ಪದ್ಯ ೫೬: ಮುನಿವರ್ಯರು ದ್ರೋಣರಿಗೆ ಏನೆಂದು ಹೇಳಿದರು?

ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತಕರ್ಮಶ್ರುತಿ ಪರಿತ್ಯಾಗ (ದ್ರೋಣ ಪರ್ವ, ೧೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ವರ್ಣ ಧರ್ಮವನ್ನು ಮೀರಿ ನಡೆಯುವುದೇ ಲೋಕದ ರೀತಿ. ವೇದೋಕ್ತ ಮಾರ್ಗಕ್ಕೆ ತಿಳಿದ ನಾವು ತಪ್ಪಿದರೆ ವಿದ್ವಾಂಸರೂ ಭ್ರಮಿಸುತ್ತಾರೆ. ತಮ್ಮ ತಪ್ಪು ಮಾರ್ಗಕ್ಕೆ ನಾವೇ ಕಾರಣರೆಂದು ಉದಾಹರಣೆ ಕೊಡುತ್ತಾರೆ. ಕೆಟ್ಟ ಮಾರ್ಗದಲ್ಲೇ ನಡೆಯುತ್ತಾರೆ. ವೇದವು ವಿಹಿತವೆಂದು ಹೇಳಿರುವ ಕರ್ಮಗಳನ್ನು ನೀನೇಕೆ ಬಿಡಬೇಕು ಎಂದು ಮುನಿವರ್ಯರು ಕೇಳಿದರು.

ಅರ್ಥ:
ಲೋಕ: ಜಗತ್ತು; ವರ್ಣ: ಬಣ, ಪಂಗಡ; ಧರ್ಮ: ಧಾರಣೆ ಮಾಡಿದುದು; ಔಕು: ಒತ್ತು; ನಡೆ: ಚಲಿಸು; ವೈದಿಕ: ವೇದಗಳನ್ನು ಬಲ್ಲವನು; ಆಕೆವಾಳ: ವೀರ, ಪರಾಕ್ರಮಿ; ತಪ್ಪು: ಸರಿಯಿಲ್ಲದ್ದು; ಭ್ರಮಿಸು: ಭ್ರಾಂತಿ, ಹುಚ್ಚು; ಬುಧ: ವಿದ್ವಾಂಸ; ಉದಾಹರಣೆ: ದೃಷ್ಟಾಂತ; ಕಾಕ: ಕಾಗೆ, ನೀಚ; ಬಳಸು: ಉಪಯೋಗಿಸು; ದುರ್ಯಶ: ಅಪಯಶಸ್ಸು; ವಿಹಿತ: ಸರಿಯಾದ; ಕರ್ಮ: ಕಾರ್ಯ; ಶೃತಿ: ವೇದ; ತ್ಯಾಗ: ತೊರೆ;

ಪದವಿಂಗಡಣೆ:
ಲೋಕವೆಂಬುದು +ವರ್ಣ+ಧರ್ಮವನ್
ಔಕಿ +ನಡೆವುದು +ವೈದಿಕಕೆ +ನಾವ್
ಆಕೆವಾಳರು +ತಪ್ಪಿ+ ನಡೆದರೆ +ಭ್ರಮಿಸುವರು +ಬುಧರು
ಲೋಕ +ನಮ್ಮನ್+ಉದಾಹರಿಸುವುದು
ಕಾಕನೇ +ಬಳಸುವುದು +ದುರ್ಯಶವ್
ಏಕೆ +ನಿಮಗಿದು +ವಿಹಿತ+ಕರ್ಮ+ಶ್ರುತಿ +ಪರಿತ್ಯಾಗ

ಅಚ್ಚರಿ:
(೧) ಲೋಕದ ನೀತಿ – ಲೋಕವೆಂಬುದು ವರ್ಣಧರ್ಮವ ನೌಕಿ ನಡೆವುದು
(೨) ಮುನಿವರ್ಯರು ತಮ್ಮನ್ನು ಪರಿಚಯಿಸಿದ ಪರಿ – ವೈದಿಕಕೆ ನಾವಾಕೆವಾಳರು

ಪದ್ಯ ೨೫: ಅರ್ಜುನನು ಕುದುರೆಗಳ ಬಗ್ಗೆ ಕೃಷ್ಣನಲ್ಲಿ ಏನು ಕೇಳಿದನು?

ಗಮನ ತಟ್ಟೆಯವಾಯ್ತು ವೇಗ
ಭ್ರಮಣ ಜಡವಾಯ್ತಡಿಗಡಿಗೆ ನಿ
ಗ್ಗಮದೊಳಗೆ ರಥವದ್ದುದರಿ ಭಾರಣೆಯ ಭರವಸದ
ಸಮತೆ ನಿಂದುದು ಸಾಹಸೀಕರು
ಭ್ರಮಿಸುತಿದೆ ಭಟಜಲಧಿ ತುರಗ
ಶ್ರಮವ ನಾವ್ ಪರಿಹರಿಸಿದಲ್ಲದೆ ಕಾದಲರಿದೆಂದ (ದ್ರೋಣ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ಓಟ ತಟ್ಟುಕೊಟ್ಟಿತು, ವೇಗ ಜಡವಾಯಿತು, ಮುಂದಿಟ್ಟ ಹೆಜ್ಜೆಗಳಿಂದ ರಥ ಕೆಳಕ್ಕೆ ಕುಸಿಯುತ್ತಿದೆ, ಶತ್ರುಗಳನ್ನು ಗೆಲ್ಲಲು ಅನುಕೂಲವಾದ ನಡೆ ಕಾಣದೆ ಭರವಸೆ ಕುಗ್ಗುತ್ತಿದೆ, ಶತ್ರು ಸೈನ್ಯದವರು ನಮ್ಮನ್ನು ಗೆಲ್ಲಬಹುದೆಂದು ಭ್ರಮಿಸುತ್ತಿದ್ದಾರೆ, ಕುದುರೆಗಳ ಶ್ರಮವನ್ನು ಹೋಗಲಾಡಿಸದೆ ನಾವು ಯುದ್ಧಮಾಡುವುದಾದರು ಹೇಗೆ ಎಂದು ಅರ್ಜುನನು ಕೇಳಿದನು.

ಅರ್ಥ:
ಗಮನ: ನಡೆಯುವುದು, ನಡಗೆ; ತಟ್ಟೆ: ಚಪ್ಪಟೆ, ಸಮತಲ; ವೇಗ: ಸೂಠಿ; ಭ್ರಮಣ: ತಿರುಗುವುದು; ಜಡ: ಅಚೇತನವಾದುದು; ಅಡಿಗಡಿಗೆ: ಮತ್ತೆ ಮತ್ತೆ; ನಿಗ್ಗಮ: ನಿಗ್ಗವ, ದಂತ; ರಥ: ಬಂಡಿ; ಭಾರಣೆ: ಮಹಿಮೆ, ಗೌರವ; ಅದ್ದು: ಮುಳುಗಿಸು; ಭರ: ಜೋರು, ರಭಸ; ಸಮತೆ: ಸಾದೃಶ್ಯ; ನಿಂದು: ನಿಲ್ಲು; ಸಾಹಸಿ: ಪರಾಕ್ರಮಿ; ಭ್ರಮಿಸು: ಹುಚ್ಚು, ಉನ್ಮಾದ; ಭಟ: ಸೈನಿಕ; ಜಲಧಿ: ಸಾಗರ; ತುರಗ: ಅಶ್ವ; ಶ್ರಮ: ದಣಿವು; ಪರಿಹರಿಸು: ನಿವಾರಿಸು; ಕಾದು: ಹೋರಾಡು; ಅರಿ: ತಿಳಿ;

ಪದವಿಂಗಡಣೆ:
ಗಮನ +ತಟ್ಟೆಯವಾಯ್ತು +ವೇಗ
ಭ್ರಮಣ +ಜಡವಾಯ್ತ್+ಅಡಿಗಡಿಗೆ +ನಿ
ಗ್ಗಮದೊಳಗೆ +ರಥವ್+ಅದ್ದುದ್+ಅರಿ+ ಭಾರಣೆಯ +ಭರವಸದ
ಸಮತೆ +ನಿಂದುದು +ಸಾಹಸೀಕರು
ಭ್ರಮಿಸುತಿದೆ +ಭಟಜಲಧಿ +ತುರಗ
ಶ್ರಮವ +ನಾವ್ +ಪರಿಹರಿಸಿದಲ್ಲದೆ +ಕಾದಲ್+ಅರಿದೆಂದ

ಅಚ್ಚರಿ:
(೧) ಸೈನ್ಯದ ಅಗಾಧತೆಯನ್ನು ಹೇಳುವ ಪರಿ – ಭಟಜಲಧಿ
(೨) ರಥವು ನಿಲ್ಲುತ್ತಿದೆ ಎಂದು ಹೇಳುವ ಪರಿ – ನಿಗ್ಗಮದೊಳಗೆ ರಥವದ್ದುದ್

ಪದ್ಯ ೩೩: ದ್ರೌಪದಿಯು ಯಾವ ಮಾತುಗಳನ್ನು ಆಡಿದಳು?

ಅನುಜೆ ನಿನ್ನಿಷ್ಟವನು ನುಡಿನುಡಿ
ಯನುಸರಣೆ ಬೇಡೆಂಬ ಕೃಷ್ಣನ
ಘನವಚನವನು ಕೇಳ್ದು ಲಜ್ಜಾವನತ ಮುಖಿಯಾಗಿ
ತನಗೆ ಮರೆಯೇ ಅನುಜರಾಗಲಿ
ಜನಕ ಸುತರಾರಾದೊಡಾಗಲಿ
ವನಿತೆಯರ ಮನ ಭ್ರಮಿಸುವುದು ತಾನೆಂದಳಿಂದುಮುಖಿ (ಅರಣ್ಯ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಪಾಂಡವರು ತಮ್ಮ ಮಾತನ್ನು ಹೇಳಲು ಹಣ್ಣು ಮೇಲಕ್ಕೇರಿತು, ದ್ರೌಪದಿಯ ಮಾತನ್ನು ಕೇಳಲು, ಕೃಷ್ಣನು ದ್ರೌಪದಿಗೆ ಅವಳ ಮನವಿಷ್ಟವನ್ನು ಹೇಳು ತಡಮಾಡಬೇಡ ಎಂದು ಕೇಳಿದನು. ಆಗ ದ್ರೌಪದಿ ಲಜ್ಜೆಯಿಂದ ಕೂಡಿದವಳಾಗಿ ನಾನೇನು ಮರೆಮಾಚುವುದಿಲ್ಲ, ಸುಂದರ ಪುರುಷನು ತಮ್ಮ ನಾಗಲಿ, ಮಗನಾಗಲಿ, ತಂದೆಯಾಗಲಿ, ಹೆಂಗಸಿನ ಮನಸ್ಸು ಭ್ರಮಿಸುತ್ತದೆ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಅನುಜೆ: ತಂಗಿ; ಇಷ್ಟ: ಆಸೆ; ನುಡಿ: ಮಾತಾಡು; ಅನುಸರಣೆ: ಅನುಸರಿಸಿ ನಡೆಯುವುದು,ವಿಧೇಯತೆ; ಬೇಡ: ಸಲ್ಲದು, ಕೂಡದು; ಘನ: ಶ್ರೇಷ್ಠ; ವಚನ: ಮಾತು; ಕೇಳು: ಆಲಿಸು; ಲಜ್ಜ: ನಾಚಿಕೆ; ಮರೆ: ಗುಟ್ಟು, ರಹಸ್ಯ; ಅನುಜ: ತಮ್ಮ; ಜನಕ: ತಂದೆ; ಸುತ: ಮಕ್ಕಳು; ವನಿತೆ: ಹೆಂಗಸು; ಮನ: ಮನಸ್ಸು; ಭ್ರಮೆ: ಭ್ರಾಂತಿ, ಹುಚ್ಚು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಅನುಜೆ +ನಿನ್ನಿಷ್ಟವನು +ನುಡಿ+ನುಡಿ
ಅನುಸರಣೆ +ಬೇಡೆಂಬ +ಕೃಷ್ಣನ
ಘನ+ವಚನವನು +ಕೇಳ್ದು +ಲಜ್ಜಾವನತ +ಮುಖಿಯಾಗಿ
ತನಗೆ +ಮರೆಯೇ +ಅನುಜರಾಗಲಿ
ಜನಕ +ಸುತರ್+ಆರಾದೊಡ್+ಆಗಲಿ
ವನಿತೆಯರ +ಮನ +ಭ್ರಮಿಸುವುದು +ತಾನೆಂದಳ್+ಇಂದುಮುಖಿ

ಅಚ್ಚರಿ:
(೧) ದ್ರೌಪದಿಯ ನುಡಿ – ಅನುಜರಾಗಲಿ ಜನಕ ಸುತರಾರಾದೊಡಾಗಲಿ ವನಿತೆಯರ ಮನ ಭ್ರಮಿಸುವುದು
(೨) ಅನುಜೆ, ಇಂದುಮುಖಿ – ದ್ರೌಪದಿಯನ್ನು ಕರೆದ ಪರಿ

ಪದ್ಯ ೧೭: ಅರ್ಜುನನು ಭೀಮನಿಗೆ ಏನು ಹೇಳಿದ – ೨?

ಕ್ಷಮೆಯೆ ಧನವೆಂದಿದ್ದೆವಿವಳಲಿ
ಮಮತೆಯನು ಮಾಡಿದೆವೆ ನಾವು
ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆಮಗೆ
ರಮಣಿಯಾಡಿದ ಧರ್ಮ ಪದವಿದು
ಕುಮತಿಗಳ ಮತವಲ್ಲದಿದ್ದರೆ
ತಮಗೆ ದಾಸಿಯೆ ದ್ರುಪದನಂದನೆಯೆಂದನಾ ಪಾರ್ಥ (ಸಭಾ ಪರ್ವ, ೧೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮ, ನಾವು ಕ್ಷಮೆಯೇ ಉತ್ತಮ ಧನವೆಂಬ ವಿಚಾರವುಳ್ಳವರು, ದ್ರೌಪದಿ ನಮ್ಮವಳು ಎಂಬ ಮಮಕಾರವನ್ನು ತೋರಿಸಲಿಲ್ಲ. ನಾವು ಮೀರಿನಿಂತರೆ ದೇವೇಂದ್ರನು ನಮಗೆ ತೃಣಕ್ಕೆ ಸಮಾನ, ಇನ್ನು ಈ ಕೌರವರ ಏನು ಮಹಾ! ದ್ರೌಪದಿಯು ಆಡಿದ ಮಾತು ಧರ್ಮ ಸಮ್ಮತವಾದ ನುಡಿ, ಇವರಿಗೆ ಒಪ್ಪಿಗೆಯಾಗದಿದ್ದರೇನು? ದ್ರೌಪದಿಯು ನಮಗೆ ದಾಸಿಯೇ ಎಂದು ಅರ್ಜುನನು ಭೀಮನಿಗೆ ಹೇಳಿದನು.

ಅರ್ಥ:
ಕ್ಷಮೆ: ಸೈರಣೆ, ತಾಳ್ಮೆ; ಧನ: ಐಶ್ವರ್ಯ; ಮಮತೆ: ಪ್ರೀತಿ, ವಾತ್ಸಲ್ಯ; ಭ್ರಮೆ: ಭ್ರಾಂತಿ, ಹುಚ್ಚು, ಉನ್ಮಾದ; ದೇವೇಂದ್ರ: ಇಂದ್ರ; ತೃಣ: ಹುಲ್ಲು; ಪಾಡು: ಸ್ಥಿತಿ, ಅವಸ್ಥೆ; ರಮಣಿ: ಸುಂದರಿ; ಪದ: ನುಡಿ; ಕುಮತಿ: ದುಷ್ಟಬುದ್ಧಿ; ಮತ: ವಿಚಾರ; ದಾಸಿ: ಸೇವಕಿ;

ಪದವಿಂಗಡಣೆ:
ಕ್ಷಮೆಯೆ +ಧನವೆಂದಿದ್ದೆವ್+ಇವಳಲಿ
ಮಮತೆಯನು +ಮಾಡಿದೆವೆ +ನಾವು
ಭ್ರಮಿಸುವರೆ +ದೇವೇಂದ್ರ +ತೃಣವ್+ಇವನಾವ +ಪಾಡೆಮಗೆ
ರಮಣಿ+ಆಡಿದ +ಧರ್ಮ +ಪದವಿದು
ಕುಮತಿಗಳ+ ಮತವಲ್ಲದಿದ್ದರೆ
ತಮಗೆ +ದಾಸಿಯೆ +ದ್ರುಪದನಂದನೆ+ಎಂದನಾ +ಪಾರ್ಥ

ಅಚ್ಚರಿ:
(೧) ಪಾಂಡವರ ಪರಾಕ್ರಮದ ಪರಿಚಯ – ನಾವು ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆಮಗೆ