ಪದ್ಯ ೬೧: ಧರ್ಮಜನು ವಸುದೇವನಿಗೇನು ಹೇಳಿದ?

ಅರಸಿಯೈದೆತನಕ್ಕೆಯೆಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆಯೆಮಗೆ
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯರೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯೊಳು ಮನ್ನಿಸಿದ (ವಿರಾಟ ಪರ್ವ, ೧೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು, ಮಾವ, ದ್ರೌಪದಿಯ ಮುತ್ತೈದೆ ಭಾಗ್ಯಕ್ಕೆ ನಮ್ಮ ಆಯುಷ್ಯಕ್ಕೆ, ರಾಜ್ಯದ ಸೊಗಸಿಗೆ ನಿಮ್ಮ ಮಗನಾದ ಈ ಕೃಷ್ಣನ ಕರುಣೆಯೇ ಕಾರಣ, ನಮಗೆ ದೇವತೆಗಳೂ ಸರಿಯಿಲ್ಲವೆಂದ ಮೇಲೆ, ಮನುಷ್ಯರು ಯಾವ ಲೆಕ್ಕ, ಎಂದು ವಸುದೇವನಿಗೆ ಹೇಳಿದನು.

ಅರ್ಥ:
ಅರಸಿ: ರಾಣಿ; ಐದು: ಬಂದು ಸೇರು; ಐದೆತನ: ಮುತ್ತೈದೆತನ; ಆಯುಷ್ಯ: ಜೀವಿತದ ಅವಧಿ; ರಾಜ್ಯ: ರಾಷ್ಟ್ರ; ಸಿರಿ: ಐಶ್ವರ್ಯ; ಸೊಂಪು: ಸೊಗಸು; ಮಗ: ಪುತ್ರ; ಹೊಣೆ: ಜವಾಬ್ದಾರಿ; ಸುರ: ದೈವ; ಮಿಕ್ಕ: ಉಳಿದ; ನರ: ಮನುಷ್ಯ; ಗಣ್ಯ: ಮಾನ್ಯ, ಪ್ರಮುಖ; ಅರಸ: ರಾಜ; ಮಧುರ: ಸಿಹಿ; ಉಕ್ತಿ: ಮಾತು; ಮನ್ನಿಸು: ಗೌರವಿಸು;

ಪದವಿಂಗಡಣೆ:
ಅರಸಿ+ಐದೆತನಕ್ಕೆ+ಎಮ್ಮ್
ಐವರ +ನಿಜಾಯುಷ್ಯಕ್ಕೆ+ರಾಜ್ಯದ
ಸಿರಿಯ +ಸೊಂಪಿಗೆ +ನಿಮ್ಮ +ಮಗನ್+ಈ+ ಕೃಷ್ಣ+ ಹೊಣೆ+ಎಮಗೆ
ಸುರರು +ಸರಿಯಿಲ್ಲೆಮಗೆ +ಮಿಕ್ಕಿನ
ನರರು +ಗಣ್ಯರೆ+ ಮಾವ +ಕೇಳೆಂದ್
ಅರಸ +ವಸುದೇವನನು+ ಮಧುರೋಕ್ತಿಯೊಳು +ಮನ್ನಿಸಿದ

ಅಚ್ಚರಿ:
(೧) ಸುರರು, ನರರು – ಪ್ರಾಸ ಪದ
(೨) ಅರಸ, ಅರಸಿ – ಜೋಡಿ ಪದಗಳು, ೧ -೬ ಸಾಲಿನ ಮೊದಲ ಪದ

ಪದ್ಯ ೩೮: ಬದರಿಕಾಶ್ರಮದಲ್ಲಿ ಎಷ್ಟು ದಿನ ಕಳೆದನು?

ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭವನನಾತಿಥ್ಯ ಪೂಜಾ
ಸಲ್ಲಲಿತ ಸಂಭಾವನಾ ಮಧುರೋಕ್ತಿ ರಚನೆಯಲಿ
ಅಲ್ಲಿಗಲ್ಲಿಗೆ ಸಕಲ ಮುನಿಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆಂಟು ದಿನವನು ನೃಪತಿ ಕೇಳೆಂದ (ಅರಣ್ಯ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬದರಿಕಾಶ್ರಮದಲ್ಲಿದ್ದ ಮುನಿಗಳು, ಪಾಂಡವರನನ್ನು ಆದರಿಸಿ ಆತಿಥ್ಯವನ್ನು ಮಾಡಿ ಮಧುರ ಮಾತುಗಳಿಂದ ಸಂಭಾವಿಸಿದರು. ಧರ್ಮಜನು ಸಕಲ ಮುನಿಜರನ್ನು ಮನ್ನಿಸಿ ಎಂಟು ದಿನಗಳ ಕಾಲ ಅಲ್ಲಿದ್ದನು.

ಅರ್ಥ:
ಅಖಿಳ: ಎಲ್ಲಾ; ಋಷಿ: ಮುನಿ; ವ್ರಜ: ಗುಂಪು; ಭೂವಲ್ಲಭ: ರಾಜ; ಆತಿಥ್ಯ: ಅತಿಥಿಸತ್ಕಾರ; ಪೂಜೆ: ಆರಾಧನೆ; ಸಲ್ಲಲಿತ: ಅಂದ, ಚೆಲುವು; ಸಂಭಾವನೆ: ಮನ್ನಣೆ; ಮಧುರ: ಸಿಹಿ; ಉಕ್ತಿ: ಮಾತು; ರಚನೆ: ಸೃಷ್ಟಿ; ಸಕಲ: ಎಲ್ಲಾ; ಮುನಿ: ಋಷಿ; ಮನ್ನಿಸು: ಗೌರವಿಸು; ವನ: ಕಾಡು; ನೂಕು: ತಳ್ಳು; ದಿನ: ದಿವಸ; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅಲ್ಲಿ+ಅಖಿಳ +ಋಷಿ+ವ್ರಜವು +ಭೂ
ವಲ್ಲಭವನನ್+ಆತಿಥ್ಯ+ ಪೂಜಾ
ಸಲ್ಲಲಿತ +ಸಂಭಾವನಾ +ಮಧುರೋಕ್ತಿ +ರಚನೆಯಲಿ
ಅಲ್ಲಿಗಲ್ಲಿಗೆ +ಸಕಲ +ಮುನಿಜನ
ವೆಲ್ಲವನು+ ಮನ್ನಿಸಿದನಾ+ ವನ
ದಲ್ಲಿ +ನೂಕಿದನ್+ಎಂಟು +ದಿನವನು +ನೃಪತಿ+ ಕೇಳೆಂದ

ಅಚ್ಚರಿ:
(೧) ಋಷಿವ್ರಜ, ಮುನಿಜನ; ಅಖಿಳ, ಸಕಲ; ಭೂವಲ್ಲಭ, ನೃಪತಿ – ಸಮನಾರ್ಥಕ ಪದ

ಪದ್ಯ ೧೩: ಶ್ರೀಕೃಷ್ಣ ಮತ್ತು ಪಾಂಡವರ ಮಾತುಕತೆ ಹೇಗಿತ್ತು?

ದೇವನಂಘ್ರಿಯ ಮುಸುಕಿದವು ಮುಕು
ಟಾವಳಿಗಳೈವರ ಸತಿಯ ಸಂ
ಭಾಷಣೆಯ ಮಧುರೋಕ್ತಿರಸದಲಿ ನಗುತ ಮನ್ನಿಸಿದ
ಓವಿದನು ಮುರವೈರಿ ಕಾರು
ಣ್ಯಾವ ಲೋಚನದಿಂದ ನಿನ್ನವ
ರಾವ ಭವದಲಿ ಭಜಿಸಿದರೊ ನಿಷ್ಠೆಯಲಿ ಹರಿಪದವ (ಸಭಾ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಂಚಪಾಂಡವರು ತಮ್ಮ ಕಿರೀಟವನ್ನು ಶ್ರೀಕೃಷ್ಣನ ಪಾದಗಳಿಗೆ ಸಮರ್ಪಿಸಿ ನಮಸ್ಕರಿಸಿದರು. ದ್ರೌಪದಿಯ ಮಧುರವಾದ ಮಾತುಗಳನ್ನು ಮನ್ನಿಸಿದನು. ಕಾರುಣ್ಯದ ದೃಷ್ಠಿಯಿಂದ ಕೃಷ್ಣನು ಎಲ್ಲರನ್ನು ಆದರಿಸಿದನು. ಎಲೈ ಜನಮೇಜಯ, ನಿನ್ನ ಪೂರ್ವಜರು ಯಾವ ಜನ್ಮದಲ್ಲಿ ಶ್ರೀಕೃಷ್ಣನನ್ನು ನಿಷ್ಠೆಯಿಂದ ಸೇವಿಸಿದ್ದರೋ ಏನೋ ತಿಳಿಯದು.

ಅರ್ಥ:
ದೇವ: ಭಗವಂತ; ಅಂಘ್ರಿ: ಪಾದ; ಮುಸುಕು: ಹೊದಿಕೆ; ಮುಕುಟ: ಕಿರೀಟ; ಆವಳಿ: ಸಾಲು; ಸತಿ: ಹೆಂಡತಿ; ಸಂಭಾಷಣೆ: ಮಾತು; ಮಧುರ: ಸಿಹಿ; ಉಕ್ತಿ: ಮಾತು, ವಾಣಿ; ರಸ: ಸಾರ; ನಗು: ಸಂತಸ; ಮನ್ನಿಸು: ಒಪ್ಪು, ಅಂಗೀಕರಿಸು; ಓವಿ: ಒಲಿದು, ಪ್ರೀತಿಯಿಂದ; ಮುರವೈರಿ: ಕೃಷ್ಣ; ಕಾರುಣ್ಯ: ದಯೆ; ಲೋಚನ:ಕಣ್ಣು; ಭವ: ಜನ್ಮ; ಭಜಿಸು: ಆರಾಧಿಸು; ನಿಷ್ಠೆ: ಸ್ಥಿತಿ; ಶ್ರದ್ಧೆ; ಹರಿ: ಕೃಷ್ಣ; ಪದ: ಪಾದ;

ಪದವಿಂಗಡಣೆ:
ದೇವನ್+ಅಂಘ್ರಿಯ +ಮುಸುಕಿದವು+ ಮುಕು
ಟಾವಳಿಗಳ್+ಐವರ +ಸತಿಯ +ಸಂ
ಭಾಷಣೆಯ +ಮಧುರೋಕ್ತಿ+ರಸದಲಿ +ನಗುತ +ಮನ್ನಿಸಿದ
ಓವಿದನು +ಮುರವೈರಿ +ಕಾರು
ಣ್ಯಾವ +ಲೋಚನದಿಂದ +ನಿನ್ನವರ್
ಆವ +ಭವದಲಿ +ಭಜಿಸಿದರೊ +ನಿಷ್ಠೆಯಲಿ +ಹರಿಪದವ

ಅಚ್ಚರಿ:
(೧) ಹರಿ, ಮುರವೈರಿ, ದೇವ – ಕೃಷ್ಣನನ್ನು ಕರೆದ ಬಗೆ
(೨) ನಮಸ್ಕರಿಸಿದರು ಎಂದು ಹೇಳಲು – ದೇವನಂಘ್ರಿಯ ಮುಸುಕಿದವು ಮುಕುಟಾವಳಿ

ಪದ್ಯ ೪೪: ಧರ್ಮರಾಯನು ಶಿಶುಪಾಲನನ್ನು ಹೇಗೆ ತಡೆದನು?

ಶಿವಶಿವಾ ತಪ್ಪಾಯ್ತು ನಮ್ಮು
ತ್ಸವಕೆ ಬಂದವನಿಪನ ಗುಣ ದೋ
ಷವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ
ಅವನಿಪತಿ ಬೆಂಬತ್ತಿ ಗಮನಕೆ
ತವಕಿಸುವ ಶಿಶುಪಾಲಕನ ಹಿಡಿ
ದವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ (ಸಭಾ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಭಗವಂತಾ, ನಮ್ಮ ಯಾಗಕ್ಕೆ ಬಂದ ರಾಜನ ಗುಣದೋಷಗಳನ್ನು ಎತ್ತಿ ಆಡುವುದು ಅನುಚಿತ, ತಪ್ಪಾಯಿತು, ಎಂದುಕೊಂಡು ಹೋಗಲು ಮುಂದಾಗಿದ್ದ ಶಿಶುಪಾಲನನ್ನು ತಡೆದು ಅಪ್ಪಿಕೊಂಡು ತಲೆಯನ್ನು ಸವರಿ ಮಧುರವಾಣಿಗಳಿಂದ ಮಾತಾಡಿಸಿದನು.

ಅರ್ಥ:
ತಪ್ಪು: ಸರಿಯಲ್ಲದ; ಉತ್ಸವ; ಸಮಾರಂಭ; ಬಂದ: ಆಗಮಿಸು; ಅವನಿಪ: ರಾಜ; ಗುಣ: ನಡತೆ, ಸ್ವಭಾವ; ದೋಷ: ಕುಂದು, ಕಳಂಕ; ಈಕ್ಷೀಸು: ನೋಡು; ಅನುಚಿತ: ಸರಿಯಲ್ಲದ; ವಿನಯ: ಒಳ್ಳೆಯತನ, ಸೌಜನ್ಯ; ಬೆಂಬತ್ತು: ಹಿಂಬಾಲಿಸು; ಗಮನ: ಹೋಗುವುದು; ತವಕ: ಆತುರ; ಹಿಡಿ: ಬಂಧಿಸು; ಅವುಚು: ಅಪ್ಪು; ಮಧುರ: ಸಿಹಿ; ಉಕ್ತಿ: ಮಾತು, ವಾಣಿ; ನುಡಿಸು: ಮಾತಾಡಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು

ಪದವಿಂಗಡಣೆ:
ಶಿವಶಿವಾ +ತಪ್ಪಾಯ್ತು +ನಮ್ಮ
ಉತ್ಸವಕೆ +ಬಂದ್+ಅವನಿಪನ +ಗುಣ +ದೋ
ಷವನು +ನಾವ್+ಈಕ್ಷಿಸುವುದ್+ಅನುಚಿತವೆಂದು +ವಿನಯದಲಿ
ಅವನಿಪತಿ+ ಬೆಂಬತ್ತಿ+ ಗಮನಕೆ
ತವಕಿಸುವ+ ಶಿಶುಪಾಲಕನ +ಹಿಡಿದ್
ಅವುಚಿದನು +ಮಧುರ+ಉಕ್ತಿಯಲಿ +ನುಡಿಸಿದನು +ಬೋಳೈಸಿ

ಅಚ್ಚರಿ:
(೧) ಸರಿಯಲ್ಲದ ಕ್ರಮ – ಉತ್ಸವಕೆ ಬಂದವನಿಪನ ಗುಣ ದೋಷವನು ನಾವೀಕ್ಷಿಸುವುದನುಚಿತ
(೨) ಸಮಾಧಾನ ಪಡಿಸುವ ಬಗೆ – ಅವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ