ಪದ್ಯ ೬: ಯುಧಿಷ್ಠಿರನು ಯಾವ ಸಿಂಹಾಸನವನ್ನೇರಿದನು?

ಪರಮ ಸತ್ಯವ್ರತ ಮಹಾಕ್ರತು
ವರದಲವಭೃತ ಮಜ್ಜನವ ವಿ
ಸ್ತರಿಸಿ ಭೀಮಾದಿಗಳು ಸಹಿತ ವಿರಾಟನರಮನೆಗೆ
ಅರಸ ಬಂದನು ಮಣಿ ಖಚಿತ ಕೇ
ಸರಿಯ ಪೀಠವನಡರಿದನು ನಿಜ
ಚರಣ ಸೇವೆಯೊಳೆಸೆದರೊಡಹುಟ್ಟಿದರು ಪರುಠವಿಸಿ (ವಿರಾಟ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಸತ್ಯವ್ರತವೆಂಬ ಮಹಾಯಾಗವನ್ನು ಮುಗಿಸಿ ಅವಬೃತಸ್ನಾನವನ್ನು ಮಾಡಿ ಯುಧಿಷ್ಠಿರನು ವಿರಾಟನ ಅರಮನೆಗೆ ಬಂದು ಸಿಂಹಾಸನವನ್ನೇರಿ ಕುಳಿತನು. ಅವನ ತಮ್ಮಂದಿರು ಅವನ ಪಾದ ಸೇವೆಯಲ್ಲಿ ತೊಡಗಿದ್ದನು.

ಅರ್ಥ:
ಪರಮ: ಶ್ರೇಷ್ಠ; ಮಹಾಕ್ರತು: ಮಹಾಯಾಗ; ಅವಭೃತ: ಯಾಗದ ಅನಂತರ ಮಾಡುವ ಮಂಗಳಸ್ನಾನ; ಮಜ್ಜನ: ಸ್ನಾನ; ವಿಸ್ತರಿಸು: ಹಬ್ಬು, ಹರಡು; ಆದಿ: ಮುಂತಾದ; ಸಹಿತ: ಜೊತೆ; ಅರಮನೆ: ಆಲಯ; ಅರಸ: ರಾಜ; ಬಂದನು: ಆಗಮನ; ಮಣಿ: ರತ್ನ; ಖಚಿತ: ಕೂಡಿಸಿದ, ಕುಂದಣಿಸಿದ; ಕೇಸರಿ: ಸಿಂಹ; ಪೀಥ: ಆಸನ; ಅಡರು: ಮೇಲಕ್ಕೆ ಹತ್ತು; ನಿಜ: ತನ್ನ, ದಿಟ; ಚರಣ: ಪಾದ; ಸೇವೆ: ಉಪಚಾರ; ಎಸೆದು: ತೋರು; ಒಡಹುಟ್ಟು: ಅಣ್ಣ ತಮ್ಮಂದಿರು; ಪರುಠವ: ವಿಸ್ತಾರ, ಹರಹು;

ಪದವಿಂಗಡಣೆ:
ಪರಮ +ಸತ್ಯವ್ರತ +ಮಹಾ+ಕ್ರತು
ವರದಲ್+ಅವಭೃತ +ಮಜ್ಜನವ+ ವಿ
ಸ್ತರಿಸಿ +ಭೀಮಾದಿಗಳು +ಸಹಿತ +ವಿರಾಟನ್+ಅರಮನೆಗೆ
ಅರಸ+ ಬಂದನು +ಮಣಿ +ಖಚಿತ +ಕೇ
ಸರಿಯ +ಪೀಠವನ್+ಅಡರಿದನು +ನಿಜ
ಚರಣ+ ಸೇವೆಯೊಳ್+ಎಸೆದರ್+ಒಡಹುಟ್ಟಿದರು +ಪರುಠವಿಸಿ

ಅಚ್ಚರಿ:
(೧) ಸಿಂಹಾಸನ ವನ್ನು ಕೇಸರಿಯ ಪೀಠ ಎಂದು ವರ್ಣಿಸಿರುವುದು

ಪದ್ಯ ೭: ದ್ರೌಪದಿಯು ಕಾಡಿನ ಜೀವನವನ್ನು ಹೇಗೆ ವಿವರಿಸಿದಳು?

ಅರಸ ನೊಂದೈ ಮರ್ದನಕೆ ಮ
ಲ್ಲರುಗಳಿಲ್ಲೆಮಗೊತ್ತುವವು ಕಲು
ಹರಳು ಮಜ್ಜನ ಮಾಡುವೊಡೆ ಶೀತಾಂಬು ತಿಳಿಗೊಳದ
ಹರಿಣ ಶಾರ್ದೂಲಾದಿ ಚರ್ಮಾಂ
ಬರವೆ ಸಮಕಟ್ಟೆಮಗೆ ರತ್ನಾ
ಭರಣವೇ ರುದ್ರಾಕ್ಷಿಯೆಂದಳು ನಗುತ ತರಳಾಕ್ಷಿ (ಅರಣ್ಯ ಪರ್ವ, ೨೨ ಸಂಧಿ, ೭ ಪದ್ಯ)

ತಾತ್ಪರ್ಯ:
ರಾಜ ಈ ಕಾಡಿನಲ್ಲಿ ಮೈಯಿನ ನೋವನ್ನು ನೀಗಿಸಲು ಇಲ್ಲಿ ಮಲ್ಲರಿಲ್ಲ, ಕಲ್ಲು ಹರಳುಗಳೇ ಕಾಲಿಗೊತ್ತುತ್ತವೆ, ಸ್ನಾನಕ್ಕೆ ಕೊಳದ ತಣ್ಣೀರು, ಜಿಂಕೆ ಹುಲಿಗಳ ಚರ್ಮವೇ ನಮಗೆ ಸಿಕ್ಕುವ ವಸ್ತ್ರ, ರುದ್ರಾಕ್ಷಿಯೇ ನಮಗೆ ರತ್ನಾಭರಣಗಳು ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಅರಸ: ರಾಜ; ನೊಂದು: ನೋವು; ಮರ್ದನ: ಕೊಲ್ಲು, ನಾಶಮಾಡು; ಮಲ್ಲ: ಕುಸ್ತಿಪಟು; ಒತ್ತು: ಚುಚ್ಚು; ಕಲು: ಕಲ್ಲು; ಹರಳು: ಕಲ್ಲಿನ ಚೂರು; ಮಜ್ಜನ: ಸ್ನಾನ; ಶೀತಾಂಬು: ತಣ್ಣನೆಯ ನೀರು; ಕೊಳ: ಹೊಂಡ, ಸರೋವರ; ಹರಿಣ: ಜಿಂಕೆ; ಶಾರ್ದೂಲ: ಹುಲಿ; ಆದಿ: ಮುಂತಾದ; ಚರ್ಮಾಂಬರ: ಚರ್ಮದ ಬಟ್ಟೆ; ಸಮಕಟ್ಟು: ಸಿದ್ಧತೆ; ರತ್ನ: ಬೆಲೆಬಾಳುವ ಹರಳು; ಆಭರಣ: ಒಡವೆ; ನಗುತ: ಸಂತಸ; ತರಳಾಕ್ಷಿ: ಹೆಣ್ಣು;

ಪದವಿಂಗಡಣೆ:
ಅರಸ +ನೊಂದೈ +ಮರ್ದನಕೆ +ಮ
ಲ್ಲರುಗಳಿಲ್+ಎಮಗ್+ಒತ್ತುವವು +ಕಲು
ಹರಳು +ಮಜ್ಜನ+ ಮಾಡುವೊಡೆ +ಶೀತಾಂಬು +ತಿಳಿಗೊಳದ
ಹರಿಣ +ಶಾರ್ದೂಲಾದಿ +ಚರ್ಮಾಂ
ಬರವೆ +ಸಮಕಟ್ಟೆಮಗೆ +ರತ್ನಾ
ಭರಣವೇ +ರುದ್ರಾಕ್ಷಿಯೆಂದಳು +ನಗುತ +ತರಳಾಕ್ಷಿ

ಅಚ್ಚರಿ:
(೧) ಕಾಡಿನಲ್ಲಿನ ಸ್ನಾನ – ಮಜ್ಜನ ಮಾಡುವೊಡೆ ಶೀತಾಂಬು ತಿಳಿಗೊಳದ
(೨) ಕಾಡಿನಲ್ಲಿ ಆಭರಣ – ರತ್ನಾಭರಣವೇ ರುದ್ರಾಕ್ಷಿ
(೩) ಕಾಡಿನಲ್ಲಿ ವಸ್ತ್ರ – ಹರಿಣ ಶಾರ್ದೂಲಾದಿ ಚರ್ಮಾಂಬರವೆ ಸಮಕಟ್ಟೆಮಗೆ

ಪದ್ಯ ೪೨: ಧೃತರಾಷ್ಟ್ರನು ಧರ್ಮರಾಯನಿಗೆ ಏನು ಹೇಳಿದ?

ಸೋಲದಲಿ ಮನನೊಂದು ಹೋದುದು
ಹೋಲದೆಮ್ಮಭಿಮತಕೆ ನಿಮ್ಮೊಳು
ಮೇಳದಿಂದೊಂದಾಗಿ ಮಜ್ಜನ ಭೋಜನಾದಿಗಳ
ಲೀಲೆಯಲಿ ಮಾಡುವದು ಸದ್ಯೂ
ತಾಳಿಯಲಿ ರಮಿಸುವದು ಮನದ ವಿ
ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಹಿಂದೆ ನೀವು ಜೂಜಿನಲ್ಲಿ ಸೋತು ಮನನೊಂದು ಹೋದದ್ದು ನಮ್ಮ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಈಗ ನೀವೆರಡು ಪಕ್ಷದವರೂ ಜೊತೆಗೂಡಿ ಸ್ನಾನ, ಭೋಜನಾದಿಗಳನ್ನು ಮಾಡಿರಿ, ಒಳ್ಳೆಯ ವಿನೋದದ ದ್ಯೂತವನ್ನಾಡಿ ಸಂತೋಷದಿಂದಿರಿ, ನಿಮ್ಮ ನಿಮ್ಮಲಿ ಮನಃಕ್ಲೇಷವಿಲ್ಲದೆ ಬದುಕಿರಿ ಎಂದು ಧೃತರಾಷ್ಟ್ರನು ನುಡಿದನು.

ಅರ್ಥ:
ಸೋಲು: ಪರಾಭವ; ಮನ: ಮನಸ್ಸು; ನೊಂದು: ಬೇಜಾರು ಪಟ್ಟು; ಹೋದು: ಕಳೆದ; ಹೋಲದು: ಸರಿತೂಗದು; ಅಭಿಮತ: ಅಭಿಪ್ರಾಯ; ಮೇಳ: ಗುಂಪು, ಸೇರುವಿಕೆ; ಮಜ್ಜನ: ಸ್ನಾನ, ಜಳಕ; ಭೋಜನ: ಊಟ; ಆದಿ: ಮುಂತಾದ; ಲೀಲೆ: ಆಟ, ಕ್ರೀಡೆ, ಸಂತೋಷ; ದ್ಯೂತ: ಜೂಜು; ರಮಿಸು: ಆನಂದಿಸು; ವಿಟಾಳ: ಮಾಲಿನ್ಯ; ಬದುಕು: ಜೀವಿಸು; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಸೋಲದಲಿ +ಮನನೊಂದು +ಹೋದುದು
ಹೋಲದ್+ಎಮ್ಮ್+ಅಭಿಮತಕೆ+ ನಿಮ್ಮೊಳು
ಮೇಳದಿಂದ್+ಒಂದಾಗಿ +ಮಜ್ಜನ +ಭೋಜನಾದಿಗಳ
ಲೀಲೆಯಲಿ +ಮಾಡುವದು +ಸದ್ಯೂ
ತಾಳಿಯಲಿ +ರಮಿಸುವದು +ಮನದ +ವಿ
ಟಾಳವಿಲ್ಲದೆ +ಬದುಕಿ +ನಿಮ್ಮೊಳಗ್+ಎಂದ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರನು ತನ್ನ ತೋರಿಕೆಯ ಇಚ್ಛೆಯನ್ನು ಹೇಳುವ ಪರಿ – ಮನದ ವಿಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ

ಪದ್ಯ ೧೧೦: ಭೀಮ ಜರಾಸಂಧರ ಮಲ್ಲಯುದ್ಧ ಚಿತ್ರಣ – ೧೧

ತೆಗೆಯರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಿಲ್ಲ ಮಜ್ಜನ ಭೋಜನಾದಿಗಳ
ಬಗೆಗೆ ತಾರರು ಬಾಹುಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ (ಸಬಾ ಪರ್ವ, ೨ ಸಂಧಿ, ಪದ್ಯ ೧೧೦)

ತಾತ್ಪರ್ಯ:
ಕೃಷ್ಣಾರ್ಜುನರು ಭೀಮನನ್ನು ಹಿಂದಕ್ಕೆ ತಂದು ಅವನಿಗೆ ವಿಶ್ರಾಂತಿ ಕೊಡಲಿಲ್ಲ. ಪರಿವಾರದವರು ಜರಾಸಂಧನಿಗೆ ವಿಶ್ರಾಂತಿ ಕೊಡಲಿಲ್ಲ. ಹಗಲು, ರಾತ್ರಿ, ಸ್ನಾನ, ಊಟಗಳಿಗೆ ಅವಕಾಶವೇ ಇರಲಿಲ್ಲ. ಮೈಯಸತ್ತ್ವ ತಗ್ಗಲಿಲ್ಲ. ಮನಸ್ಸಿನ ಸಿಟ್ಟು ಕುಗ್ಗಲಿಲ್ಲ. ಬೇಸರವಿಲ್ಲದೆ ಒಬ್ಬರನ್ನೊಬ್ಬರು ಹೊಡೆಯುತ್ತಲೇ ಇದ್ದರು.

ಅರ್ಥ:
ತೆಗೆ: ಈಚೆಗೆ ತರು, ಹೊರತರು; ಉಗಿ: ಹೊರಕ್ಕೆ ತೆಗೆ; ಇರುಳು: ರಾತ್ರಿ; ಹಗಲ: ಬೆಳಗ್ಗೆ; ವಿವರಣೆ: ವಿಸ್ತಾರ; ಮಜ್ಜನ: ಸ್ನಾನ; ಭೋಜನ: ಊಟ; ಆದಿ: ಮುಂತಾದ; ಬಗೆ: ಅಭಿಪ್ರಾಯ, ಮತ; ತಾರು: ಅವಕಾಶ; ಬಾಹು: ಭುಜ; ಸತ್ವ:ಶಕ್ತಿ; ಹೊಗರು: ಕಾಂತಿ, ಪ್ರಕಾಶ; ಹೋಗು: ತೆರಳು, ಗಮಿಸು; ಮನ: ಮನಸ್ಸು; ಖಾತಿ: ಕೋಪ, ಕ್ರೋಧ; ತೆಗಹು: ಹಿಂದಕ್ಕೆ – ತೆಗೆಯುವಿಕೆ; ತಗ್ಗು: ಕುಸಿ, ಬಾಗು; ಹೊಕ್ಕು: ಒಳಸೇರಿ; ತಿವಿದಾಡು: ಗುದ್ದಾಡು; ಬೇಸರ: ಬೇಜಾರು;

ಪದವಿಂಗಡಣೆ:
ತೆಗೆಯರ್+ಅರ್ಜುನ +ಕೃಷ್ಣರ್+ಈತನನ್
ಉಗಿಯರ್+ಅವನ್+ಅವರ್+ಅವನನ್+ಇರುಳಿನ
ಹಗಲ +ವಿವರಣೆಯಿಲ್ಲ+ ಮಜ್ಜನ+ ಭೋಜನಾದಿಗಳ
ಬಗೆಗೆ +ತಾರರು +ಬಾಹು+ಸತ್ವದ
ಹೊಗರು +ಹೋಗದು+ ಮನದ +ಖಾತಿಯ
ತೆಗಹು +ತಗ್ಗದು +ಹೊಕ್ಕು +ತಿವಿದಾಡಿದರು+ ಬೇಸರದೆ

ಅಚ್ಚರಿ:
(೧) ಜೋಡಿ ಪದಗಳು – “ಹೊ” ಹೊಗರು ಹೋಗದು; “ತ” – ತೆಗಹು ತಗ್ಗದು
(೨) ತೆಗೆ, ಉಗಿ – ಸಮನಾರ್ಥಕ ಪದ
(೩) ಅವನ್, ಅವರ್, ಅವನನ್ – ಪದಗಳ ಬಳಕೆ – ೨ ಸಾಲು

ಪದ್ಯ ೪೬: ರಾಜನಾದವನು ಯಾವುದರ ಬಗ್ಗೆ ಎಚ್ಚರವಹಿಸಬೇಕು?

ರಣಮುಖದೊಳಂಗನೆಯಲಾರೋ
ಗಣೆಯಲರಿಗಳ ಕೂಟದಲಿ ವಾ
ರಣ ತುರಗದೇರಾಟದಲಿ ವಿವಿಧಾಯುಧಂಗಳಲಿ
ಎಣೆ ನೃಪರ ಸೋಂಕಿನಲಿ ಸೆಜ್ಜೆಯ
ಲಣಿಯ ಮಜ್ಜನದಲಿ ಮಹಾಮೃಗ
ಗಣನೆಯೊಳಗೆಚ್ಚರಿಕೆಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಯುದ್ಧರಂಗದಲಿ, ಪತ್ನಿಯೊಡನೆ, ಊಟದಲಿ, ಶತ್ರುಗಳ ಒಡನಾಟದಲಿ, ಆನೆ ಕುದುರೆಗಳ ಸವಾರಿನಲಿ, ಆಯುಧಗಳಲ್ಲಿ, ಸರಿಸಮಾನರಾದ ರಾಜರ ಸಂಗದಲ್ಲಿ, ಶಯನಾಗೃಹದಲ್ಲಿ, ಸ್ನಾನದಲ್ಲಿ, ಬೇಟೆಯಲ್ಲಿ ನೀನು ಎಚ್ಚರದಿಂದ ಇರುವೆ ತಾನೆ, ಎಂದು ನಾರದರ ಯುಧಿಷ್ಠಿರನನ್ನು ಪ್ರಶ್ನಿಸಿದರು.

ಅರ್ಥ:
ರಣ: ಯುದ್ಧ; ಮುಖ: ಆನನ; ರಣಮುಖ: ಯುದ್ಧ; ಅಂಗನೆ: ಹೆಂಡತಿ; ಆರೋಗಣೆ: ಊಟ; ಅರಿ: ವೈರಿ, ಶತ್ರು; ಕೂಟ: ಗುಂಪು; ವಾರಣ: ಆನೆ; ತುರಗ: ಕುದುರೆ;ಏರಾಟ: ಸವಾರಿ; ವಿವಿಧ: ಹಲವಾರು; ಆಯುಧ: ಯುದ್ಧದಲ್ಲಿ ಬಳಸುವ ಸಾಧನ; ಎಣೆ: ಸರಿಸಮಾನ; ನೃಪ: ರಾಜ; ಸೋಂಕು: ಸ್ಪರ್ಶ; ಸೆಜ್ಜೆ:ಹಾಸಿಗೆ; ಅಣಿ:ಸಾಧನ; ಮಜ್ಜನ: ಸ್ನಾನ; ಗಣನೆ: ಲೆಕ್ಕ; ಮೃಗ: ಪ್ರಾಣಿ; ಎಚ್ಚರ:ಹುಷಾರಾಗಿರುವಿಕೆ; ರಾಯ: ರಾಜ;

ಪದವಿಂಗಡಣೆ:
ರಣಮುಖದೊಳ್+ ಅಂಗನೆಯಲ್+ಆರೋ
ಗಣೆಯಲ್+ ಅರಿಗಳ+ ಕೂಟದಲಿ+ ವಾ
ರಣ +ತುರಗದ್+ಏರಾಟದಲಿ +ವಿವಿಧ+ಆಯುಧಂಗಳಲಿ
ಎಣೆ +ನೃಪರ +ಸೋಂಕಿನಲಿ +ಸೆಜ್ಜೆಯಲ್
ಅಣಿಯ +ಮಜ್ಜನದಲಿ +ಮಹಾಮೃಗ
ಗಣನೆಯೊಳಗ್+ಎಚ್ಚರಿಕೆಯುಂಟೇ +ರಾಯ ನಿ+ನಗೆಂದ

ಅಚ್ಚರಿ:
(೧) ರಣ – ೧, ೩ ಸಾಲಿನ ಮೊದಲ ಪದ