ಪದ್ಯ ೮: ಭಗದತ್ತನ ಆಕ್ರಮಣ ಹೇಗಿತ್ತು?

ಸುರಪ ಕದಿಯಲು ಕೆರಳಿ ಕುಲಗಿರಿ
ಯುರಿಯನುಗುಳುವುದೆನಲು ದಾಡೆಗ
ಳರುಣಮಯ ರಶ್ಮಿಗಳ ಪಸರದಲೆಸೆದುದಿಭಪತಿಯ
ಧರಣಿಯಳತೆಯ ಹರಿಯ ನೆಗಹಿನ
ಚರಣದಗ್ರದೊಳಿಳಿವ ಘನ ನಿ
ರ್ಝರದವೊಲು ಮದಧಾರೆ ಮೆರೆದುದು ಕರಿಕಪೋಲದಲಿ (ದ್ರೋಣ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಇಂದ್ರನ ವಜ್ರಾಯುಧದ ಪೆಟ್ಟಿಗೆ ಕುಲಪರ್ವತಗಳು ಉರಿಯನ್ನುಗುಳುವುದೋ ಎಂಬಂತೆ, ಸುಪ್ರತೀಕದ ದಂತಗಳು ಅರುಣವರ್ಣದಿಂದ ಕಂಗೊಳಿಸಿದವು. ಭೂಮಿಯನ್ನಳೆದ ತ್ರಿವಿಕ್ರಮನು ಆಕಾಶವನ್ನೆಳೆದಾಗ ಬಹಿರಾವರನವು ಹರಿದು ಇಳಿದ ದೇವಗಂಗೆಯಂತೆ ಅದರ ಕಪೋಲದಲ್ಲಿ ಮದಧಾರೆ ಒಸರುತ್ತಿತ್ತು.

ಅರ್ಥ:
ಸುರಪ: ಇಂದ್ರ; ಕಡಿ: ಕತ್ತರಿಸು; ಕೆರಳು: ಕೋಪಗೊಳ್ಳು; ಕುಲಗಿರಿ: ದೊಡ್ಡ ಬೆಟ್ಟ; ಉರಿ: ಬೆಂಕಿ; ಉಗುಳು: ಹೊರಹಾಕು; ದಾಡೆ: ದವಡೆ, ಒಸಡು; ಅರುಣ: ಕೆಂಪು; ರಶ್ಮಿ: ಕಿರಣ; ಪಸರು: ಹರಡು; ಎಸೆ: ಹೊರಹೊಮ್ಮು; ಇಭ: ಆನೆ; ಪತಿ: ಒಡೆಯ; ಧರಣಿ: ಭೂಮಿ; ಅಳತೆ: ಪರಿಮಾಣ; ಹರಿ: ವಿಷ್ಣು; ನೆಗಹು: ಜಿಗಿ, ಮೇಲೆತ್ತು; ಚರಣ: ಪಾದ; ಅಗ್ರ: ಮುಂಭಾಗ; ಇಳಿ: ಬಾಗು; ಘನ: ಶ್ರೇಷ್ಠ; ನಿರ್ಝರ: ಝರಿ, ಅಬ್ಬಿ; ಮದ: ಮತ್ತು, ಅಮಲು; ಧಾರೆ: ವರ್ಷ; ಮೆರೆ: ಪ್ರಕಾಶಿಸು; ಕರಿ: ಆನೆ; ಕಪೋಲ: ಕೆನ್ನೆ, ಗಲ್ಲ;

ಪದವಿಂಗಡಣೆ:
ಸುರಪ+ ಕಡಿಯಲು +ಕೆರಳಿ +ಕುಲಗಿರಿ
ಉರಿಯನ್+ಉಗುಳುವುದ್+ಎನಲು +ದಾಡೆಗಳ್
ಅರುಣಮಯ +ರಶ್ಮಿಗಳ +ಪಸರದಲ್+ಎಸೆದುದ್+ಇಭಪತಿಯ
ಧರಣಿ +ಅಳತೆಯ +ಹರಿಯ +ನೆಗಹಿನ
ಚರಣದ್+ಅಗ್ರದೊಳ್+ಇಳಿವ +ಘನ +ನಿ
ರ್ಝರದವೊಲು +ಮದಧಾರೆ +ಮೆರೆದುದು +ಕರಿ+ಕಪೋಲದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುರಪ ಕದಿಯಲು ಕೆರಳಿ ಕುಲಗಿರಿಯುರಿಯನುಗುಳುವುದೆನಲು
(೨) ಉಪಮಾನದ ಪ್ರಯೋಗ – ಧರಣಿಯಳತೆಯ ಹರಿಯ ನೆಗಹಿನಚರಣದಗ್ರದೊಳಿಳಿವ ಘನ ನಿರ್ಝರದವೊಲು

ಪದ್ಯ ೭೬: ಆನೆಗಳ ಕಾಲ್ತುಳಿತವು ಹೇಗಿತ್ತು?

ಪಡೆಯೊ ಹೀನೇಂದುವಿನಿರುಳ ಮುಂ
ಗುಡಿಯೊ ಮುಗಿಲೋ ಮದದ ತುಂಬಿಯೊ
ಬಿಡುಮದದ ವಾರಿಗಳೊ ಹೊಸ ವಾರಾಶಿಯೋ ಮೇಣು
ಅಡಸಿ ಪದಹತಧೂಳಿಮದವನು
ಕುಡಿದುದಾ ಮದಧಾರೆ ರೇಣುವ
ನಡಗಿಸಲು ಮದಧೂಳಿಗಳು ಹೆಣಗಿದುವು ತಮ್ಮೊಳಗೆ (ಭೀಷ್ಮ ಪರ್ವ, ೪ ಸಂಧಿ, ೭೬ ಪದ್ಯ)

ತಾತ್ಪರ್ಯ:
ಆನೆಗಳ ಪಡೆಯೋ, ಕೃಷ್ಣಪಕ್ಷದ ಚಂದ್ರನ ಮುಂಚೂಣೀಯೋ, ಮೋಡಗಳೋ, ಆನೆಗಳ ಮದಕ್ಕೆ ಮುತ್ತುತ್ತಿರುವ ದುಂಬಿಗಳೋ, ಸುರಿಯುವ ಮದಧಾರೆಯೋ, ಹೊಸದಾಗಿ ಸೃಷ್ಟಿಯಾದ ಸಮುದ್ರವೋ, ತಿಳಿಯಲಿಲ್ಲ. ಆನೆಗಳ ಕಾಲ್ತುಳಿತದ ಧೂಳು ಮದಧಾರೆಯನ್ನು ನಿಲ್ಲಿಸಿತು, ಮದಧಾರೆಯು ಧೂಳನ್ನು ನುಂಗಿತು, ಹೀಗೆ ಧೂಳು ಮದಧಾರೆಗಳು ಹೆಣಗಿದವು.

ಅರ್ಥ:
ಪಡೆ: ಸೈನ್ಯ, ಗುಂಪು; ಹೀನ: ಕೆಟ್ಟದು; ಇಂದು: ಚಂದ್ರ; ಇರುಳು: ರಾತ್ರಿ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಮುಗಿಲು: ಆಗಸ; ಮದ: ಮತ್ತು, ಅಮಲು, ಸೊಕ್ಕು; ತುಂಬಿ: ದುಂಬಿ; ವಾರಿ: ನೀರು; ವಾರಾಶಿ: ಸಮುದ್ರ; ಅಡಸು: ಬಿಗಿಯಾಗಿ ಒತ್ತು; ಪದ: ಪಾದ; ಪದಹತ: ಪಾದದಿಂದ ತುಳಿಯಲ್ಪಟ್ಟ; ಧೂಳು: ಮಣ್ಣಿನ ಕಣ; ಕುಡಿ: ಪಾನಮಾಡು; ಧಾರೆ: ವರ್ಷ; ರೇಣು: ಧೂಳು, ಹುಡಿ; ಅಡಗಿಸು: ಮುಚ್ಚು; ಹೆಣಗು: ಹೋರಾಡು;

ಪದವಿಂಗಡಣೆ:
ಪಡೆಯೊ +ಹೀನ್+ಇಂದುವಿನ್+ಇರುಳ +ಮುಂ
ಗುಡಿಯೊ+ ಮುಗಿಲೋ +ಮದದ +ತುಂಬಿಯೊ
ಬಿಡುಮದದ +ವಾರಿಗಳೊ +ಹೊಸ +ವಾರಾಶಿಯೋ +ಮೇಣು
ಅಡಸಿ +ಪದಹತ+ಧೂಳಿಮದವನು
ಕುಡಿದುದಾ +ಮದಧಾರೆ +ರೇಣುವನ್
ಅಡಗಿಸಲು +ಮದಧೂಳಿಗಳು+ ಹೆಣಗಿದುವು +ತಮ್ಮೊಳಗೆ

ಅಚ್ಚರಿ:
(೧) ಕೃಷ್ಣಪಕ್ಷದ ಚಂದ್ರ ಎಂದು ಹೇಳಲು – ಹೀನೇಂದುವಿನಿರುಳ
(೨) ಉಪಮಾನದ ಪ್ರಯೋಗ – ಪಡೆಯೊ ಹೀನೇಂದುವಿನಿರುಳ ಮುಂಗುಡಿಯೊ ಮುಗಿಲೋ ಮದದ ತುಂಬಿಯೊಬಿಡುಮದದ ವಾರಿಗಳೊ ಹೊಸ ವಾರಾಶಿಯೋ

ಪದ್ಯ ೪೯: ಹೊಸ ಜಗತ್ತು ಏಕೆ ಹುಟ್ಟಿತೆಂದೆನಿಸಿತು?

ಸುರಿವ ಗಜಮದಧಾರೆಯಲಿ ಹೊಸ
ಶರಧಿಗಳು ಸಂಭವಿಸಿದವು ನೃಪ
ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು
ಗಿರಿಗಳಾದುವು ದಂತಿಯಲಿ ಪಡಿ
ಧರಣಿಯಾದವು ಛತ್ರಚಮರದ
ಲರರೆ ನೂತನ ಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ (ಭೀಷ್ಮ ಪರ್ವ, ೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಸೈನ್ಯದ ಆನೆಗಳ ಮದಧಾರೆಯಿಂದ ಹೊಸ ಸಮುದ್ರಗಳಾದವು. ರಾಜರ ಕಿರೀಟಗಳ ಕಾಂತಿಯಿಂದ ಸೂರ್ಯ ಚಂದ್ರರು ಸಂಭವಿಸಿದರು. ಆನೆಗಳಿಂದ ಪರ್ವತ ಶ್ರೇಣಿಗಳಾದವು. ಛತ್ರ ಚಾಮರಗಳಿಂದ ಭೂಮಿಗೆ ಪ್ರತಿಯಾದ ಇನ್ನೊಂದು ಭೂಮಿಯೇ ನಿರ್ಮಾಣವಾಯಿತು, ಬ್ರಹ್ಮನ ಸೃಷ್ಟಿಯಲ್ಲಿ ಸೈನ್ಯದಿಂದ ಹೊಸ ಸೃಷ್ಟಿಯೊಂದ ಉಂಟಾಯಿತು.

ಅರ್ಥ:
ಸುರಿ: ಹರಿ; ಗಜ: ಆನೆ; ಮದ: ಮತ್ತು, ಅಮಲು; ಧಾರೆ: ವರ್ಷ; ಹೊಸ: ನವ; ಶರಧಿ: ಸಾಗರ; ಸಂಭವಿಸು: ಹುಟ್ಟು; ನೃಪ: ರಾಜ; ವರ: ಶ್ರೇಷ್ಠ; ಮಕುಟ: ಕಿರೀಟ; ಮಣಿ: ಬೆಲೆಬಾಳುವ ಮಣಿ; ಸೂರಿಯ: ಸೂರ್ಯ; ಗಿರಿ: ಬೆಟ್ಟ; ದಂತಿ: ಹಲ್ಲು; ಪಡಿ: ಪ್ರತಿಯಾದುದು; ಧರಣಿ: ಭೂಮಿ; ಛತ್ರ: ಕೊಡೆ; ಚಮರ: ಚಾಮರ; ಅರರೆ: ಆಶ್ಚರ್ಯದ ಸಂಕೇತ; ನೂತನ: ಹೊಸ; ಸೃಷ್ಟಿ: ಹುಟ್ಟು; ವಿರಿಂಚ: ಬ್ರಹ್ಮ; ಸೃಷ್ಟಿ: ಉತ್ಪತ್ತಿ, ಹುಟ್ಟು;

ಪದವಿಂಗಡಣೆ:
ಸುರಿವ +ಗಜ+ಮದಧಾರೆಯಲಿ +ಹೊಸ
ಶರಧಿಗಳು+ ಸಂಭವಿಸಿದವು+ ನೃಪ
ವರರ +ಮಕುಟದ +ಮಣಿಯೊಳ್+ಆದರು +ಚಂದ್ರ+ಸೂರಿಯರು
ಗಿರಿಗಳ್+ಆದುವು +ದಂತಿಯಲಿ +ಪಡಿ
ಧರಣಿಯಾದವು +ಛತ್ರ+ಚಮರದಲ್
ಅರರೆ +ನೂತನ +ಸೃಷ್ಟಿಯಾಯ್ತು +ವಿರಿಂಚ+ಸೃಷ್ಟಿಯಲಿ

ಅಚ್ಚರಿ:
(೧) ಹೊಸ, ನೂತನ – ಸಮನಾರ್ಥಕ ಪದ
(೨) ಉಪಮಾನಗಳ ಬಳಕೆ – ಸುರಿವ ಗಜಮದಧಾರೆಯಲಿ ಹೊಸಶರಧಿಗಳು ಸಂಭವಿಸಿದವು; ನೃಪ ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು; ಗಿರಿಗಳಾದುವು ದಂತಿಯಲಿ;