ಪದ್ಯ ೨೬: ಭೀಮನು ಹೇಗೆ ಎಚ್ಚೆತ್ತನು?

ಮೈಮರೆದನರೆಗಳಿಗೆ ಮಾತ್ರಕೆ
ವೈಮನಸ್ಯದ ಜಾಡ್ಯರೇಖೆಯ
ಸುಯ್ ಮಹಾದ್ಭುತವಾಯ್ತು ಪರಿಣತ ಪಾರವಶ್ಯದಲಿ
ಹಾ ಮಹಾದೇವೆನುತ ಹಗೆವನ
ಕೈಮೆಯನು ಬಣ್ಣಿಸುತಲೆದ್ದನ
ಲೈ ಮರುತ್ಸುತ ಸೂಸಿ ಹಾರಿದ ಗದೆಯ ತಡವರಿಸಿ (ಗದಾ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಧಗಳಿಗೆ ಕಾಲ ಮೈಮರೆದಿದ್ದ ಭೀಮನು ಎಚ್ಚೆತ್ತನು. ವೈರದ ಜಾಡ್ಯ ಮಹಾದ್ಭುತವಾಗಿ ಹೆಚ್ಚಿತು. ಭೀಮನು ಕೌರವನ ಕೈಚಳಕವನ್ನು ಹೊಗಳಿ ಶಿವಶಿವಾ ಎನ್ನುತ್ತಾ ಕೈಯಿಂದ ಸಿಡಿದು ಹೋಗಿದ್ದ ಗದೆಯನ್ನು ಹಿಡಿದನು.

ಅರ್ಥ:
ಮೈಮರೆ: ಎಚ್ಚರತಪ್ಪು; ಅರೆಗಳಿಗೆ: ಸ್ವಲ್ಪ ಸಮಯ; ವೈಮನಸ್ಯ: ಅಪಾರವಾದ ದುಃಖ; ಜಾಡ್ಯ: ನಿರುತ್ಸಾಹ, ಸೋಮಾರಿತನ; ರೇಖೆ: ಗೆರೆ, ಗೀಟು; ಸುಯ್: ಶಬ್ದವನ್ನು ವಿವರಿಸುವ ಪರಿ; ಅದ್ಭುತ: ಆಶ್ಚರ್ಯ; ಪರಿಣತ: ಪರಿಪಕ್ವವಾದುದು; ಪಾರವಶ್ಯ: ಬಾಹ್ಯಪ್ರಜ್ಞೆ ಇಲ್ಲದಿರುವುದು; ಹಗೆ: ವೈರಿ; ಕೈಮೆ: ಕೆಲಸ, ಕಪಟ; ಬಣ್ಣಿಸು: ವಿವರಿಸು; ಮರುತ್ಸುತ: ವಾಯುಪುತ್ರ (ಭೀಮ); ಸೂಸು: ಹರಡು; ಗದೆ: ಮುದ್ಗರ; ತಡವರಿಸು: ಹುಡುಕು, ಸವರು;

ಪದವಿಂಗಡಣೆ:
ಮೈಮರೆದನ್+ಅರೆಗಳಿಗೆ +ಮಾತ್ರಕೆ
ವೈಮನಸ್ಯದ +ಜಾಡ್ಯ+ರೇಖೆಯ
ಸುಯ್ +ಮಹಾದ್ಭುತವಾಯ್ತು+ ಪರಿಣತ+ ಪಾರವಶ್ಯದಲಿ
ಹಾ +ಮಹಾದೇವ+ಎನುತ+ ಹಗೆವನ
ಕೈಮೆಯನು +ಬಣ್ಣಿಸುತಲ್+ಎದ್ದನಲೈ
ಮರುತ್+ಸುತ+ ಸೂಸಿ +ಹಾರಿದ +ಗದೆಯ +ತಡವರಿಸಿ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಹಗೆವನ ಕೈಮೆಯನು ಬಣ್ಣಿಸುತಲ್

ಪದ್ಯ ೩೪: ಯಾವ ರೀತಿಯ ಕೂಗುಗಳು ಕೇಳಿ ಬಂದವು?

ಹಾ ಮುರಾಂತಕ ಹಾ ಯುಧಿಷ್ಠಿರ
ಹಾ ಮರುತ್ಸುತ ಹಾ ಧನಂಜಯ
ಹಾ ಮಗನೆ ಹಾ ತಂದೆ ಹಾ ಒಡವುಟ್ತಿದನೆಯೆನುತ
ಭೂಮಿ ತೆರೆಯಳೆ ಬಾಯನಕಟಕ
ಟಾ ಮಹೋದಧಿ ದೂರವಿನ್ನೇ
ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ (ದ್ರೋಣ ಪರ್ವ, ೧೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದಲ್ಲಿ ಹಾ ಕೃಷ್ಣಾ, ಹಾ ಯುಧಿಷ್ಠಿರ, ಹಾ ಭೀಮ, ಹಾ ಅರ್ಜುನಾ, ಅಯ್ಯೋ ಅಪ್ಪಾ, ಅಯ್ಯೋ ಅಣ್ಣಾ, ಅಯ್ಯೋ ಮಗನೇ ಎಂಬ ಕೂಗುಗಳು ಕೇಳಿ ಬಂದವು. ಹೋಗಿ ಹೊಕ್ಕೇವೆಂದರೆ ಸಮುದ್ರ ಬಹುದೂರದಲ್ಲಿದೆ, ಭೂಮಿಯಾದರೂ ಬಾಯನ್ನು ಬಿಡಬಾರದೇ? ನಾವೀ ಮಹಾಸ್ತ್ರಕ್ಕೆ ಸಿಕ್ಕು ಹಾಕಿಕೊಂಡೆವು ಎಂಬ ಕೂಗುಗಳು ಕೇಳಿ ಬಂದವು.

ಅರ್ಥ:
ಮುರಾಂತಕ: ಕೃಷ್ಣ; ಮರುತ್ಸುತ: ವಾಯುಪುತ್ರ (ಭೀಮ); ಮಗ: ಸುತ; ತಂದೆ: ಪಿತ; ಒಡವುಟ್ಟು: ಜೊತೆಯಲ್ಲಿ ಹುಟ್ಟಿದ; ಭೂಮಿ: ವಸುಧೆ; ತೆರೆ: ಬಿಚ್ಚುವಿಕೆ; ಅಕಟಕಟ: ಅಯ್ಯೋ; ಮಹೋದಧಿ: ಮಹಾ ಸಾಗರ; ದೂರ: ಅಂತರ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಸಿಕ್ಕು: ಒದಗು; ಬಂಧನ; ಒರಲು: ಅರಚು, ಕೂಗಿಕೊಳ್ಳು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಹಾ+ ಮುರಾಂತಕ +ಹಾ +ಯುಧಿಷ್ಠಿರ
ಹಾ +ಮರುತ್ಸುತ +ಹಾ +ಧನಂಜಯ
ಹಾ +ಮಗನೆ +ಹಾ +ತಂದೆ +ಹಾ +ಒಡವುಟ್ಟಿದನೆ+ಎನುತ
ಭೂಮಿ +ತೆರೆಯಳೆ +ಬಾಯನ್+ಅಕಟಕ
ಟಾ +ಮಹೋದಧಿ+ ದೂರವಿನ್ನೇನ್
ಈ ಮಹಾಸ್ತ್ರಕೆ +ಸಿಕ್ಕಿದೆವೆಂದ್+ಒರಲಿತ್+ಅರಿಸೇನೆ

ಅಚ್ಚರಿ:
(೧) ನೋವನ್ನು ಸೂಚಿಸುವ ಹಾ ಪದದ ಬಳಕೆ
(೨) ಸುತ, ಮಗ – ಸಮಾನಾರ್ಥಕ ಪದ
(೩) ಮಹಾಸ್ತ್ರ, ಮಹೋದಧಿ – ಮಹಾ ಪದದ ಬಳಕೆ

ಪದ್ಯ ೨೫: ವೈರಿಸೈನ್ಯವನ್ನು ಕಂಡು ಭೀಮನು ಏನು ನುಡಿದನು?

ಸಂದಣಿಸಿ ದಳ ನೂಕಿಕೊಂಡೈ
ತಂದುದಿದು ರವಿಸುತನ ತೊಲಗಿಸಿ
ಮುಂದೆ ಮೋಹರದೆಗೆದು ಮೂದಲಿಸಿತು ಮರುತ್ಸುತನ
ಬಂದುದೇ ಕರ್ಣಂಗೆ ಪಡಿಬಲ
ತಂದುದೇ ನಮಗೊಸಗೆಯನು ಲೇ
ಸೆಂದು ಸುಭಟರ ದೇವ ಸುಮ್ಮಾನದಲಿ ಲಾಗಿಸಿದ (ಕರ್ಣ ಪರ್ವ, ೧೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸೈನ್ಯವು ಗುಂಪು ಗುಂಪಾಗಿ ಮುಂದೆ ಬಂದು ಕರ್ಣನನ್ನು ಆಚೆಗೆ ಕಳುಹಿಸಿ ಭೀಮನೆದುರು ನಿಂದು ಮೂದಲಿಸಿದವು. ಭೀಮನು ಇದನ್ನು ನೋಡಿ, ಕರ್ಣನಿಗೆ ಸಹಾಯ ಮಾಡಲು ವೈರಿಸೇನೆ ಬಂದಿತೇ, ನಮಗಿದು ಶುಭವಾರ್ತೆಯನ್ನು ತಂದೀತೇ, ಒಳ್ಳೆಯದು ಎಂದುಕೊಂಡು ಸಂತೋಷದಿಂದ ಸೈನ್ಯವನ್ನು ಅಪ್ಪಳಿಸಿದನು.

ಅರ್ಥ:
ಸಂದಣಿ: ಗುಂಪು; ದಳ: ಸೈನ್ಯ; ನೂಕು: ತಳ್ಳು; ತಂದು: ಮುಂದೆಬಂದು; ರವಿಸುತ: ಸೂರ್ಯನ ಮಗ; ತೊಲಗಿಸು: ಹೊರಗೆ ಕಳಿಸಿ; ಮುಂದೆ: ಎದುರು; ಮೋಹರ: ಯುದ್ಧ; ಮೂದಲಿಸು: ಹಂಗಿಸು; ಮರುತ: ವಾಯು; ಸುತ: ಮಗ; ಪಡಿಬಲ: ವೈರಿಸೈನ್ಯ; ಒಸಗೆ:ಶುಭ; ಲೇಸು: ಒಳ್ಳೆಯದು; ಸುಭಟ: ಸೈನಿಕರು; ದೇವ: ಭಗವಂತ; ಸುಮ್ಮಾನ: ಸಂತೋಷ, ತೃಪ್ತಿ; ಲಾಗಿಸು: ನೆಗೆ, ಲಂಘಿಸು;

ಪದವಿಂಗಡಣೆ:
ಸಂದಣಿಸಿ +ದಳ+ ನೂಕಿಕೊಂಡೈ
ತಂದುದಿದು +ರವಿಸುತನ+ ತೊಲಗಿಸಿ
ಮುಂದೆ +ಮೋಹರದೆಗೆದು+ ಮೂದಲಿಸಿತು+ ಮರುತ್ಸುತನ
ಬಂದುದೇ+ ಕರ್ಣಂಗೆ +ಪಡಿಬಲ
ತಂದುದೇ +ನಮಗ್+ಒಸಗೆಯನು +ಲೇ
ಸೆಂದು +ಸುಭಟರ +ದೇವ +ಸುಮ್ಮಾನದಲಿ +ಲಾಗಿಸಿದ

ಅಚ್ಚರಿ:
(೧) ಭೀಮನನ್ನು ಮರುತ್ಸುತ, ಸುಭಟರ ದೇವ ಎಂದು ಕರೆದಿರುವುದು
(೨) ಮ ಕಾರದ ಸಾಲು ಪದಗಳು – ಮುಂದೆ ಮೋಹರದೆಗೆದು ಮೂದಲಿಸಿತು ಮರುತ್ಸುತನ
(೩) ಬಂದುದೇ, ತಂದುದೇ – ಪ್ರಾಸ ಪದಗಳು