ಪದ್ಯ ೪೯: ಅಭಿಮನ್ಯುವನ್ನು ಯಾರ ಅಡ್ಡ ತಡೆದರು?

ಧನು ಮುರಿದ ಬಳಿಕಿಮ್ಮಡಿಸಿತೀ
ತನ ಪರಾಕ್ರಮವೆನುತ ಸೇನಾ
ವನಧಿ ಜರೆದುದು ಭಟರು ಹರಿದರು ಬಿಟ್ಟ ಮಂಡೆಯಲಿ
ಜನಪತಿಯ ಕಟ್ಟವಳವಿಯಲಿ ರವಿ
ತನುಜನಡ್ಡೈಸಿದನು ಫಡ ಹೋ
ಗೆನುತ ನಾರಾಚದಲಿ ಮುಸಿಕಿದನರ್ಜುನಾತ್ಮಜನ (ದ್ರೋಣ ಪರ್ವ, ೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಬಿಲ್ಲು ಮುರಿದ ಮೇಲೆ ಇವನ ಪರಾಕ್ರಮ ಎರಡಾಯಿತು, ಎಂದು ಸೇನಾಸಮುದ್ರವು ಜಾರಿಹೋಯಿತು. ಸೈನಿಕರು ತಲೆಕೆದರಿಕೊಂಡು ಓಡಿಹೋದರು. ಅಭಿಮನ್ಯುವು ಕೌರವನ ಹತ್ತಿರಕ್ಕೆ ಬರಲು, ಕರ್ಣನು ಅಡ್ಡಬಂದು ತೊಲಗು ಎಂದು ಬಾಣಗಳಿಂದ ಅಭಿಮನ್ಯುವನ್ನು ಆವರಿಸಿದನು.

ಅರ್ಥ:
ಧನು: ಬಿಲ್ಲು; ಮುರಿ: ಸೀಳು; ಬಳಿಕ: ನಂತರ; ಇಮ್ಮಡಿ: ಎರಡು ಪಟ್ಟು; ಪರಾಕ್ರಮ: ಶೌರ್ಯ; ಸೇನ: ಸೈನ್ಯ; ವನಧಿ: ಸಮುದ್ರ; ಜರೆ: ಜಾರು; ಭಟ: ಸೈನಿಕ; ಹರಿ: ಹರಡು, ಚಲಿಸು; ಬಿಟ್ಟು: ತೊರೆ; ಮಂಡೆ: ತಲೆ; ಜನಪ: ರಾಜ; ಅಳವಿ: ಯುದ್ಧ; ರವಿತನುಜ: ಸೂರ್ಯನ ಪುತ್ರ (ಕರ್ಣ); ಅಡ್ಡೈಸು: ಮಧ್ಯ ಪ್ರವೇಶಿಸು; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ನಾರಾಚ: ಬಾಣ, ಸರಳು; ಮುಸುಕು: ಆವರಿಸು; ಆತ್ಮಜ: ಪುತ್ರ;

ಪದವಿಂಗಡಣೆ:
ಧನು +ಮುರಿದ +ಬಳಿಕ್+ಇಮ್ಮಡಿಸಿತ್
ಈತನ +ಪರಾಕ್ರಮವ್+ಎನುತ +ಸೇನಾ
ವನಧಿ+ ಜರೆದುದು +ಭಟರು +ಹರಿದರು +ಬಿಟ್ಟ +ಮಂಡೆಯಲಿ
ಜನಪತಿಯ +ಕಟ್ಟವ್+ಅಳವಿಯಲಿ +ರವಿ
ತನುಜನ್+ಅಡ್ಡೈಸಿದನು +ಫಡ +ಹೋ
ಗೆನುತ +ನಾರಾಚದಲಿ +ಮುಸಿಕಿದನ್+ಅರ್ಜುನ್+ಆತ್ಮಜನ

ಅಚ್ಚರಿ:
(೧) ಅಭಿಮನ್ಯುವನ್ನು ಅರ್ಜುನಾತ್ಮಜ ಎಂದು ಕರೆದಿರುವುದು
(೨) ಅಭಿಮನ್ಯುವಿನ ಶೌರ್ಯವನ್ನು ವರ್ಣಿಸುವ ಪರಿ – ಧನು ಮುರಿದ ಬಳಿಕಿಮ್ಮಡಿಸಿತೀತನ ಪರಾಕ್ರಮ

ಪದ್ಯ ೩೨: ಚಿತ್ರಸೇನನು ಕೌರವನ ಬಗ್ಗೆ ಅರ್ಜುನನಿಗೆ ಏನು ಹೇಳಿದನು?

ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ ನೀರಲಿ
ನಾದ ಕೆಂಡವನುರುಹಿ ಮುಡಿದಾರುಂಟೆ ಮಂಡೆಯಲಿ
ಕೈದು ಮುರಿದೊಡೆ ಹಗೆಗೆ ತನ್ನಯ
ಕೈದು ಕೊಟ್ಟವರುಂಟೆ ಕುರುಪತಿ
ತೀದಡೀತನ ಬಿಡಿಸಿಕೊಂಬಿರೆ ಲೇಸು ಲೇಸೆಂದ (ಅರಣ್ಯ ಪರ್ವ, ೨೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹೋದ ಮಾರಿಯನ್ನು ಮನೆಯೊಳಗೆ ಕರೆದುಕೊಂಡು ಬಂದು ಆದರಿಸುವುದುಂಟೆ? ನೀರಿನಲ್ಲಿ ಆರಿದ ಕೆಂಡವನ್ನು ಮತ್ತೆ ಕೆಂಡವನ್ನಾಗಿ ಮಾಡಿ ತಲೆಯಲ್ಲಿ ಮುಡಿದುಕೊಳ್ಳುವವರುಂಟೆ? ಆಯುಧ ಮುರಿದ ಶತ್ರುವಿಗೆ ತನ್ನ ಆಯುಧವನ್ನು ಕೊಡುವವರುಂಟೇ? ಕೌರವನೀಗ ಸೆರೆ ಸಿಕ್ಕಿರಲು ಅವನನ್ನು ಬಿಡಿಸಿಕೊಂಡು ಹೋಗುವಿರಾ? ಚೆನ್ನಾಗಿದೆ, ಬಹಳ ಒಳಿತು ಎಂದು ಚಿತ್ರಸೇನನು ಅರ್ಜುನನಿಗೆ ಹೇಳಿದನು.

ಅರ್ಥ:
ಹೋದ: ತೆರಳಿದ; ಮಾರಿ: ಕ್ಷುದ್ರ ದೇವತೆ; ಕರೆ: ಬರೆಮಾಡು; ಮನೆ: ಆಲಯ; ಆದರಿಸು: ಗೌರವಿಸು; ನೀರು: ಜಲ; ನಾದ: ಒದ್ದೆ ಮಾಡು, ತೋಯಿಸು; ಕೆಂಡ: ಇಂಗಳ; ಉರುಹು: ತಾಪಗೊಳಿಸು; ಮುಡಿ: ತುರುಬು; ಮಂಡೆ: ಶಿರ; ಕೈದು: ಆಯುಧ, ಶಸ್ತ್ರ; ಮುರಿ: ಸೀಳು; ಹಗೆ: ಶತ್ರು; ಕೊಡು: ನೀದು; ತೀದು: ಮುಗಿಸು; ಬಿಡಿಸು: ಬಿಡುಗಡೆ ಮಾಡು; ಲೇಸು: ಒಳಿತು;

ಪದವಿಂಗಡಣೆ:
ಹೋದ +ಮಾರಿಯ +ಕರೆದು +ಮನೆಯೊಳಗ್
ಆದರಿಸಿದವರುಂಟೆ +ನೀರಲಿ
ನಾದ+ ಕೆಂಡವನ್+ಉರುಹಿ +ಮುಡಿದಾರುಂಟೆ +ಮಂಡೆಯಲಿ
ಕೈದು +ಮುರಿದೊಡೆ +ಹಗೆಗೆ+ ತನ್ನಯ
ಕೈದು +ಕೊಟ್ಟವರುಂಟೆ +ಕುರುಪತಿ
ತೀದಡ್+ಈತನ +ಬಿಡಿಸಿಕೊಂಬಿರೆ +ಲೇಸು +ಲೇಸೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ; ನೀರಲಿ ನಾದ ಕೆಂಡವನುರುಹಿ ಮುಡಿದಾರುಂಟೆ ಮಂಡೆಯಲಿ;
ಕೈದು ಮುರಿದೊಡೆ ಹಗೆಗೆ ತನ್ನಯ ಕೈದು ಕೊಟ್ಟವರುಂಟೆ

ಪದ್ಯ ೨೮: ದ್ರೌಪದಿಯು ತನ್ನ ನೋವನ್ನು ಮತ್ತಾರ ಮುಂದೆ ತೋಡಿಕೊಂಡಳು?

ಮಾವದಿರು ಮೊದಲಾದ ದಿಕ್ಪಾ
ಲಾವಳಿಗೆ ನಮಿಸಿದೆನು ನೈದಿಲ
ತಾವರೆಯ ಮಿತ್ರರಿಗೆ ಮಂಡೆಯೊಳಿಟ್ಟೆನಂಜುವಳಿಯ
ಕಾವುದೆನ್ನನು ಹೆಂಗುಸಲ್ಲಾ
ಹಾವು ಹಲಬರ ನಡುವೆ ಸಾಯದು
ದೇವರಿಗೆ ದೂರೈದಲೆಂದೊರಲಿದಳು ಲಲಿತಾಂಗಿ (ಸಭಾ ಪರ್ವ, ೧೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಮಾವಂದಿರು, ಅಷ್ಟದಿಕ್ಪಾಲಕರು, ಸೂರ್ಯ, ಚಂದ್ರರು ಈ ಎಲ್ಲರನ್ನು ನನ್ನ ತಲೆಯಮೇಲೆ ಬೊಗಸೆಯೊಡ್ಡಿ ಬೇಡಿಕೊಳ್ಳುತ್ತಿದ್ದೇನೆ, ನಾನು ಹೆಣ್ಣಲ್ಲವೇ? ನನ್ನನ್ನು ಕಾಪಾಡಿ, ಹಲವರ ನಡುವೆ ಇರುವ ಹಾವು ಸಾಯುವುದಿಲ್ಲ, ನನ್ನ ದೂರು ಆ ಪರಮಾತ್ಮನಿಗೆ ಮುಟ್ಟಲಿ ಎಂದು ದ್ರೌಪದಿಯು ಗೋಳಿಟ್ಟಳು.

ಅರ್ಥ:
ಮಾವ: ಗಂಡನ ತಂದೆ; ದಿಕ್ಕು: ದೆಸೆ; ದಿಕ್ಪಾಲ: ದಿಕ್ಕಿನ ಅಧಿಪತಿ; ಆವಳಿ: ಸಾಲು; ನಮಿಸು: ಎರಗು, ವಂದಿಸು; ತಾವರೆ: ಕಮಲ; ಮಿತ್ರ; ಸ್ನೇಹಿತ; ಮಂಡೆ: ತಲೆ; ಅಂಜುಳಿ: ಬೊಗಸೆ, ಹಸ್ತ; ಕಾವುದು: ರಕ್ಷಿಸು; ಹೆಂಗುಸ: ಹೆಣ್ಣು; ಹಾವು: ಉರಗ; ಹಲಬರು: ಬಹಳ; ನಡುವೆ: ಮಧ್ಯ; ಸಾಯದು: ಅಂತ್ಯಗೊಳ್ಳು; ದೇವರು: ಭಗವಂತ; ದೂರು: ಕೂಗು, ಅಹವಾಲು, ಮೊರೆ; ಒರಲು: ಗೋಳಿಡು, ಕೂಗು; ಲಲಿತಾಂಗಿ: ಲತೆಯಂತೆ ದೇಹವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಮಾವದಿರು +ಮೊದಲಾದ +ದಿಕ್ಪಾಲ
ಆವಳಿಗೆ +ನಮಿಸಿದೆನು +ನೈದಿಲ
ತಾವರೆಯ+ ಮಿತ್ರರಿಗೆ+ ಮಂಡೆಯೊಳಿಟ್ಟೆನ್+ಅಂಜುವಳಿಯ
ಕಾವುದೆನ್ನನು+ ಹೆಂಗುಸಲ್ಲಾ
ಹಾವು +ಹಲಬರ+ ನಡುವೆ+ ಸಾಯದು
ದೇವರಿಗೆ+ ದೂರೈದಲೆಂದ್+ಒರಲಿದಳು +ಲಲಿತಾಂಗಿ

ಅಚ್ಚರಿ:
(೧) ಚಂದ್ರರನ್ನು ನೈದಿಲೆ ಮಿತ್ರ, ಸೂರ್ಯ ತಾವರೆಯ ಮಿತ್ರ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಹಾವು ಹಲಬರ ನಡುವೆ ಸಾಯದು