ಪದ್ಯ ೩೨: ಅರ್ಜುನನಿಗೆ ಯಾವ ಭ್ರಾಂತಿ ತೀರಿತ್ತು?

ಮುಳಿಯಲಾಗದು ಕೃಷ್ಣ ನಿಮ್ಮನು
ತಿಳುಹಲಾನು ಸಮರ್ಥನೇ ಕುಲ
ಕೊಲೆಗೆ ಕೊಕ್ಕರಿಸಿದೆನು ನನೆದನು ಕರುಣ ವಾರಿಯಲಿ
ಬಲುಹನೀ ಮುಖದಲ್ಲಿ ತೋರುವ
ಡಳುಕಿದೆನು ಸಾಮ್ರಾಜ್ಯಸಂಪ
ತ್ತಿಳೆಯ ಸಕಲಭ್ರಾಂತಿ ಬೀತುದು ದೇವ ಕೇಳೆಂದ (ಭೀಷ್ಮ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ಶ್ರೀಕೃಷ್ಣನಿಗೆ ಉತ್ತರಿಸುತ್ತಾ, ಕೃಷ್ಣ ನನ್ನ ಮೇಲೆ ಕೋಪಗೊಳ್ಳಬೇಡ, ನಿನಗೆ ಹೇಳುವ ಶಕ್ತಿ ನನಗಿಲ್ಲ, ಆದರೆ ಕುಲವಧೆಗೆ ನಾನು ಹೇಸಿದ್ದೇನೆ, ದುಃಖಿತನಾಗಿದ್ದೇನೆ, ಇವರೊಡನೆ ನನ್ನ ಸಾಮರ್ಥ್ಯವನ್ನು ತೋರಿಸಲು ಅಳುಕುತ್ತೇನೆ, ಸಾಮ್ರಾಜ್ಯದ ಸಂಪತ್ತು, ಭೂಮಿಯನ್ನಾಳಬೇಕೆಂಬ ಭ್ರಾಂತಿಗಳು ನನ್ನನ್ನು ಬಿಟ್ಟುಹೋದವು ಎಂದು ಹೇಳಿದನು.

ಅರ್ಥ:
ಮುಳಿ: ಸಿಟ್ಟು, ಕೋಪ; ತಿಳುಹು: ಅರಿ; ಸಮರ್ಥ: ಬಲಶಾಲಿ, ಗಟ್ಟಿಗ; ಕುಲ: ವಂಶ; ಕೊಲೆ: ನಾಶ; ಕೊಕ್ಕರಿಸು: ಅಸಹ್ಯಪಡು; ನನೆ: ತೋಯು, ಒದ್ದೆಯಾಗು; ಕರುಣ: ದಯೆ; ವಾರಿ: ನೀರು; ಬಲುಹ: ಶಕ್ತಿ; ಮುಖ: ಆನನ; ತೋರು: ಪ್ರದರ್ಶಿಸು; ಅಳುಕು: ಹೆದರು; ಸಾಮ್ರಾಜ್ಯ: ರಾಷ್ಟ್ರ, ಚಕ್ರಾಧಿಪತ್ಯ; ಸಂಪತ್ತು: ಐಶ್ವರ್ಯ; ಇಳೆ: ಭೂಮಿ; ಸಕಲ: ಎಲ್ಲಾ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬೀತು: ಬಿಟ್ಟುಹೋಗು; ದೇವ: ಭಗವಂತ; ಕೇಳು: ಆಲಿಸು;

ಪದವಿಂಗಡಣೆ:
ಮುಳಿಯಲಾಗದು+ ಕೃಷ್ಣ +ನಿಮ್ಮನು
ತಿಳುಹಲಾನು +ಸಮರ್ಥನೇ +ಕುಲ
ಕೊಲೆಗೆ +ಕೊಕ್ಕರಿಸಿದೆನು+ ನನೆದನು+ ಕರುಣ +ವಾರಿಯಲಿ
ಬಲುಹನ್+ಈ+ ಮುಖದಲ್ಲಿ+ ತೋರುವಡ್
ಅಳುಕಿದೆನು +ಸಾಮ್ರಾಜ್ಯ+ಸಂಪತ್ತ್
ಇಳೆಯ +ಸಕಲ+ಭ್ರಾಂತಿ +ಬೀತುದು +ದೇವ +ಕೇಳೆಂದ

ಅಚ್ಚರಿ:
(೧) ಅರ್ಜನನ ಸ್ಥಿತಿ – ಕುಲ ಕೊಲೆಗೆ ಕೊಕ್ಕರಿಸಿದೆನು ನನೆದನು ಕರುಣ ವಾರಿಯಲಿ
(೨) ಅರ್ಜುನನ ಭ್ರಾಂತಿ – ಸಾಮ್ರಾಜ್ಯಸಂಪತ್ತಿಳೆಯ ಸಕಲಭ್ರಾಂತಿ ಬೀತುದು

ಪದ್ಯ ೧೬: ಜಗತ್ತು ಎಂದು ಹಾಳಾಗುವುದು?

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿಭ್ರಾಂತಿಯೊಳು ಮನ
ಸಂದು ಸಮ್ಯಜ್ಞಾನದುದಯದ ನೆಲೆಯು ಕಾಣಿಸದೆ
ದಂದುಗಂಬಡುತಿಹುದು ತತ್ತ್ವದ
ಹಿಂದು ಮುಂದರಿಯದೆ ಮಹಾತ್ಮರು
ಬಂದ ಪಥದೊಳು ಬಾರದೇ ಕಿಡುತಿಹುದು ಜಗವೆಂದ (ಉದ್ಯೋಗ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಒಂದೇ ಇರುವ ಬ್ರಹ್ಮವಸ್ತುವವನ್ನು ಎರಡು ಮಾಡುವೆನೆಂದು ಬುದ್ಧಿಯ ಭ್ರಾಂತಿಯಿಂದ ಸರಿಯಾದ ಜ್ಞಾನೋದಯದ ನೆಲೆಯೇ ಕಾಣಿಸದೆ ತತ್ತ್ವದ ಹಿಂದು ಮುಂದನ್ನು ತಿಳಿಯದೆ, ಮಹಾತ್ಮರು ನಡೆದ ಪಥದಲ್ಲಿ ನಡೆಯದೆ ಜಗತ್ತು ಕೆಡುತ್ತದೆ.

ಅರ್ಥ:
ಒಂದು: ಏಕ; ವಸ್ತು: ಪದಾರ್ಥ; ಎರಡು: ದ್ವಿ, ದ್ವಂದ; ಮಾಡು: ನೆರವೇರಿಸು; ಬುದ್ಧಿ: ಚಿತ್ತ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಮನ: ಮನಸ್ಸು; ಸಂದು: ಸಂದರ್ಭ; ಸಮ್ಯಕ್:ಸರಿಯಾದ; ಜ್ಞಾನ: ವಿದ್ಯೆ; ಉದಯ: ಹುಟ್ಟು; ನೆಲೆ:ನಿವಾಸ; ಕಾಣಿಸು: ತೋರು; ದಂದುಗ: ತೊಡಕು; ತತ್ತ್ವ: ಸಿದ್ಧಾಂತ; ಅರಿ: ತಿಳಿ; ಮಹಾತ್ಮರು: ಶ್ರೇಷ್ಠರು; ಪಥ: ದಾರಿ; ಕಿಡುತಿಹರು: ಕೆಡುಕ ಹೊಂದುತ್ತಿರುವರು; ಜಗ: ಜಗತ್ತು;

ಪದವಿಂಗಡಣೆ:
ಒಂದು +ವಸ್ತುವನ್+ಎರಡು +ಮಾಡುವೆನ್
ಎಂದು +ಬುದ್ಧಿ+ಭ್ರಾಂತಿಯೊಳು +ಮನ
ಸಂದು +ಸಮ್ಯಜ್ಞಾನ+ಉದಯದ +ನೆಲೆಯು +ಕಾಣಿಸದೆ
ದಂದುಗಂ+ಬಡುತಿಹುದು +ತತ್ತ್ವದ
ಹಿಂದು +ಮುಂದ್+ಅರಿಯದೆ +ಮಹಾತ್ಮರು
ಬಂದ +ಪಥದೊಳು +ಬಾರದೇ +ಕಿಡುತಿಹುದು+ ಜಗವೆಂದ

ಅಚ್ಚರಿ:
(೧) ಒಂದು, ಎಂದು, ಸಂದು, ಹಿಂದು – ಪ್ರಾಸ ಪದಗಳು
(೨) ಹಿಂದು ಮುಂದು – ವಿರುದ್ಧ ಪದಗಳು