ಪದ್ಯ ೭: ಉತ್ತರನು ಬೃಹನ್ನಳೆಗೆ ಏನು ಹೇಳಿದ?

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಗಬಾರದು ಪ್ರಳಯಕಾಲನ
ಮುಸುಕನುಗಿವವರಾರು ಕೌರವ
ನಸಮಬಲನೈ ರಥವ ಮರಳಿಸು ಜಾಳಿಸುವೆನೆಂದ (ವಿರಾಟ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಹಸಿದಿರುವ ಮಾರಿಗಳ ಗುಂಪಿನಲ್ಲಿ ಕುರಿಯು ಬಂದು ಹೊಕ್ಕಂತೆ ಆಗಿದೆ ನನ್ನ ಸ್ಥಿತಿ ಬೃಹನ್ನಳೆ, ಕುದುರೆಗಳ ಓಟವನ್ನು ನಿಲ್ಲಿಸು, ಬಾರುಕೋಲನ್ನು ಕೆಳಕ್ಕೆ ಬಿಸಾಡು, ಈ ಸೈನ್ಯದೆದುರಿಗೆ ಕದಲಲೂ ಬಾರದು, ಪ್ರಳಯಕಾಲದ ಯಮನು ಮುಖಕ್ಕೆ ಹಾಕಿಕೊಂಡಿರುವ ಮುಸುಕನ್ನು ಯಾರಾದರೂ ತೆಗೆಯುವರೇ? ಕೌರವನು ಮಹಾ ಬಲಶಾಲಿ, ರಥವನ್ನು ಹಿಮ್ದಕ್ಕೆ ತಿರುಗಿಸು, ಓಡಿ ಹೋಗೋಣವೆಂದು ಉತ್ತರನು ಬೃಹನ್ನಳೆಗೆ ಹೇಳಿದನು.

ಅರ್ಥ:
ಹಸಿ: ಆಹಾರವನ್ನು ಬಯಸು; ಮಾರಿ: ಕ್ಷುದ್ರದೇವತೆ; ಮಂದೆ: ಗುಂಪು, ಸಮೂಹ; ಕುರಿ: ಮೇಷ; ನುಸುಳು: ತೂರುವಿಕೆ, ನುಣುಚಿಕೊಳ್ಳುವಿಕೆ; ಎಸಗು: ಮಾಡು, ವ್ಯವಹರಿಸು; ತೇಜಿ: ಕುದುರೆ; ತಡೆ: ನಿಲ್ಲಿಸು; ಚಮ್ಮಟಗೆ: ಚಾವಟಿ; ಬಿಸುಡು: ತೊರೆ, ಹೊರಹಾಕು; ಮಿಸುಗು: ಕದಲು, ಅಲುಗು; ಪ್ರಳಯಕಾಲ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶದ ಸಮಯ; ಮುಸುಕು: ಹೊದಿಕೆ; ಉಗಿ: ಹೊರಹಾಕು; ಅಸಮಬಲ: ಅಪ್ರತಿಮ ಬಲಶಾಲಿ; ರಥ: ಬಂಡಿ; ಮರಳು: ಹಿಂದಿರುಗಿಸು; ಜಾಳಿಸು: ಚಲಿಸು, ನಡೆ;

ಪದವಿಂಗಡಣೆ:
ಹಸಿದ +ಮಾರಿಯ +ಮಂದೆಯಲಿ +ಕುರಿ
ನುಸುಳಿದಂತಾದೆನು+ ಬೃಹನ್ನಳೆ
ಯೆಸಗದಿರು +ತೇಜಿಗಳ+ ತಡೆ+ ಚಮ್ಮಟಿಗೆಯನು +ಬಿಸುಡು
ಮಿಸುಗಬಾರದು+ ಪ್ರಳಯಕಾಲನ
ಮುಸುಕನ್+ಉಗಿವವರಾರು+ ಕೌರವನ್
ಅಸಮಬಲನೈ+ ರಥವ+ ಮರಳಿಸು+ ಜಾಳಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸಿದ ಮಾರಿಯ ಮಂದೆಯಲಿ ಕುರಿನುಸುಳಿದಂತಾದೆನು

ಪದ್ಯ ೫೯: ದ್ರೌಪದಿ ಏಕೆ ಬಸವಳಿದಳು?

ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದ ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳೆದೊಯ್ದ
ಇಂದು ಕೀಚಕನಾಯ ಕಾಲಲಿ
ನೊಂದೆ ನಾನಿದು ಮೂರು ಬಾರಿಯ
ಬಂದ ಭಂಗವೆ ಸಾಕೆನುತ ಬಸವಳಿದಳಬುಜಾಕ್ಷಿ (ವಿರಾಟ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಎಲ್ಲರ ಸಮೂಹದಲ್ಲಿ ಪಾಪಿ ದುರ್ಯೋಧನನು ನನ್ನ ಮಾನ ಕಳೆಯಲು ಅಂದು ನನ್ನ ತಲೆಯ ಮುಂಭಾಗವನ್ನು ಹಿಡಿದು ಎಳೆದನು. ಅರಣ್ಯವಾಸದಲ್ಲಿದ್ದಾಗ ಸೈಂಧವನು ನನ್ನನ್ನು ಹೊತ್ತುಕೊಂಡು ಹೋದನು, ಈ ದಿನ ಕೀಚಕನು ನನ್ನನ್ನು ಕಾಲಿನಿಂದ ಒದೆದನು. ಈ ಮೂರು ಭಂಗಗಳೇ ಸಾಕು ಎಂದು ಅತೀವ ದುಃಖಭರಿತಳಾಗಿ ದ್ರೌಪದಿಯು ಬಳಲಿದಳು.

ಅರ್ಥ:
ಮಂದೆ: ಗುಂಪು, ಸಮೂಹ; ಎಳಸು: ಸೆಳೆ; ಪಾಪಿ: ದುಷ್ಟ; ಮುಂದಲೆ: ತಲೆಯ ಮುಂಭಾಗ; ಬಂದು: ಆಗಮಿಸು; ಬಳಿಕ: ನಂತರ; ಅರಣ್ಯ: ಕಾಡು; ನಾಯ: ಶ್ವಾನ; ಕಾಲು: ಪಾದ; ನೊಂದೆ: ನೋವುಂಡೆ; ಭಂಗ: ಕಷ್ಟ, ಅವಮಾನ; ಸಾಕು: ನಿಲ್ಲಿಸು; ಬಸವಳಿ: ಬಳಲಿಕೆ, ಆಯಾಸ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಮಂದೆಗ್+ಎಳಸಿದ +ಪಾಪಿ +ಕೌರವನ್
ಅಂದು +ಮುಂದಲೆವಿಡಿದ+ ಸೈಂಧವ
ಬಂದು +ಬಳಿಕ+ಅರಣ್ಯ+ವಾಸದೊಳ್+ಎನ್ನನ್+ಎಳೆದೊಯ್ದ
ಇಂದು +ಕೀಚಕ+ನಾಯ +ಕಾಲಲಿ
ನೊಂದೆ +ನಾನ್+ಇದು +ಮೂರು +ಬಾರಿಯ
ಬಂದ +ಭಂಗವೆ+ ಸಾಕೆನುತ+ ಬಸವಳಿದಳ್+ಅಬುಜಾಕ್ಷಿ

ಅಚ್ಚರಿ:
(೧) ಭಂಗವನ್ನೆಸೆದವರು – ಕೌರವ, ಸೈಂಧವ, ಕೀಚಕ
(೨) ಬ ಕಾರದ ಪದಗಳು – ಬಾರಿಯ ಬಂದ ಭಂಗವೆ