ಪದ್ಯ ೮: ದ್ರೌಪದಿ ಎಷ್ಟು ದಿನ ಉಪವಾಸ ಮಾಡಿದಳು?

ಕಳೆದುದಾ ಮಧುಮಾಸ ಪಸರಿಸಿ
ಸುಳಿದುದೊಯ್ಯನೆ ಗ್ರೀಷ್ಮ ಋತುವಿನ
ಸುಳಿವು ಜಂಬೂಫಲವ ಬ್ರಾಹ್ಮರಿಗೀವ ಬುದ್ಧಿಯಲಿ
ತೊಳಲಿದರು ಹೇರಡವಿಯಲಿ ಕಡು
ಬಳಲಿದರು ಪಾಂಡವರು ದೊರಕದೆ
ಬಳಿಕಲೈದುಪವಾಸವಾದುದು ದ್ರುಪದನಂದನೆಗೆ (ಅರಣ್ಯ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ವಸಂತ ಋತುವು ಕಳೆಯಿತು, ಗ್ರೀಷ್ಮ ಋತುವು ಕಾಣತೊಡಗಿತು. ಬ್ರಾಹ್ಮಣರಿಗೆ ನೇರಳೆ ಹಣ್ಣನ್ನು ದಾನಕೊಡಬೇಕೆಂದು ಪಾಂಡವರು ಕಾಡಿನಲ್ಲೆಲ್ಲಾ ಅಲೆದು ಹುಡುಕುತ ತುಂಬ ದಣಿದರು. ಹೀಗೆ ಹುಡುಕುತ್ತಾ ಅವರು ಬಳಲಿ ಬೆಂಡಾದರು, ದ್ರೌಪದಿಯು ಐದು ದಿನ ಉಪವಾಸ ಮಾಡಿದಳು.

ಅರ್ಥ:
ಕಳೆದು: ತೀರು; ಮಧುಮಾಸ: ವಸಂತಋತು; ಪಸರಿಸು: ಹರಡು; ಸುಳಿದು: ಕಾಣಿಸಿಕೊಳ್ಳು, ಬೀಸು; ಒಯ್ಯನೆ: ಒಡನೆ, ಬೇಗ; ಋತು: ೨ ಮಾಸಗಳ ಅವಧಿ; ಜಂಬೂಫಲ: ನೇರಳೆ; ಬ್ರಾಹ್ಮಣ: ಭೂಸುರ; ಬುದ್ಧಿ: ತಿಳುವಳಿಕೆ; ತೊಳಲು: ಬವಣೆ; ಹೇರು: ಭಾರ; ಅಡವಿ: ಕಾಡು; ಹೇರಡವಿ: ದಟ್ಟವಾದ ಕಾಡು; ಕಡು: ತುಂಬ; ಬಳಲು: ಆಯಾಸ; ದೊರಕು: ಸಿಕ್ಕು, ಪಡೆ; ಬಳಿಕ: ನಂತರ; ಐದು: ಬಂದು ಸೇರು; ಉಪವಾಸ: ನಿರಾಹಾರದ ಸ್ಥಿತಿ; ನಂದನೆ: ಮಗಳು;

ಪದವಿಂಗಡಣೆ:
ಕಳೆದುದಾ+ ಮಧುಮಾಸ +ಪಸರಿಸಿ
ಸುಳಿದುದ್+ಒಯ್ಯನೆ +ಗ್ರೀಷ್ಮ +ಋತುವಿನ
ಸುಳಿವು+ ಜಂಬೂಫಲವ +ಬ್ರಾಹ್ಮರಿಗ್+ಈವ+ ಬುದ್ಧಿಯಲಿ
ತೊಳಲಿದರು +ಹೇರಡವಿಯಲಿ +ಕಡು
ಬಳಲಿದರು +ಪಾಂಡವರು +ದೊರಕದೆ
ಬಳಿಕಲ್+ಐದ್+ಉಪವಾಸವಾದುದು +ದ್ರುಪದ+ನಂದನೆಗೆ

ಅಚ್ಚರಿ:
(೧) ದ್ರೌಪದಿಯನ್ನು ದ್ರುಪದನಂದನೆ ಎಂದು ಕರೆದಿರುವುದು
(೨) ಕಳೆದು, ಸುಳಿದು – ಪ್ರಾಸ ಪದಗಳು

ಪದ್ಯ ೭: ರಾಜನು ಮಧುಮಾಸವನ್ನು ಎಲ್ಲಿ ಕಳೆದನು?

ಋಷಿಗಳಲಿ ಮೇಳವು ವರಾಸನ
ಮೆಸೆವ ಬನದೊಳು ಬಳಿಕ ಗಂಗಾ
ಪ್ರಸರದಲ್ಲಿ ಸ್ನಾನ ಭೋಜನ ಕಾಲದಲಿ ಪಾನ
ಮಿಸುಪಸುತಿಯ ವಿಲಾಸಗಳ ಸಂ
ತಸದೆ ಕೇಳುತ ಮಥಿಸುತೊನಲುತ
ವಸುಮತೀಧರನಿರ್ದನಾ ಮಧುಮಾಸ ಕಳೆವನಕ (ಅರಣ್ಯ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನು ಋಷಿಗಳೊಡನೆ ಕಾಡಿನಲ್ಲಿ ತನ್ನ ಆಶ್ರಮದಲ್ಲಿ ಆಸನಾರೂಢನಾಗಿರುತ್ತಿದ್ದನು. ಗಂಗಾನದಿಯಲ್ಲಿ ಸ್ನಾನ, ಭೋಜನಕಾಲದಲ್ಲಿ ಗಂಗಾಜಲ ಪಾನ, ಋಷಿಗಳೊಡನೆ ವೇದ ಮಮ್ತ್ರಗಳ ಅರ್ಥವಿಲಾಸದ ಸಲ್ಲಾಪ, ನಂತರ ಅದರ ಚಿಂತನೆ, ಚಿಂತನೆಯಲ್ಲಿ ಬಿಡಬೇಕಾದುದು ಯಾವುದು, ಸ್ವೀಕರಿಸಬೇಕಾದುದು ಯಾವುದು ಎಂಬ ಆಲೋಚನೆಯಲ್ಲಿಯೇ ಮಧುಮಾಸವನ್ನು ಕಳೆದನು.

ಅರ್ಥ:
ಋಷಿ: ಮುನಿ; ಮೇಳ: ಗುಂಪು; ಆಸನ: ಕುಳಿತುಕೊಳ್ಳುವುದು; ವರ: ಶ್ರೇಷ್ಠ; ಎಸೆ: ಶೋಭಿಸು; ಬನ: ಕಾಡು; ಬಳಿಕ: ನಂತರ; ಪ್ರಸರ: ಹರಡುವುದು, ರಭಸ; ಸ್ನಾನ: ಜಳಕ; ಭೋಜನ: ಊಟ; ಕಾಲ: ಸಮಯ; ಪಾನ: ಕುಡಿಯುವಿಕೆ; ಮಿಸುಪ: ಹೊಳೆಪ; ವಿಲಾಸ: ವಿಹಾರ; ಸಂತಸ: ಹಿಗ್ಗು, ಸಂತೋಷ; ಕೇಳು: ಆಲಿಸು; ಮಥಿಸು: ಕಡೆ, ಚರ್ಚಿಸು; ಒನಲು: ಕೋಪಿಸಿಕೊಳ್ಳು; ವಸುಮತಿ: ಭೂಮಿ; ವಸುಮತೀಧರ: ರಾಜ; ಮಧುಮಾಸ: ವಸಂತ ಋತು; ಕಳೆ: ತೀರು;

ಪದವಿಂಗಡಣೆ:
ಋಷಿಗಳಲಿ+ ಮೇಳವು +ವರಾಸನಮ್
ಎಸೆವ +ಬನದೊಳು +ಬಳಿಕ +ಗಂಗಾ
ಪ್ರಸರದಲ್ಲಿ +ಸ್ನಾನ +ಭೋಜನ +ಕಾಲದಲಿ +ಪಾನ
ಮಿಸುಪ+ಸುತಿಯ+ ವಿಲಾಸಗಳ +ಸಂ
ತಸದೆ +ಕೇಳುತ +ಮಥಿಸುತ್+ಒನಲುತ
ವಸುಮತೀಧರನ್+ಇರ್ದನಾ +ಮಧುಮಾಸ +ಕಳೆವನಕ

ಅಚ್ಚರಿ:
(೧) ರಾಜನನ್ನು ವಸುಮತೀಧರ ಎಂದು ಪದ ಪ್ರಯೋಗ

ಪದ್ಯ ೩೨ : ಧರ್ಮಜನ ಚಂಚಲ ಮನಸ್ಸು ಏನು ಹೇಳಿತು?

ಅರಳಿಚದೆ ಮಧುಮಾಸ ಮಾಣಲಿ
ವರುಷ ಋತುವೇ ಸಾಕು ಜಾತಿಗೆ
ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ
ಸಿರಿಗೆ ಕಕ್ಕುಲಿತೆಯ ವಿಪಕ್ಷವ
ಬೆರಸಿ ಬದುಕುವೆವೈಸಲೇ ವರ
ಗುರುವಲಾ ಧೃತರಾಷ್ಟ್ರನೂಣೆಯವೇನು ಹೇಳೆಂದ (ಕರ್ಣ ಪರ್ವ, ೧೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ಮೇಲಿನ ವಿಶ್ವಾಸವನ್ನು ಕಳೆದುಕೊಂಡವನಂತೆ ತೋರಿ, ಮಧುಮಾಸ ಬಂದು ಪುಷ್ಪಗಳನ್ನು ಅರಳಿಸುವುದಿಲ್ಲವೇ? ನಮಗೆ ಮಳೆಗಾಲವೇ ಸಾಕು, ನಾವು ಹುಟ್ಟಿನಿಂದಲೇ ದುರ್ಬಲರು, ಮೊದಲಿನಂತೆ ವನವಾಸದಿಂದಲೇ ತೃಪ್ತಿಪಟ್ಟುಕೊಳ್ಳೋಣ, ಐಶ್ವರ್ಯದ ಮೇಲೆ ಕಕುಲಾತಿಯೇ? ವಿರೋಧ ಪಕ್ಷದವರೊಡನೆ ಸಂಧಿಮಾಡಿಕೊಂಡು ವಿರೋಧಿಗಳ ಹಿರಿಯರಾದ ಧೃತರಾಷ್ಟ್ರನು ನಮಗೆ ಗುರು ಸಮಾನನಲ್ಲವೇ? ಆದ್ಧರಿಂದ ಈ ಸಂಧಿ ಮಾಡಿಕೊಳ್ಳುವುದರಿಂದ ದೋಷವಾದರೂ ಏನು ಎಂದು ನುಡಿದನು.

ಅರ್ಥ:
ಅರಳು: ವಿಕಸನಗೊಳ್ಳು; ಮಧುಮಾಸ: ವಸಂತ ಋತು; ಮಾಣು: ಸುಮ್ಮನಿರು; ವರ್ಷ: ಮಳೆ; ಋತು: ಕಾಲ; ಸಾಕು: ಕೊನೆ, ಅಂತ್ಯ; ಜಾತಿ: ಕುಲ; ಜರಡು:ಶಿಥಿಲವಾದುದು; ಪೂರ್ವ:ಹಿಂದಿನ; ಪ್ರಕೃತಿ: ನೈಜ, ನಿಸರ್ಗ; ವನವಾಸ: ಕಾಡಿನ ಜೀವನ; ಸಿರಿ: ಐಶ್ವರ್ಯ; ಕಕ್ಕುಲತೆ: ಲೋಭ; ಆಸಕ್ತಿ; ವಿಪಕ್ಷ: ವೈರಿ; ಬೆರಸು: ಸೇರಿಸು; ಬದುಕು: ಜೀವಿಸು; ಐಸಲೇ: ಅಲ್ಲವೇ; ವರ: ಶ್ರೇಷ್ಠ; ಗುರು: ಆಚಾರ್ಯ; ಊಣೆ: ನ್ಯೂನತೆ, ಕುಂದು; ಹೇಳು: ತಿಳಿಸು;

ಪದವಿಂಗಡಣೆ:
ಅರಳಿಚದೆ +ಮಧುಮಾಸ +ಮಾಣಲಿ
ವರುಷ +ಋತುವೇ +ಸಾಕು +ಜಾತಿಗೆ
ಜರಡರ್+ಎಮಗಿನ್ನೇನು +ಪೂರ್ವಪ್ರಕೃತಿ+ ವನವಾಸ
ಸಿರಿಗೆ+ ಕಕ್ಕುಲಿತೆಯ+ ವಿಪಕ್ಷವ
ಬೆರಸಿ+ ಬದುಕುವೆವ್+ಐಸಲೇ +ವರ
ಗುರುವಲಾ +ಧೃತರಾಷ್ಟ್ರನ್+ಊಣೆಯವೇನು +ಹೇಳೆಂದ

ಅಚ್ಚರಿ:
(೧) ಧರ್ಮಜನ ವಿಶ್ವಾಸ ಹೀನ ನುಡಿಗಳು – ವರುಷ ಋತುವೇ ಸಾಕು ಜಾತಿಗೆ
ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ ಸಿರಿಗೆ ಕಕ್ಕುಲಿತೆಯ ವಿಪಕ್ಷವ ಬೆರಸಿ ಬದುಕುವೆವೈಸಲೇ

ಪದ್ಯ ೯:ದುಂಬಿಗಳು ಮತ್ತು ಇತರೆ ಪಕ್ಷಿಗಳು ವಸಂತ ಮಾಸದಲ್ಲಿ ಹೇಗೆ ನಲಿದಾಡಿದವು?

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು (ಆದಿ ಪರ್ವ, ೫ ಸಂಧಿ, ೯ ಪದ್ಯ)

ತಾತ್ಪರ್ಯ:
ವಸಂತ ಮಾಸವು ಮುಂದುವರೆಯಿತು. ನೀರಿನ ಮೇಲೆ ದೋಣಿ ತೇಲುವ ಹಾಗೆ ತಾವರೆ ಹೂವಿನ (ತಾವರೆಯನ್ನೇ ದೋಣಿಯಾಗಿ ವಿಶ್ಲೆಸಿಸಲಾಗಿದೆ) ಮೇಲೆ ದುಂಬಿಗಳು ಮಕರಂದವನ್ನು ಹೀರಲು ಸೇರಿದವು. ಜಿನುಗುತಿರುವ ಹೂಗಳ ಮಕರಂದದ ತುಂತುರಿನಲ್ಲಿ ಕ್ರೌಂಚಪಕ್ಷಿ, ಚಕ್ರವಾಕ, ರಾಜಹಂಸಗಳು ತೋಯ್ದು ಹೋದವು.

ಅರ್ಥ:
ಪಸರಿಸು: ಹರಡು; ಮಧು: ಜೇನು, ಮಕರಂದ; ಮಾಸ: ತಿಂಗಳು
ಮಧುಮಾಸ: ವಸಂತ ಮಾಸ; ತಾವರೆ: ಕಮಲ, ಸರಸಿಜ,
ಯೆಸಳ: ಹೂವಿನ ದಳ; ದೋಣಿಯ: ನಾವೆ; ಹಾಯ್ದು: ಹರಡು,ಹೊಮ್ಮು
ಕುಸುಮ: ಹೂವು; ರಸ: ತಿರುಳು; ಉಬ್ಬರ: ಹೆಚ್ಚು, ಅತಿಶಯ, ಆಡಂಬರ
ತೊರೆ: ಹರಿ, ಪ್ರವಹಿಸು, ಹರಡು; ಒಸರ್: ಜಿನುಗು, ಸೋರು
ತುಷಾರ: ಹಿಮ, ಮಂಜು; ದಂಪತಿವಕ್ಕಿ: ಚಕ್ರವಾಕ ಪಕ್ಷಿ
ಸಾರಸ: ಕೊಳ, ಸರೋವರ

ಪದವಿಂಗಡಣೆ:
ಪಸರಿಸಿತು +ಮಧುಮಾಸ +ತಾವರೆ
ಯೆಸಳ+ ದೋಣಿಯ +ಮೇಲೆ +ಹಾಯ್ದವು
ಕುಸುಮ +ರಸದ್+ಉಬ್ಬರದ +ತೊರೆಯನು +ಕೂಡೆ +ತುಂಬಿಗಳು
ಒಸರ್ವ +ಮಕರಂದದ+ ತುಷಾರದ
ಕೆಸರೊಳ್+ಅದ್ದವು+ ಕೊಂಚೆಗಳು+ ಹಗಲ್
ಎಸೆವ +ದಂಪತಿವಕ್ಕಿ+ ಸಾರಸ+ ರಾಜಹಂಸಗಳು

ಅಚ್ಚರಿ:
ವಸಂತದಲ್ಲಿ ಹೂವಿನ ಕಂಪು, ಎಷ್ಟು ಸವಿಯಾಗಿರುತ್ತದೆ ಎಂದು ಅತ್ಯಂತ ಸುಂದರವಾಗಿ ವರ್ಣಿಸಿರುವುದು.