ಪದ್ಯ ೬೨: ದುರ್ಯೋಧನನು ಧೃತರಾಷ್ಟ್ರನ ವಿಚಾರಕ್ಕೆ ಏನು ಹೇಳಿದ?

ಖೂಳರಲಿ ಸತ್ಕಳೆಗಳನು ನೆರೆ
ಕೇಳದವರಲಿ ಮಂತ್ರಬೀಜವ
ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
ಹೇಳುವಂತಿರೆ ನಿಮ್ಮ ವಿದುರನ
ಕೇಳಿಸಿದರಾ ಕಾರ್ಯಗತಿಗೆ ವಿ
ತಾಳವಾಗದೆ ಬೊಪ್ಪಯೆಂದನು ನಗುತ ಕುರುರಾಯ (ಸಭಾ ಪರ್ವ, ೧೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತಂದೆಯು ಹೇಳಿದ ವಿಚಾರವನ್ನು ಕೇಳಿ ನಗುತ್ತಾ, ದುಷ್ಟರಿಗೆ ಸನ್ಮಾರ್ಗವನ್ನೂ, ಕಿವುಡರಿಗೆ ಮಂತಾಲೋಚನೆಯನ್ನು, ಕುರುಡನಿಗೆ ರೂಪ ವಿಲಾಸ ವಿಭ್ರಮಗಳನ್ನು ಹೇಳುವ ಹಾಗೆ ಏನು ಪ್ರಯೋಜನವಿಲ್ಲವೋ ಅದೇ ರೀತಿ ವಿದುರನ ಬಳಿ ಕೇಳಿದರೆ ಕೆಲಸವು ತಾಳ ತಪ್ಪುವುದಿಲ್ಲವೇ ಎಂದನು.

ಅರ್ಥ:
ಖೂಳ: ದುಷ್ಟ; ಸತ್ಕಲೆ: ಒಳ್ಳೆಯ ನಡತೆ; ನೆರೆ: ಗುಂಪು; ಕೇಳು: ಆಲಿಸು; ಮಂತ್ರ: ಆಲೋಚನೆ; ಬೀಜ: ಮೂಲ; ಆಲಿ: ಕಣ್ಣು; ರೂಪ: ಆಕಾರ, ಚೆಲುವು; ವಿಲಾಸ: ಸೊಬಗು, ಉಲ್ಲಾಸ; ವಿಭ್ರಮ: ಭ್ರಮೆ, ಭ್ರಾಂತಿ; ಹೇಳು: ತಿಳಿಸು; ಕಾರ್ಯ: ಕೆಲಸ; ಗತಿ: ಪದ್ಧತಿ, ಮಾರ್ಗ; ವಿತಾಳ: ಚಿಂತೆ, ಅಳಲು; ಬೊಪ್ಪ: ತಂದೆ; ನಗುತ: ಹಸಿತ; ರಾಯ: ರಾಜ;

ಪದವಿಂಗಡಣೆ:
ಖೂಳರಲಿ+ ಸತ್ಕಳೆಗಳನು +ನೆರೆ
ಕೇಳದವರಲಿ+ ಮಂತ್ರಬೀಜವನ್
ಆಲಿಯಿಲ್ಲದವಂಗೆ+ ರೂಪು +ವಿಲಾಸ +ವಿಭ್ರಮವ
ಹೇಳುವಂತಿರೆ+ ನಿಮ್ಮ +ವಿದುರನ
ಕೇಳಿಸಿದರ್+ಆ+ ಕಾರ್ಯಗತಿಗೆ+ ವಿ
ತಾಳವಾಗದೆ+ ಬೊಪ್ಪಯೆಂದನು +ನಗುತ +ಕುರುರಾಯ

ಅಚ್ಚರಿ:
(೧) ಉಪಮಾನದ ಪ್ರಯೊಗ – ಖೂಳರಲಿ ಸತ್ಕಳೆಗಳನು ನೆರೆ ಕೇಳದವರಲಿ ಮಂತ್ರಬೀಜವ ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
(೨) ಉಪಾಯವು ಹದಗೆಡುತ್ತದೆ ಎಂದು ಹೇಳುವ ಪರಿ – ಕಾರ್ಯಗತಿಗೆ ವಿತಾಳವಾಗದೆ