ಪದ್ಯ ೪೩: ಕೌರವರ ಸೈನ್ಯವು ಹೇಗೆ ಹೊರಟಿತು?

ಬೀಳುಕೊಂಡುದು ರಜನಿ ಮರುದಿನ
ವಾಳು ಕುದುರೆಯ ನೆರಹಿ ಧರಣೀ
ಪಾಲ ಸುಮುಹೂರ್ತದಲಿ ಹೊಯ್ಸಿದನಂದು ಹೊರಗುಡಿಯ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳಕೋಟಿಗಳುರುಚತುರ್ಬಲ
ಮೇಳವಿಸಿ ನಡೆದುದು ಸಮಸ್ತ ಮಹಾಮಹೀಶ್ವರರು (ಭೀಷ್ಮ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅಂದಿನ ರಾತ್ರಿ ಕಳೆಯಿತು, ಮುಂಜಾನೆ ಆರುದ್ದದ ಕುದುರೆಯನ್ನೇರಿ ಕೌರವನು ಒಳ್ಳೆಯ ಸಮಯದಲ್ಲಿ ಸೈನ್ಯವನ್ನು ಸೇರಿಸಿ ಹೊರಬೀಡುಬಿಟ್ಟನು. ಆಗ ಲೆಕ್ಕವಿಲ್ಲದಷ್ಟು ಭೇರಿಗಳು ಮೊರೆದವು. ಎಲ್ಲಾ ರಾಜರು ಚತುರಂಗ ಸೈನ್ಯದೊಂದಿಗೆ ಹೊರಟರು.

ಅರ್ಥ:
ಬೀಳುಕೊಡು: ತೆರಳು; ರಜನಿ: ರಾತ್ರಿ; ಮರುದಿನ: ನಾಳೆ; ಆಳು: ಸುಮಾರು ಐದರಿಂದ ಆರಡಿ ಎತ್ತರ, ಆಳುದ್ದ; ಕುದುರೆ: ಅಶ್ವ; ನೆರಹು: ಒಟ್ಟುಗೂಡು; ಧರಣೀಪಾಲ: ರಾಜ; ಸುಮುಹೂರ್ತ: ಒಳ್ಳೆಯ ಕಾಲ; ಹೊಯ್ಸು: ಸಾರಿಸು, ಡಂಗುರ ಹೊಡೆಸು; ಹೊರ: ಆಚೆ; ಗುಡಿ: ನೆಲೆ; ಸೂಳೈಸು: ಧ್ವನಿ ಮಾಡು; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ; ಉರು: ಶ್ರೇಷ್ಠ; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಮೇಳವಿಸು: ಸೇರು, ಜೊತೆಯಾಗು; ನಡೆ: ಚಲಿಸು; ಸಮಸ್ತ: ಎಲ್ಲಾ; ಮಹೀಶ್ವರ: ರಾಜ;

ಪದವಿಂಗಡಣೆ:
ಬೀಳುಕೊಂಡುದು+ ರಜನಿ +ಮರುದಿನವ್
ಆಳು +ಕುದುರೆಯ +ನೆರಹಿ+ ಧರಣೀ
ಪಾಲ+ ಸುಮುಹೂರ್ತದಲಿ+ ಹೊಯ್ಸಿದನ್+ಅಂದು +ಹೊರಗುಡಿಯ
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳ+ಕೋಟಿಗಳ್+ಉರು+ಚತುರ್ಬಲ
ಮೇಳವಿಸಿ +ನಡೆದುದು +ಸಮಸ್ತ +ಮಹಾ+ಮಹೀಶ್ವರರು

ಅಚ್ಚರಿ:
(೧) ರಾತ್ರಿಕಳೆಯಿತು ಎಂದು ಹೇಳಲು – ಬೀಳುಕೊಂಡುದು ರಜನಿ
(೨) ಧರಣೀಪಾಲ, ಮಹೀಶ್ವರ – ಸಮನಾರ್ಥಕ ಪದಗಳು