ಪದ್ಯ ೫೮: ದುರ್ಯೊಧನನು ಕೃಪ, ಅಶ್ವತ್ಥಾಮರಿಗೆ ಏನು ಹೇಳಿದನು?

ಹದುಳಿಸಿರೆ ಸಾಕೇಳಿ ಸಾಕಿ
ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ (ಗದಾ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಕೌರವನು ಕೃಪ, ಅಶ್ವತ್ಥಾಮ, ಕೃತವರ್ಮರ ಅಳಲನ್ನು ನೋಡಿ ನಗುತ್ತಾ, ನೀವೆಲ್ಲರೂ ಸಮಾಧಾನ ತಂದುಕೊಂಡು ಏಳಿರಿ. ಈ ದುಃಖ ಇನ್ನು ಸಾಕು. ದೈವದ ಮನೋಕ್ಷೋಭೆಯು ನಮಗೆ ಈ ಕಂಟಕದ ವ್ಯಥೆಯನ್ನು ತಮ್ದಿತು. ನಾವು ನಾಳೆ ಉದಯ ಕಾಲದಲ್ಲಿ ಈ ಶರೀರವನ್ನು ಒದೆದು ಹಾಯುತ್ತೇವೆ. ನಿಮ್ಮ ದಾರಿಯಲ್ಲಿ ನೀವು ಬಿಜಯಂಗೈಯಿರಿ ಎಂದು ಹೇಳಿದನು.

ಅರ್ಥ:
ಹದುಳ: ಉತ್ಸಾಹ, ಹುರುಪು; ಸಾಕು: ನಿಲ್ಲು; ದೈವ: ಭಗವಂತ; ಕದಡು: ಕ್ಷೋಭೆಗೊಳಿಸು, ಕಲಕು; ಮನ: ಮನಸ್ಸು; ಕಾಣಿಸು: ತೋರು; ಕಂಟಕ: ತೊಂದರೆ; ವ್ಯಥೆ: ನೋವು; ಉದಯ: ಹುಟ್ಟು; ಶರೀರ: ದೇಹ; ಒದೆ: ನೂಕು; ಹಾಯ್ವು: ನೆಗೆ, ಹಾರು; ಮಾರ್ಗ: ದಾರಿ; ಬಿಜಯಂಗೈ: ದಯಮಾಡಿಸಿ, ತೆರಳಿ; ನಗು: ಹರ್ಷ;

ಪದವಿಂಗಡಣೆ:
ಹದುಳಿಸಿರೆ +ಸಾಕೇಳಿ +ಸಾಕಿನ್
ಇದರಲ್+ಇನ್ನೇನ್+ಅಹುದು +ದೈವದ
ಕದಡು +ಮನಗಾಣಿಸಿತು +ನಮಗೀ +ಕಂಟಕ+ವ್ಯಥೆಯ
ಉದಯದಲಿ +ನಾವೀ +ಶರೀರವನ್
ಒದೆದು +ಹಾಯ್ವೆವು+ ನೀವು +ನಿಜ+ಮಾ
ರ್ಗದಲಿ +ಬಿಜಯಂಗೈವುದ್+ಎಂದನು +ನಗುತ +ಕುರುರಾಯ

ಅಚ್ಚರಿ:
(೧) ದುರ್ಯೋಧನ ತನ್ನ ಸಾವಿನ ಬಗ್ಗೆ ಹೇಳುವ ಪರಿ – ಉದಯದಲಿ ನಾವೀ ಶರೀರವನೊದೆದು ಹಾಯ್ವೆವು