ಪದ್ಯ ೧೫: ಭೀಮನು ನೇರಳೆ ಹಣ್ಣನು ಹೇಗೆ ಕಿತ್ತನು?

ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ನಾ
ನಿದನು ಕೊಂಡೊಯ್ವೆನು ಮಹೀಪಾಲನ ನಿರೀಕ್ಷಣೆಗೆ
ಗದೆಯ ಕಕ್ಷದೊಳೌಕಿ ಮಾರುತಿ
ಮುದದಿ ಕೃಷ್ಣನ ನೆನೆಯುತಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ತವಕದಲಿ (ಅರಣ್ಯ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮರಗಳ ಗುಂಪಿನಲ್ಲಿದ್ದ ಒಂದು ನೇರಳೆ ಮರವನ್ನು ನೋಡಿ, ಇದು ಬಹಳ ವಿಚಿತ್ರವಾಗಿದೆಯೆಲ್ಲಾ, ಮರಿಯಾನೆಯ ಗಾತ್ರದಲ್ಲಿ ಒಂದು ವಿಚಿತ್ರವಾದ ಹಣ್ಣಿದೆ, ಇದನ್ನು ತೆಗೆದುಕೊಂಡು ಧರ್ಮಜನಿಗೆ ತೋರಿಸಬೇಕೆಂದುಕೊಂಡು, ಭೀಮನು ತನ್ನ ಗದೆಯನ್ನು ಕಂಕುಳಲ್ಲಿ ನೂಕಿ, ಕೃಷ್ಣನನ್ನು ನೆನೆಯುತ್ತಾ ಮರವನ್ನು ಹತ್ತಿ ಆ ಹಣ್ಣನ್ನು ಕಿತ್ತುಕೊಂಡು ಕೆಳಕ್ಕಿಳಿದನು.

ಅರ್ಥ:
ವಿಚಿತ್ರ: ಆಶ್ಚರ್ಯ, ಬೆರಗು; ಫಲ: ಹಣ್ಣು; ಮತಂಗಜ: ಆನೆಯ ಮರಿ; ಗಾತ್ರ: ದಪ್ಪ; ಒಯ್ಯು: ತೆಗೆದುಕೊಂಡು ಹೋಗು; ಮಹೀಪಾಲ: ರಾಜ; ಮಹೀ: ಭೂಮಿ; ನಿರೀಕ್ಷೆ: ನೋಡುವುದು; ಗದೆ: ಮುದ್ಗರ; ಕಕ್ಷ: ಕಂಕಳು; ಔಕು: ನೂಕು; ಮಾರುತಿ: ಭೀಮ; ಮುದ: ಸಂತಸ; ನೆನೆ: ಜ್ಞಾಪಿಸಿಕೊ; ಆನಂದ: ಸಂತಸ; ವೃಕ: ಮರ; ಅಡರು: ಹತ್ತು; ಕೊಯ್ದು: ಸೀಳು; ತವಕ: ಬಯಕೆ, ಆತುರ;

ಪದವಿಂಗಡಣೆ:
ಇದು+ ವಿಚಿತ್ರದ +ಫಲವು +ತಾನೊಂ
ದಿದೆ +ಮತಂಗಜ+ ಗಾತ್ರದಲಿ +ನಾನ್
ಇದನು +ಕೊಂಡೊಯ್ವೆನು +ಮಹೀಪಾಲನ +ನಿರೀಕ್ಷಣೆಗೆ
ಗದೆಯ +ಕಕ್ಷದೊಳ್+ಔಕಿ+ ಮಾರುತಿ
ಮುದದಿ+ ಕೃಷ್ಣನ +ನೆನೆಯುತ್+ಆನಂ
ದದಲಿ +ವೃಕ್ಷವನ್+ಅಡರಿ +ಕೊಯ್ದ್+ಇಳುಹಿದನು +ತವಕದಲಿ

ಅಚ್ಚರಿ:
(೧) ಹಣ್ಣನ್ನು ವಿವರಿಸುವ ಪರಿ – ಫಲವು ತಾನೊಂದಿದೆ ಮತಂಗಜ ಗಾತ್ರದಲಿ
(೨) ಮುದ, ಆನಂದ – ಸಮನಾರ್ಥಕ ಪದ

ಪದ್ಯ ೧೬: ಭೀಮನು ಕ್ಷೇಮಧೂರ್ತಿಯನು ಹೇಗೆ ಹಂಗಿಸಿದನು?

ಮುಂಗುಡಿಯ ಮುರಿದೌಕಿ ಭೀಮಂ
ಗಂಘವಿಸಿದನು ಕ್ಷೇಮಧೂರ್ತಿ ಮ
ತಂಗಜದ ಮೇಲೆಸುತ ಬಲು ನಾರಾಚ ಸೋನೆಯಲಿ
ಅಂಘವಣಿಯಹುದೋ ಮಹಾದೇ
ವಂಗೆ ನೂಕದು ಪೂತು ಮಝರೆಯ
ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ (ಕರ್ಣ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕ್ಷೇಮಧೂರ್ತಿಯು ಮುಂದಿದ್ದ ಸೈನ್ಯವನ್ನು ಭೇದಿಸಿ, ಭೀಮನ ಮೇಲೆ ಆಕ್ರಮಣ ಮಾಡುತ್ತು ಆನೆಯ ಮೇಲಿಂದ ಬಾಣಗಳ ಮಳೆಗಳನ್ನು ಸುರಿದನು. ಭೀಮನು ಅದನ್ನು ನೋಡಿ, ಹೌದು ಸಾಹಸವೆಂದರೆ ಇದೆ! ಶಿವನಿಗೂ ಇದು ಅಸಾಧ್ಯ ಭಲೇ ಭಲೇ ನಿನಗೆ ಸೋಲೇ ಇಲ್ಲ ಎಂದು ಭೀಮನು ಕ್ಷೇಮಧೂರ್ತಿಯನು ಹಂಗಿಸಿದನು.

ಅರ್ಥ:
ಮುಂಗುಡಿ: ಮುಂದೆ; ಮುರಿದು: ಸೀಳಿ; ಔಕು: ಒತ್ತು; ಅಂಘವಿಸು: ಮೇಲೆಬೀಳು; ಮತಂಗ: ಆನೆ; ಮೇಲೆ: ಎತ್ತರದಲ್ಲಿರುವ; ಬಲು: ಬಹಳ; ನಾರಾಚ: ಬಾಣ, ಸರಳು; ಸೋನೆ:ಮಳೆ, ವೃಷ್ಟಿ; ಅಂಘವಣಿ: ಬಯಕೆ, ಉದ್ದೇಶ; ಮಹಾದೇವ: ಶಿವ; ಪೂತು: ಭಲೇ, ಭೇಷ್; ಮಝ: ಭಲೆ, ಕೊಂಡಾಟದ ನುಡಿ; ಭಂಗ: ಮುರಿಯುವಿಕೆ; ಮೂದಲಿಸು: ಹೀಯಾಳಿಸು, ಹಂಗಿಸು; ಕಲಿ: ಶೂರ;

ಪದವಿಂಗಡಣೆ:
ಮುಂಗುಡಿಯ +ಮುರಿದ್+ಔಕಿ+ ಭೀಮಂಗ್
ಅಂಘವಿಸಿದನು +ಕ್ಷೇಮಧೂರ್ತಿ +ಮ
ತಂಗಜದ+ ಮೇಲೆಸುತ +ಬಲು +ನಾರಾಚ +ಸೋನೆಯಲಿ
ಅಂಘವಣಿಯಹುದೋ +ಮಹಾದೇ
ವಂಗೆ+ ನೂಕದು+ ಪೂತು +ಮಝರೆಯ
ಭಂಗನೋ +ನೀನೆನುತ+ ಮೂದಲಿಸಿದನು +ಕಲಿಭೀಮ

ಅಚ್ಚರಿ:
(೧) ಪೂತು, ಮಝರೆ, ಭಂಗನೋ – ಮೂದಲಿಸುವ ಪದಗಳು
(೨) ಮ ಕಾರದ ಸಾಲಿನ ಕೊನೆ ಪದಗಳು – ಮತಂಗಜ, ಮಹಾದೇವ, ಮಝರೆ