ಪದ್ಯ ೪೭: ಧರ್ಮಜನನ್ನು ರಕ್ಷಿಸಲು ದ್ರೋಣನೆದುರು ಯಾರು ಬಂದರು?

ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಮ್ತಿಯ ಜಠರವಲ್ಪವಲೆ
ನಿಲ್ಲು ನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ (ದ್ರೋಣ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಜೊಳ್ಳುಗಳನ್ನು ಹೊಡೆದೋಡಿಸಿದುದಾಯಿತು. ಧರ್ಮಜ, ಬಿಲ್ಲನ್ನು ಹಿಡಿ ಹಿಡಿ, ಬಾಣಗಳನ್ನು ಬಿಡು, ಇನ್ನೆಲ್ಲಿ ಹೊಕ್ಕು ಉಳಿಯುವೇ? ಕುಂತಿಯ ಜಠರವು ಚಿಕ್ಕದ್ದು. ನಿಲ್ಲು ನಿಲ್ಲು ಎನ್ನುತ್ತಾ ದ್ರೋಣನು ಮುನ್ನುಗ್ಗಲು, ಸೈನ್ಯವು ದುಃಖಿಸಿತು. ಆಗ ದ್ರುಪದನು ಸಾಹಸದಿಂದ ಬಿಲ್ಲನ್ನು ಧ್ವನಿ ಮಾಡುತ್ತಾ ಅಡ್ಡಬಂದನು.

ಅರ್ಥ:
ಹೊಳ್ಳು: ಹುರುಳಿಲ್ಲದುದು; ತೂರು: ಎಸೆ, ಬೀಸು; ಹಿಡಿ: ಗ್ರಹಿಸು, ಬಂಧನ; ಸುರಿ: ಮೇಲಿನಿಂದ ಬೀಳು; ಶರ: ಬಾಣ; ಅಕಟ: ಅಯ್ಯೊ; ಹೊಗು: ಸೇರು, ಪ್ರವೇಶಿಸು; ಕಂದ: ಮಗ; ಜಠರ: ಹೊಟ್ಟೆ; ಅಲ್ಪ: ಚಿಕ್ಕದ್ದು; ನಿಲ್ಲು: ತಡೆ; ಐದು: ಬಂದು ಸೇರು; ಬರಲು: ಆಗಮಿಸು; ಮರುಗು: ತಳಮಳ; ಸೇನೆ: ಸೈನ; ಸಾಹಸ: ಪರಾಕ್ರಮ; ಸಾಹಸಮಲ್ಲ: ಪರಾಕ್ರಮಿ; ಅಡಹಾಯಿ: ಮಧ್ಯಬಂದು; ಧನು: ಬಿಲ್ಲು; ಒದರು: ಕೊಡಹು, ಜಾಡಿಸು;

ಪದವಿಂಗಡಣೆ:
ಹೊಳ್ಳುಗಳ +ತೂರಿದೆವು +ಹಿಡಿ +ಹಿಡಿ
ಬಿಲ್ಲ +ಸುರಿ +ಸುರಿ +ಶರವನ್+ಅಕಟಿ
ನ್ನೆಲ್ಲಿ +ಹೊಗುವೈ +ಕಂದ +ಕುಂತಿಯ +ಜಠರವ್+ಅಲ್ಪವಲೆ
ನಿಲ್ಲು +ನಿಲ್ಲೆನುತ್+ಐದಿ +ಬರಲ್
ಅಲ್ಲಲ್ಲಿ +ಮರುಗಿತು +ಸೇನೆ +ಸಾಹಸ
ಮಲ್ಲನ್+ಅಡಹಾಯಿದನು +ದ್ರುಪದನು +ಧನುವನ್+ಒದರಿಸುತ

ಅಚ್ಚರಿ:
(೧) ಹಿಡಿ ಹಿಡಿ, ಸುರಿ ಸುರಿ, ನಿಲ್ಲು ನಿಲ್ಲು – ಜೋಡಿ ಪದಗಳ ಬಳಕೆ
(೨) ಹಂಗಿಸುವ ಪರಿ – ಅಕಟಿನ್ನೆಲ್ಲಿ ಹೊಗುವೈ ಕಂದ ಕುಮ್ತಿಯ ಜಠರವಲ್ಪವಲೆ

ಪದ್ಯ ೨೮: ಭೀಮನು ಕರ್ಣನ ಮುಂದಲೆಯ ಹಿಡಿದುದನ್ನು ಸೇನೆಯು ಹೇಗೆ ಪ್ರತಿಕ್ರಿಯಿಸಿತು?

ಬಾಯ ಬಿಟ್ಟುದು ಸೇನೆ ಕೌರವ
ರಾಯನಾವೆಡೆ ದಳಕೆ ಬಲುಗೈ
ನಾಯಕರು ಕೃಪ ಗುರುಸುತರು ಕೈಗೊಟ್ಟರೇ ಹಗೆಗೆ
ವಾಯುಜನ ಕೈದೊಳಸಿನಲಿ ಕುರು
ರಾಯ ರಾಜ್ಯಶ್ರೀಯ ಮುಂದಲೆ
ಹೋಯಿತೋ ಹಾ ಎನುತ ಮರುಗಿತು ಕೂಡೆ ಕುರುಸೇನೆ (ಕರ್ಣ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಭೀಮನು ಕರ್ಣನ ಎದೆಗೊದೆದ ದೃಶ್ಯವನ್ನು ನೋಡಿ ಕುರುಸೇನೆಯ ಸೈನಿಕರು ಬಾಯಿಬಿಟ್ಟು ನಿಂತರು, ಕೌರವಸೇನೆಯಲ್ಲಿಯ ವೀರಾಗ್ರಣಿಗಳಾದ ಕೃಪ, ಅಶ್ವತ್ಥಾಮರು ಶತ್ರುಗಳಿಗೆ ನೆರವಾದರೇ? ಭೀಮನು ಕೌರವ ರಾಜ್ಯಲಕ್ಷ್ಮಿಯ ಮುಂದಲೆಯನ್ನು ಹಿಡಿಗುಬಿಟ್ಟನಲಾ ಎಂದು ಕೌರವ ಸೇನೆಯು ದುಃಖಿಸಿತು.

ಅರ್ಥ:
ಬಾಯ: ಮುಖದಲ್ಲಿನ ಅಂಗ; ಬಿಟ್ಟು: ತೆರೆದು; ಸೇನೆ: ಸೈನ್ಯ, ದಳ; ರಾಯ: ರಾಜ; ಬಲುಗೈ: ಶ್ರೇಷ್ಠ, ಬಲಿಷ್ಠ; ನಾಯಕ: ಒಡೆಯ; ಸುತ: ಮಗ; ಕೈಕೊಟ್ಟು: ಕಳಚಿ, ಸಹಾಯಕ್ಕೆ ಬಾರದ; ಹಗೆ: ವೈರಿ; ವಾಯುಜ: ಭೀಮ; ಕೈದೊಳಸು: ಕೈಚಳಕ; ರಾಜ್ಯಶ್ರೀ; ರಾಜ್ಯಲಕ್ಷ್ಮಿ; ಮುಂದಲೆ: ತಲೆಯ ಮುಂದಿನ ಕೂದಲು; ಹೋಯಿತು: ಜಾರಿತು, ಕಳಚು; ಮರುಗು: ದುಃಖಿಸು; ಕೂಡೆ: ಜೊತೆ, ಒಟ್ಟು;

ಪದವಿಂಗಡಣೆ:
ಬಾಯ +ಬಿಟ್ಟುದು +ಸೇನೆ +ಕೌರವ
ರಾಯನ್+ಆವೆಡೆ +ದಳಕೆ +ಬಲುಗೈ
ನಾಯಕರು +ಕೃಪ +ಗುರುಸುತರು +ಕೈಗೊಟ್ಟರೇ +ಹಗೆಗೆ
ವಾಯುಜನ+ ಕೈದೊಳಸಿನಲಿ +ಕುರು
ರಾಯ +ರಾಜ್ಯಶ್ರೀಯ +ಮುಂದಲೆ
ಹೋಯಿತೋ +ಹಾ +ಎನುತ +ಮರುಗಿತು +ಕೂಡೆ +ಕುರುಸೇನೆ

ಅಚ್ಚರಿ:
(೧) ಆಶ್ಚರ್ಯವನ್ನು ಚಿತ್ರಿಸುವ ಬಗೆ – ಬಾಯ ಬಿಟ್ಟುದು ಸೇನೆ
(೨) ದುಃಖಿಸುವ ಸಂಗತಿ – ವಾಯುಜನ ಕೈದೊಳಸಿನಲಿ ಕುರು
ರಾಯ ರಾಜ್ಯಶ್ರೀಯ ಮುಂದಲೆ ಹೋಯಿತೋ ಹಾ ಎನುತ ಮರುಗಿತು ಕೂಡೆ ಕುರುಸೇನೆ