ಪದ್ಯ ೧೭: ಲೋಮಶನು ಯಾರ ಚರಿತ್ರೆಯನ್ನು ಧರ್ಮಜನಿಗೆ ತಿಳಿಸಿದನು?

ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿಮಖ ಹವಿರ್ಭಾಗ ಪ್ರಸಂಗತಿಯ
ಅವರಿಗಿಂದ್ರನ ಮತ್ಸರವ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾಂಧಾತ ಚರಿತವನೊರೆದನಾ ಮುನಿಪ (ಅರಣ್ಯ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಚ್ಯವನನ ವಿವಾಹ ಅಶ್ವಿನೀದೇವತೆತಳು ಅವನಿಗೆ ರೂಪವನ್ನು ಕೊಟ್ಟದ್ದು, ಅವರಿಗೆ ಯಾಗದ ಹವಿರ್ಭಾಗವನ್ನು ಕೊಟ್ಟಿದ್ದು ಅದರಿಂದ ಇಂದ್ರನಿಗೆ ಬಂದ ಹೊಟ್ಟೆಕಿಚ್ಚು, ರಾಕ್ಷಸನ ನಿರ್ಮಾಣ ಮೊದಲಾದವುಗಳನ್ನು ಹೇಳಿ ಲೋಮಶನು ಮಾಂಧಾತ ಚರಿತ್ರೆಯನ್ನು ಧರ್ಮಜನಿಗೆ ತಿಳಿಸಿದನು.

ಅರ್ಥ:
ಮುನಿ: ಋಷಿ; ವಿವಾಹ: ಮದುವೆ; ರೂಪ: ಆಕಾರ; ಮಖ: ಯಜ್ಞ; ಹವಿಸ್ಸು: ಹವಿ, ಚರು; ಹವಿ: ಯಜ್ಞದಲ್ಲಿ ಆಹುತಿ ಕೊಡುವ ತುಪ್ಪ; ಭಾಗ: ಅಂಶ, ಪಾಲು; ಪ್ರಸಂಗ: ಸೇರಿಕೆ, ಕೂಟ; ಮತ್ಸರ: ಹೊಟ್ಟೆಕಿಚ್ಚು; ದಾನವ: ರಾಕ್ಷಸ; ನಿರ್ಮಾಣ: ರಚಿಸು; ಬಳಿಕ: ನಂತರ; ಅವನಿಪ: ರಾಜ; ಚರಿತ: ಕಥೆ; ಉರೆ: ಅತಿಶಯವಾಗಿ;

ಪದವಿಂಗಡಣೆ:
ಚ್ಯವನ +ಮುನಿಯ +ವಿವಾಹವನು +ರೂ
ಪವನು +ಮುನಿಗ್+ಅಶ್ವಿನಿಗಳ್+ಇತ್ತುದನ್
ಅವರಿಗ್+ಆ+ ಮುನಿ+ಮಖ +ಹವಿರ್ಭಾಗ +ಪ್ರಸಂಗತಿಯ
ಅವರಿಗ್+ಇಂದ್ರನ +ಮತ್ಸರವ +ದಾ
ನವನ +ನಿರ್ಮಾಣವನು +ಬಳಿಕಿನೊಳ್
ಅವನಿಪಗೆ +ಮಾಂಧಾತ +ಚರಿತವನೊರೆದನಾ +ಮುನಿಪ

ಅಚ್ಚರಿ:
(೧) ಮುನಿ – ೧-೩ ಸಾಲಿನ ಎರಡನೇ ಪದ

ಪದ್ಯ ೩೭: ಯಾರು ಯಾರಿಗೆ ಸಮನೆಂದು ಶಿಶುಪಾಲನು ಜರಿದನು?

ಜರಡು ಮಖವೀ ಮಖಕೆ ಹೋಲುವ
ಧರಣಿಪತಿಯೀ ಮಖಕೆ ಧರಣೀ
ಶ್ವರಗೆ ಪಾಸಟಿ ಭೀಷ್ಮನೀ ಮಖ ಭೂಪ ಭೀಷ್ಮರಿಗೆ
ಸರಿಸನಾದನು ಕೃಷ್ಣನೀ ಮಖ
ಧರಣಿಪತಿ ಭೀಷ್ಮಂಗೆ ಕೃಷ್ಣಗೆ
ಸರಿಯ ಕಾಣೆನು ನಿಮ್ಮೊಳೊಬ್ಬರಿಗೊಬ್ಬರೆಣೆಯೆಂದ (ಸಭಾ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೆಲಸಕ್ಕೆ ಬಾರದ ಈ ಯಜ್ಞ, ಇದಕ್ಕೆ ತಕ್ಕ ಯಜಮಾನ ಯುಧಿಷ್ಠಿರ, ಇವೆರಡಕ್ಕೆ ಸರಿಸಮಾನನಾದ ಭೀಷ್ಮ, ಈ ಮೂರಕ್ಕೂ ಸರಿಸಮಾನನಾದ ಕೃಷ್ಣ, ಆದರೆ ಈ ನಾಲ್ಕಕ್ಕೂ ಸರಿಸಮಾನವಾದುದು ಇನ್ನೊಂದಿಲ್ಲ, ಈ ನಾಲ್ಕೂ ಒಂದಕ್ಕೊಂದು ಸಮ ಎಂದು ಶಿಶುಪಾಲನು ಜರೆದನು.

ಅರ್ಥ:
ಜರಡು: ನಿಷ್ಪ್ರಯೋಜಕವಾದ; ಮಖ: ಯಜ್ಞ; ಹೋಲು: ಸರಿಸಮಾನ; ಧರಣಿ: ಭೂಮಿ; ಧರಣಿಪತಿ: ರಾಜ; ಧರಣೀಶ್ವರ: ರಾಜ; ಪಾಸಟಿ: ಸಮಾನ, ಹೋಲಿಕೆ; ಭೂಪ: ರಾಜ; ಸರಿಸನಾದ: ಸಮವಾದ; ಕಾಣೆ: ತೋರು; ಎಣೆ: ಸಮ, ಸಾಟಿ;

ಪದವಿಂಗಡಣೆ:
ಜರಡು +ಮಖವ್+ಈ+ ಮಖಕೆ +ಹೋಲುವ
ಧರಣಿಪತಿಯೀ+ ಮಖಕೆ+ ಧರಣೀ
ಶ್ವರಗೆ +ಪಾಸಟಿ +ಭೀಷ್ಮನ್+ಈ+ ಮಖ +ಭೂಪ +ಭೀಷ್ಮರಿಗೆ
ಸರಿಸನಾದನು+ ಕೃಷ್ಣನ್+ಈ+ ಮಖ
ಧರಣಿಪತಿ+ ಭೀಷ್ಮಂಗೆ +ಕೃಷ್ಣಗೆ
ಸರಿಯ +ಕಾಣೆನು +ನಿಮ್ಮೊಳ್+ಒಬ್ಬರಿಗ್+ಒಬ್ಬರ್+ಎಣೆಯೆಂದ

ಅಚ್ಚರಿ:
(೧) ಧರಣಿಪತಿ, ಧರಣೀಶ್ವರ, ಭೂಪ – ಸಮನಾರ್ಥಕ ಪದ
(೨) ಮಖ – ೫ ಬಾರಿ ಪ್ರಯೋಗ

ಪದ್ಯ ೨೮: ಯಜ್ಞಮಂಟಪಕ್ಕೆ ಧರ್ಮರಾಯನು ಹೇಗೆ ಬಂದನು?

ಹುದಿನ ನವನೀತಾನುಲೇಪದ
ಹೊದೆದ ಕೃಷ್ಣಾಜಿನದ ಹಸ್ತಾ
ಗ್ರದಲೆಸೆವ ಸಾರಂಗಶೃಂಗದ ಯಾಜಮಾನ್ಯದಲಿ
ಉದಧಿಗೊರೆಗಟ್ಟುವ ಚತುರ್ವೇ
ದದ ಮಹಾಘೋಷದಲಿ ಮಖ ಕುಂ
ಡದ ತದಂತರ್ವೇದಿಗೈತಂದನು ಮಹೀಪಾಲ (ಸಭಾ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನ ತನುವಿಗೆ ಬೆಣ್ಣೆಯನ್ನು ಹಚ್ಚಿಕೊಂಡು, ಜಿಂಕೆಯ ಚರ್ಮವನ್ನು ಧರಿಸಿ, ಬೆರಳುಗಳಲ್ಲಿ ಸಾರಂಗದ ಕೊಂಬಿನ ತುದಿಯನ್ನು ಹಿಡಿದು ಯಜಮಾನನಾದನು. ಸಮುದ್ರಘೋಷಕ್ಕೆ ಸಮನಾದ ಚತುರ್ವೇದಗಳ ಘೋಷಣೆಯ ನಡುವೆ ಯಜ್ಞಕುಂಡದ ಅಂತರ್ವೇದಿಗೆ ಬಂದನು.

ಅರ್ಥ:
ಹುದಿ: ವ್ಯಾಪಿಸು; ನವನೀತ: ಬೆಣ್ಣೆ; ಲೇಪನ: ಹಚ್ಚು; ಹೊದೆ: ಧರಿಸು; ಕೃಷ್ಣಾಜಿನ: ಜಿಂಕೆಯ ಚರ್ಮ; ಹಸ್ತ: ಕೈ; ಅಗ್ರ: ಮುಂಭಾಗ; ಸಾರಂಗ: ಜಿಂಕೆ; ಶೃಂಗ: ಕೊಂಬು; ಯಜಮಾನ: ಒಡೆಯ; ಉದಧಿ: ಸಮುದ್ರ; ಒರೆ: ಸಮಾನ; ಘೋಷ: ಗಟ್ಟಿಯಾದ ಶಬ್ದ; ಮಖ: ಯಾಗ; ಕುಂಡ: ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ; ಅಂತರ್ವೇದಿ: ಯಜ್ಞಶಾಲೆಯ ಒಳಜಗಲಿ; ಮಹೀಪಾಲ: ರಾಜ; ಆನು: ಹಿಡಿದುಕೊಳ್ಳು;

ಪದವಿಂಗಡಣೆ:
ಹುದಿನ +ನವನೀತ+ಆನು+ಲೇಪದ
ಹೊದೆದ +ಕೃಷ್ಣಾಜಿನದ+ ಹಸ್ತ
ಅಗ್ರದಲ್+ಎಸೆವ+ ಸಾರಂಗ+ಶೃಂಗದ +ಯಾಜಮಾನ್ಯದಲಿ
ಉದಧಿಗ್+ಒರೆಗಟ್ಟುವ +ಚತುರ್ವೇ
ದದ +ಮಹಾಘೋಷದಲಿ+ ಮಖ+ ಕುಂ
ಡದ +ತದ್+ಅಂತರ್ವೇದಿಗೈ+ತಂದನು+ ಮಹೀಪಾಲ

ಅಚ್ಚರಿ:
(೧) ಬೆರಳು ಎಂದು ಹೇಳಲು – ಹಸ್ತಾಗ್ರ ಎಂಬ ಪದದ ಬಳಕೆ
(೨) ವೇದದ ಘೋಷವನ್ನು ವರ್ಣಿಸಲು ಉಪಯೋಗಿಸಿದ ರೂಪಕ – ಉದಧಿಗೊರೆಗಟ್ಟುವ
(೩) “ಮ” ಕಾರದ ಪದಗಳು – ಮಖ, ಮಹಾಘೋಷ, ಮಹೀಪಾಲ

ಪದ್ಯ ೪: ಯಾವ ಯಾಗವನ್ನು ಮಾಡಲು ಯುಧಿಷ್ಠಿರನು ನಿಶ್ಚಯಿಸಿದನು?

ಅಲ್ಲಿ ಸುರರಲಿ ಸುಪ್ರತಿಕ್ಷಿತ
ನಲ್ಲ ಗಡ ಪಾಂಡು ಕ್ಷಿತೀಶ್ವರ
ನಿಲ್ಲಿ ವೈಭವಕೇನು ಫಲ ನಾವವರ ಸದ್ಗತಿಗೆ
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯಂಗೆ ಮಖವಿದು
ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ (ಸಭಾ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ದೇವತೆಗಳ ಲೋಕ ಸ್ವರ್ಗದಲ್ಲಿ ನನ್ನ ತಂದೆ ಪಾಂಡು ಮಹಾರಾಜರಿಗೆ ಸ್ವಾಗತವಿಲ್ಲ, ಇಲ್ಲಿ ನಾವು ಎಷ್ಟು ವೈಭವದಿಂದ್ದಿದರೇನು ಬಂತು ಪ್ರಯೋಜನ, ಆದ್ದರಿಂದ ನಾವು ಇಲ್ಲಿ ರಾಜಸೂಯ ಯಾಗವನ್ನು ಮಾಡಿದರೆ ಅವರಿಗೆ ಸದ್ಗತಿಯುಂಟಾಗುತ್ತದೆ, ಈ ಯಾಗವಾದರೂ ಕಷ್ಟಸಾಧ್ಯವಾದುದು, ಇದನ್ನು ಮಾಡಬೇಕೆಂದು ನಿಶ್ಚಯಿಸಿದ್ದೇನೆ, ಇದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು, ಇದಕ್ಕೆ ಏನು ಉಪಾಯ ಎಂದು ಕೇಳಿದನು.

ಅರ್ಥ:
ಸುರ: ದೇವತೆ; ಗಡ:ಅಲ್ಲವೆ; ಕ್ಷಿತೀಶ್ವರ; ರಾಜ; ಕ್ಶಿತಿ: ಭೂಮಿ; ವೈಭವ: ಐಶ್ವರ್ಯ, ಆಡಂಬರ; ಫಲ:ಫಲಿತಾಂಶ; ಸದ್ಗತಿ: ಒಳ್ಳೆಯ ದಾರಿ; ರಚಿಸು: ರೂಪಿಸು; ಅಯ್ಯ: ತಂದೆ; ಮಖ: ಯಾಗ; ದುರ್ಲಭ: ಕಷ್ಟದಲ್ಲಿ ಸಿಗುವ; ಕೈಕೊಂಡೆ: ನಡೆಸುವೆ; ಮಂತ್ರ: ವಿಚಾರ; ಪ್ರತಿ:ಸಾಟಿ, ಸಮಾನ;

ಪದವಿಂಗಡಣೆ:
ಅಲ್ಲಿ +ಸುರರಲಿ +ಸುಪ್ರತಿಕ್ಷಿತನ್
ಅಲ್ಲ +ಗಡ +ಪಾಂಡು +ಕ್ಷಿತೀಶ್ವರನ್
ಇಲ್ಲಿ +ವೈಭವಕೇನು+ ಫಲ+ ನಾವವರ +ಸದ್ಗತಿಗೆ
ಇಲ್ಲಿ +ರಚಿಸಿದ +ರಾಜಸೂಯದಿನ್
ಎಲ್ಲವಹುದ್+ಅಯ್ಯಂಗೆ +ಮಖವಿದು
ದುರ್ಲಭವು +ಕೈಕೊಂಡೆವ್+ಆವುದು +ಮಂತ್ರವಿದಕೆಂದ

ಅಚ್ಚರಿ:
(೧)ಆಲ್ಲಿ, ಅಲ್ಲ, ಇಲ್ಲಿ – ೧-೪ ಸಾಲಿನ ಮೊದಲ ಪದಗಳು
(೨) “ರ” ಕಾರದ ಜೋಡಿ ಪದ – ರಚಿಸಿದ ರಾಜಸೂಯದಿ

ಪದ್ಯ ೧೭: ಸೋಲು ಅರ್ಜುನನೆದುರಿಗೆ ಬಂದಿದೆ ಎಂದೇಕೆ ಕೃಷ್ಣನು ಹೇಳಿದನು?

ಮಖರನಾದೈ ಪಾರ್ಥ ಬರ್ಹಿ
ರ್ಮುಖರ ಬಾಣಸದಾತನೀತನು
ಸುಖವೆ ಹೇಳೈ ತಂದೆ ಖಾಂಡವವನದ ನಿರ್ದಹನ
ನಿಖಿಳ ನಿರ್ಜರ ಬಲಸಹಿತ ಶತ
ಮಖನೊಡನೆ ವಿಗ್ರಹವಲಾ ಸಂ
ಮುಖಕೆ ಬಂದುದು ಭಂಗವೆಂದನು ನಗುತ ಮುರವೈರಿ (ಆದಿ ಪರ್ವ, ೨೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅರ್ಜುನ ಇವನ ಮಾತನ್ನು ಒಪ್ಪಿ ನೀನು ಬುದ್ಧಿಹೀನನಾದೆ, ಇವನು ಯಾರೆಂದು ತಿಳಿದಿರುವೆ, ಇವನು ದೇವತೆಗಳ ಅಡಿಗೆಯವನಾದ ಅಗ್ನಿ, ಈತ ಈಗ ಖಾಂಡವವನವನ್ನು ಆಹಾರವನ್ನಾಗಿ ಬಯಸುತ್ತಿದ್ದಾನೆ, ಈ ವನ ದಹನವಾಗಲು, ಸಮಸ್ತ ದೇವತೆಗಳ ಸೈನ್ಯದೊಡನೆ ಬರುವ ಇಂದ್ರನೊಡನೆ ಯುದ್ಧಮಾದಿ ಜಯಿಸಬೇಕಾಗುತ್ತದೆ, ಈಗ ಸೋಲು ನಿನ್ನ ಎದುರಿನಲ್ಲೇ ಇದೆ, ಎಂದು ಕೃಷ್ಣನು ನಗುತ್ತಾ ಹೇಳಿದನು.

ಅರ್ಥ:
ಮಖ: ಯಜ್ಞ; ಮುಖರ:ಅತಿಯಾಗಿ ಮಾತನಾಡುವ; ಬಾಣಸ: ಅಡುಗೆಯ ಕೆಲಸ; ಬರ್ಹಿ: ನವಿಲು; ಸುಖ: ನಲಿವು; ಹೇಳೈ: ಮಾತಾಡು; ವನ: ಬನ, ಕಾಡು; ದಹನ: ಸುಡುವಿಕೆ; ನಿರ್ದಹನ: ಸಂಪೂರ್ಣವಾಗಿ ಸುಡುವಿಕೆ; ನಿಖಿಳ: ಎಲ್ಲಾ, ಸರ್ವ; ನಿರ್ಜರ: ದೇವತೆ; ಬಲ: ಶಕ್ತಿ; ಸಹಿತ: ಜೊತೆ; ಶತ: ನೂರು; ವಿಗ್ರಹ: ದೇಹ, ಶರೀರ; ಸಂಮುಖ:ಎದುರು; ಭಂಗ:ಮುರಿಯುವಿಕೆ;ನಗು: ಸಂತೋಷ; ಮುರವೈರಿ: ಕೃಷ್ಣ; ಬರ್ಹಿರ್ಮುಖ: ದೇವತೆ; ಶತಮಖ: ಇಂದ್ರ (ನೂರು ಯಜ್ಞಗಳನ್ನು ಮಾಡಿದವನು);

ಪದವಿಂಗಡಣೆ:
ಮಖರನಾದೈ +ಪಾರ್ಥ +ಬರ್ಹಿ
ರ್ಮುಖರ +ಬಾಣಸದಾತನ್+ಈತನು
ಸುಖವೆ +ಹೇಳೈ+ ತಂದೆ +ಖಾಂಡವವನದ+ ನಿರ್ದಹನ
ನಿಖಿಳ+ ನಿರ್ಜರ+ ಬಲಸಹಿತ+ ಶತ
ಮಖನೊಡನೆ+ ವಿಗ್ರಹವಲಾ +ಸಂ
ಮುಖಕೆ +ಬಂದುದು +ಭಂಗ+ವೆಂದನು+ ನಗುತ+ ಮುರವೈರಿ

ಅಚ್ಚರಿ:
(೧) ಮಖ, ಮಖರ, ಮುಖರ, ಸಂಮುಖ – “ಮಖ” ದಿಂದಾಗುವ ಪದಗಳು
(೨) “ನಿ” ಕಾರದ ತ್ರಿವಳಿ ಪದಗಳು – ನಿರ್ದಹನ ನಿಖಿಳ ನಿರ್ಜರ
(೩) ಅರ್ಜುನನಿಗೆ ಪ್ರೀತಿಯಿಂದ ಹೇಳುವ ರೀತಿ – ಸುಖವೆ ಹೇಳೈ ತಂದೆ

ಪದ್ಯ ೧೬: ಪತ್ರ ಓದಿದ ರಾಜರು ಏನೆಂದು ಯೋಚಿಸಿದರು?

ಮಾಡಿದರೆ ಶತಯಾಗವನು ಕೈ
ಗೂಡುವಳು ಶಚಿ ಮಖ ಸಹಸ್ರವ
ಮಾಡಿ ಮೇಣ್ಜನಿಸಿದೊಡೆ ಬಹಳೇ ದ್ರೌಪದಾದೇವಿ
ನೋಡುವೆವು ನಡೆ ಜನ್ಮ ಶತದಲಿ
ಕೂಡಿ ಕೊಬ್ಬಿದ ಪುಣ್ಯಫಲಕೈ
ಗೂಡುವುದೊ ತಪ್ಪೇನೆನುತ ನೆರೆದುದು ನೃಪಸ್ತೋಮ (ಆದಿ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪತ್ರ ತಲುಪಿದ ನೃಪರು, ನೂರು ಅಶ್ವಮೇಧಯಾಗವನ್ನು ಮಾಡಿದರೆ ಇಂದ್ರ ಪದವಿ ದೊರಕಬಹುದು (ಶಚಿ – ಇಂದ್ರನ ಹೆಂಡತಿ)ಅಂತಹ ಸಹಸ್ರ ಯಾಗಗಳನ್ನು ಮಾಡಿದರೆ, ದ್ರೌಪದಿಯು ಸಿಕ್ಕಾಳೆ? ನಾವು ಹಿಂದಿನ ನೂರು ಜನ್ಮದಲ್ಲಿ ಮಾಡಿದ ಪುಣ್ಯವು ಈಗ ಫಲಿಸೀತು, ಸ್ವಯಂವರಕ್ಕೆ ಹೋಗಿ ನೋಡುವುದರಲ್ಲಿ ತಪ್ಪಿಲ್ಲ ಎಂದು ಕೊಂಡು ಪಾಂಚಾಲ ನಗರಕ್ಕೆ ಬಂದಿತು ರಾಜರ ದಂಡು.

ಅರ್ಥ:
ಮಾಡು: ನಿರ್ವಹಿಸು, ಕಾರ್ಯರೂಪಕ್ಕೆ ತರು; ಶತ: ನೂರು; ಯಾಗ: ಮಖ, ಯಜ್ನ; ಕೈಗೂಡು: ಫಲಿಸು; ಶಚಿ: ಇಂದ್ರಾಣಿ; ಮಖ: ಯಜ್ಞ; ಸಹಸ್ರ: ಸಾವಿರ; ಜನಿಸು: ಹುಟ್ಟು; ಬಹಳ: ಹೆಚ್ಚು, ಅಧಿಕ; ನಡೆ: ಮುನ್ನುಗ್ಗು, ಚಲಿಸು; ಜನ್ಮ: ಹುಟ್ಟು; ಕೂಡಿ: ಒಟ್ಟಾಗಿ; ಕೊಬ್ಬು: ಹೆಚ್ಚಾಗು, ಅಧಿಕ; ಪುಣ್ಯ: ಒಳ್ಳೆಯ; ಫಲ: ಲಾಭ, ಪ್ರಯೋಜನ; ತಪ್ಪು:ಅಪಚಾರ; ನೆರೆ: ಸೇರು, ಜೊತೆಗೂಡು, ಗುಂಪು; ಸ್ತೋಮ: ಗುಂಪು, ಸಮೂಹ; ನೃಪ: ರಾಜ;

ಪದವಿಂಗಡನೆ:
ಮಾಡಿದರೆ+ ಶತ+ಯಾಗವನು +ಕೈ
ಗೂಡುವಳು+ ಶಚಿ+ ಮಖ +ಸಹಸ್ರವ
ಮಾಡಿ +ಮೇಣ್+ಜನಿಸಿದೊಡೆ +ಬಹಳೇ +ದ್ರೌಪದಾ+ದೇವಿ
ನೋಡುವೆವು+ ನಡೆ+ ಜನ್ಮ+ ಶತದಲಿ
ಕೂಡಿ +ಕೊಬ್ಬಿದ +ಪುಣ್ಯ+ಫಲ+ಕೈ
ಗೂಡುವುದೊ +ತಪ್ಪೇನ್+ಎನುತ +ನೆರೆದುದು +ನೃಪಸ್ತೋಮ

ಅಚ್ಚರಿ:
(೧) ಕೈ- ೧, ೫ ಸಾಲಿನ ಕೊನೆ ಪದ; ಗೂಡು – ೨, ೬ ಸಾಲಿನ ಮೊದಲ ಪದ
(೨) ಮಾಡಿ – ೧, ೩ ಸಾಲಿನ ಮೊದಲ ಪದ
(೩) ಕೂಡಿ, ಮಾಡಿ – ಪ್ರಾಸ ಪದಗಳು
(೪) ಮಖ, ಯಾಗ – ಸಮಾನಾರ್ಥಕ ಪದ
(೫) ಶತ – ೨ ಬಾರಿ ಪ್ರಯೋಗ (೧, ೪ ಸಾಲು), ಸಹಸ್ರ – ಸಂಖ್ಯಾಸೂಚಕ ಪದಗಳ ಬಳಕೆ
(೬) ೫, ೬ ಸಾಲಿನ ಮೊದಲೆರಡು ಪದ ಒಂದೇ ಅಕ್ಷರದ್ದು, ನೋಡುವೆವು ನಡೆ; ಕೂಡಿ ಕೊಬ್ಬಿದ