ಪದ್ಯ ೬೫: ಮಾದ್ರೀದೇವಿಯು ಯಾವ ದೇವರನ್ನು ನೆನೆದಳು?

ಸಾಕು ಮೂವರು ಸುತರು ತನಗೆಂ
ದೀಕೆ ಮಾದ್ರೀದೇವಿಗಗ್ಗದ
ಶೋಕಿತೆಗೆ ಮಂತ್ರೋಪದೇಶ ವಿಧಾನವನು ಕಲಿಸಿ
ನಾಕನಿಲಯರ ವೊಲಿಸೆನಲು ಬಂ
ದಾಕೆ ಕೃತನಿಯಮದಲಿ ನೆನೆದಳು
ಲೋಕವಿಶ್ರುತರಶ್ವಿನೀದೇವರನು ಹರ್ಷದಲಿ (ಆದಿ ಪರ್ವ, ೪ ಸಂಧಿ, ೬೫ ಪದ್ಯ)

ತಾತ್ಪರ್ಯ:
ತನಗೆ ಮೂರು ಮಕ್ಕಳು ಸಾಕೆಂದು ಕುಂತೀದೇವಿಯು ಮಕ್ಕಳಿಲ್ಲದೆ ಶೋಕಿಸುತ್ತಿದ್ದ ಮಾದ್ರೀದೇವಿಗೆ ಮಂತ್ರವನ್ನುಪದೇಶಿಸಿ ಅದರ ಪ್ರಯೋಗದ ವಿಧಾನವನ್ನು ಕಲಿಸಿ, ದೇವತೆಗಳಲ್ಲಿ ನಿನಗೆ ಬೇಕಾದವರನ್ನು ಒಲಿಸಿಕೋ ಎಂದು ಹೇಳಿದಳು. ಮಾದ್ರಿಯು ನಿಯಮದಂತೆ ಮಂತ್ರವನ್ನು ಜಪಿಸಿ ಅಶ್ವಿನೀದೇವತೆಗಳನ್ನು ನೆನೆದಳು.

ಅರ್ಥ:
ಸಾಕು: ನಿಲ್ಲು; ಸುತ: ಮಗ; ಅಗ್ಗ: ಶ್ರೇಷ್ಠ; ಶೋಕ: ದುಃಖ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಪದೇಶ: ಬೋಧಿಸುವುದು; ವಿಧಾನ: ರೀತಿ; ಕಲಿಸು: ಹೇಳು; ನಾಕನಿಲಯ: ಸ್ವರ್ಗ; ಒಲಿಸು: ಪ್ರೀತಿಸು;ಬಂದು: ಆಗಮಿಸು; ಕೃತ: ಮಾಡಿದ, ಮುಗಿಸಿದ; ನಿಯಮ: ಕಟ್ಟುಪಾಡು; ನೆನೆ: ಜ್ಞಾಪಿಸು; ಲೋಕ: ಜಗತ್ತು; ವಿಶ್ರುತ: ಪ್ರಸಿದ್ಧನಾದವನು; ಹರ್ಷ: ಸಂತಸ;

ಪದವಿಂಗಡಣೆ:
ಸಾಕು +ಮೂವರು +ಸುತರು +ತನಗೆಂದ್
ಈಕೆ +ಮಾದ್ರೀದೇವಿಗ್+ಅಗ್ಗದ
ಶೋಕಿತೆಗೆ +ಮಂತ್ರೋಪದೇಶ+ ವಿಧಾನವನು +ಕಲಿಸಿ
ನಾಕನಿಲಯರ +ಒಲಿಸೆನಲು +ಬಂದ್
ಆಕೆ +ಕೃತ+ನಿಯಮದಲಿ+ ನೆನೆದಳು
ಲೋಕ+ವಿಶ್ರುತರ್+ಅಶ್ವಿನೀದೇವರನು +ಹರ್ಷದಲಿ

ಅಚ್ಚರಿ:
(೧) ತುಂಬ ದುಃಖಿತಳು ಎಂದು ಹೇಳುವ ಪರಿ – ಅಗ್ಗದ ಶೋಕಿತೆ
(೨) ಸ್ವರ್ಗವಾಸಿಗಳು ಎಂದು ಹೇಳಲು – ನಾಕನಿಲಯರ
(೩) ನಾಕ, ಲೋಕ; ಈಕೆ, ಆಕೆ – ಪ್ರಾಸ ಪದ

ಪದ್ಯ ೩೩: ಪಾಂಡುವು ಕುಂತಿಗೆ ಏನು ಹೇಳಿದನು?

ಅರಸಿ ಕೇಳ್ ತದ್ಬೀಜ ಪಾರಂ
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ
ಪರಮ ವೈದಿಕ ಸಿದ್ಧವಿದು ಸರ
ಸಿರುಹಮುಖಿ ನಿಶ್ಶಂಕೆಯಲಿ ನೀ
ಧರಿಸು ಮುನಿಮಂತ್ರೋಪದೇಶವನಿದುವೆ ನಿರ್ದೋಷ (ಆದಿ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ರಾಣಿ ಕೇಳು, ವಂಶಪರಂಪರೆಯ ಬೀಜ ಮುರಿದರೆ ಶ್ರೇಷ್ಠರಾದ ಋಷಿಗಳಿಂದ ಆ ಪರಂಪರೆಯ ಕ್ಷೇತ್ರದಲ್ಲಿ ಮಕ್ಕಳಾಗುವುದೇ ವಿಹಿತ. ಇದು ವೇದಸಮ್ಮತವಾದ ವಿಧಾನ. ಕುಂತೀ ನೀನು ಮುನಿವರರ ಮಂತ್ರೋಪದೇಶವನ್ನು ಧರಿಸು ಅದರಲ್ಲಿ ಯಾವ ದೋಷವೂ ಇಲ್ಲ ಎಂದು ಪಾಂಡುವು ಕುಂತಿಗೆ ಹೇಳಿದನು.

ಅರ್ಥ:
ಅರಸಿ: ರಾಣಿ; ಕೇಳು: ಆಲಿಸು; ಬೀಜ: ಮೂಲ; ಪಾರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು; ಮುರಿ: ಸೀಳು; ಕ್ಷೇತ್ರ: ಜಾಗ; ಮುನಿ: ಋಷಿ; ಕಾರುಣ್ಯ: ದಯೆ; ಪುತ್ರೋದ್ಭವ: ಮಕ್ಕಳನ್ನು ಹುಟ್ಟಿಸು; ವಿಹಿತ: ಯೋಗ್ಯವಾದುದು; ಪರಮ: ಶ್ರೇಷ್ಠ; ವೈದಿಕ: ವೇದಗಳನ್ನು ಬಲ್ಲವನು; ಸಿದ್ಧ: ಸಾಧಿಸಿದವನು; ಸರಸಿರುಹಮುಖಿ: ಕಮಲಮುಖಿ (ಸುಂದರಿ, ಸ್ತ್ರೀ); ಶಂಕೆ: ಅನುಮಾನ; ಧರಿಸು: ಹೊರು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಪದೇಶ:ಬೋಧಿಸುವುದು; ನಿರ್ದೋಷ: ಅಜ್ಞಾನ ದುಃಖಾದಿ ದೋಷರಹಿತನಾದ ಶ್ರೀಹರಿ;

ಪದವಿಂಗಡಣೆ:
ಅರಸಿ +ಕೇಳ್ +ತದ್ಬೀಜ +ಪಾರಂ
ಪರೆ +ಮುರಿಯೆ +ತತ್ +ಕ್ಷೇತ್ರದಲಿ+ ಮುನಿ
ವರರ +ಕಾರುಣ್ಯದಲಿ +ಪುತ್ರೋದ್ಭವವ್+ಅದೇ +ವಿಹಿತ
ಪರಮ +ವೈದಿಕ +ಸಿದ್ಧವಿದು +ಸರ
ಸಿರುಹಮುಖಿ +ನಿಶ್ಶಂಕೆಯಲಿ +ನೀ
ಧರಿಸು +ಮುನಿ+ಮಂತ್ರೋಪದೇಶವನ್+ಇದುವೆ +ನಿರ್ದೋಷ

ಅಚ್ಚರಿ:
(೧) ಕುಂತಿಯನ್ನು ಅರಸಿ, ಸರಸಿರುಹಮುಖಿ ಎಂದು ಕರೆದಿರುವುದು

ಪದ್ಯ ೧೦೬: ಅಂಜನಾಸ್ತ್ರದ ಮಹಿಮೆ ಎಂತಹುದು?

ಒಂದು ದಶ ಶತ ಸಾವಿರದ ಹೆಸ
ರಿಂದ ಲಕ್ಷವು ಕೋಟಿಯಗಣಿತ
ದಿಂದ ನಿನಗಾಂತದಟರಿಪುಗಳ ತಿಂದು ತೇಗುವುದು
ಬಂದು ಬೆಸನನು ಬೇಡುವುದು ತಾ
ನೊಂದು ಶರರೂಪಾಗೆನುತ ಮುದ
ದಿಂದ ವರ ಮಂತ್ರೋಪದೇಶವನಿತ್ತಳರ್ಜುನಗೆ (ಅರಣ್ಯ ಪರ್ವ, ೭ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ಪಾರ್ವತಿಯು, ಅರ್ಜುನ ಈ ಅಸ್ತ್ರವು ನಿನ್ನ ಬಳಿಗೆ ಬಂದು ಬಾಣದ ರೂಪದಿಂದ ಕಾಣಿಸಿಕೊಳ್ಳುತ್ತದೆ. ಇದರ ಪ್ರಯೊಗ ಮಾಡಿದರೆ ಒಂದು, ಹತ್ತು ನೂರು, ಸಾವಿರ, ಲಕ್ಷ, ಖೋಟಿ, ಅನಂತ ಶತ್ರುಗಳನ್ನು ನುಂಗಿ ತೇಗುತ್ತದೆ, ಎಂದು ಹೇಳಿ ಮಂತ್ರವನ್ನು ಅರ್ಜುನನಿಗೆ ಉಪದೇಶಿಸಿದಳು.

ಅರ್ಥ:
ದಶ: ಹತ್ತು; ಶತ: ನೂರು; ಸಾವಿರ: ಸಹಸ್ರ; ಹೆಸರು: ನಾಮ; ಅಗಣಿತ: ಲೆಕ್ಕವಿಲ್ಲದ; ರಿಪು: ವೈರಿ; ತೇಗು: ತೇಗುವಿಕೆ, ಢರಕೆ; ಬೆಸಸು: ಹೇಳು, ಆಜ್ಞಾಪಿಸು; ಬೇಡು: ಕೇಳು, ಯಾಚಿಸು, ಬಯಸು; ಶರ: ಬಾಣ; ಮುದ: ಸಂತಸ; ವರ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ;

ಪದವಿಂಗಡಣೆ:
ಒಂದು +ದಶ +ಶತ +ಸಾವಿರದ+ ಹೆಸ
ರಿಂದ +ಲಕ್ಷವು +ಕೋಟಿ+ಅಗಣಿತ
ದಿಂದ +ನಿನಗಾಂತದಟ+ರಿಪುಗಳ +ತಿಂದು +ತೇಗುವುದು
ಬಂದು +ಬೆಸನನು +ಬೇಡುವುದು+ ತಾ
ನೊಂದು +ಶರ+ರೂಪಾಗೆನುತ+ ಮುದ
ದಿಂದ +ವರ +ಮಂತ್ರೋಪದೇಶವನ್+ಇತ್ತಳ್+ಅರ್ಜುನಗೆ

ಅಚ್ಚರಿ:
(೧) ಸಂಖ್ಯೆಯ ಬಳಕೆ – ೧, ೧೦, ೧೦೦, ೧೦೦೦, ೧,೦೦,೦೦೦, ೧,೦೦,೦೦,೦೦೦

ಪದ್ಯ ೩೦: ದ್ರೌಪದಿಯು ಅರ್ಜುನನಿಗೆ ಏನು ಹೇಳಿದಳು?

ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪತಿಯೆರಗಿದಳು ಪಾರ್ಥನ ಪಾದಾಬ್ಜದಲಿ (ಅರಣ್ಯ ಪರ್ವ, ೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೌಪದಿಯು ಅರ್ಜುನನನ್ನು ಬೀಳ್ಕೊಡುವ ಮುನ್ನ, ಹೇ ಪತಿದೇವ, ದೇಹ ಸೌಖ್ಯವನ್ನು ಕುರಿತು ಯೋಚಿಸಬೇಡ, ಶತ್ರುವಾದ ದುರ್ಯೋಧನನ ಐಶ್ವರ್ಯ ಮದವನ್ನು ಚಿಂತಿಸು. ನನಗೊದಗಿದ್ದ ಘನತರವಾದ ಅಪಮಾನ ಪ್ರಸಂಗವನ್ನು ಕುರಿತು ಚಿಂತಿಸು, ನಿನ್ನ ಅಣ್ಣನ ಮಾತುಗಳನ್ನೂ, ವ್ಯಾಸರು ನೀಡಿದ ಮಂತ್ರೋಪದೇಶವನ್ನು ನೆನೆಯುತ್ತಾ, ಶಿವನ ಚರಣಕಮಲವನ್ನು ಆರಾಧಿಸು ಎಂದು ಹೇಳುತ್ತಾ ದ್ರೌಪದಿಯು ಅರ್ಜುನನ ಪಾದಾರವಿಂದಕ್ಕೆ ನಮಸ್ಕರಿಸಿದಳು.

ಅರ್ಥ:
ನೆನೆ: ಜ್ಞಾಪಿಸಿಕೋ, ಸ್ಮರಿಸು; ತನು: ದೇಹ; ಸುಖ: ಸಂತೋಷ; ಮನ: ಮನಸ್ಸು; ವಿರೋಧಿ: ಶತ್ರು; ಸಿರಿ: ಐಶ್ವರ್ಯ; ಘನ: ದೊಡ್ಡ; ತರ: ರೀತಿಯ; ಪರಿಭವ: ಸೋಲು, ಅಪಮಾನ; ಅಗ್ರಜ: ಅಣ್ಣ; ನುಡಿ: ಮಾತು; ಮುನಿ: ಋಷಿ; ವರ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಪದೇಶ: ಬೋಧಿಸುವುದು; ಅಭವ: ಶಿವ; ಚರಣ: ಪಾದ; ಕಮಲ: ಪದ್ಮ; ದುರುಪತಿ: ದ್ರೌಪದಿ; ಎರಗು: ನಮಸ್ಕರಿಸು; ಪಾದಾಬ್ಜ: ಚರಣ ಕಮಲ;

ಪದವಿಂಗಡಣೆ:
ನೆನೆಯದಿರು +ತನು+ಸುಖವ +ಮನದಲಿ
ನೆನೆ+ ವಿರೋಧಿಯ +ಸಿರಿಯನ್+ಎನ್ನಯ
ಘನತರದ +ಪರಿಭವವ +ನೆನೆ +ನಿಮ್+ಅಗ್ರಜರ +ನುಡಿಯ
ಮುನಿವರನ+ ಮಂತ್ರೋಪದೇಶವ
ನೆನೆವುದ್+ಅಭವನ +ಚರಣ +ಕಮಲವನ್
ಎನುತ +ದುರುಪತಿ+ಎರಗಿದಳು+ ಪಾರ್ಥನ +ಪಾದಾಬ್ಜದಲಿ

ಅಚ್ಚರಿ:
(೧) ಚರಣ ಕಮಲ, ಪಾದಾಬ್ಜ – ಸಮನಾರ್ಥಕ ಪದ
(೨) ನೆನೆ – ೪ ಬಾರಿ ಪ್ರಯೋಗ