ಪದ್ಯ ೩೪: ಭೂಮಿಗೆ ಅಧಿಪತಿಯಾರು?

ಆರಜೋಗುಣಕಬುಜಭವನ ವಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನು ಶತರೂಪಾಭಿಧಾನದಲಿ
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ (ಅರಣ್ಯ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ರಜೋಗುಣದ ಬ್ರಹ್ಮನು ತನ್ನ ಶರೀರದ ಅರ್ಧದಿಂದ ಶತರೂಪೆಯನ್ನು ಸೃಷ್ಟಿಸಿದನು. ಇನ್ನರ್ಧದಿಂದ ಮನುವನ್ನು ಸೃಷ್ಟಿಸಿದನು. ಮನುವು ಭೂಮಿಗೆ ಅಧಿಪತಿಯಾಗಿ ಧರ್ಮವನ್ನು ವಿಸ್ತರಿಸಿದನು.

ಅರ್ಥ:
ರಜಸ್ಸು: ಮೂರು ಗುಣಗಳಲ್ಲಿ ಒಂದು; ಗುಣ: ನಡತೆ, ಸ್ವಭಾವ; ಅಬುಜಭವ: ಬ್ರಹ್ಮ; ವಿಕಾರ: ಬದಲಾವಣೆ, ಮಾರ್ಪಾಟು; ಶರೀರ: ದೇಹ; ಅರ್ಧ: ಒಂದರ ಎರಡನೇ ಭಾಗ; ನಾರಿ: ಹೆಣ್ಣು; ಶತ: ನೂರು; ರೂಪ: ಆಕಾರ; ಅಭಿಧಾನ: ಹೆಸರು; ಸೇರಿಸು: ಜೋಡಿಸು; ಮನು:ಮನುಷ್ಯ ಕುಲದ ಮೂಲಪುರುಷ; ಉದಾರ: ತ್ಯಾಗ ಬುದ್ಧಿಯುಳ್ಳವನು; ಚರಿತ: ನಡೆದುದು; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ವಿಸ್ತರ: ಹಬ್ಬುಗೆ, ವಿಸ್ತಾರ; ಭುವನ: ಲೋಕ, ಜಗತ್ತು; ವಿಭು:ಒಡೆಯ, ಅರಸು;

ಪದವಿಂಗಡಣೆ:
ಆ+ರಜೋಗುಣಕ್+ಅಬುಜಭವನ+ ವಿ
ಕಾರಿ +ತನ್ನ +ಶರೀರ್+ಅರ್ಧವ
ನಾರಿಯನು +ಮಾಡಿದನು +ಶತರೂಪ+ಅಭಿಧಾನದಲಿ
ಸೇರಿಸಿದನ್+ಅರ್ಧದಲಿ +ಮನುವನ್
ಉದಾರ +ಚರಿತನು +ಸಕಲ +ಧರ್ಮದ
ಸಾರವನು +ವಿಸ್ತರಿಸಿದನು+ ಮನು +ಭುವನ +ವಿಭುವಾಗಿ

ಅಚ್ಚರಿ:
(೧) ಮನುವಿನ ಕಾರ್ಯ – ಸೇರಿಸಿದನರ್ಧದಲಿ ಮನುವನುದಾರ ಚರಿತನು ಸಕಲ ಧರ್ಮದ ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ

ಪದ್ಯ ೮: ಯಾವ ದೇವತಾ ಪುರುಷರು ಯಾರ ಪರವಾಗಿ ನಿಂತರು?

ಯಾತುಧಾನ ಕುಬೇರ ಕಿನ್ನರ
ಮಾತೃಗಣ ಕರ್ಣನಲಿ ಸುಮನೋ
ಜಾತ ಚಿತ್ರ ರಥಾದಿ ಗಂಧರ್ವರು ವಿಪಕ್ಷದಲಿ
ಭೂತಗಣವೀಚೆಯಲಿ ದೆಸೆ ದಿಗು
ಜಾತ ಮನು ವಸು ನಾರದಾದಿ ಮ
ಹಾತಪಸ್ವಿಗಳತ್ತಲಾಯಿತು ರಾಯ ಕೇಳೆಂದ (ಕರ್ಣ ಪರ್ವ, ೨೨ ಸಂಧಿ, ೮ ಪದ್ಯ)

ತಾತ್ಪರ್ಯ:
ನಿರಋತಿ, ಕುಬೇರ, ಕಿನ್ನರ, ಮಾತೃಗಣಗಳು, ಕರ್ಣನ ಪರ ನಿಂತವು, ಸುಮನೋಜಾತ ಚಿತ್ರರಥನೇ ಮೊದಲಾದ ಗಂಧರ್ವರು ಅರ್ಜುನನ ಪರ ನಿಂತರು. ಭೂತಗಣಗಳು ನಮ್ಮ ಕಡೆ, ದಿಕ್ಕುಗಳು ಮನು, ವಸು ನಾರದಾದಿ ಮಹಾತಪಸ್ವಿಗಳು ಅವರ ಕಡೆ ನಿಂತರೆಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮಾತೃ: ತಾಯಿ; ಗಣ: ಗುಂಪು; ಆದಿ: ಮುಂತಾದ; ವಿಪಕ್ಷ: ವಿರುದ್ಧ ಗುಂಪು; ವೀಚಿ: ಸಣ್ಣಅಲೆ, ತರಂಗ; ದೆಸೆ: ದಿಕ್ಕು; ಜಾತ: ಹುಟ್ಟಿದ; ವಸು: ದೇವತೆಗಳ ಒಂದು ವರ್ಗ, ಐಶ್ವರ್ಯ; ಮನು: ಮನುಷ್ಯ ಕುಲದ ಮೂಲಪುರುಷ, ಬ್ರಹ್ಮನ ಮಾನಸ ಪುತ್ರ; ಮಹಾ: ಶ್ರೇಷ್ಠ; ತಪಸ್ವಿ: ಮುನಿ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಯಾತುಧಾನ +ಕುಬೇರ +ಕಿನ್ನರ
ಮಾತೃಗಣ+ ಕರ್ಣನಲಿ +ಸುಮನೋ
ಜಾತ +ಚಿತ್ರ +ರಥಾದಿ +ಗಂಧರ್ವರು +ವಿಪಕ್ಷದಲಿ
ಭೂತಗಣ+ವೀಚೆಯಲಿ +ದೆಸೆ +ದಿಗು
ಜಾತ +ಮನು +ವಸು +ನಾರದಾದಿ +ಮ
ಹಾ+ತಪಸ್ವಿಗಳ್+ಅತ್ತಲಾಯಿತು +ರಾಯ +ಕೇಳೆಂದ

ಪದ್ಯ ೨೮: ಕೃಷ್ಣನ ರೋಮರೋಮಗಳಲ್ಲಿ ಯಾರು ಕಂಡರು?

ಸುರರು ಖಚರರು ಕಿನ್ನರರು ಕಿಂ
ಪುರುಷರನುಪಮ ಸಿದ್ಧ ವಿದ್ಯಾ
ಧರರು ವಸುಗಳು ಮನುಗಳಾದಿತ್ಯರು ಭುಜಂಗಮಯ
ಗರುಡ ಗಂಧರ್ವಾಶ್ವಿನಿ ದೇ
ವರುಗಳಖಿಳಾಪ್ಸರಿಯರೆಸೆದರು
ಪರಮ ಪುರುಷನ ರೋಮರೋಮದ ಕುಳಿಯ ಚೌಕದೊಳು (ಉದ್ಯೋಗ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ದೇವತೆಗಳು, ಕಿನ್ನರರು, ಕಿಂಪುರುಷರು, ಸಿದ್ಧರು, ವಿದ್ಯಾಧರರು, ವಸುಗಳು, ಮನುಗಳು, ಆದಿತ್ಯರು, ಉರಗರು, ಗರುಡ, ಗಂಧರ್ವರು, ಅಶ್ವಿನೀ ದೇವತೆಗಳು, ಅಪ್ಸರೆಯರು, ಇವರೆಲ್ಲರೂ ಕೃಷ್ಣನ ಆ ವಿಶ್ವರೂಪದ ರೋಮರೋಮಗಳಲ್ಲಿ ತೋರಿದರು.

ಅರ್ಥ:
ಸುರರು: ದೇವತೆಗಳು; ಖಚರ: ಗಂಧರ್ವ; ಕಿನ್ನರ:ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ; ಸಿದ್ಧ: ಸಾಧಿಸಿದವನು; ವಿದ್ಯಾಧರ: ದೇವತೆಗಳ ವರ್ಗ; ವಸು: ದೇವತೆಗಳ ಒಂದು ವರ್ಗ, ೮ರ ಸಂಕೇತ;
ಮನು: ಮನುಷ್ಯ ಕುಲದ ಮೂಲಪುರುಷ, ೧೪ರ ಸಂಕೇತ; ಆದಿತ್ಯ: ಸೂರ್ಯ; ಭುಜಂಗ: ಸರ್ಪ; ಗರುಡ: ವಿಷ್ಣುವಿನ ವಾಹನ, ಪಕ್ಷಿ, ಖಗ; ಗಂಧರ: ಗಂಧರ್ವರು; ಅಶ್ವಿನಿ: ದೇವತೆಗಳ ವರ್ಗ; ಅಖಿಳ: ಎಲ್ಲಾ; ಅಪ್ಸರೆ: ದೇವಕನ್ಯೆ; ಎಸೆ: ತೋರು; ಪರಮ: ಶ್ರೇಷ್ಠ; ಪುರುಷ: ಮನುಷ್ಯ; ರೋಮ: ಕೂದಲು; ಕುಳಿ:ಹಳ್ಳ; ಚೌಕ: ಕ್ರಮಬದ್ಧವಾದ, ಮೇರೆ; ಅನುಪಮ:ಉತ್ಕೃಷ್ಟವಾದುದು;

ಪದವಿಂಗಡಣೆ:
ಸುರರು +ಖಚರರು +ಕಿನ್ನರರು+ ಕಿಂ
ಪುರುಷರ್+ಅನುಪಮ +ಸಿದ್ಧ +ವಿದ್ಯಾ
ಧರರು +ವಸುಗಳು +ಮನುಗಳ್+ಆದಿತ್ಯರು +ಭುಜಂಗಮಯ
ಗರುಡ+ ಗಂಧರ್ವ+ಅಶ್ವಿನಿ+ ದೇ
ವರುಗಳ್+ಅಖಿಳ+ಅಪ್ಸರಿಯರ್+ಎಸೆದರು
ಪರಮ +ಪುರುಷನ +ರೋಮರೋಮದ +ಕುಳಿಯ +ಚೌಕದೊಳು

ಅಚ್ಚರಿ:
(೧) ದೇವತೆಗಳ ವರ್ಗಗಳ ವಿವರ – ಸುರ, ಖಚರ, ಕಿನ್ನರ,ಕಿಂಪುರುಷ, ಸಿದ್ಧ, ವಿದ್ಯಾಧರ, ವಸು, ಮನು, ಆದಿತ್ಯ, ಭುಜಂಗ, ಗರುಡ, ಗಂಧರ್ವ, ಅಶ್ವಿನಿ ದೇವರು, ಅಪ್ಸರೆ