ಪದ್ಯ ೩೦: ಪ್ರಾತಿಕಾಮಿಕನು ಪಾಂಡವರಿಗೆ ಯಾವ ಸಂದೇಶವನ್ನು ಹೇಳಿದ?

ಬರವು ಬೇರೇನೊಡೆಯರಟ್ಟಿದ
ರರಸನಲ್ಲಿಗೆ ಹಿಂದೆ ಜೂಜಿನೊ
ಳೊರಸೊರಸು ಮಿಗೆ ಮಸೆದುದಿತ್ತಂಡಕ್ಕೆ ಮನಮುನಿಸು
ಹರೆದು ಹೋಯ್ತದು ಹೃದಯ ಶುದ್ಧಿಯೊ
ಳೆರಡರಸುಗಳು ಜೂಜನಾಡಲಿ
ಮರಳಿ ಬಿಜಯಂಗೈವುದೆಂದಟ್ಟಿದನು ಧೃತರಾಷ್ಟ್ರ (ಸಭಾ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು, ಧೃತರಾಷ್ಟ್ರನು ನನ್ನನ್ನು ನಿಮ್ಮಲ್ಲಿಗೆ ಕಳಿಸಿದ್ದಾನೆ. ಹಿಂದಾದ ಜೂಜಿನಲ್ಲಿ ಎರಡು ಪಕ್ಷದವರಿಗೂ ಕೋಪ, ಘರ್ಷಣೆಗಳು ಮಸೆದು ಮನಸ್ಸುಗಳು ಮುರಿದು ಹೋದವು. ಈಗ ನೀವು ಬಂದು ಹೃದಯ ಶುದ್ಧಿಯಿಂದ ವಿನೋದದ ಜೂಜನ್ನಾಡಲಿ ಎಂದು ತಿಳಿಸಿ ನಿಮ್ಮನ್ನು ಕರೆದುಕೊಂಡು ಹೋಗಲು ನನ್ನನ್ನು ಕಳಿಸಿದ್ದಾನೆ ಎಂದನು.

ಅರ್ಥ:
ಬರವು: ಆಗಮನ; ಬೇರೆ: ಅನ್ಯ; ಒಡೆಯ: ದೊರೆ; ಅಟ್ಟು: ಕಳುಹಿಸು; ಅರಸ: ರಾಜ; ಹಿಂದೆ: ಕಳೆದ, ಮುಂಚೆ; ಜೂಜು: ದ್ಯೂತ; ಒರಸು: ಅಳಿ, ನಾಶ; ಮಿಗೆ: ಮತ್ತು; ಮಸೆ: ದ್ವೇಷ, ಹಗೆ; ತಂಡ: ಗುಂಪು; ಮನ: ಮನಸ್ಸು; ಮುನಿಸು: ಕೋಪ, ಸಿಟ್ಟು; ಹರೆದು: ಸೀಳು; ಹೃದಯ: ಎದೆ; ಶುದ್ಧಿ: ದೋಷವಿಲ್ಲದಿರುವಿಕೆ, ಸ್ವಚ್ಛ; ಅರಸು: ರಾಜ; ಮರಳಿ: ಪುನಃ; ಬಿಜಯಂಗೈ: ಹೊರಡು;

ಪದವಿಂಗಡಣೆ:
ಬರವು +ಬೇರೇನ್+ಒಡೆಯರ್+ಅಟ್ಟಿದರ್
ಅರಸನ್+ಇಲ್ಲಿಗೆ+ ಹಿಂದೆ+ ಜೂಜಿನೊಳ್
ಒರಸೊರಸು +ಮಿಗೆ +ಮಸೆದುದಿತ್+ತಂಡಕ್ಕೆ +ಮನ+ಮುನಿಸು
ಹರೆದು +ಹೋಯ್ತದು +ಹೃದಯ +ಶುದ್ಧಿಯೊಳ್
ಎರಡ್+ಅರಸುಗಳು +ಜೂಜನಾಡಲಿ
ಮರಳಿ+ ಬಿಜಯಂಗೈವುದ್+ಎಂದ್+ಅಟ್ಟಿದನು +ಧೃತರಾಷ್ಟ್ರ

ಅಚ್ಚರಿ:
(೧) ಅಟ್ಟಿದ – ಪದದ ಬಳಕೆ, ೧,೬ ಸಾಲಿನ ಕೊನೆಯ ಪದಗಳು
(೨) ಒಡೆಯ, ಅರಸ – ಸಮನಾರ್ಥಕ ಪದ
(೩) ಹ ಕಾರದ ತ್ರಿವಳಿ ಪದ – ಹರೆದು ಹೋಯ್ತದು ಹೃದಯ