ಪದ್ಯ ೫೮: ದುರ್ಯೋಧನನು ಅಶ್ವತ್ಥಾಮನಿಗೆ ಏನು ಹೇಳಿದ?

ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ (ಗದಾ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ದೇವತೆಗಳು, ಗಂಧರ್ವರು, ಯಕ್ಷರು ನನ್ನ ಮೇಲೆ ಮುನಿದು ಏನು ಮಾಡಬಲ್ಲರು? ಈ ಮನುಷ್ಯರ ಮೋಸಕ್ಕೆ ನಾನು ಸಿಲುಕುವವನೇ? ನನ್ನನ್ನು ನೀವು ಅರಿತಿಲ್ಲ. ಜಲಸ್ತಂಭ ವಿದ್ಯೆಯನ್ನವಲಂಬಿಸಿ ನಾನು ಪಾತಾಳಾದಲ್ಲಿರುತ್ತೇನೆ. ಈ ಯುಧಿಷ್ಠಿರನು ಏನು ಮಾಡಿಯಾನು? ನೀವು ಮಾತ್ರ ಅವರಿಗೆ ಕಾಣಿಸಿಕೊಳ್ಳದಂತೆ ದೂರಕ್ಕೆ ಹೋಗಿರಿ.

ಅರ್ಥ:
ಅನಿಮಿಷ: ದೇವತೆ; ಗಂಧರ್ವ: ಒಂದು ದೇವಜಾತಿ; ಯಕ್ಷ:ದೇವತೆಗಳಲ್ಲಿ ಒಂದು ವರ್ಗ; ಮುನಿ: ಋಷಿ; ಮಾಯ:ಗಾರುಡಿ; ಮನುಜ: ನರ; ಸಾಧ್ಯ: ಸಾಧಿಸಬಹುದಾದುದು; ಅರಿ: ತಿಳಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಸಲಿಲ: ನೀರು; ಸ್ತಂಭ: ಸ್ಥಿರವಾಗಿರುವಿಕೆ; ವಿದ್ಯೆ: ಜ್ಞಾನ; ಪಾತಾಳ: ಅಧೋ ಲೋಕ; ಯಮ: ಜವ; ತನುಜ: ಮಗ; ರೂಹು: ರೂಪ; ಹೋಗು: ತೆರಳು;

ಪದವಿಂಗಡಣೆ:
ಅನಿಮಿಷರು+ ಗಂಧರ್ವ +ಯಕ್ಷರು
ಮುನಿದು +ಮಾಡುವುದೇನು +ಮಾಯದ
ಮನುಜರಿಗೆ+ ತಾ +ಸಾಧ್ಯವಹನೇ+ ತನ್ನನ್+ಅರಿಯಿರಲಾ
ವಿನುತ +ಸಲಿಲ+ಸ್ತಂಭ+ವಿದ್ಯೆಯೊಳ್
ಎನಗ್+ಇರವು +ಪಾತಾಳದಲಿ+ ಯಮ
ತನುಜನ್+ಏಗುವ +ರೂಹು+ತೋರದೆ+ ಹೋಗಿ +ನೀವೆಂದ

ಅಚ್ಚರಿ:
(೧) ಮ ಕಾರದ ಸಾಲು ಪದ – ಮುನಿದು ಮಾಡುವುದೇನು ಮಾಯದ ಮನುಜರಿಗೆ

ಪದ್ಯ ೪೪: ಸುದೇಷ್ಣೆಯು ಏಕೆ ಚಿಂತಿಸಿದಳು?

ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ (ವಿರಾಟ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕೀರ್ತಿಲತೆಯ ಚಿಗುರು ಬಾಡಿತು, ಮನ್ಮಥನ ಕಾಟದಿಂದ ಆರ್ತನಾಗಿರುವೆ, ವಂಶಕ್ಕೆ ಯಮನಾದೆ, ನಿನ್ನ ವಂಶವನ್ನು ಕೊಂದೆ, ಅರಿವು ತಪ್ಪಿದಎ ಮನುಷ್ಯರಿಗೆ ರಾವಣನಿಗೆ ಬಂದ ಗತಿಯೇ ಬರುತ್ತದೆ, ನಿನ್ನ ಈ ಧೂರ್ತತನಕ್ಕೆ ನಾನು ಹೆದರುತ್ತೇನೆ ಎಂದು ಸುದೇಷ್ಣೆಯು ಹೇಳಿದಳು.

ಅರ್ಥ:
ಕೀರ್ತಿ: ಯಶಸ್ಸು; ಲತೆ: ಬಳ್ಳಿ; ಕುಡಿ: ಚಿಗುರು; ಒಣಗು: ಬಾದು; ಮದನ: ಕಾಮ; ಆರ್ತ: ಕಷ್ಟ, ಸಂಕಟ; ಕುಲ: ವಂಶ; ಕಾಲ: ಯಮ; ಮೂರ್ತಿ: ರೂಪ; ಅವತರಿಸು: ಹುಟ್ಟು; ಸಂಹರಿಸು: ಸಾಯಿಸು; ಕುಲ: ವಂಶ; ಸ್ಫೂರ್ತಿ: ಪ್ರೇರಣೆ; ಮನುಜ: ಮಾನವ; ಆರ್ತಿ: ವ್ಯಥೆ, ಚಿಂತೆ; ಅರಿ: ತಿಳಿ; ಕಡು: ಬಹಳ; ಧೂರ್ತ: ದುಷ್ಟ; ಅಂಜು: ಹೆದರು; ನಡುಗು: ಕಂಪನ; ನಳಿನಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ಕೀರ್ತಿಲತೆ +ಕುಡಿ+ಒಣಗಿತೈ +ಮದನ
ಆರ್ತನಾದೈ+ ಕುಲಕೆ+ ಕಾಲನ
ಮೂರ್ತಿ +ನೀನ್+ಅವತರಿಸಿದೈ +ಸಂಹರಿಸಿದೈ+ ಕುಲವ
ಸ್ಫೂರ್ತಿಗ್+ಎಡೆ +ಮನುಜರಿಗೆ +ರಾವಣನ್
ಆರ್ತಿ+ಅಪ್ಪುದು +ಅರಿಯಲಾ +ಕಡು
ಧೂರ್ತತನಕ್+ಅಂಜುವೆನೆನುತ+ ನಡುಗಿದಳು +ನಳಿನಾಕ್ಷಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೀರ್ತಿಲತೆ ಕುಡಿಯೊಣಗಿತೈ, ಕುಲಕೆ ಕಾಲನಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ

ಪದ್ಯ ೫೬: ಐವರು ಇಂದ್ರರು ಶಿವನ ಯಾವ ಮಾತಿಗೆ ಗಾಬರಿಗೊಂಡರು?

ಜನಿಸುವುದು ನೀವೈವರಿಂದ್ರರು
ಮನುಜಲೋಕದೊಳರಸುಕುಲದಲಿ
ವನಿತೆ ನಿಮ್ಮೈವರಿಗೆಯಹಳೊಬ್ಬಳೆ ನಿಧಾನವಿದು
ಎನಲು ನಡುಗಿದರಕಟ ಮೊದಲಲಿ
ಮನುಜ ಜನ್ಮವೆ ಕಷ್ಟವದರೊಳು
ವನಿತೆಯೊಡಹುಟ್ಟಿದರಿಗೊಬ್ಬಳೆ ಶಿವ ಶಿವಾಯೆನುತ (ಆದಿ ಪರ್ವ, ೧೬ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕಾತ್ಯಾಯನಿಯ ದೆಸೆಯಿಂದ ಬಿಡುಗೊಡೆಗೊಂಡ ಐವರು ಇಂದ್ರರಿಗೆ ಶಿವನು, ನೀವೈವರು ಇಂದ್ರರು ಭೂಲೋಕದಲ್ಲಿ ಹುಟ್ಟಿರಿ, ನಿಮ್ಮೈವರಿಗೂ ಒಬ್ಬಳೆ ಹೆಂಡತಿಯಾಗುತ್ತಾಳೆ, ಇದು ನಮ್ಮ ದೃಢಸಂಕಲ್ಪ, ಎಂದು ಹೇಳಲು ಆ ಐವರಿಂದ್ರರು ಹೆದರಿ ನಡುಗಿದರು ಮೊದಲಾಗಿ ಮನುಷ್ಯಜನ್ಮವೇ ಕಷ್ಟ ಅದರಲ್ಲಿ ನಮ್ಮೈವರಿಗೂ ಒಬ್ಬಳೆ ಹೆಂಡತಿಯಾದರೆ ಏನು ಗತಿ, ಅಯ್ಯೋ ಶಿವ ಶಿವ ಎಂದರು.

ಅರ್ಥ:
ಜನಿಸು: ಹುಟ್ಟು; ಮನುಜ: ಮನುಷ್ಯ; ಲೋಕ: ಜಗತ್ತು; ಅರಸು: ಕ್ಷತ್ರಿಯ, ರಾಜ; ಕುಲ: ವಂಶ; ವನಿತೆ: ಹುಡುಗಿ, ಹೆಂಡತಿ; ನಿಧಾನ: ನಿರ್ಧಾರ, ದೃಢಸಂಕಲ್ಪ; ನಡುಗು: ಹೆದರು; ಅಕಟ: ಅಯ್ಯೋ; ಕಷ್ಟ: ಕಠಿಣ; ಒಡಹುಟ್ಟು: ಸಹೋದರರು, ಜೊತೆಯಲ್ಲಿ ಹುಟ್ಟು;

ಪದವಿಂಗಡಣೆ:
ಜನಿಸುವುದು+ ನೀವ್+ಐವರ್+ಇಂದ್ರರು
ಮನುಜಲೋಕದೊಳ್+ಅರಸು+ಕುಲದಲಿ
ವನಿತೆ+ ನಿಮ್ಮೈವರಿಗೆಯಹಳ್+ಒಬ್ಬಳೆ +ನಿಧಾನವಿದು
ಎನಲು+ ನಡುಗಿದರ್+ಅಕಟ +ಮೊದಲಲಿ
ಮನುಜ +ಜನ್ಮವೆ +ಕಷ್ಟ+ವದರೊಳು
ವನಿತೆ+ಯೊಡಹುಟ್ಟಿದರಿಗ್+ಒಬ್ಬಳೆ +ಶಿವ+ ಶಿವಾಯೆನುತ

ಅಚ್ಚರಿ:
(೧) ವನಿತೆ – ೩, ೬ ಸಾಲಿನ ಮೊದಲ ಪದ, ಮನುಜ – ೨, ೫ ಸಾಲಿನ ಮೊದಲ ಪದ
(೨) ಐವರು ಎಂದು ೨ ಬಾರಿ ಪ್ರಯೋಗಿಸಿದ ಬಳಿಕ ಕೊನೆಯ ಸಾಲಿನಲ್ಲಿ ಒಡಹುಟ್ಟಿದವರು ಎಂಬ ಪ್ರಯೋಗ
(೩) ಗಾಬರಿಯನ್ನು ತೋರಿಸುವ ಪದಗಳು – ನಡುಗಿದರು, ಅಕಟ, ಶಿವ ಶಿವ