ಪದ್ಯ ೨೫: ಬಾಣವು ಕೃಷ್ಣನಿಗೆ ಎಲ್ಲಿ ತಾಗಿತು?

ಕೆಂಗರಿಯ ಮರಿದುಂಬಿ ತಾವರೆ
ಗಂಗವಿಸುವವೊಲಸುರರಿಪುವಿನ
ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ
ತುಂಗವಿಕ್ರಮನಂಬ ಕಿತ್ತು ತ
ದಂಗರಕ್ತವಿಷೇಕರೌದ್ರಾ
ಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ (ಭೀಷ್ಮ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಬಾಣವು ಕೆಂಗರಿಯ ಮರಿದುಂಬಿಯು ಕಮಲದೊಳಕ್ಕೆ ವೇಗವಾಗಿ ಹೋಗುವಂತೆ, ಶ್ರೀಕೃಷ್ಣನ ಮಂಗಳಕರವಾದ ಮುಖಕಮಲದತ್ತ ಹೋಗಿ, ಅವನ ಹಣೆಗೆ ನಟ್ಟಿತು. ಮಹಾಪರಾಕ್ರಮಿಯಾದ ಶ್ರೀಕೃಷ್ಣನು ಆ ಬಾಣವನ್ನು ಕೀಳಲು ಹೊರಚಿಮ್ಮಿದ ರಕ್ತಧಾರೆಯು ಅವನ ದೇಹಕ್ಕೆ ಅಭಿಷೇಕ ಮಾಡಿತು. ಆಗ ಶ್ರೀಕೃಷ್ಣನು ಭೀಷ್ಮನ ಉಪಟಳದಿಂದ ಮಹಾ ಕೋಪಾದ್ರಿಕನಾದನು.

ಅರ್ಥ:
ಕೆಂಗರಿ: ಕೆಂಪಾದ ರೆಕ್ಕೆ; ಮರಿ: ಚಿಕ್ಕ; ದುಂಬಿ: ಭ್ರಮರ; ತಾವರೆ: ಕಮಲ; ಅಂಗವಿಸು: ಬಯಸು, ಒಪ್ಪು; ಅಸುರರಿಪು: ರಾಕ್ಷಸನ ವೈರಿ (ಕೃಷ್ಣ); ಮಂಗಳ: ಶುಭ; ಆನನ: ಮುಖ; ಕಮಲ: ತಾವರೆ; ಶರವಾಳೆ: ಬಾಣಗಳ ಮಳೆ; ಗರಿ: ಬಾಣ; ಕಡಿ: ಸೀಳೂ; ತುಂಗ: ದೊಡ್ಡ, ಶ್ರೇಷ್ಠ; ವಿಕ್ರಮ: ಶೂರ, ಸಾಹಸ; ಅಂಬು: ಬಾಣ; ಕಿತ್ತು: ಕೀಳು; ರಕ್ತ: ನೆತ್ತರು; ವಿಷೇಕ: ಅಭಿಷೇಕ, ಮಜ್ಜನ; ರೌದ್ರ: ಕೋಪ; ಆಲಿಂಗಿತ: ತಬ್ಬಿಕೋ; ಬಲು: ಬಹಳ; ಖತಿ: ಕೋಪ; ಹಿಡಿ: ಗ್ರಹಿಸು; ಉಪಟಳ: ತೊಂದರೆ, ಹಿಂಸೆ;

ಪದವಿಂಗಡಣೆ:
ಕೆಂಗರಿಯ +ಮರಿದುಂಬಿ +ತಾವರೆಗ್
ಅಂಗವಿಸುವವೊಲ್+ಅಸುರರಿಪುವಿನ
ಮಂಗಳಾನನ+ಕಮಲದಲಿ +ಶರವಾಳೆ+ ಗರಿಗಡಿಯೆ
ತುಂಗವಿಕ್ರಮನ್+ಅಂಬ +ಕಿತ್ತು +ತದ್
ಅಂಗರಕ್ತ್ + ಅವಿಷೇಕ+ರೌದ್ರಾ
ಲಿಂಗಿತನು+ ಬಲುಖತಿಯ+ ಹಿಡಿದನು+ ಭೀಷ್ಮನ್+ಉಪಟಳಕೆ

ಅಚ್ಚರಿ:
(೧) ಅಸುರರಿಪು, ಮಂಗಳಾನನಕಮಲ, ತುಂಗವಿಕ್ರಮ – ಕೃಷ್ಣನನ್ನು ಕರೆದ ಪರಿ
(೨) ಉಪಮಾನ ಪ್ರಯೋಗ – ಕೆಂಗರಿಯ ಮರಿದುಂಬಿ ತಾವರೆಗಂಗವಿಸುವವೊಲ
(೩) ಕೃಷ್ಣನ ಮುಖಭಾವ – ತದಂಗರಕ್ತವಿಷೇಕರೌದ್ರಾಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ