್ನೆ:ಮಾನ್ಯ; ಕುಲ: ವಂಶ; ತೆಲೆ: ಶಿರ; ಚೆಂಡಾಡು: ಚೆಂಡಿನಂತೆ ಹೊಡೆದಾಡು; ಗಡಿ: ಎಲ್ಲೆ, ಅಂಚು; ದುರ್ಗ: ಕೋಟೆ; ಸಚಿವ: ಮಂತ್ರಿ; ನಿಲಿಸಿ: ಸ್ಥಾಪಿಸಿ; ಪುರ: ಊರು; ವಿನೋದ: ಸಂತೋಷ; ಹರುಷ: ಸಂತೋಷ; ಇಳೆ: ಭೂಮಿ; ಪಾಲಿಸು: ನೋಡಿಕೊ, ರಕ್ಷಿಸು; ಅರಸು: ರಾಜ; ಭೂಪಾಲ: ರಾಜ;

ಪದವಿಂಗಡಣೆ:
ಮಲೆವ +ರಾಯನ +ಬೆನ್ನ +ಕಪ್ಪವನ್
ಅಲಗಿನಲಿ +ಕೊಂಡಾಂತ +ಮನ್ನೆಯ
ಕುಲದ+ ತಲೆ +ಚೆಂಡಾಡಿ +ಗಡಿಗಳ+ ದುರ್ಗದಲಿ+ ತನ್ನ
ಬಲುಸಚಿವರನು +ನಿಲಿಸಿ +ತಾ +ಪುರ
ದಲಿ +ವಿನೋದದಲ್+ಇರುತ +ಹರುಷದಲ್
ಇಳೆಯ +ಪಾಲಿಸುವವನ್+ಅರಸು +ಭೂಪಾಲ +ಕೇಳೆಂದ

ಅಚ್ಚರಿ:
(೧) ವಿನೋದ, ಹರುಷ; ಅರಸು, ಭೂಪಾಲ – ಸಮನಾರ್ಥಕ ಪದ, ಜೊತೆಯಾಗಿ ಬಂದಿರುವುದು