ಪದ್ಯ ೩೫: ಇಂದ್ರಪ್ರಸ್ಥದ ರಾಜಾಲಯವು ಹೇಗೆ ಕಂಗೊಳಿಸುತ್ತಿತ್ತು?

ಹಿಡಿದವೆನ್ನೊಹೆಯನು ಮಣಿರುಚಿ
ಯೆಡತರದೊಳಿಕ್ಕಿದವು ಭಿತ್ತಿಯ
ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ
ತಡಿಯ ಕಾಣೆನು ತಳಿತ ಕಾಂತಿಯ
ಕಡಲ ವಿಮಲ ಸ್ಫಟಿಕ ಜಲದಲಿ
ಮಿಡುಕಲಂಜಿದವಂಘ್ರಿಗಳು ನರನಾಥ ಕೇಳೆಂದ (ಸಭಾ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಆಲಯದಲ್ಲಿದ್ದ ಮಣಿಗಳ ಕಾಂತಿಯು ನನ್ನ ಊಹೆಯನ್ನೂ ಮೀರಿಸಿತ್ತು. ನನ್ನ ತಿಳುವಳಿಕೆ ಹೆಚ್ಚು ಕಡಿಮೆಯಾಯಿತು. ಗೋಡೆಯ ಫಲಕದಲ್ಲಿ ಹೊಳೆಯುವ ನೀಲಿಯ ಬೆಳಕಿನ ದೆಸೆಯಿಂದ ನೀರಿನ ಪಾತ್ರದ ದಡ ಕಾಣದಾಯಿತು, ಸ್ಫಟಿಕ ಶಿಲೆಯಲ್ಲಿ ಕಂಡ ನೀರಿನಲ್ಲಿ ಕಾಲನ್ನು ಎತ್ತಿಡಲು ಹೆದರಿದೆನು ಎಂದು ಅಲ್ಲಿಯ ವಿಸ್ಮಯ ರಚನೆಗಳನ್ನು ವಿವರಿಸಿದನು.

ಅರ್ಥ:
ಹಿಡಿ: ಬಂಧಿಸು; ಊಹೆ: ಎಣಿಕೆ, ಅಂದಾಜು; ಮಣಿ: ಬೆಲೆಬಾಳುವ ಹವಳ; ರುಚಿ: ಕಾಂತಿ, ಪ್ರಕಾಶ; ಎಡತರ: ತಡವಡಿಕೆ; ಇಕ್ಕು: ಇರಿಸು, ಇಡು; ಭಿತ್ತಿ: ಮುರಿಯುವ, ಒಡೆಯುವ; ಬಿಡಯ: ದಾಕ್ಷಿಣ್ಯ, ಸಂಕೋಚ; ಝಳ: ತಾಪ, ಶೆಖೆ; ನೀಲ: ಉದ್ದ; ಲಳಿಯ: ರಭಸ, ಆವೇಶ; ಲಹರಿ: ಚಾಕಚಕ್ಯತೆ, ಚುರುಕು, ಚಮತ್ಕಾರ; ತಡಿ: ದಡ, ತಟ,ತೇವ; ಕಾಣೆ: ತೋರು; ತಳಿತ: ಚಿಗುರಿದ; ಕಾಂತಿ: ಪ್ರಕಾಶ; ಕಡಲ: ಸಾಗರ; ವಿಮಲ: ನಿರ್ಮಲ; ಸ್ಫಟಿಕ: ನಿರ್ಮಲವೂ, ಪಾರದರ್ಶಕವೂ ಆದ ಒಂದು ಬಗೆಯ ಬಿಳಿಯ ಹೊಳಪಿನ ಕಲ್ಲು; ಜಲ: ನೀರು; ಮಿಡುಕು: ಅಲುಗಾಟ, ಚಲನೆ; ಅಂಜು: ಹೆದರು; ಅಂಘ್ರಿ: ಪಾದ; ನರನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹಿಡಿದವ್+ಎನ್+ಊಹೆಯನು+ ಮಣಿರುಚಿ
ಎಡತರದೊಳ್+ಇಕ್ಕಿದವು +ಭಿತ್ತಿಯ
ಬಿಡೆಯದಲಿ +ಝಳುಪಿಸುವ+ ನೀಲದ+ ಲಳಿಯ+ ಲಹರಿಯಲಿ
ತಡಿಯ +ಕಾಣೆನು +ತಳಿತ+ ಕಾಂತಿಯ
ಕಡಲ+ ವಿಮಲ+ ಸ್ಫಟಿಕ +ಜಲದಲಿ
ಮಿಡುಕಲ್+ಅಂಜಿದವ್+ಅಂಘ್ರಿಗಳು +ನರನಾಥ+ ಕೇಳೆಂದ

ಅಚ್ಚರಿ:
(೧) ತ, ಕ ಕಾರದ ಅಕ್ಷರಗಳ ಬಳಕೆ – ತಡಿಯ ಕಾಣೆನು ತಳಿತ ಕಾಂತಿಯ

ಪದ್ಯ ೩೪: ಯಾವುದು ದುರ್ಯೋಧನನ ಮನಸ್ಸನ್ನು ನಾಶಮಾಡಿತು?

ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕುಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು (ಸಭಾ ಪರ್ವ, ೧೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಆ ಆಲಯದಲ್ಲಿ ಒಂದು ಕಡೆ ಮನಿಗಳ ಸಾಲು ಕಣ್ನನ್ನು ಕುಕ್ಕುತ್ತಿದ್ದವು, ಒಳಕ್ಕೆ ಹೋಗಿ ನೋಡಿದರೆ ಕಣ್ಣುಗುಡ್ಡೆಗಳು ಒಳಕ್ಕೆ ಸರಿದಂತಾಯಿತು. ನಿರ್ಮಲವಾದ ರತ್ನಗಳ ಕಾಂತಿಯಿಂದ ಮನಸ್ಸು ಮೋಹಿಸಿ ದಾರಿತಪ್ಪಿತು. ಅನೇಕ ವಿಧವಾದ ರತ್ನಗಳ ಕಾಂತಿಯು ವಿವೇಕವನ್ನು ನಾಶಮಾಡಿತು ಎಂದು ದುರ್ಯೋಧನನು ವಿವರಿಸಿದನು.

ಅರ್ಥ:
ಹೊಕ್ಕು: ಸೇರಿ; ಸಾಲು: ಆವಳಿ; ಹೊಳೆ: ಪ್ರಕಾಶಿಸು; ಮಣಿ: ಬೆಲೆಬಾಳುವ ರತ್ನ; ಮುಕ್ಕುಳಿಸು: ಹೊರಹಾಕು; ಕಂಗಳು: ಕಣ್ಣು; ನಡೆ: ಚಲಿಸು; ದಿಕ್ಕು: ದಿಶೆ; ನೋಡು: ವೀಕ್ಷಿಸು; ಮುರಿ: ಸೀಳು; ಆಲಿ: ಕಣ್ಣು; ಸರಿ: ಪಕ್ಕಕ್ಕೆ ಹೋಗು; ಉಕ್ಕು: ಹೆಚ್ಚು, ಹೊರಹೊಮ್ಮು; ಅಮಲ: ಸ್ವಚ್ಛ, ನಿರ್ಮಲ; ಚ್ಛವಿ: ಕಾಂತಿ; ಮನ: ಮನಸ್ಸು; ಸಿಕ್ಕಿ: ಬಂಧನ; ಹೊಲಬಳಿ: ದಾರಿ ಕೆಡು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಡೊಕ್ಕರಿಸು: ಗುದ್ದು, ನಾಶಮಾಡು; ಕೆಡಹು: ನಾಶಮಾದು; ಬಹುವಿಧ; ಹಲವಾರು ಬಗೆ; ರತ್ನ: ಮಣಿ; ಕಾಂತಿ: ಪ್ರಕಾಶ;

ಪದವಿಂಗಡಣೆ:
ಹೊಕ್ಕ+ ಸಾಲಲಿ +ಹೊಳೆವ +ಮಣಿರುಚಿ
ಮುಕ್ಕುಳಿಸಿದವು+ ಕಂಗಳನು+ ನಡೆ
ದಿಕ್ಕೆಲನ +ನೋಡಿದರೆ +ಮುರಿದೊಳ+ಸರಿದವ್+ಆಲಿಗಳು
ಉಕ್ಕುವ್+ಅಮಲಚ್ಛವಿಗಳಲಿ+ ಮನ
ಸಿಕ್ಕಿ+ ಹೊಲಬಳಿದುದು +ವಿವೇಕವ
ಡೊಕ್ಕರಿಸಿ+ ಕೆಡಹಿದವು +ಬಹುವಿಧ +ರತ್ನ+ಕಾಂತಿಗಳು

ಅಚ್ಚರಿ:
(೧) ಆಲಿ, ಕಂಗಳು – ಸಮನಾರ್ಥಕ ಪದ
(೨) ಮನಸ್ಸು ಚಂಚಲವಾದುದನ್ನು ಹೇಳುವ ಪರಿ – ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು
(೩) ಮಣಿರುಚಿ – ರುಚಿ ಪದದ ಬಳಕೆ