ಪದ್ಯ ೪೦: ಪಾಂಡವರೇಕೆ ದುಃಖಿಸಿದರು?

ಮಿಡಿದನರ್ಜುನ ಧನುವ ಯಮಳರು
ತುಡುಕಿದರು ಕಯ್ದುಗಳ ಸಾತ್ಯಕಿ
ಮಿಡುಕಿದನು ಮರುಗಿದರು ಪಂಚದ್ರೌಪದೀಸುತರು
ಒಡೆಯನಳಿವಿನಲೆಲ್ಲಿಯದು ನೃಪ
ನುಡಿದ ನುಡಿಯೆನುತನಿಲತನುಜನ
ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ (ಗದಾ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಧನುಷ್ಟಂಕಾರ ಮಾಡಿದನು. ನಕುಲ ಸಹದೇವರು ಆಯುಧಗಳನ್ನು ಹಿದಿದರು. ಉಪಪಾಂಡವರೂ, ಸಾತ್ಯಕಿ, ದುಃಖಿಸಿದರು. ನಮ್ಮ ಒಡೆಯನು ಮರಣ ಹೊಂದಿದನೇ? ಧರ್ಮಜನ ಪ್ರತಿಜ್ಞೆ ಏನಾಯಿತು? ಎಂದುಕೊಂಡು ಆನೆ, ಕುದುರೆಗಳನ್ನು ಯುದ್ಧಕ್ಕೆ ಅನುವು ಮಾಡಿಕೊಂಡರು.

ಅರ್ಥ:
ಮಿಡಿ: ತವಕಿಸು; ಧನು: ಬಿಲ್ಲು; ಯಮಳ: ಅವಳಿ ಮಕ್ಕಳು; ತುಡುಕು: ಹೋರಾಡು, ಸೆಣಸು; ಕಯ್ದು: ಆಯುಧ; ಮಿಡುಕು: ಅಲುಗಾಟ, ಚಲನೆ; ಮರುಗು: ತಳಮಳ, ಸಂಕಟ; ಪಂಚ: ಐದು; ಸುತ: ಮಕ್ಕಳು; ಒಡೆಯ: ನಾಯಕ, ರಾಜ; ಅಳಿ: ನಾಶ; ನೃಪ: ರಾಜ; ನುಡಿ: ಮಾತಾಡು; ಅನಿಲ: ವಾಯು; ತನುಜ: ಮಗ; ಪಡೆ: ಗುಂಪು, ಸೈನ್ಯ; ಗಜ: ಆನೆ; ಅಶ್ವ: ಕುದುರೆ; ಬಿಗಿ: ಬಂಧಿಸು; ಗಜಬಜ: ಗೊಂದಲ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ಮಿಡಿದನ್+ಅರ್ಜುನ +ಧನುವ +ಯಮಳರು
ತುಡುಕಿದರು +ಕಯ್ದುಗಳ+ ಸಾತ್ಯಕಿ
ಮಿಡುಕಿದನು +ಮರುಗಿದರು+ ಪಂಚ+ದ್ರೌಪದೀ+ಸುತರು
ಒಡೆಯನ್+ಅಳಿವಿನಲ್+ಎಲ್ಲಿಯದು +ನೃಪ
ನುಡಿದ +ನುಡಿಯೆನುತ್+ಅನಿಲತನುಜನ
ಪಡೆ +ಗಜಾಶ್ವವ+ ಬಿಗಿಯೆ +ಗಜಬಜಿಸಿತು +ಭಟಸ್ತೋಮ

ಅಚ್ಚರಿ:
(೧) ನುಡಿ ಪದದ ಬಳಕೆ – ನೃಪನುಡಿದ ನುಡಿಯೆನುತನಿಲತನುಜನ

ಪದ್ಯ ೨೮: ಧರ್ಮಜನು ಏಕೆ ದುಃಖಿಸಿದನು?

ಮೇಲೆ ಮಗುಳ್ದಾಲಿಗಳ ಚಾಚಿದ
ತೋಳಮೇಲಿನ ತಲೆಯ ಸುಯ್ಲಿನ
ಲೀಲೆಯಡಗಿದ ಮುಖದ ಮಸುಳಿದ ಕಾಯಕಾಂತಿಗಳ
ಮೇಲುಮುಸುಕಿನ ಮಗ್ಗುಲಿನಲಿಹ
ನಾಲುವರನೀಕ್ಷಿಸುತ ಭೂಪತಿ
ಕೋಲುಮರುಮೊನೆಗೊಂಡವೋಲ್ ಮರುಗಿದನು ಚಿತ್ತದಲಿ (ಅರಣ್ಯ ಪರ್ವ, ೨೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸರೋವರದ ದಡದ ಮೇಲೆ ನೆಟ್ಟಗಣ್ಣುಗಳು, ಚೆಲ್ಲಿದ ತೋಳುಗಳ ಮೇಲಿಟ್ಟ ತಲೆಗಳು, ನಿಮ್ತ ಉಸಿರಾಟ, ಬಾಡಿದ ದೇಹಕಾಂತಿ, ತಲೆಯಮೇಲೆಳೆದುಕೊಂಡು ಮುಸುಕುಗಳುಗಳಿದ್ದ ನಾಲ್ವರು ತಮ್ಮಂದಿರನ್ನು ನೋಡಿ, ಕಿತ್ತ ಬಾಣವು ಮುರಿದು ಮತ್ತೆ ಹೆಚ್ಚು ನೋವಾದಂತೆ ನೊಂದು ಧರ್ಮಜನು ಮನಸ್ಸಿನಲ್ಲಿ ದುಃಖಿಸಿದನು.

ಅರ್ಥ:
ಆಲಿ: ಕಣ್ಣು; ಚಾಚು: ಹರಡು; ತೋಳು: ಬಾಹು; ತಲೆ: ಶಿರ; ಸುಯ್ಲು: ನಿಟ್ಟುಸಿರು; ಲೀಲೆ: ಚೆಲುವು; ಅಡಗು: ಬತ್ತುಹೋಗು; ಮುಖ: ಆನನ; ಮಸುಳು: ಕಾಂತಿಹೀನವಾಗು; ಕಾಯ: ದೇಹ; ಕಾಂತಿ: ಪ್ರಕಾಶ; ಮೇಲು: ತುದಿ, ಅಗ್ರಭಾಗ; ಮುಸುಕು: ಹೊದಿಕೆ; ಮಗ್ಗುಲು: ಪಕ್ಕ, ಪಾರ್ಶ್ವ; ಈಕ್ಷಿಸು: ನೋದು; ಭೂಪತಿ: ರಾಜ; ಕೋಲು: ಬಾಣ; ಮರು: ವಿರುದ್ಧವಾದ, ಎದುರಾದ; ಮೊನೆ: ತುದಿ; ಮರುಗು: ದುಃಖಿಸು; ಚಿತ್ತ: ಮನಸ್ಸು;

ಪದವಿಂಗಡಣೆ:
ಮೇಲೆ +ಮಗುಳ್ದ್+ಆಲಿಗಳ+ ಚಾಚಿದ
ತೋಳಮೇಲಿನ +ತಲೆಯ +ಸುಯ್ಲಿನ
ಲೀಲೆ+ಅಡಗಿದ +ಮುಖದ +ಮಸುಳಿದ +ಕಾಯ+ಕಾಂತಿಗಳ
ಮೇಲು+ಮುಸುಕಿನ +ಮಗ್ಗುಲಿನಲ್+ಇಹ
ನಾಲುವರನ್+ಈಕ್ಷಿಸುತ +ಭೂಪತಿ
ಕೋಲು+ಮರುಮೊನೆಗೊಂಡವೋಲ್ +ಮರುಗಿದನು+ ಚಿತ್ತದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೋಲುಮರುಮೊನೆಗೊಂಡವೋಲ್ ಮರುಗಿದನು ಚಿತ್ತದಲಿ