ಪದ್ಯ ೧೮: ಸೂರ್ಯನು ಯಾರೆದುರು ಬಂದನು?

ಅರಸ ಕೇಳ್ ಮುನಿಯಿತ್ತ ಮಂತ್ರಾ
ಕ್ಷರದ ಕರಹಕೆ ತಳುವಿದರೆ ದಿನ
ಕರನ ತೇಜವ ಕೊಂಬನೇ ದುರ್ವಾಸ ವಿಗಡನಲ
ಧರೆಗೆ ಬಂದನು ಸೂರ್ಯನಾತನ
ಕಿರಣಲಹರಿಯ ಹೊಯ್ಲಿನಲಿ ಸರ
ಸಿರುಹ ಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ (ಆದಿ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದೂರ್ವಾಸನು ಮಹಾತಪಸ್ವಿ. ಅವನು ಉಪದೇಶಿಸಿದ ಮಂತ್ರದಿಂದ ಕರೆದಾಗ ತಡಮಾಡಿದರೆ ಸೂರ್ಯನನ್ನೂ ಲಕ್ಶಿಸುವವನಲ್ಲ. ಆದುದರಿಂದ ಸೂರ್ಯನು ಕುಂತಿಯ ಎದುರಿನಲ್ಲಿ ಭೂಮಿಗಿಳಿಸ್ದನು. ಅವನ ಕಿರಣಗಳ ಪ್ರವಾಹದ ಹೊಡೆತಕ್ಕೆ ಕುಂತಿಯು ಬೆದರಿ ನೀವು ಹೊರಟುಹೋಗಿರೆಂದಳು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮುನಿ: ಋಷಿ; ಇತ್ತ: ನೀಡಿದ ಮಂತ್ರ:ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕರಹಕೆ: ಕರೆ, ಬರೆಮಾಡು; ತಳುವು: ನಿಧಾನಿಸು, ತಡಮಾಡು; ದಿನಕರ: ಸೂರ್ಯ; ತೇಜ: ಪ್ರಕಾಶ; ವಿಗಡ: ಶೌರ್ಯ, ಪರಾಕ್ರಮ; ಧರೆ: ಭೂಮಿ; ಬಂದು: ಆಗಮಿಸು; ಸೂರ್ಯ: ರವಿ; ಕಿರಣ: ತೇಜಸ್ಸು; ಲಹರಿ: ರಭಸ, ಆವೇಗ; ಹೊಯ್ಲು: ಏಟು, ಹೊಡೆತ; ಸರಸಿರುಹಮುಖಿ: ಕಮಲದಂತಹ ಮುಖವುಳ್ಳ (ಸುಂದರಿ, ಹೆಣ್ಣು); ಬೆಚ್ಚು: ಹೆದರು; ಬಿಜಯಂಗೈ: ತೆರಳು;

ಪದವಿಂಗಡಣೆ:
ಅರಸ +ಕೇಳ್ +ಮುನಿಯಿತ್ತ+ ಮಂತ್ರಾ
ಕ್ಷರದ +ಕರಹಕೆ +ತಳುವಿದರೆ +ದಿನ
ಕರನ +ತೇಜವ +ಕೊಂಬನೇ +ದುರ್ವಾಸ +ವಿಗಡನಲ
ಧರೆಗೆ +ಬಂದನು +ಸೂರ್ಯನ್+ಆತನ
ಕಿರಣ+ಲಹರಿಯ +ಹೊಯ್ಲಿನಲಿ +ಸರ
ಸಿರುಹ ಮುಖಿ +ಬೆಚ್ಚಿದಳು +ಬಿಜಯಂಗೈಯಿ +ನೀವೆನುತ

ಅಚ್ಚರಿ:
(೧) ದಿನಕರ, ಸೂರ್ಯ; ತೇಜ, ಕಿರಣ – ಸಮಾನಾರ್ಥಕ ಪದ

ಪದ್ಯ ೪೨: ದುರ್ಯೋಧನನು ಜಲಸ್ತಂಭನಕ್ಕೆ ಹೇಗೆ ತಯಾರಾದನು?

ಚರಣವದನಕ್ಷಾಲನಾಂತಃ
ಕರಣಶುದ್ಧಿಯಲಾಚಮನವಿ
ಸ್ತರಣದಲಿ ಸತ್ಪ್ರಣವವಂಗನ್ಯಾಸವಿಧಿಗಳಲಿ
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಫುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ (ಗದಾ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕಾಲು, ಮುಖಗಳನ್ನು ತೊಳೆದು, ಶುದ್ಧಮನಸ್ಸಿನಿಂದ ಆಚಮನವನ್ನು ಮಾಡಿ, ಪ್ರಣವಪೂರ್ವಕವಾಗಿ ಅಂಗನ್ಯಾಸಾದಿಗಳನ್ನು ಮಾಡಿ ವರುಣ ಮಂತ್ರಾಕ್ಷರಗಳನ್ನು ಜಪಿಸಿ ಅಂತರಂಗದಲ್ಲಿ ಜಲಸ್ತಂಭ ಮಂತ್ರವನ್ನು ಜಪಿಸಿದನು.

ಅರ್ಥ:
ಚರಣ: ಪಾದ; ವದನ: ಮುಖ; ಅಂತಃಕರಣ: ಒಳಮನಸ್ಸು; ಶುದ್ಧಿ: ನಿರ್ಮಲ; ಆಚಮನ: ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಮಂತ್ರಪೂರ‍್ವಕವಾಗಿ ಸೇವಿಸುವುದು; ವಿಸ್ತರಣ: ವಿಶಾಲ; ಪ್ರಣವ: ಓಂಕಾರ; ಅಂಗ: ದೇಹದ ಭಾಗ; ನ್ಯಾಸ: ಜಪ ಮತ್ತು ಪೂಜೆಯ ಕಾಲಗಳಲ್ಲಿ ಮಂತ್ರಪೂರ್ವಕವಾಗಿ ಅಂಗಗಳನ್ನು ಮುಟ್ಟಿಕೊಳ್ಳುವಿಕೆ; ವಿಧಿ: ನಿಯಮ; ವರುಣ: ನೀರಿನ ಅಧಿದೇವತೆ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಪರಿಕರಣ: ಸಲಕರಣೆ, ಸಾಮಗ್ರಿ; ನಿರ್ಣಿಕ್ತ: ಶುದ್ಧಗೊಳಿಸಲ್ಪಟ್ಟ; ಚೇತ: ಮನಸ್ಸು; ಸ್ಫುರಣ: ಹೊಳಪು; ಸಲಿಲ: ಜಲ; ಸ್ತಂಭ: ಸ್ಥಿರವಾಗಿರುವಿಕೆ, ನಿಶ್ಚಲತೆ; ಅವನೀಶ: ರಾಜ; ಮಂತ್ರಿಸು: ಉಚ್ಚರಿಸು;

ಪದವಿಂಗಡಣೆ:
ಚರಣ+ವದನಕ್ಷಾಲನ್+ಅಂತಃ
ಕರಣ+ಶುದ್ಧಿಯಲ್+ಆಚಮನ+ವಿ
ಸ್ತರಣದಲಿ +ಸತ್ಪ್ರಣವವ್+ಅಂಗನ್ಯಾಸ+ವಿಧಿಗಳಲಿ
ವರುಣ +ಮಂತ್ರಾಕ್ಷರದ+ ಜಪ+ಪರಿ
ಕರಣದಲಿ +ನಿರ್ಣಿಕ್ತ+ ಚೇತಃ
ಸ್ಫುರಣ +ಸಲಿಲ+ಸ್ತಂಭನವನ್+ಅವನೀಶ +ಮಂತ್ರಿಸಿದ

ಅಚ್ಚರಿ:
(೧) ಚರಣ, ವರುಣ, ವಿಸ್ತರಣ, ಸ್ಫುರಣ, ಪರಿಕರಣ, ಕರಣ – ಪ್ರಾಸ ಪದಗಳು

ಪದ್ಯ ೩೫:ಕುಂತಿಯು ದುರ್ವಾಸರ ಮಂತ್ರಾಕ್ಷರ ವರವುಂಟೆಂದು ಹೇಳಲು ಪಾಂಡು ಏನು ಹೇಳಿದ?

ಲೇಸನಾಡಿದೆ ಕುಂತಿ ಮುನಿಯುಪ
ದೇಶಿಸಿದನೆ ನಮ್ಮ ಭಾಗ್ಯವಿ
ದೈಸಲೇ ನೀ ದೃಢಪತಿವ್ರತೆಯನ್ನನುಜ್ಞೆಯಲಿ
ಭಾಸುರರ ನೀ ಭರತವಂಶ ವಿ
ಲಾಸರನು ಕೃತಶತ್ರುಪಕ್ಷ ವಿ
ನಾಶರನು ಬೇಸಲಾಗು ಹೋಗೆನ್ನಾಣೆ ಹೋಗೆಂದ (ಆದಿಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ವಾಸರ ಮಂತ್ರ ಕುಂತಿಗೆ ಕೊಟ್ಟಿರುವುದನ್ನು ತಿಳಿದು ಬಹಳ ಸಂತಸ ಗೊಂಡು, ಒಳ್ಳೆಯದನ್ನೆ ಆಡಿದೆ ಕುಂತಿ, ಆ ಮುನಿಯ ಉಪದೇಶ ನಮಗೆ ಭಾಗ್ಯವೇ ಅಲ್ಲವೇ, ಪತಿವ್ರತೆ ಯಾದ ನೀನು ಈ ಕೂಡಲೆ ಆ ಮಂತ್ರಗಳಿಂದ ನಮ್ಮ ಸಂತತಿ ಯನ್ನು ಬೆಳಸುವು ಸುಂದರ, ಪುಣ್ಯವಂತ, ಶತ್ರುಸಂಹಾರಕ, ತೇಜೊವನ್ತರಾದ ಮಕ್ಕಳನ್ನು ಪಡೆಯಲು ನಡೆ, ಇದು ನನ್ನ ಆಜ್ಞೆ ಎಂದು ಕುಂತಿಗೆ ಹೇಳಿದ.

ಅರ್ಥ:
ಲೇಸು: ಒಳ್ಳೆಯ, ಹಿತ ಉಪದೇಶ: ಕಲಿಸು, ಹೇಳು ಭಾಗ್ಯ: ಅದೃಷ್ಟ ದೃಢ: ಗಟ್ಟಿ, ನಿಜ ಪತಿವ್ರತೆ: ಪತಿಗೆ ಶ್ರೇಯಸನ್ನು ಬಯಸುವ ಸತಿ ಬಾಸುರ: ಸೊಗಸು, ಶೂರ ಐಸಲೆ: ಅಷ್ಟೆ, ಅಲ್ಲವೇ ಕೃತ: ಪುಣ್ಯವಂತ ವಿಲಾಸ:ಅಂದ, ಸೊಬಗು, ಉಲ್ಲಾಸ ಶತ್ರು: ವೈರಿ ಪಕ್ಷ: ಗುಂಪು ವಿನಾಶ: ಸಂಹಾರ ಬೆಸ: ಕಾರ್ಯ, ಅಪ್ಪಣೆ, ಆದೇಶ ಆಣೆ: ಅಪ್ಪಣೆ

ಪದವಿಂಗಡನೆ:
ಲೇಸನ್+ಆಡಿದೆ;ಭಾಗ್ಯವಿದ್+ಐಸಲೇ; ದೃಢಪತಿವ್ರತೆ+ಎನ್ನ+ಅನುಜ್ಞೆ; ಹೊಗೆನ್+ಆಣೆ

ಅಚ್ಚರಿ:
(೧) ೨, ೪, ೫ ಸಾಲಿನ ಕೊನೆ ಪದಗಳು “ವಿ” ಆಗಿರುವುದು
(೨) ೩ ಮತ್ತು ೪ ಸಾಲಿನ ೨ನೇ ಪದ “ನೀ” ಆಗಿರುವುದು
(೩) ಎಂತಹ ಮಕ್ಕಳು ಬೇಕು ಎನ್ನುವುದಕ್ಕೆ ಉತ್ತರ: ಭಾಸುರರು, ವಿಲಾಸರು, ಶತ್ರುಪಕ್ಷ ಸಂಹಾರರು, ಕೃತರು
(೪) ಹೋಗೆನ್ನಾಣೆ ಹೋಗು: ಬೇಗ ಹೋಗು ಎಂದು ಸೂಚಿಸಲು ಉಪಯೋಗಿಸಿದ ಪದಗಳು

ಪದ್ಯ ೩೪: ಮುನಿ ಮಂತ್ರೋಪದೇಶವನಿದುವೆ ನಿರ್ದೋಷ” ಎಂದು ಪಾಂಡು ಹೇಳಿದ ಕೂಡಲೆ ಕುಂತಿಯ ಉತ್ತರವೇನು?

ಆದಡವನಿಪ ಬಿನ್ನಹವು ತನ
ಗಾದಿಯಲಿ ದೂರ್ವಾಸಮುನಿ ಕರು
ಣೋದಯಲಿತ್ತೈದು ಮಂತ್ರಾಕ್ಷರದ ವರವುಂಟು
ನೀ ದಯಾಂಬುಧಿ ನಿನ್ನನುಗ್ರಹ
ವಾದುದಾದರೆ ತದ್ವಿಧಾನದ
ಲಾದರಿಸುವೇನು ಪುತ್ರಕಾಮ್ಯವನೆಂದಳಾ ಕುಂತಿ (ಆದಿ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕುಂತಿಗೆ ಮುಂಚೆಯ ದುರ್ವಾಸ ಮುನಿಯು ವರವನ್ನಿತ್ತಿದುದು ಅದರ ಪ್ರಯೋಗ ಹೇಗಾಗುತ್ತೆ ಎಂದು ತಿಳಿದಿತ್ತು. ಆದರೆ ಈಗ ಅದರ ಪ್ರಯೋಗಕ್ಕೆ ಪಾಂಡುವಿನ ಆಜ್ಞೆ ಬೇಕಿತ್ತು, ಈ ಆಜ್ಞೆ ಯನ್ನು ಕೇಳಲು ಈ ರೀತಿಯಾಗಿ ಪೀಟಿಕೆ ಹಾಕಿದಳು. ಮನ್ತ್ರೋಪದೇಶದಿಂದ ದೋಷವಿಲ್ಲ ಎಂದು ಪಾಂಡು ಹೇಳಿದ ಕೂಡಲೆ, ಕುಂತಿಯು ದೇವ, ನಿಮ್ಮಲ್ಲಿ ಒಂದು ಅರಕೆ ಮಾಡಿಕೊಳುತ್ತೆನೆ. ಈ ಮೊದಲು ನನಗೆ ದುರ್ವಾಸ ಮುನಿಯ ಕರುಣೆ ಯಿಂದ ೫ ಮಂತ್ರಾಕ್ಷರದ ವರವಿದೆ . ನಿನ್ನ ಅನುಗ್ರಹ ಇದ್ದಾರೆ ಅದರ ಪ್ರೊಯೋಗದಿನ್ದ ಮಕ್ಕಳನ್ನು ಪಡೆಯಬಹುದು ಎಂದು ಹೇಳಿದಳು.

ಅರ್ಥ:
ಅವನಿಪ: ರಾಜ; ಬಿನ್ನಹ:ಅರಿಕೆ, ವಿಜ್ಞಾಪನೆ
ಆದಿ: ಮುಂಚೆ, ಮೊದಲು; ವರ: ಅನುಗ್ರಹ
ದಯ: ಕರುಣೆ; ಆದರಿಸಿ: ಪ್ರಕಾರ

ಪದವಿಂಗಡನೆ:
ಆದಡ್+ಅವನಿಪ ; ತನಗ್+ಆದಿಯಲಿ ; ಕರುಣ+ಉದಯ; ತದ್ವಿಧಾನದಲ್ +ಆದರಿಸುವೇನು ;

ಅಚ್ಚರಿ:
(೧) ಒಂದೇ ಅರ್ಥ ಕೊಡುವ ಪದಗಳು: ಅನುಗ್ರಹ, ವರ
(೨) ಕುಂತಿ ಪಾಂಡುವಿಗೆ ಸಂಭೋದಿಸುವುದು: ನೀ ದಯಾಂಬುಧಿ, ನಿನ್ ಅನುಗ್ರಹ