ಪದ್ಯ ೩೬: ಶಲ್ಯನು ನಕುಲ ಸಹದೇವರನ್ನು ಹೇಗೆ ಹಿಮ್ಮೆಟ್ಟಿದನು?

ಮಕ್ಕಳಿರ ನಿಮಗೇಕೆ ರಣವಿದು
ಮಕ್ಕಳಾಟಿಕೆಯಾಯ್ತಲಾ ಹಿಂ
ದಿಕ್ಕಿದಿರಲಾ ದೊರೆಯ ಧೂಳಿಯ ಬೆನ್ನ ತಡೆದಿರಲಾ
ಎಕ್ಕಸರದಲಿ ನಿಮ್ಮರಾಯನ
ನಿಕ್ಕಿ ಭೀಮಾರ್ಜುನರಿಗೌತಣ
ವಿಕ್ಕುವೆನು ಬರಹೇಳೆನುತ ತೂಳಿದನು ಮಾದ್ರೇಶ (ಶಲ್ಯ ಪರ್ವ, ೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಮಕ್ಕಳಿರಾ ನಿಮಗೇಕೆ ಯುದ್ಧ. ಇದು ಹುಡುಗಾಟವೆಂದುಕೊಂಡಿರಾ? ದೊರೆಯನ್ನು ಹಿಂದಿಟ್ಟು ದೊರೆಯ ಬೆನ್ನು ಧೂಳಾಗುವುದನ್ನು ತಡೆದಿರಲ್ಲವೇ? ಒಂದೇ ಬಾಣದಿಂದ ನಿಮ್ಮ ರಾಜನನ್ನು ಕೊಂದು, ಭೀಮಾರ್ಜುನರಿಗೆ ರಣದೌತಣವನ್ನು ಕೊಡುತ್ತೇನೆ. ಅವರನ್ನು ಬರಹೇಳಿರಿ ಎಂದು ಶಲ್ಯನು ಅವರಿಬ್ಬರನ್ನೂ ಹಿಮ್ಮೆಟ್ಟಿಸಿದನು.

ಅರ್ಥ:
ಮಕ್ಕಳು: ಸುತ; ರಣ: ಯುದ್ಧ; ಆಟಿಕೆ: ಆಟದ ವಸ್ತು; ಹಿಂದಿಕ್ಕು: ಹಿಂಬದಿಗೆ ತಳ್ಳು; ದೊರೆ: ರಾಜ; ಧೂಳು: ಮಣ್ಣಿನ ಪುಡಿ; ಬೆನ್ನು: ಹಿಂಭಾಗ; ತಡೆ: ನಿಲ್ಲಿಸು; ಎಕ್ಕಸ: ವೇಗ; ರಾಯ: ರಾಜ; ಇಕ್ಕು: ಇರಿಸು, ಇಡು; ಔತಣ: ವಿಶೇಷವಾದ ಊಟ; ಬರಹೇಳು: ಆಗಮಿಸು; ತೂಳು: ಬೆನ್ನಟ್ಟು, ಹಿಂಬಾಲಿಸು;

ಪದವಿಂಗಡಣೆ:
ಮಕ್ಕಳಿರ +ನಿಮಗೇಕೆ +ರಣವಿದು
ಮಕ್ಕಳಾಟಿಕೆ+ಆಯ್ತಲಾ +ಹಿಂ
ದಿಕ್ಕಿದಿರಲಾ +ದೊರೆಯ +ಧೂಳಿಯ +ಬೆನ್ನ +ತಡೆದಿರಲಾ
ಎಕ್ಕಸರದಲಿ +ನಿಮ್ಮ+ರಾಯನನ್
ಇಕ್ಕಿ +ಭೀಮಾರ್ಜುನರಿಗ್+ಔತಣವ್
ಇಕ್ಕುವೆನು +ಬರಹೇಳೆನುತ +ತೂಳಿದನು +ಮಾದ್ರೇಶ

ಅಚ್ಚರಿ:
(೧) ಮಕ್ಕಳು ಪದದ ಬಳಕೆ – ಮಕ್ಕಳಿರ ನಿಮಗೇಕೆ ರಣವಿದು ಮಕ್ಕಳಾಟಿಕೆಯಾಯ್ತಲಾ

ಪದ್ಯ ೩: ಅಭಿಮನ್ಯುವಿನ ಮಕ್ಕಳಾಟ ಹೇಗಿತ್ತು?

ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ (ದ್ರೋಣ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ದಾಳಿಯಿಟ್ಟ ರಾವುತರು ತೆಕ್ಕೆ ತೆಕ್ಕೆಯಾಗಿ ಸತ್ತುಬಿದ್ದರು. ಯುದ್ಧಕ್ಕೆ ಬಂದ ಆನೆಗಳು ಕಾಣಿಸಲೇ ಇಲ್ಲ. ವೇಗವಾಗಿ ಬಂದ ರಥಗಳನ್ನು ಹೊಡೆದೋಡಿಸಿದನು. ಬಾಲಕ ಅಭಿಮನ್ಯುವಿನ ಮಕ್ಕಳಾಟ ಶತ್ರುರಾಜರಿಗೆ ಮಾರಿಯಾಯಿತು.

ಅರ್ಥ:
ಮಿಕ್ಕು: ಉಳಿದ; ನೂಕು: ತಳ್ಳು; ಕುದುರೆ: ಅಶ್ವ; ಕುದುರೆಕಾರ: ರಾವುತ; ತೆಕ್ಕೆ: ಸುತ್ತಿಕೊಂಡಿರುವಿಕೆ; ಕೆಡೆ: ಬೀಳು, ಕುಸಿ; ಸಂದಣಿಸು: ಗುಂಪುಗೂಡು; ಆನೆ: ಗಜ; ಕಾಣು: ತೋರು; ಅಳವಿ: ಯುದ್ಧ; ಹೊಕ್ಕು: ಸೇರು; ಹರಿಸು: ಚಲಿಸು; ರಥ: ಬಂಡಿ; ಪದಾತಿ: ಕಾಲಾಳು; ಒಕ್ಕಲಿಕ್ಕು: ಬಡಿ, ಹೊಡೆ; ಅಮಮ: ಆಶ್ಚರ್ಯ ಸೂಚಕ ಪದ; ಮಗು: ಚಿಕ್ಕವ, ಕುಮಾರ; ಮಕ್ಕಳಾಟಿಕೆ: ಮಕ್ಕಳು ಆಟವಾಡುವ ವಸ್ತು; ಮಾರಿ: ಕ್ಷುದ್ರದೇವತೆ; ವೈರಿ: ಶತ್ರು; ರಾಯ: ರಾಜ;

ಪದವಿಂಗಡಣೆ:
ಮಿಕ್ಕು +ನೂಕುವ +ಕುದುರೆಕಾರರು
ತೆಕ್ಕೆ+ಕೆಡೆದರು +ಸಂದಣಿಸಿ+ ಕೈ
ಯಿಕ್ಕಿದ್+ಆನೆಯನೇನನ್+ಎಂಬೆನು +ಕಾಣೆನ್+ಅಳವಿಯಲಿ
ಹೊಕ್ಕು +ಹರಿಸುವ +ರಥ +ಪದಾತಿಯನ್
ಒಕ್ಕಲಿಕ್ಕಿದನ್+ಅಮಮ +ಮಗುವಿನ
ಮಕ್ಕಳಾಟಿಕೆ +ಮಾರಿಯಾಯಿತು +ವೈರಿ+ರಾಯರಿಗೆ

ಅಚ್ಚರಿ:
(೧) ಅಭಿಮನ್ಯುವಿನ ಸಾಹಸ – ಮಗುವಿನ ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ

ಪದ್ಯ ೪೮: ಕರ್ಣ ಶಕುನಿಗಳು ಏನೆಂದು ಹೇಳಿದರು?

ಹೊಕ್ಕು ರಾಯನ ಕಂಡಿದೇನೀ
ಹಕ್ಕೆ ಹುಲ್ಲಿನಲಿರವು ಹರಹರ
ಮಕ್ಕಳಾಟಿಕೆಯೇನಿದಗ್ಗದ ಸಾರ್ವಭೌಮರಿಗೆ
ಸಿಕ್ಕುವನು ಹಗೆ ತನಗೆ ತಾನೇ
ಸಿಕ್ಕುವನು ಹಗೆಗಳಿಗೆ ಲೋಕದೊ
ಳಕ್ಕಜವೆ ಜಯವಿಜಯವೆಂದರು ಕರ್ಣ ಶಕುನಿಗಳು (ಅರಣ್ಯ ಪರ್ವ, ೨೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅವರು ಒಳಕ್ಕೆ ಹೋಗಿ ದುರ್ಯೋಧನನನ್ನು ಕಂಡು, ಸಾರ್ವಭೌಮರಿಗೆ ಇದೇನು ಹುಲ್ಲಿನ ಹಾಸಿಗೆ? ಇದೇನು ಹುಡುಗಾಟವೇ, ಶಿವ ಶಿವಾ ಎಂದು ಉದ್ಗರಿಸಿದರು. ಒಮ್ಮೆ ಶತ್ರುವು ತನಗೆ ಸೆರೆಸಿಕ್ಕುತ್ತಾನೆ, ಇನ್ನೊಮ್ಮೆ ತಾನೇ ಹಗೆಗಳಿಗೆ ಸೆರೆ ಸಿಕ್ಕುತ್ತಾನೆ, ಲೋಕದಲ್ಲಿ ಸೋಲು ಗೆಲುವುಗಳಾಗುವುದು ಆಶ್ಚರ್ಯವೇನಿಲ್ಲ ಎಂದು ಕರ್ಣ ಶಕುನಿಗಳು ಕೌರವನಿಗೆ ಹೇಳಿದರು.

ಅರ್ಥ:
ಹೊಕ್ಕು: ಸೇರು; ರಾಯ: ರಾಜ; ಕಂದು: ನೋಡು; ಹಕ್ಕೆ: ಹಾಸುಗೆ, ಶಯ್ಯೆ, ನೆಲೆ; ಹುಲ್ಲು: ದರ್ಬೆ; ಇರವು: ಜೀವನ; ಹರಹರ: ಶಿವ ಶಿವಾ; ಮಕ್ಕಳಾಟಿಕೆ: ಮಕ್ಕಳು ಆಟವಾಡುವ ವಸ್ತು; ಅಗ್ಗ: ಶ್ರೇಷ್ಠ; ಸಾರ್ವಭೌಮ: ರಾಜ; ಸಿಕ್ಕು: ಪಡೆ; ಹಗೆ: ವೈರತ್ವ; ಲೋಕ: ಜಗತ್ತು; ಜಯ: ಗೆಲುವು; ವಿಜಯ: ಯಶಸ್ಸು; ಅಕ್ಕಜ: ಪ್ರೀತಿ;

ಪದವಿಂಗಡಣೆ:
ಹೊಕ್ಕು+ ರಾಯನ +ಕಂಡಿದ್+ಏನ್+ಈ
ಹಕ್ಕೆ+ ಹುಲ್ಲಿನಲ್+ಇರವು +ಹರಹರ
ಮಕ್ಕಳಾಟಿಕೆಯೇನಿದ್+ಅಗ್ಗದ+ ಸಾರ್ವಭೌಮರಿಗೆ
ಸಿಕ್ಕುವನು +ಹಗೆ+ ತನಗೆ+ ತಾನೇ
ಸಿಕ್ಕುವನು +ಹಗೆಗಳಿಗೆ +ಲೋಕದೊಳ್
ಅಕ್ಕಜವೆ+ ಜಯ+ವಿಜಯವೆಂದರು +ಕರ್ಣ +ಶಕುನಿಗಳು

ಅಚ್ಚರಿ:
(೧) ದುರ್ಯೋಧನನ ಸ್ಥಿತಿಗೆ ಮರುಗುವ ಪರಿ – ಈ ಹಕ್ಕೆ ಹುಲ್ಲಿನಲಿರವು ಹರಹರ ಮಕ್ಕಳಾಟಿಕೆಯೇನಿದಗ್ಗದ ಸಾರ್ವಭೌಮರಿಗೆ

ಪದ್ಯ ೫೯: ಧೃತರಾಷ್ಟ್ರನು ಧರ್ಮಜನನ್ನು ಏಕೆ ಅಪ್ಪಿಕೊಂಡನು?

ಮಕ್ಕಳೆನಗಲ್ಲವರು ನೀವೇ
ಮಕ್ಕಳೈವರು ಮಗನೆ ನಮ್ಮದು
ಮಕ್ಕಳಾಟಿಕೆಯಾಯ್ತಲಾ ಸೌಬಲನ ದೆಸೆಯಿಂದ
ಮಿಕ್ಕು ನೀ ಸೈರಿಸುವುದೆಮ್ಮದು
ಬಕ್ಕುಡಿಯ ಬೇಳಂಬ ನಿಮ್ಮಲಿ
ಕಕ್ಕುಲಿತೆಯಿಲ್ಲೆಂದು ತೆಗೆದಪ್ಪಿದನು ಧರ್ಮಜನ (ಸಭಾ ಪರ್ವ, ೧೬ ಸಂಧಿ, ೫೯ ಪದ್ಯ)

ತಾತ್ಪರ್ಯ:
ಧರ್ಮಜನ ಮಾತನ್ನು ಕೇಳಿ ಧೃತರಾಷ್ಟ್ರನು, ಹೇ ಧರ್ಮಜ ಕೌರವರು ನನಗೆ ಮಕ್ಕಳಲ್ಲ. ನೀವು ಐದುಜನರೇ ನನಗೆ ನಿಜವಾದ ಮಕ್ಕಳು. ಶಕುನಿಯ ದೆಸೆಯಿಂದ ಈ ಹುಡುಗಾಟವಾಗಿಬಿಟ್ಟಿತು, ನೀನು ಬಹು ಹೆಚ್ಚಿನ ಸಹನೆಯನ್ನು ತೆಗೆದುಕೊಳ್ಳಬೇಕಾಯಿತು, ನಮ್ಮದು ಬಾಳಲ್ಲ, ಬಾಳಿನ ಅಣಕ, ನಿಮ್ಮಲ್ಲಿ ನಾನು ಪ್ರೀತಿಯನ್ನು ತೋರಿಸಲಿಲ್ಲ ಎಂದು ಹೇಳುತ್ತಾ ಧೃತರಾಷ್ಟ್ರನು ಧರ್ಮರಾಯನನ್ನು ಬಿಗಿದಪ್ಪಿಕೊಂಡನು.

ಅರ್ಥ:
ಮಕ್ಕಳು: ಸುತರು; ಮಗ: ಸುತ; ಆಟಿಕೆ: ಆಟವಾಡುವ ಸಾಧನ; ದೆಸೆ: ಕಾರಣ; ಮಿಕ್ಕು: ಉಳಿದ; ಸೈರಿಸು: ಸಹಿಸು; ಬಕ್ಕುಡಿಯ: ವಿಸ್ಮಯಕಾರಕ, ವಿವಾದಾತ್ಮಕ; ಬೇಳು: ದಡ್ಡತನ; ಕಕ್ಕುಲಿತೆ: ಚಿಂತೆ, ಸಂಶಯ; ಅಪ್ಪು: ತಬ್ಬಿಕೊ;

ಪದವಿಂಗಡಣೆ:
ಮಕ್ಕಳ್+ಎನಗಲ್+ಅವರು+ ನೀವೇ
ಮಕ್ಕಳ್+ಐವರು+ ಮಗನೆ+ ನಮ್ಮದು
ಮಕ್ಕಳಾಟಿಕೆಯಾಯ್ತಲಾ +ಸೌಬಲನ +ದೆಸೆಯಿಂದ
ಮಿಕ್ಕು+ ನೀ+ ಸೈರಿಸುವುದ್+ಎಮ್ಮದು
ಬಕ್ಕುಡಿಯ +ಬೇಳಂಬ +ನಿಮ್ಮಲಿ
ಕಕ್ಕುಲಿತೆಯಿಲ್ಲೆಂದು +ತೆಗೆದಪ್ಪಿದನು+ ಧರ್ಮಜನ

ಅಚ್ಚರಿ:
(೧) ಧೃತರಾಷ್ಟ್ರನು ತನ್ನ ಬಾಳನ್ನು ವಿವರಿಸುವ ಪರಿ – ಎಮ್ಮದು ಬಕ್ಕುಡಿಯ ಬೇಳಂಬ
(೨) ೧-೩ ಸಾಲಿನ ಮೊದಲ ಪದ – ಮಕ್ಕಳ ಪದದಿಂದ ಪ್ರಾರಂಭ

ಪದ್ಯ ೨೦: ಧೃತರಾಷ್ಟ್ರನು ವಿದುರನಿಗೆ ಏನು ಹೇಳಿದನು?

ಕರೆಸಿಕೊಡಿರೈ ನಿಮ್ಮ ಚಿತ್ತಕೆ
ಬರಿಸಿ ನಡೆಸುವೆನೆನ್ನ ಮಕ್ಕಳ
ದುರುಳತನದಿಂದಾದ ಹಿಂದಿನ ಮಕ್ಕಳಾಟಿಕೆಯ
ಮರೆದು ಕಳೆಯಲಿ ಪಾಂಡುನಂದನ
ರೆರವಿಗರೆ ಬಾ ವಿದುರ ಭೀಷ್ಮನ
ಪರಮ ಮತವೇ ನನ್ನ ಮತ ಹೋಗೆಂದ ಧೃತರಾಷ್ಟ್ರ (ಆದಿ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಷ್ಮರ ಮಾತು ಕೇಳಿ ಸಮ್ಮತಿಸಿದ ಧೃತರಾಷ್ಟ್ರ, ವಿದುರನನ್ನು ಕರೆಸಿ ಪಾಂಡವರನ್ನ ಕರೆಸಿರಿ, ಭೀಷ್ಮರ ಅಭಿಮತದಂತೆ ಮಕ್ಕಳು ನಡೆಯುವಂತೆ ಮಾಡುವ, ನನ್ನ ಮಕ್ಕಳ ಹಿಂದಿನ ದುರುಳತನ ಹುಡುಗಾಟವನ್ನು ಪಾಂಡವರು ಮರೆಯಲಿ ಪಾಂಡವರು ನನಗೇನು ಬೇರೆಯವರಲ್ಲ ಎಂದು ಹೇಳಿ ವಿದುರನನ್ನು ಕರೆಸಿ ಭೀಷ್ಮರ ಮತವೆ ನನ್ನ ಮತ ಎಂದನು ಧೃತರಾಷ್ಟ್ರ.

ಅರ್ಥ:
ಚಿತ್ತ: ಬುದ್ಧಿ, ಮನಸ್ಸು; ನಡೆಸು: ಹೇಳಿದಂತೆ ಮಾಡು, ಪಾಲಿಸು, ನೆರವೇರಿಸು; ದುರುಳ: ಕೆಟ್ಟ, ದುಷ್ಟ;
ಮರೆ: ಜ್ಞಾಪಕವಿಲ್ಲದ; ಕಳೆ: ಬಿಡು, ತೊರೆ; ನಂದನ: ಮಕ್ಕಳ; ಎರವಿಗ: ಬೇರೆಯವನು; ಪರಮ: ಶ್ರೇಷ್ಠ; ಮತ: ಅಭಿಪ್ರಾಯ;

ಪದವಿಂಗಡಣೆ:
ಕರೆಸಿ+ಕೊಡಿರೈ +ನಿಮ್ಮ +ಚಿತ್ತಕೆ
ಬರಿಸಿ +ನಡೆಸುವೆನ್+ಎನ್ನ +ಮಕ್ಕಳ
ದುರುಳ+ತನದಿಂದಾದ+ ಹಿಂದಿನ +ಮಕ್ಕಳಾಟಿಕೆಯ
ಮರೆದು +ಕಳೆಯಲಿ +ಪಾಂಡುನಂದನರ್
ಎರವಿಗರೆ+ ಬಾ +ವಿದುರ+ ಭೀಷ್ಮನ
ಪರಮ +ಮತವೇ +ನನ್ನ +ಮತ +ಹೋಗೆಂದ +ಧೃತರಾಷ್ಟ್ರ

ಅಚ್ಚರಿ:
(೧) ಕರೆಸಿ, ಬರಿಸಿ – ಪ್ರಾಸ ಪದ, ೧, ೨ ಸಾಲಿನ ಮೊದಲ ಪದ
(೨) ಮಕ್ಕಳು, ನಂದನ – ಸಮನಾರ್ಥಕ ಪದ
(೩) ಧೃತರಾಷ್ತ್ರನ ಕುರುಡು ಪ್ರೀತಿ – ಹಿಂದೆ ಮಾಡಿದ ಸಂಚುಗಳನ್ನು ಮಕ್ಕಳಾಟಿಕೆ ಎಂದು ಹೇಳುವುದು