ಪದ್ಯ ೬೪: ಕೃಷ್ಣನು ಧರ್ಮಜನಿಗೆ ಏನನ್ನು ಬೋಧಿಸಿದನು?

ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಿಟ್ಟನು ಹಸಾದದ ಮಧುರವಚನದಲಿ (ಶಲ್ಯ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನೇ ಕೇಳು, ನಿಮ್ಮ ಸೇನೆಯ ವೀರರ ಸಂಹಾರಕ್ಕೆ ಕೃಷ್ಣಶಕ್ತಿಯ ಸ್ಫುರಣವೇ ಕಾರಣ. ನಿಮ್ಮ ಯುದ್ಧವು ದೈವಹೀನರ ವಿಲಾಸ. ಶ್ರೀಕೃಷ್ಣನು ಯುಧಿಷ್ಠಿರನನ್ನು ಪಕ್ಕಕ್ಕೆ ಕರೆದು ತನ್ನ ಶಕ್ತಿಯ ಪ್ರಯೋಗವನ್ನು ಬೋಧಿಸಿದನು. ಧರ್ಮಜನು ಮಹಾಪ್ರಸಾದ ಎಂದು ಸ್ವೀಕರಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲ್ಸಿಉ; ಶಕ್ತಿ: ಬಲ; ಸ್ಫುರಣ: ನಡುಗುವುದು, ಕಂಪನ; ಐಸಲೆ: ಅಲ್ಲವೆ; ಸಂಹರಣ: ನಾಶ; ಬೀಜ: ಮೂಲವಸ್ತು; ದೈವ: ಅಮರ; ವಿಲಾಸ: ವಿಹಾರ; ಹರಿ: ಕೃಷ್ಣ; ನೃಪ: ರಾಜ; ಎಕ್ಕಟಿ: ಒಬ್ಬಂಟಿಗ, ಏಕಾಕಿ, ಗುಟ್ಟು; ಕರೆ: ಬರೆಮಾಡು; ನಿಜ: ನೈಜ, ದಿಟ; ಶಕ್ತಿ: ಬಲ; ಪ್ರಯೋಗ: ಉಪಯೋಗ, ನಿದರ್ಶನ; ಒರೆ: ಶೋಧಿಸಿ; ಹಸಾದ: ಪ್ರಸಾದ, ಅನುಗ್ರಹ; ಮಧುರ: ಹಿತ; ವಚನ: ನುಡಿ;

ಪದವಿಂಗಡಣೆ:
ಅರಸ +ಕೇಳೈ +ಕೃಷ್ಣ+ಶಕ್ತಿ
ಸ್ಫುರಣವ್+ಐಸಲೆ +ನಿಮ್ಮ +ಬಲ +ಸಂ
ಹರಣಕ್+ಆವುದು +ಬೀಜ +ನಿರ್ದೈವರ +ವಿಲಾಸವಿದು
ಹರಿ +ಯುಧಿಷ್ಠಿರ+ ನೃಪನನ್+ಎಕ್ಕಟಿ
ಕರೆದು +ನಿಜಶಕ್ತಿ+ಪ್ರಯೋಗವನ್
ಒರೆದಡ್+ಒಡಬಿಟ್ಟನು +ಹಸಾದದ +ಮಧುರ+ವಚನದಲಿ

ಅಚ್ಚರಿ:
(೧) ಕೌರವರ ಸೋಲಿನ ಮೂಲ ಕಾರಣ – ನಿಮ್ಮ ಬಲ ಸಂಹರಣಕಾವುದು ಬೀಜ ನಿರ್ದೈವರ ವಿಲಾಸವಿದು

ಪದ್ಯ ೪೦: ಕೃಷ್ಣನ ಹಿರಿಮೆ ಎಂತಹುದು?

ಆವನೊಬ್ಬನ ಮಧುರವಚನ ಕೃ
ಪಾವಲೋಕನದಿಂದ ಶತ ಜ
ನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು
ದೇವರೀತನ ಲಲಿತವಚನಸು
ಧಾವಸೇಚನದಿಂದ ಭಟರುರೆ
ಜೀವಿಸುವುದೇನರಿದೆ ಕೇಳ್ ಜನಮೇಜಯಕ್ಷಿತಿಪ (ದ್ರೋಣ ಪರ್ವ, ೧೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ಯಾರ ಮಧುರ ವಚನ, ಕೃಪಾದೃಷ್ಟಿಗಳಿಂದ ಅನೇಕ ಜನ್ಮಗಳಲ್ಲಿ ಗಳಿಸಿದ ಪಾಪದ ಭಯ ನಿವಾರಿತವಾಗುವುದೋ, ಅಮ್ತಹ ದೇವನ ಲಲಿತ ವಚನ ಸುಧೆಯ ಸಿಂಚನದಿಂದ ಯೋಧರು ಪುನರುಜ್ಜೀವಿಸುವುದೇನು ಆಶ್ಚರ್ಯ.

ಅರ್ಥ:
ಮಧುರ: ಸಿಹಿ; ವಚನ: ವಾಣಿ, ನುಡಿ; ಅವಲೋಕನ: ನೋಟ; ಕೃಪ: ದಯೆ; ಶತ: ನೂರು; ಜನ್ಮ: ಹುಟ್ಟು ಸಾವುಗಳ ಚಕ್ರ; ಆವಳಿ: ಗುಂಪು; ಘನ: ಶ್ರೇಷ್ಠ; ದುರಿತ: ಪಾಪ, ಪಾತಕ; ವಹ್ನಿ: ಬೆಂಕಿ; ಝಳ: ಪ್ರಕಾಶ; ಕಡೆ: ಕೊನೆ; ದೇವ: ಭಗವಮ್ತ; ಲಲಿತ: ಚೆಲುವು; ವಚನ: ಮಾತು; ಸುಧಾ: ಅಮೃತ; ಸೇಚನ: ಸಿಂಪಡಿಸು; ಭಟ: ಸೈನಿಅ; ಉರೆ: ಅತಿಶಯವಾಗಿ; ಅರಿ: ತಿಳಿ; ಕ್ಷಿತಿಪ: ರಾಜ;

ಪದವಿಂಗಡಣೆ:
ಆವನ್+ಒಬ್ಬನ +ಮಧುರವಚನ +ಕೃಪ
ಅವಲೋಕನದಿಂದ +ಶತ +ಜ
ನ್ಮಾವಳಿಯ +ಘನ +ದುರಿತ+ವಹ್ನಿಯ +ಝಳಕೆ +ಕಡೆಯಹುದು
ದೇವರ್+ಈತನ +ಲಲಿತ+ವಚನ+ಸು
ಧಾವ+ಸೇಚನದಿಂದ +ಭಟರ್+ಉರೆ
ಜೀವಿಸುವುದೇನ್+ಅರಿದೆ +ಕೇಳ್ +ಜನಮೇಜಯ+ಕ್ಷಿತಿಪ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಆವನೊಬ್ಬನ ಮಧುರವಚನ ಕೃಪಾವಲೋಕನದಿಂದ ಶತ ಜನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು

ಪದ್ಯ ೭೨: ದುರ್ಯೋಧನನಿಗೆ ವಿದುರನು ಯಾವ ಸಲಹೆ ನೀಡಿದನು?

ಗೆಲಿದ ದರ್ಪದ ದಡ್ಡಿ ತೆಗೆ ಸೌ
ಬಲನ ಬೀಳ್ಕೊಡು ನಿಖಿಲ ಬಾಂಧವ
ಕುಲ ಸಹಿತ ನೀ ಮಧುರವಚನದಲಿವರ ಸಂತೈಸು
ನೆಲನನೇಕಚ್ಛತ್ರದಲಿ ಹದ
ಗೊಳಿಸು ಬದುಕುವರಿದು ನಿಜಾನ್ವಯ
ದುಳಿವು ಬೆಸಗೊಳು ಬೇಹ ಹಿರಯರನೆಂದನಾ ವಿದುರ (ಸಭಾ ಪರ್ವ, ೧೪ ಸಂಧಿ, ೭೨ ಪದ್ಯ)

ತಾತ್ಪರ್ಯ:
ವಿದುರನು ಕೋಪದಿಂದ ತನ್ನ ಮಾತನ್ನು ಮುಂದುವರಿಸುತ್ತಾ, ದುರ್ಯೋಧನ, ಗೆದ್ದೆನೆಂಬ ದರ್ಪದ ಭ್ರಮೆಯ ಮುಸುಕನ್ನು ತೆಗೆದು ಹಾಕಿ ಶಕುನಿಯನ್ನು ಹೊರಕಳಿಸು. ನಿನ್ನ ಸಮಸ್ತ ಬಾಂಧವರೊಡಗೂಡಿ ಇವರನ್ನು ಮಧುರ ವಚನಗಳಿಂದ ಸಂತಿಸು. ಭೂಮಿಯನ್ನು ಒಂದೇ ಆಳ್ವಿಕೆಗೆ ಒಳಪಡಿಸು. ಹೀಗೆ ಬದುಕಿದರೆ ನಿನ್ನ ವಂಶವು ಉಳಿದೀತು. ನಾನು ಹೇಳುವುದು ಸರಿಯೋ ಅಲ್ಲವೋ ಎಂದು ಆಪ್ತರಾದ ಹಿರಿಯರನ್ನು ವಿಚಾರಿಸಿ ತಿಳಿದುಕೋ ಎಂದು ವಿದುರನು ದುರ್ಯೋಧನನಿಗೆ ಹೇಳಿದನು.

ಅರ್ಥ:
ಗೆಲಿ: ಜಯ; ದರ್ಪ: ಅಹಂಕಾರ; ದಡ್ಡಿ: ತೆರೆ; ತೆಗೆ: ಹೊರತರು; ಸೌಬಲ: ಶಕುನಿ; ಬೀಳ್ಕೊಡು: ಹೊರಕಳಿಸು; ನಿಖಿಲ: ಎಲ್ಲಾ; ಬಾಂಧವ: ಸಂಬಂಧಿಕರು; ಕುಲ: ವಂಶ; ಸಹಿತ: ಜೊತೆ; ಮಧುರ: ಸಿಹಿ; ವಚನ: ಮಾತು; ಸಂತೈಸು: ಆದರಿಸು, ಉಪಚಾರ ಮಾಡು; ನೆಲ: ಭೂಮಿ; ಏಕ: ಒಂದು; ಹದ: ಸ್ಥಿತಿ, ರೀತಿ; ಬದುಕು: ಜೀವನ; ಅರಿ: ತಿಳಿ; ನಿಜ: ದಿಟ; ಅನ್ವಯ: ಅನುಯಾಯಿ; ಉಳಿವು: ಜೀವನ; ಬೆಸಗೊಳು: ಕೇಳುವುದು; ಬೇಹ: ಬೇಕಾದ, ಗೂಢಾಚರ್ಯೆ; ಹಿರಿಯರು: ದೊಡ್ಡವರು, ತಿಳಿದವರು;

ಪದವಿಂಗಡಣೆ:
ಗೆಲಿದ+ ದರ್ಪದ +ದಡ್ಡಿ +ತೆಗೆ+ ಸೌ
ಬಲನ +ಬೀಳ್ಕೊಡು+ ನಿಖಿಲ+ ಬಾಂಧವ
ಕುಲ +ಸಹಿತ +ನೀ +ಮಧುರ+ವಚನದಲ್+ಇವರ+ ಸಂತೈಸು
ನೆಲನನ್+ಏಕಚ್ಛತ್ರದಲಿ+ ಹದ
ಗೊಳಿಸು +ಬದುಕುವ್+ಅರಿದು+ ನಿಜಾನ್ವಯದ್
ಉಳಿವು+ ಬೆಸಗೊಳು +ಬೇಹ +ಹಿರಯರನೆಂದನಾ+ ವಿದುರ

ಅಚ್ಚರಿ:
(೧) ಗೆದ್ದೆನೆಂಬ ದರ್ಪವನು ಬಿಡು ಎಂದು ಹೇಳುವ ಪರಿ – ಗೆಲಿದ ದರ್ಪದ ದಡ್ಡಿ ತೆಗೆ