ಪದ್ಯ ೧೧: ಎಲ್ಲಾ ಜೀವರಿಗೂ ಯಾವುದು ತಪ್ಪದೆ ಬರುತ್ತದೆ?

ಏನನೆಂದೆವು ಹಿಂದೆ ಧರ್ಮ ನಿ
ಧಾನವನು ಕಯ್ಯೊಡನೆ ಮರೆದೆಯಿ
ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ
ಭಾನುಮತಿಯನು ತಿಳುಹು ನಿನ್ನಯ
ಮಾನಿನಿಯ ಸಂತೈಸು ಸಂಸಾ
ರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ (ಗದಾ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಹಿಂದೆ ನಾವು ಬೋಧಿಸಿದ ಧರ್ಮ ಮಾರ್ಗವು ನೆನಪಿದೆಯಾ? ಅದನ್ನು ಕೇಳಿದೊಡನೆ ಮರೆತುಬಿಟ್ಟೆ. ಈಗ ನಾವಾಡಿದುದನ್ನು ಕೇಳಿ ಮೂರ್ಛೆಹೋದೆ. ಹೀಗೆ ಮಾಡಿದರೆ ಹೇಗೆ? ಭಾನುಮತಿ, ಗಾಂಧಾರಿಯನ್ನು ಯಾರು ಸಮಾಧಾನಪಡಿಸುವವರು? ಇದೇನು ನಿಮಗೆ ಮಾತ್ರ ಬಂದುದಲ್ಲ. ಹದಿನಾಲ್ಕು ಲೋಕಗಲ ಜಿವರಿಗೂ ಹುಟ್ಟುಸಾವಿನಂತೆ, ಸುಖ ದುಃಖಗಳೂ ತಪ್ಪದೆ ಬರುತ್ತವೆ ಎಂದು ವ್ಯಾಸರು ಹೇಳಿದರು.

ಅರ್ಥ:
ಹಿಂದೆ: ಗತಕಾಲ; ಧರ್ಮ: ಧಾರಣ ಮಾಡಿದುದು; ನಿಧಾನ: ವಿಳಂಬ, ಸಾವಕಾಶ; ಒಡನೆ: ಕೂಡಲೆ; ಮರೆತೆ: ಜ್ಞಾಪಕದಿಂದ ದೂರಮಾಡು; ಮತಿ: ಬುದ್ಧಿ; ವಿಭ್ರಮ: ಅಲೆದಾಟ, ಸುತ್ತಾಟ; ಹೇಳಿಕೆ: ನುಡಿ; ತಿಳುಹು: ತಿಳಿಸು; ಮಾನಿನಿ: ಹೆಣ್ಣು; ಸಂತೈಸು: ಸಮಾಧಾನ ಪಡಿಸು; ಸಂಸಾರ: ಬಂಧುಜನ; ಅನುಗತಿ: ಸಾವು; ಚತುರ್ದಶ: ಹದಿನಾಲ್ಕು; ಜಗ: ಪ್ರಪಂಚ; ಜೀವರು: ಜೀವಿ;

ಪದವಿಂಗಡಣೆ:
ಏನನೆಂದೆವು +ಹಿಂದೆ +ಧರ್ಮ +ನಿ
ಧಾನವನು +ಕಯ್ಯೊಡನೆ +ಮರೆದೆ+
ಇದೇನು +ನಿನ್ನಯ +ಮತಿಯ +ವಿಭ್ರಮೆ +ನಮ್ಮ +ಹೇಳಿಕೆಗೆ
ಭಾನುಮತಿಯನು +ತಿಳುಹು +ನಿನ್ನಯ
ಮಾನಿನಿಯ +ಸಂತೈಸು +ಸಂಸಾ
ರಾನುಗತಿ+ ತಾನಿದು +ಚತುರ್ದಶ +ಜಗದ +ಜೀವರಿಗೆ

ಅಚ್ಚರಿ:
(೧) ಲೋಕ ನೀತಿ – ಸಂಸಾರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ

ಪದ್ಯ ೪: ಭೀಷ್ಮರು ಕೌರವನಿಗೆ ಯಾವ ಭರವಸೆಯನ್ನಿಟ್ಟರು?

ಖತಿಯ ಮಾಡಿತೆ ನಮ್ಮ ನುಡಿಯನು
ಚಿತಪರಾಯಣರೆಂದು ನಿನ್ನಯ
ಮತಿಗೆ ತೋರಿತೆ ಮಾಣಲದು ನೋಡಾದಡಾಹವವ
ಕ್ಷತಿಯ ಹೊರೆಕಾರರಿಗೆ ಸೌಖ್ಯ
ಸ್ಥಿತಿಯ ಮಾಡುವೆನಿನ್ನು ಕುರುಭೂ
ಪತಿ ವಿರೋಧಿಯ ವಿಧಿಯನೀಗಳೆ ತೋರಿಸುವೆನೆಂದ (ಭೀಷ್ಮ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಮ್ಮ ಮಾತು ನಿನಗ ಕೋಪ, ದುಃಖವನ್ನುಂಟು ಮಾಡಿತೇ? ನಾವು ಅನುಚಿತವನ್ನು ಮಾದುವುದರಲ್ಲೇ ತೊಡಗಿದ್ದೇವೆ ಎನ್ನಿಸಿತೇ? ಅದು ಹಾಗಿರಲಿ, ನಮ್ಮ ಯುದ್ಧವನ್ನು ನೋಡು, ರಾಜನಾದ ನಿನಗೆ ಇನ್ನು ಸುಖವನ್ನುಂಟು ಮಾಡುತ್ತೇನೆ, ನಿನ್ನ ವಿರೋಧಿಗಲ ವಿಧಿಯೇನು ಎನ್ನುವುದನ್ನು ಈಗಲೇ ತೋರಿಸುತ್ತೇನೆ ಎಂದು ಭೀಷ್ಮರು ಹೇಳಿದರು.

ಅರ್ಥ:
ಖತಿ: ಕೋಪ; ನುಡಿ: ಮಾತು; ಅನುಚಿತ: ಸರಿಯಲ್ಲದ; ಪರಾಯಣ: ಪರಮಗುರಿ; ಮತಿ: ಬುದ್ಧಿ; ತೋರು: ಗೋಚರಿಸು; ಮಾಣು: ನಿಲ್ಲಿಸು; ನೋಡು: ವೀಕ್ಷಿಸು; ಆಹವ: ಯುದ್ಧ; ಕ್ಷತಿ: ಕೇಡು, ನಷ್ಟ; ಹೊರೆ; ಭಾರ; ಸೌಖ್ಯ: ನೆಮ್ಮದಿ; ಸ್ಥಿತಿ: ಅಸ್ತಿತ್ವ, ಅವಸ್ಥೆ; ಭೂಪತಿ: ರಾಜ; ವಿರೋಧಿ: ಶತ್ರು; ವಿಧಿ:ಆಜ್ಞೆ, ಆದೇಶ, ನಿಯಮ; ತೋರು: ಗೋಚರಿಸು;

ಪದವಿಂಗಡಣೆ:
ಖತಿಯ +ಮಾಡಿತೆ +ನಮ್ಮ +ನುಡಿ+ಅನು
ಚಿತ+ಪರಾಯಣರೆಂದು +ನಿನ್ನಯ
ಮತಿಗೆ+ ತೋರಿತೆ+ ಮಾಣಲದು +ನೋಡಾದಡ್+ಆಹವವ
ಕ್ಷತಿಯ +ಹೊರೆಕಾರರಿಗೆ +ಸೌಖ್ಯ
ಸ್ಥಿತಿಯ +ಮಾಡುವೆನ್+ಇನ್ನು +ಕುರುಭೂ
ಪತಿ+ ವಿರೋಧಿಯ +ವಿಧಿಯನ್+ಈಗಳೆ+ ತೋರಿಸುವೆನೆಂದ

ಅಚ್ಚರಿ:
(೧) ಖತಿ, ಮತಿ, ಕ್ಷತಿ, ಸ್ಥಿತಿ, ಭೂಪತಿ – ಪ್ರಾಸ ಪದಗಳು
(೨) ಭರವಸೆಯನ್ನು ನೀಡುವ ಪರಿ – ಕ್ಷತಿಯ ಹೊರೆಕಾರರಿಗೆ ಸೌಖ್ಯಸ್ಥಿತಿಯ ಮಾಡುವೆನ್

ಪದ್ಯ ೧೨೧: ಯಾರು ಯಾರ ಸಂಗಡದಿಂದ ಕೆಡುತ್ತಾರೆ?

ಯತಿ ಕಿಡುಗು ದುಸ್ಸಂಗದೊಳು ಭೂ
ಪತಿ ಕಿಡುಗು ದುರ್ಮಂತ್ರಿಯೊಳು ವರ
ಸುತ ಕಿಡುಗು ಲಾಲನೆಗಳೊಳು ಕೃಷಿ ಕಿಡುಗುಪೇಕ್ಷೆಯೊಳು
ಮತಿ ಕಿಡುಗು ಮಧುಪಾನದೊಳು ಸ
ದ್ಗತಿ ಕಿಡುಗು ದುರ್ವ್ಯಸನದೊಳು ನಿಜ
ಸತಿ ಕಿಡುಗು ಸ್ವಾತಂತ್ರ್ಯದೊಳು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೨೧ ಪದ್ಯ)

ತಾತ್ಪರ್ಯ:
ಯಾರು ಯಾರ ಸಂಗದಿಂದ ಕೆಡುತ್ತಾರೆ ಎಂದು ವಿದುರ ಇಲ್ಲಿ ವಿವರಿಸಿದ್ದಾರೆ. ಯತಿ (ಸಂನ್ಯಾಸಿ)ಯು ದುಸ್ಸಂಗದಿಂದ ಕೆಡುತ್ತಾನೆ. ರಾಜನು ಕೆಟ್ಟಾ ಮಂತ್ರಿಯಿಂದ ಕೆಡುತ್ತಾನೆ. ಮಗನನ್ನು ಅತಿಯಾಗಿ ಮುದ್ದುಮಾಡಿ ಬೆಳಸಿದರೆ ಆತುನು ಕೆಡುತ್ತಾನೆ, ಅಲಕ್ಷದಿಂದ ಮಾಡುವ ವ್ಯವಸಾಯವು ಕೆಡುತ್ತದೆ. ಮದ್ಯಪಾನದಿಂದ ಬುದ್ಧಿಯು ಕೆಡುತ್ತದೆ, ಕೆಟ್ಟ ವ್ಯಸನಗಳಿಂದ ಸದ್ಗತಿಯು ದೊರೆಯುವುದಿಲ್ಲ ಮತ್ತು ತನ್ನಿಚ್ಛೆ ಬಂದಂತೆ ನಡೆಯುವುದರಿಂದ ಹೆಂಡತಿಯು ಕೆಡುತ್ತಾಳೆ ಎಂದು ವಿದುರ ತಿಳಿಸಿದ.

ಅರ್ಥ:
ಯತಿ: ಇಂದ್ರಿಯ ನಿಗ್ರಹ, ಸಂನ್ಯಾಸಿ; ಕಿಡುಗು: ಅಳಿ, ನಾಶವಾಗು; ದುಸ್ಸಂಗ: ಕೆಟ್ಟವರ ಜೊತೆ; ಭೂಪತಿ: ರಾಜನು; ದುರ್ಮಂತ್ರಿ: ಕೆಟ್ಟ ಸಚಿವ; ವರ: ಶ್ರೇಷ್ಠ; ಸುತ: ಮಗ; ಲಾಲನೆ: ಅಕ್ಕರೆ ತೋರಿಸುವುದು, ಮುದ್ದಾಟ; ಕೃಷಿ: ವ್ಯವಸಾಯ; ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ಮತಿ: ಬುದ್ಧಿ; ಮಧುಪಾನ: ಮಾದಕಪಾನಿಯಗಳನ್ನು ಕುಡಿಯುವುದು; ಸದ್ಗತಿ: ಒಳ್ಳೆಯ ಸ್ಥಿತಿ; ವ್ಯಸನ: ದುಃಖ, ವ್ಯಥೆ; ಸತಿ: ಹೆಂಡತಿ; ಸ್ವಾತಂತ್ಯ: ತನ್ನಿಚ್ಛೆ ಬಂದಂತೆ ನಡೆಯುವುದು;

ಪದವಿಂಗಡಣೆ:
ಯತಿ +ಕಿಡುಗು+ ದುಸ್ಸಂಗದೊಳು+ ಭೂ
ಪತಿ +ಕಿಡುಗು +ದುರ್ಮಂತ್ರಿಯೊಳು +ವರ
ಸುತ +ಕಿಡುಗು +ಲಾಲನೆಗಳೊಳು+ ಕೃಷಿ+ ಕಿಡುಗ್+ಉಪೇಕ್ಷೆಯೊಳು
ಮತಿ +ಕಿಡುಗು +ಮಧುಪಾನದೊಳು +ಸ
ದ್ಗತಿ +ಕಿಡುಗು +ದುರ್ವ್ಯಸನದೊಳು +ನಿಜ
ಸತಿ +ಕಿಡುಗು +ಸ್ವಾತಂತ್ರ್ಯದೊಳು +ಭೂಪಾಲ +ಕೇಳೆಂದ

ಅಚ್ಚರಿ:
(೧) ಕಿಡುಗು – ಪ್ರತಿ ಸಾಲಿನ ೨ನೇ ಪದ
(೨) ಯತಿ, ಪತಿ, ಮತಿ, ಸತಿ, ಸದ್ಗತಿ – ಪ್ರಾಸ ಪದಗಳು
(೩) ದುಸ್ಸಂಗ, ದುರ್ಮತಿ, ದುರ್ವ್ಯಸನ – ದು ಕಾರದ ಪದಗಳ ಬಳಕೆ

ಪದ್ಯ ೧೮: ಸೈನ್ಯದ ಆಯುಧದ ನೋಟವು ಹೇಗಿತ್ತು?

ಬೀಳುಕೊಂಡನು ಶಲ್ಯನಿತ್ತಲು
ಹೇಳುವರ ಮತಿ ಮುರಿಯೆ ನೋಟಕ
ರಾಲಿ ಝೊಮ್ಮಿಡೆ ಕಾದುವರ ಮನ ಮೂರು ಕವಲಾಗೆ
ಜಾಳಿಗೆಯ ಹೊಗರಲಗಿನುರಿಯ ಚ
ಡಾಳ ನಭದಲಿ ಝಗಝಗಿಸೆ ಹೇ
ರಾಳದೊಡ್ಡವಣೆಯಲಿ ಬರುತಿರ್ದುದು ನೃಪವ್ರಾತ (ಉದ್ಯೋಗ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಲ್ಯನು ಧರ್ಮರಾಯನನ್ನು ಬೀಳ್ಕೊಂಡು ಹಸ್ತಿನಾವತಿಗೆ ಹೊರಟನು. ಇತ್ತ ರಾಜರು ತಮ್ಮ ಸೈನ್ಯಗಳೊಡನೆ ಯುದ್ಧಕ್ಕೆ ಬರುತ್ತಿದ್ದರು. ಸೈನ್ಯದ ರಥ ಮೊದಲಾದವುಗಳಲ್ಲಿದ್ದ ಜಾಳಿಗೆಗಳ ಕಾಂತಿ, ಆಯುಧಗಳ ಉರಿಯಂತಹ ಕಾಂತಿ ಆಕಾಶದಲ್ಲೆಲ್ಲಾ ತುಂಬುತ್ತಿತ್ತು. ಮಹಾಸನ್ನಾಹದಿಂದ ಸೈನ್ಯಗಳು ಪ್ರಯಾಣ ಮಾಡುತ್ತಿದ್ದವು. ಅವನ್ನು ನೋಡಿದವರಿಗೆ ಯುದ್ಧ ಮಾಡುವುದೋ ಬಿಡುವುದೋ ಎಂಬ ಭಯವಾಗುತ್ತಿತ್ತು. ಹಾಗೋ ಹೀಗೋ ಎಂಬ ಎರಡು ಮನಸ್ಸಲ್ಲ. ಮೂರನೆಯ ಕವಲೊಂದು ಹುಟ್ಟುತ್ತಿತ್ತು.

ಅರ್ಥ:
ಬೀಳುಕೊಂಡನು: ಹೊರಟನು; ಮತಿ: ಬುದ್ಧಿ; ಮುರಿ: ಹರಿ, ವಿಮುಖವಾಗು; ನೋಟಕ: ನೋಡುವವರು, ಪ್ರೇಕ್ಷಕ; ಝೋಂಮಿಡು: ಕೋರೈಸು; ಕಾದು: ಜಗಳವಾಡು; ಮನ: ಮನಸ್ಸು; ಕವಲು: ದಾರಿ; ಜಾಳಿಸು: ಚಲಿಸು; ಹೊಗರು: ಕಾಂತಿ, ಪ್ರಕಾಶ; ಅಲಗು: ಆಯುಧಗಳ ಹರಿತವಾದ ಅಂಚು; ಉರಿ: ಜ್ವಾಲೆ; ಚಡಾಳ: ಹೆಚ್ಚಳ, ಆಧಿಕ್ಯ; ನಭ: ಆಕಾಶ; ಝಗಝಗ: ಹೊಳೆಯುವ; ಹೇರಾಳ: ಹೆಚ್ಚಳ; ದೊಡ್ಡವಣೆ: ಮಹಾಸನ್ನಾಹ; ಬರುತಿರ್ದುದು: ಆಗಮಿಸು; ನೃಪ: ರಾಜ; ವ್ರಾತ:ಗುಂಪು; ಮತಿ: ಬುದ್ಧಿ;

ಪದವಿಂಗಡಣೆ:
ಬೀಳುಕೊಂಡನು +ಶಲ್ಯನ್+ಇತ್ತಲು
ಹೇಳುವರ+ ಮತಿ+ ಮುರಿಯೆ +ನೋಟಕ
ರಾಲಿ +ಝೊಮ್ಮಿಡೆ +ಕಾದುವರ+ ಮನ +ಮೂರು +ಕವಲಾಗೆ
ಜಾಳಿಗೆಯ+ ಹೊಗರ್+ಅಲಗಿನ್+ಉರಿಯ +ಚ
ಡಾಳ +ನಭದಲಿ+ ಝಗಝಗಿಸೆ+ ಹೇ
ರಾಳ+ದೊಡ್ಡವಣೆಯಲಿ+ ಬರುತಿರ್ದುದು +ನೃಪ+ವ್ರಾತ

ಅಚ್ಚರಿ:
(೧) ಝಗಝಗ, ಝೊಮ್ಮಿಡು – ‘ಝ’ ಕಾರದ ಪದಗಳು

ಪದ್ಯ ೨: ದೂತರು ದುರ್ಯೋಧನನಿಗೆ ಏನು ಬಿನ್ನವಿಸಿದರು?

ವಿತಳದಲಿ ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮವಾದರು ನಿನ್ನ ವೈರಿಗಳು (ವಿರಾಟ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ದೂತರು ಬಂದು ಕುರುಪತಿಯಾದ ದುರ್ಯೋಧನನಲ್ಲಿ ಹೀಗೆ ಬಿನ್ನವಿಸಿದರು: ರಾಜ, ಪಾಂಡುಪುತ್ರರು ಪಾತಾಳದಲ್ಲೋ ಇಲ್ಲವೆ ಸ್ವರ್ಗದಲ್ಲೋ ಇದ್ದಾರು, ಆದರೆ ಈ ಭೂಮಿಯಲ್ಲಿ ಮಾತ್ರ ಇಲ್ಲ. ನಮ್ಮೆಲ್ಲ ಬುದ್ಧಿಯನ್ನು ಉಪಯೋಗಿಸಿ ನಾನಾ ರೀತಿಯಿಂದ ಒಳಹೊಕ್ಕು ಹುಡುಕಿದೆವು. ಈ ಭೂಮಿಯ ಮೇಲೆ ಪಾಂಡವರ ಸುಳಿವಿಲ್ಲ. ನಿಮ್ಮ ವೈರಿಗಳು ನಿರ್ನಾಮವಾಗಿದ್ದಾರೆ, ಎಂದು ದೂತರು ತಿಳಿಸಿದರು

ಅರ್ಥ:
ವಿತಳ: ಪಾತಾಳ; ಹೊಕ್ಕು: ಸೇರು; ಅಮರಾವತಿ: ಸ್ವರ್ಗ; ಮೇಣ್: ಅಥವ, ಹಾಗು; ಕ್ಷಿತಿ: ಭೂಮಿ; ಸುಳುಹು: ಕುರುಹು; ನೃಪ: ರಾಜ; ಕುಮಾರ: ಮಕ್ಕಳ; ಮತಿ: ಬುದ್ಧಿ; ಹಬ್ಬುಗೆ:ಹರಡುವಿಕೆ, ವ್ಯಾಪಿಸು; ನಾನಾ: ಹಲವಾರು; ಗತಿ: ಯುಕ್ತಿ, ಪದ್ಧತಿ; ಒಳಗೆ: ಅಂತರಾಳ; ಹೊಕ್ಕು: ಸೇರು; ಅರಸು: ಹುಡುಕು; ಕುರುಪತಿ: ಕುರುರಾಜ; ಕೇಳ್: ಆಲಿಸು; ನಿರ್ನಾಮ: ನಾಶ; ವೈರಿ: ಶತ್ರು;

ಪದವಿಂಗಡಣೆ:
ವಿತಳದಲಿ +ಹೊಕ್ಕಿರಲಿ+ ಅಮರಾ
ವತಿಯೊಳಗೆ+ ಮೇಣ್+ಇರಲಿ+ ನಮ್ಮೀ
ಕ್ಷಿತಿಯೊಳಗೆ +ಸುಳುಹಿಲ್ಲ+ ನೃಪ +ಕುಂತೀ+ಕುಮಾರಕರ
ಮತಿಯ +ಹಬ್ಬುಗೆಯಿಂದ +ನಾನಾ
ಗತಿಯೊಳಗೆ +ಹೊಕ್ಕ್+ಅರಸಿದೆವು +ಕುರು
ಪತಿಯೆ +ಕೇಳ್+ ನಿರ್ನಾಮವಾದರು+ ನಿನ್ನ+ ವೈರಿಗಳು

ಅಚ್ಚರಿ:
(೧) ಅಮರಾವತಿ, ಕುರುಪತಿ – ಪ್ರಾಸಪದಗಳ ಬಳಕೆ
(೨) ದುರ್ಯೋಧನನನ್ನು – ನೃಪ, ಕುರುಪತಿ ಎಂದು ಎರಡು ರೀತಿ ಸಂಭೋದನೆ