ಪದ್ಯ ೨೬: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೩?

ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ (ಗದಾ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನೆಂಬ ಹೆಸರನ್ನು ಕೇಳಿದೊಡನೆ ಭುಗಿಲೆಂದು ಏಳುತ್ತಿದ್ದ ತಾಮಸಕೋಪವನ್ನು ಎತ್ತಲೋ ಕಳಿಸಿಬಿಟ್ಟೆಯಾ? ಪಾಂಡವ ತಿಮಿರರವಿಯೆಂಬ ಬಿರುದು ಹೆಸರಿಲ್ಲದೆ ಹೋಗಿಬಿಟ್ಟಿತೇ? ಭೀಮನೆಂಬ ಕಾಡಿಗೆ ಕಾಡುಗಿಚ್ಚೆಂದು ಕೊಚ್ಚಿಕೊಳ್ಳುತ್ತಿದ್ದವನೇ ಹೊರಕ್ಕೆ ಬಾ, ಭೀಮನೆಂಬ ಸೂರ್ಯನಿಗೆ ರಾಹುವೇ ಹೊರಕ್ಕೆ ಬಾ, ಭೀಮಗರ್ಜನೆ ನಿನಗೆ ಮಧುರ ಗೀತೆಯೇ? ರಾಜಾ ಏಳು ಎಂದು ಭೀಮನು ಕೌರವನನ್ನು ಹಂಗಿಸಿದನು.

ಅರ್ಥ:
ಭುಗಿಲ್- ಭುಗಿಲ್ ಎಂಬ ಶಬ್ದ; ರೋಷ: ಕೋಪ; ತಾಮಸ: ಕತ್ತಲೆ, ಅಂಧಕಾರ; ಬೀಳ್ಕೊಡು: ತೆರಳು; ನಿರ್ನಾಮ: ನಾಶ, ಅಳಿವು; ಬಿರುದು: ಗೌರವ ಸೂಚಕ ಪದ; ತಿಮಿರ: ಅಂಧಕಾರ; ರವಿ: ಸೂರ್ಯ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಹೊರವಡು: ತೆರಳು; ಭಾಸ್ಕರ: ಸೂರ್ಯ; ಗರ್ಜನೆ: ಆರ್ಭಟ, ಕೂಗು; ಮಧುರ: ಇಂಪುಆದ; ಗೀತ: ಹಾಡು; ನೃಪತಿ: ರಾಜ; ವನ: ಕಾಡು;

ಪದವಿಂಗಡಣೆ:
ಭೀಮನ್+ಎನೆ +ಭುಗಿಲೆಂಬ +ರೋಷದ
ತಾಮಸವ +ಬೀಳ್ಕೊಟ್ಟೆಲಾ +ನಿ
ರ್ನಾಮವಾದುದೆ +ಬಿರುದು +ಪಾಂಡವ +ತಿಮಿರ+ರವಿಯೆಂಬ
ಭೀಮ+ವನ+ದಾವಾಗ್ನಿ +ಹೊರವಡು
ಭೀಮ+ಭಾಸ್ಕರ+ರಾಹು +ಹೊರವಡು
ಭೀಮಗರ್ಜನೆ +ಮಧುರಗೀತವೆ+ ನೃಪತಿ+ಏಳೆಂದ

ಅಚ್ಚರಿ:
(೧) ಹೊರವಡು – ೪, ೫ ಸಾಲಿನ ಕೊನೆಯ ಪದ
(೨) ರೂಪಕದ ಪ್ರಯೋಗ – ಭೀಮವನದಾವಾಗ್ನಿ ಹೊರವಡು ಭೀಮಭಾಸ್ಕರರಾಹು ಹೊರವಡು ಭೀಮಗರ್ಜನೆ ಮಧುರಗೀತವೆ