ಪದ್ಯ ೨೮: ಮಧುಕೈಟಭರೆಂಬ ರಾಕ್ಷಸರು ಹೇಗೆ ಹುಟ್ಟಿದರು?

ಇರಲಿರಲು ಕಲ್ಪಾವಸಾನಕೆ
ಬರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲವೀ ಜಲದೊಳೊಂದಾಯ್ತೇಕ ರೂಪದಲಿ
ಹರಿವಿನೋದದಲೊಬ್ಬನೇ ಸಂ
ಚರಿಸುತಿದ್ದನು ಬಳಿಕ ಕಾಲಾಂ
ತರದೊಳಗೆ ಮಧುಕೈಟಭರು ಜನಿಸಿದರು ಕರ್ಣದಲಿ (ಸಭಾ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಹೀಗೆ ಜಗತ್ತು ನಡೆಯುತ್ತಿರಲು ಹಿಂದನ ಕಲ್ಪವು ಮುಗಿಯಲು ಸಮಯವಾಯಿತು, ಬ್ರಹ್ಮಾಂಡವು ಬಿರಿದುಹೋಯಿತು, ಆಕಾಶದ ಆಚೆಗಿದ್ದ ನೀರು ಈ ನೀರಿನೊಡನೆ ಒಂದಾಗಿ ಸರೀ ನೀರೇ ಎಲ್ಲೆಲ್ಲೂ ಇತ್ತು. ವಿಷ್ಣುವು ವಿನೋದದಿಂದ ಸಂಚಾರಮಾಡುತ್ತಿದ್ದನು, ಅವನು ಯೋಗನಿದ್ರೆಯಲ್ಲಿರುವಾಗ ಅವನ ಎರಡು ಕಿವಿಗಳಿಂದ ಮಧುಕೈಟಭರೆಂಬ ರಾಕ್ಷಸರು ಹುಟ್ಟಿದರು.

ಅರ್ಥ:
ಇರಲಿರಲು: ಹೀಗಿರಲು; ಕಲ್ಪ: ಬ್ರಹ್ಮನ ಒಂದು ದಿವಸ ಯಾ ಸಹಸ್ರ ಯುಗ; ಅವಸಾನ: ಅಂತ್ಯ; ಬಿರಿ: ಬಿರುಕು, ಸೀಳು; ಬ್ರಹ್ಮಾಂಡ: ವಿಶ್ವ, ಜಗತ್ತು; ಬಹಿರ: ಹೊರಗಡೆ; ಆವರಣ: ಪ್ರಾಕಾರ; ಜಲ: ನೀರು; ರೂಪ: ಆಕಾರ; ಹರಿ: ವಿಷ್ಣು; ವಿನೋದ: ಸಂತಸ; ಸಂಚರಿಸು: ಓಡಾದು; ಬಳಿಕ: ನಂತರ; ಕಾಲಾಂತರ: ಸಮಯ ಕಳೆದಂತೆ; ಜನಿಸು: ಹುಟ್ಟು; ಕರ್ಣ: ಕಿವಿ;

ಪದವಿಂಗಡಣೆ:
ಇರಲಿರಲು+ ಕಲ್ಪ+ಅವಸಾನಕೆ
ಬಿರಿದುದ್+ಈ+ ಬ್ರಹ್ಮಾಂಡ +ಬಹಿರ್
ಆವರಣ+ ಜಲವ್+ಈ+ ಜಲದೊಳ್+ಒಂದಾಯ್ತ್+ಏಕ+ ರೂಪದಲಿ
ಹರಿ+ವಿನೋದದಲ್+ಒಬ್ಬನೇ +ಸಂ
ಚರಿಸುತಿದ್ದನು+ ಬಳಿಕ+ ಕಾಲಾಂ
ತರದೊಳಗೆ+ ಮಧುಕೈಟಭರು+ ಜನಿಸಿದರು +ಕರ್ಣದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬರಿದುದೀ ಬ್ರಹ್ಮಾಂಡ ಬಹಿರಾವರಣ
(೨) ಲಯದ ಪ್ರಕ್ರಿಯೆ – ಬಹಿರಾವರಣ ಜಲವೀ ಜಲದೊಳೊಂದಾಯ್ತೇಕ ರೂಪದಲಿ

ಪದ್ಯ ೯೫: ನರಮಾಂಸ ಭಕ್ಷಣೆಯ ಫಲ ಯಾವುದನ್ನು ಮಾಡದಿದ್ದರೆ ಲಭಿಸುತ್ತದೆ?

ವಿನುತ ಮಧುಕೈಟಭರ ಮೇದ
ಸ್ಸಿನಲಿ ಮೇದಿನಿಯಾದುದಿದ ನೀ
ನನುಭವಿಸುವೊಡೆ ಪುಣ್ಯ ಕೀರುತಿಯೆಂಬ ಪರಿಮಳದ
ಹೊನಲಿನಲಿ ತರವಿಡಿದು ಲೇಸಾ
ಗನುಭವಿಸುವುದದಲ್ಲದಿದ್ದೊಡೆ
ಮನುಜ ಮಾಂಸವ ಭಕ್ಷಿಸಿದ ಫಲವರಸ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೯೫ ಪದ್ಯ)

ತಾತ್ಪರ್ಯ:
ಈ ಭೂಮಿಯು ಮಧಿಕೈಟಭರ ಮೇದಸ್ಸಿನಿಂದಾಯಿತು. ಇಲ್ಲಿ ನೀನು ಬಾಳುವಾಗ ಪುಣ್ಯಕಾರ್ಯಗಳನ್ನು ಮಾಡಿ, ಅದರ ಸುಗಂಧವಾಹಿನಿಯನ್ನು ಅನುಭವಿಸಬೇಕು. ಇಲ್ಲದಿದ್ದರೆ ನರ ಮಾಂಸ ಭಕ್ಷಿಸಿದ ಫಲ ಬರುತ್ತದೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಮಧುಕೈಟಭ: ರಾಕ್ಷಸರ ಹೆಸರು; ಮೇದಸ್ಸು: ದೇಹದ ಸಪ್ತ ಧಾತುಗಳಲ್ಲಿ ಒಂದು, ಕೊಬ್ಬು; ಮೇದಿನಿ: ಭೂಮಿ; ಅನುಭವಿಸು: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಪುಣ್ಯ: ಸದಾಚಾರ, ಪರೋಪಕಾರ; ಕೀರುತಿ: ಖ್ಯಾತಿ; ಪರಿಮಳ: ಸುಗಂಧ; ಹೊನಲು: ಪ್ರವಾಹ, ನೀರೋಟ; ಲೇಸು: ಒಳ್ಳೆಯದು; ತರವಿಡಿ: ಆ ರೀತಿ; ಮನುಜ: ಮನುಷ್ಯ; ಮಾಂಸ: ಅಡಗು, ಬಾಡು; ಭಕ್ಷಿಸು: ಊಟಮಾಡು; ಫಲ:ಪರಿಣಾಮ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ವಿನುತ +ಮಧುಕೈಟಭರ+ ಮೇದ
ಸ್ಸಿನಲಿ +ಮೇದಿನಿಯಾದುದ್+ಇದ+ ನೀನ್
ಅನುಭವಿಸುವೊಡೆ +ಪುಣ್ಯ +ಕೀರುತಿಯೆಂಬ +ಪರಿಮಳದ
ಹೊನಲಿನಲಿ +ತರವಿಡಿದು+ ಲೇಸ್+ಆಗ್
ಅನುಭವಿಸುವುದದ್+ಅಲ್ಲದಿದ್ದೊಡೆ
ಮನುಜ +ಮಾಂಸವ +ಭಕ್ಷಿಸಿದ+ ಫಲವರಸ+ ಕೇಳೆಂದ

ಅಚ್ಚರಿ:
(೧) ‘ಮ’ಕಾರದ ತ್ರಿವಳಿ ಪದ, ಭೂಮಿಯಾದ ಪರಿಯನ್ನು ತಿಳಿಸುವ ಪದ್ಯ – ಮಧುಕೈಟಭರ ಮೇದಸ್ಸಿನಲಿ ಮೇದಿನಿಯಾದುದಿದ
(೨) ಅನುಭವಿಸು – ೩, ೫ ಸಾಲಿನ ಮೊದಲ ಪದ