ಪದ್ಯ ೧೫: ಬಂಡಿಗಳಲ್ಲಿ ಏನನ್ನು ತುಂಬಲಾಯಿತು?

ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ (ಗದಾ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ನೀರಿನ ಬುದ್ದಲಿಗಳು, ಬಂಗಾರದ ಕಲಶ ಕೊಪ್ಪರಿಗೆಗಳು, ದೀಪದ ಕಂಬಗಳು, ಬಂಗಾರದ ಸರಪಣಿಹಾಕಿದ ಯಂತ್ರಚಾಲಿತ ಗೊಂಬೆಗಳು, ಮರಕತದ ಮಧುಪಾತ್ರೆಗಳು, ನೀಲದ ಕಲಶ, ವೈಢೂರ್ಯದ ತಟ್ಟೆಗಳನ್ನು ದೂತರು ತಂದು ಬಂಡಿಗಳಲ್ಲಿ ತುಂಬಿದರು.

ಅರ್ಥ:
ಕರ: ಹಸ್ತ; ಹೊಂಗಳಸ: ಚಿನ್ನದ ಕುಂಭ; ಉಪ್ಪರಿಗೆ: ಮಹಡಿ, ಸೌಧ; ದೀಪ: ಸೊಡರು; ಸ್ತಂಭ: ಕಂಬ; ಹೇಮ: ಚಿನ್ನ; ಸರಪಣಿ: ಸಂಕೋಲೆ, ಶೃಂಖಲೆ; ಮಣಿ: ಬೆಲೆಬಾಳುವ ರತ್ನ; ಜಂತ್ರ: ಯಂತ್ರ, ವಾದ್ಯ; ಜೀವ: ಉಸಿರಾಡುವ ದೇಹ; ಜೀವಪುತ್ರಿ: ಗೊಂಬೆ; ಮರಕತ: ನವರತ್ನಗಳಲ್ಲಿ ಒಂದು, ಪಚ್ಚೆ; ಮಧು: ಜೇನು; ನೀಲ: ಉದ್ದ, ದೊಡ್ಡ; ಕರಗ: ಕಲಶ; ವೈಡೂರಿಯ: ನವರತ್ನಗಳಲ್ಲಿ ಒಂದು; ಪಡಿಗ: ಪಾತ್ರೆ; ಚರರು: ದೂತರು; ಒಟ್ಟು: ಸೇರಿಸು; ಬಂಡಿ: ರಥ; ಭಾರ: ದೊಡ್ಡ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಕರವತಿಗೆ +ಹೊಂಗಳಸ +ಹೊಂಗ್
ಉಪ್ಪರಿಗೆ +ದೀಪಸ್ತಂಭ +ಹೇಮದ
ಸರಪಣಿಯ+ ಮಣಿಮಯದ +ಜಂತ್ರದ +ಜೀವಪುತ್ರಿಗಳ
ಮರಕತದ +ಮಧುಪಾತ್ರೆ +ನೀಲದ
ಕರಗ+ ವೈಡೂರಿಯದ +ಪಡಿಗವ
ಚರರು +ತಂದೊಟ್ಟಿದರು +ಬಂಡಿಗೆ +ಭಾರ+ಸಂಖ್ಯೆಯಲಿ

ಅಚ್ಚರಿ:
(೧) ಹೊಂಗಳಸ ಹೊಂಗೊಪ್ಪರಿಗೆ – ಪದಗಳ ಬಳಕೆ
(೨) ಯಂತ್ರದ ಗೊಂಬೆ ಎಂದು ಹೇಳಲು – ಜಂತ್ರದ ಜೀವಪುತ್ರಿಗಳ

ಪದ್ಯ ೧೨: ಶಲ್ಯನ ಬಳಿ ಎಷ್ಟು ಸೈನ್ಯವಿತ್ತು?

ಗಣನೆಗೈದದ ಹೆಗಲ ಹಿರಿಯು
ಬ್ಬಣದ ಕನಕದ ಝಗೆಯ ತಲೆಗ
ಡ್ಡಣೆಯ ನೇಣಿನ ಹೊಗರ ಮೋರೆಯ ಕಂಪಿನಾಲಿಗಳ
ಮಣಿಮಯದ ತೇರುಗಳಲಾ ಸಂ
ದಣಿಯವರು ಮಾದ್ರೇಶನದು ಫಲು
ಗುಣ ನಿರೀಕ್ಷಿಪುದಿತ್ತಲೊಂದಕ್ಷೋಹಿಣೀ ಬಲವ (ಭೀಷ್ಮ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಬಂಗಾರದ ಹಿಡಿಕೆಯ ಉಬ್ಬಣಗಳನ್ನು ಹೆಗಲಲ್ಲಿ ಹೊತ್ತು, ತಲೆಗೆ ಹಗ್ಗಗಳನ್ನುಳ್ಳ ಶಿರಸ್ತ್ರಾಣಗಳನ್ನು ಧರಿಸಿ, ಕೆಂಗಣ್ಣಿನಿಂದ ಕೂಡಿದ ಯೋಧರು ರಥಗಲಲ್ಲಿ ಕುಳಿತಿರುವರಲ್ಲಾ, ಅವರೆಲ್ಲರೂ ಶಲ್ಯನ ಕಡೆಯವರು, ಅಲ್ಲಿ ಒಂದು ಅಕ್ಷೋಹಿಣಿ ಸೈನ್ಯವಿದೆ ಎಂದು ವಿವರಿಸಿದನು.

ಅರ್ಥ:
ಗಣನೆ: ಲೆಕ್ಕ; ಐದು: ಬಂದುಸೇರು; ಹೆಗಲು: ಭುಜ; ಹಿರಿಯ: ದೊಡ್ಡವ; ಉಬ್ಬಣ: ಚೂಪಾದ ಆಯುಧ; ಕನಕ: ಚಿನ್ನ; ಝಗೆ: ಕಾಂತಿ, ಪ್ರಕಾಶ; ತಲೆ: ಶಿರ; ಅಡ್ಡಣ: ಗುರಾಣಿ; ನೇಣು: ಹಗ್ಗ, ಹುರಿ; ಮೋರೆ: ಮುಖ, ಆನನ; ಕಂಪಿನಾಳಿ: ಕೆಂಪಾದ ಕಣ್ಣು; ಮಣಿ: ಬೆಲೆಬಾಳುವ ರತ್ನ; ತೇರು: ಬಂಡಿ, ರಥ; ಸಂದಣಿ: ಗುಂಪು; ನಿರೀಕ್ಷೆ: ನೋಡುವುದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ಗಣನೆಗ್+ಐದದ +ಹೆಗಲ+ ಹಿರಿ
ಉಬ್ಬಣದ +ಕನಕದ +ಝಗೆಯ +ತಲೆಗ್
ಅಡ್ಡಣೆಯ +ನೇಣಿನ +ಹೊಗರ +ಮೋರೆಯ+ ಕಂಪಿನಾಲಿಗಳ
ಮಣಿಮಯದ +ತೇರುಗಳಲ್+ಆ+ ಸಂ
ದಣಿಯವರು +ಮಾದ್ರೇಶನದು+ ಫಲು
ಗುಣ+ ನಿರೀಕ್ಷಿಪುದ್+ಇತ್ತಲ್+ಒಂದ್+ಅಕ್ಷೋಹಿಣೀ+ ಬಲವ

ಅಚ್ಚರಿ:
(೧) ಸೈನಿಕರ ವರ್ಣನೆ – ಗಣನೆಗೈದದ ಹೆಗಲ ಹಿರಿಯುಬ್ಬಣದ ಕನಕದ ಝಗೆಯ ತಲೆಗ
ಡ್ಡಣೆಯ ನೇಣಿನ ಹೊಗರ ಮೋರೆಯ ಕಂಪಿನಾಲಿಗಳ

ಪದ್ಯ ೪೫: ದ್ಯೂತವಾಡಲು ಹೇಗೆ ಸಿದ್ಧರಾದರು?

ಕಂದು ಕುಳ್ಳಿರ್ದುದು ಸಭಾಸದ
ವೃಂದ ನೆರೆದುದು ಮತ್ತೆ ಜೂಜಿನ
ದಂದುಗದ ದುರ್ವ್ಯಸನ ಮುಸುಕಿತು ಧರ್ಮನಂದನನ
ತಂದು ಮಣಿಮಯ ಸಾರಿವಲಗೆಯ
ನಂದು ಮೋಹರಿಸಿದರು ಜೂಜಿಂ
ಗಿಂದುಕುಲದ ಮಹೀಶನನುವಾದನು ಸರಾಗದಲಿ (ಸಭಾ ಪರ್ವ, ೧೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ಪಾಂಡವರು ಜೂಜನ್ನಾಡಲು ಸಭೆಗೆ ಬಂದರು, ಅಲ್ಲಿ ಕಳಂಕವು ಕಾದು ಕುಳಿತಿತ್ತು, ಎಲ್ಲಾ ಸಭಾಸದರು ಸೇರಿದ್ದರು, ಜೂಜಿನ ಕೆಟ್ಟಚಟವು ಧರ್ಮಜನನ್ನು ಆವರಿಸಿತು, ಆಟವಾಡಲು ಮಣಿಮಯವದ ಹಲಗೆಯನ್ನಿಟ್ಟು ಕಾಯಿಗಳನ್ನು ಹೂಡಿದರು, ಧರ್ಮಜನು ಜೂಜಿಗೆ ಸಿದ್ಧನಾದನು.

ಅರ್ಥ:
ಕಂದು: ಕಳಂಕ; ಕುಳ್ಳಿರ್ದುದು: ಆಸೀನವಾಗು; ಸಭೆ: ಓಲಗ; ವೃಂದ: ಗುಂಪು; ನೆರೆ: ಸೇರು; ಜೂಜು: ದ್ಯೂತ; ದಂದುಗ: ತೊಡಕು, ತೊಂದರೆ; ದುರ್ವ್ಯಸನ: ಕೆಟ್ಟ ಗೀಳು; ಮುಸುಕು: ಆವರಿಸು; ತಂದು: ಬರೆಮಾಡು; ಮಣಿಮಯ: ಮಣಿಗಳಿಂದ ಕೂಡಿದ; ಮಣಿ: ಬೆಲೆಬಾಳುವ ರತ್ನ; ಸಾರಿ:ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಹಲಗೆ: ಅಗಲವಾದ ಹಾಗೂ ತೆಳುವಾದ ಸೀಳು; ಮೋಹರ: ಗುಂಪು, ಸಮೂಹ, ಕಾಳಗ; ಜೂಜು: ದ್ಯೂತ; ಇಂದುಕುಲ: ಚಂದ್ರವಂಶ; ಮಹೀಶ: ರಾಜ; ಅನುವಾದ: ವ್ಯಾಖ್ಯಾನ, ಸಮ್ಮತಿ; ಸರಾಗ: ಅನುರಾಗ, ಪ್ರೇಮ;

ಪದವಿಂಗಡಣೆ:
ಕಂದು +ಕುಳ್ಳಿರ್ದುದು +ಸಭಾಸದ
ವೃಂದ +ನೆರೆದುದು +ಮತ್ತೆ +ಜೂಜಿನ
ದಂದುಗದ+ ದುರ್ವ್ಯಸನ +ಮುಸುಕಿತು+ ಧರ್ಮನಂದನನ
ತಂದು +ಮಣಿಮಯ +ಸಾರಿ+ವಲಗೆಯ
ನಂದು +ಮೋಹರಿಸಿದರು+ ಜೂಜಿಂಗ್
ಇಂದುಕುಲದ +ಮಹೀಶನ್+ಅನುವಾದನು +ಸರಾಗದಲಿ

ಅಚ್ಚರಿ:
(೧) ಪಾಂಡವರು ಕಳಂಕವನ್ನು ಎದುರುನೋಡುತ್ತಿದ್ದರು ಎಂದು ಹೇಳಲು – ಕಂದು ಕುಳ್ಳಿರ್ದುದು
(೨) ಧರ್ಮಜನ ಸ್ಥಿತಿ – ಜೂಜಿನ ದಂದುಗದ ದುರ್ವ್ಯಸನ ಮುಸುಕಿತು ಧರ್ಮನಂದನನ