ಪದ್ಯ ೬೨: ಶಿಶುಪಾಲನನ್ನು ಜಡಾತ್ಮನೆಂದು ಭೀಷ್ಮರು ಏಕೆ ಕರೆದರು?

ಇಂಗಿತಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣಪ
ಥಂಗಳಲಿ ಗೋಚರಿಸಲರಿವುದು ಲೋಕವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯನೃಪನೆಂದ (ಸಭಾ ಪರ್ವ, ೧೦ ಸಂಧಿ, ೬೨ ಪದ್ಯ)

ತಾತ್ಪರ್ಯ:
ಉತ್ತಮರಾದವರು ಆಶಯವನ್ನು ತಿಳಿದೇ ಕಾರ್ಯಪ್ರವೃತ್ತರಾಗುತ್ತಾರೆ, ಮಧ್ಯಮರು ಕೇಳಿ ತಿಳಿಯುತ್ತಾರೆ, ಅಧಮರು ಕಣ್ಣಿನಲ್ಲಿ ನೋಡಿ ತಿಳಿಯುತ್ತಾರೆ. ಈ ಶಿಶುಪಾಲನಾದರೋ ಕಣ್ಣಿನಿಂದ ನೋಡಿ, ಕಿವಿಯಿಂದ ಕೇಳಿ ಶ್ರೀಕೃಷ್ಣನ ಇಂಗಿತವನ್ನು ಅರಿಯದ ಜಡಾತ್ಮ ಎಂದು ಭೀಷ್ಮರು ಶಿಶುಪಾಲನನ್ನು ನಿಂದಿಸಿದರು.

ಅರ್ಥ:
ಇಂಗಿತ: ಆಶಯ, ಅಭಿಪ್ರಾಯ; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಮಧ್ಯಮ: ತಾಮಸ ಜೀವಿ, ಸಾಧಾರಣವಾದ; ಕರ್ಣ: ಕಿವಿ; ಪಥ: ದಾರಿ; ಗೋಚರಿಸು: ತೋರು; ಲೋಕ: ಜಗತ್ತು; ವೃತ್ತಿ: ಸ್ಥಿತಿ, ನಡವಳಿಕೆ; ಕಂಗಳು: ನೇತ್ರ; ಕಂಡು: ನೋಡಿ; ಅರಿ: ತಿಳಿ; ಅಧಮ: ಕೀಳು, ನೀಚ; ಕಿವಿ: ಕರ್ಣ; ಮೇಣ್: ಅಥವ; ಹರಿ: ವಿಷ್ಣು; ಜಡ: ಅಚೇತನವಾದುದು, ಚಟುವಟಿಕೆಯಿಲ್ಲದ; ಚೈದ್ಯ: ಶಿಶುಪಾಲ; ನೃಪ: ರಾಜ;

ಪದವಿಂಗಡಣೆ:
ಇಂಗಿತಲ್+ಅರಿವುದು +ಮಹಾತ್ಮರಿಗ್
ಅಂಗವಿದು+ ಮಧ್ಯಮರು +ಕರ್ಣಪ
ಥಂಗಳಲಿ +ಗೋಚರಿಸಲ್+ಅರಿವುದು +ಲೋಕ+ವೃತ್ತಿಯಿದು
ಕಂಗಳಲಿ +ಕಂಡ್+ಅರಿವರ್+ಅಧಮರು
ಕಂಗಳಲಿ +ಕಿವಿಗಳಲಿ +ಮೇಣ್ +ಹರಿ
ಯಿಂಗಿತವನ್+ಅರಿಯದ +ಜಡಾತ್ಮನು +ಚೈದ್ಯ+ನೃಪನೆಂದ

ಅಚ್ಚರಿ:
(೧) ಉತ್ತಮ, ಮಧ್ಯಮ ಮತ್ತು ಅಧಮರ ಗುಣವಿಶೇಷಗಳನ್ನು ತಿಳಿಸುವ ಪದ್ಯ
(೨) ಪಥಂಗಳಲಿ, ಕಂಗಳಲಿ, ಕಿವಿಗಳಲಿ – ಪ್ರಾಸಪದಗಳ ಪ್ರಯೋಗ

ಪದ್ಯ ೧೨೬: ಉತ್ತಮ ಅಧಮನೆಂದು ಹೇಗೆ ನಿರ್ಧರಿಸಬೇಕು?

ಜಾತರೂಪದ ಲೇಸು ಹೊಲ್ಲೆಹ
ವೀತಿಹೋತ್ರನ ದೇಹಕಾರಣ
ಭೂತವಾಗಿಹುದವಗೆ ಸದಸತ್ತುಗಳ ಭೇದವನು
ನೀತಿ ಮುಖದಿಂದರಿವುದುತ್ತಮ
ನೀತ ಮಧ್ಯಮನೀತ ಕನಿಯಸ
ನೀತನೆಂಬುದನರಸ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೨೬ ಪದ್ಯ)

ತಾತ್ಪರ್ಯ:
ಬಂಗಾರದ ಗುಣವನ್ನು ಅಗ್ನಿಯಲ್ಲಿಟ್ಟು ಪರೀಕ್ಷೆಮಾಡಿ ತಿಳಿದುಕೊಳ್ಳುವಂತೆ, ಸತ್ಯ ಅಸತ್ಯಗಳೆಂಬ ಭೇದವನ್ನು ಅವರವರ ನೀತಿಯನ್ನು ಗಮನಿಸಿ ಇವನು ಉತ್ತಮ, ಈತ ಮಧ್ಯಮ ಮತ್ತು ಈತ ಅಧಮನೆಂದು ನಿರ್ಧರಿಸಬೇಕು.

ಅರ್ಥ:
ಜಾತ:ಹುಟ್ಟಿದುದು; ರೂಪ:ಆಕಾರ, ಜಾತರೂಪ: ಬಂಗಾರ; ಸ್ವಭಾವ; ಲೇಸು: ಒಳಿತು; ಹೊಲ್ಲೆಹ: ದೋಷ; ವೀತಿಹೋತ್ರ: ಅಗ್ನಿ; ದೇಹ: ತನು; ಕಾರಣ: ನಿಮಿತ್ತ; ಭೂತ:ಹಿಂದೆ ಆದುದು, ಪರಮಾತ್ಮ; ಸದಸತ್ತು: ಸತ್ಯ ಮತ್ತು ಅಸತ್ಯ; ಭೇದ: ಬಿರುಕು; ನೀತಿ: ಮಾರ್ಗ ದರ್ಶನ, ಒಳ್ಳೆಯ ನಡತೆ; ಮುಖ: ಆನನ; ಅರಿವು: ತಿಳಿ; ಉತ್ತಮ: ಶ್ರೇಷ್ಠ; ಮಧ್ಯಮ: ಸಾಧಾರಣವಾದುದು; ಕನಿಯ: ಕೆಳಮಟ್ಟದ; ಅರಸ: ರಾಜ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಜಾತರೂಪದ +ಲೇಸು +ಹೊಲ್ಲೆಹ
ವೀತಿಹೋತ್ರನ+ ದೇಹಕಾರಣ
ಭೂತವಾಗಿಹುದ್+ಅವಗೆ +ಸತ್+ಅಸತ್ತುಗಳ+ ಭೇದವನು
ನೀತಿ+ ಮುಖದಿಂದ್+ಅರಿವುದ್+ಉತ್ತಮನ್
ಈತ +ಮಧ್ಯಮನ್+ಈತ +ಕನಿಯಸನ್
ಈತನ್+ಎಂಬುದನ್+ಅರಸ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಾತರೂಪದ ಲೇಸು ಹೊಲ್ಲೆಹ ವೀತಿಹೋತ್ರನ ದೇಹಕಾರಣ ಭೂತವಾಗಿಹುದವಗೆ ಸದಸತ್ತುಗಳ ಭೇದವನು
(೨) ಸದಸತ್ತು – ಸತ್ಯ ಮತ್ತು ಸುಳ್ಳನ್ನು ಒಂದೇ ಪದದಲ್ಲಿ ಮೂಡಿಸಿರುವುದು
(೩) ಉತ್ತಮ, ಮಧ್ಯಮ, ಅಧಮ – ಮನುಷ್ಯನ ಸ್ಥರಗಳನ್ನು ಹೇಳಿರುವುದು
(೪) ಜಾತ, ಭೂತ, ವೀತಿ, ನೀತಿ – ಪ್ರಾಸ ಪದಗಳು

ಪದ್ಯ ೨೭: ಯಾವ ಮೂವರು ಸ್ವತಂತ್ರರಲ್ಲ?

ಪಿತನಿರಲು ದಾತಾರನಿರೆ ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ್ಯದವರಲ್ಲಾವ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರುಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ತಂದೆಯಿದ್ದರೆ ಮಗ, ಕೊಡುವವನಿದ್ದರೆ (ಒಡೆಯ) ದಾಸ, ಪತಿಯಿದ್ದರೆ ಸತಿ, ಈ ರೀತಿಯಾಗಿ, ಮಗ, ಸೇವಕ, ಹೆಂಡತಿ ಈ ಮೂವರು ಯಾವಕಾಲದಲ್ಲೂ ಸ್ವತಂತ್ರ್ಯರಲ್ಲ. ಭೂಮಿಯಲ್ಲಿ ಉತ್ತಮ, ಮಧ್ಯಮ, ಅಧಮ ಮನುಷ್ಯರ ಮನಸ್ಸಿನ ಇಂಗಿತ ಅವರ ಪ್ರಭಾವ, ಅವರ ವ್ಯಾಪ್ತಿಯನ್ನು ನೀನು ತಿಳಿಯೆಯಾ ಎಂದು ವಿದುರ ಧೃತರಾಷ್ಟ್ರನನ್ನು ಕೇಳಿದ.

ಅರ್ಥ:
ಪಿತ: ತಂದೆ; ದಾತಾರ: ಕಾಪಾಡುವವ, ದಾನಿ; ನಿಜ: ಸತ್ಯ, ನೈಜ; ಪತಿ: ಗಂಡ; ಸುತ: ಮಗ; ದಾಸ: ಸೇವಕ, ಸತಿ: ಪತ್ನಿ; ತ್ರಿ: ಮೂರು; ಸ್ವಾತಂತ್ರ್ಯ: ಬಿಡುಗಡೆ; ಕಾಲ: ಸಮಯ; ಕ್ಷಿತಿ: ಭೂಮಿ; ಉತ್ತಮ: ಶ್ರೇಷ್ಠ; ಮಧ್ಯಮ: ಸಾಧಾರಣವಾದ; ಅಧಮ: ಕೀಳು; ಗತಿ: ಇರುವ ಸ್ಥಿತಿ; ಪುರುಷ:ಮನುಷ್ಯ, ಮಾನವ, ನರ, ವಿವೇಕ; ತ್ರಯ: ಮೂರು; ಇಂಗಿತ: ಆಶಯ, ಅಭಿಪ್ರಾಯ; ಆಯತ: ಉಚಿತವಾದ ಕ್ರಮ, ವಿಶಾಲವಾದ;ಅರಿ: ತಿಳಿ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪಿತನಿರಲು +ದಾತಾರನಿರೆ+ ನಿಜ
ಪತಿಯಿರಲು +ಸುತ +ದಾಸ +ಸತಿ+ಯೀ
ತ್ರಿತಯರುಂ +ಸ್ವಾತಂತ್ರ್ಯದವರಲ್+ಆವ +ಕಾಲದಲಿ
ಕ್ಷಿತಿಯೊಳ್+ಉತ್ತಮ +ಮಧ್ಯಮ+ಅಧಮ
ಗತಿಯ +ಪುರುಷ+ತ್ರಯವನ್+ಅವರ್+ಇಂ
ಗಿತವನ್+ಅವರ್+ಆಯತವನ್+ಅರಿವೈ+ ಭೂಪ +ಕೇಳೆಂದ

ಅಚ್ಚರಿ:
(೧) ಸುತ, ದಾಸ, ಸತಿ ಯರು ಸ್ವತಂತ್ರ್ಯರಲ್ಲ ಎಂದು ತಿಳಿಸುವ ಪದ್ಯ
(೨) ಉತ್ತಮ, ಮಧ್ಯಮ, ಅಧಮ ರೀತಿಯ ಪುರುಷರ ವರ್ಗವನ್ನು ಹೇಳುವ ಪದ್ಯ
(೩) ತ್ರಿತಯ, ತ್ರಯ – ಮೂರನ್ನು ಸೂಚಿಸುವ ಪದ
(೨) ಅವರ ಇಂಗಿತ ಅವರ ಆಯತ – ಅವರ್ ಪದದ ಬಳಕೆ